ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆಆರ್‌ಬಿಯಿಂದ ₹6.89 ಕೋಟಿ ಅನುದಾನ ಮಂಜೂರು: ಶಾಸಕ ರಾಜುಗೌಡ

Last Updated 20 ಮೇ 2022, 4:30 IST
ಅಕ್ಷರ ಗಾತ್ರ

ಸುರಪುರ: ಪ್ರಸಕ್ತ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸುರಪುರ ಮತಕ್ಷೇತ್ರಕ್ಕೆ ₹ 6.89 ಕೋಟಿ ಅನುದಾನ ಮಂಜೂರಿಯಾಗಿದ್ದು ನಗರ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 27 ಯಾತ್ರಿನಿವಾಸಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ರಾಜುಗೌಡ ತಿಳಿಸಿದರು.

ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ದೇವಸ್ಥಾನ, ಮಠ ಮತ್ತು ವಿವಿಧ ಸಮುದಾಯಗಳ ಅನುಕೂಲಕ್ಕಾಗಿ ಯಾತ್ರಿನಿವಾಸ ಮತ್ತು ಭವನಗಳನ್ನು ನಿರ್ಮಿಸಲಾಗುತ್ತಿದೆ, ಶೀಘ್ರದಲ್ಲಿಯೇ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಗುವುದು ಎಂದು ತಿಳಿಸಿದ ಅವರು ಕಾಮಗಾರಿಗಳ ನಿರ್ಮಾಣ, ಹಣದ ಬಗ್ಗೆ ಮಾಹಿತಿ ನೀಡಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ತೃಪ್ತಿ ನೀಡಿದೆ: ಈ ಬಾರಿ ನಮ್ಮ ಕ್ಷೇತ್ರದಲ್ಲಿ ಶೇ.80.70 ಫಲಿತಾಂಶ ಪಡೆದಿರುವುದು ತೃಪ್ತಿ ನೀಡಿದೆ. ಇಲಾಖೆಯ ಅಧಿಕಾರಿಗಳ ಮತ್ತು ಶಿಕ್ಷಕರ ಶ್ರಮದಿಂದ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಬಂದಿರುವುದು ಸಂತಸ ತಂದಿದೆ ಎಂದರು. ಜಿಲ್ಲೆಯ ಶಿಕ್ಷಣ ಗುಣ ಮಟ್ಟ ಸುಧಾರಿಸಬೇಕು. ಶಿಕ್ಷಕರ ನೇಮಕಾತಿ ನಡೆಯಬೇಕು.ಈ ಕುರಿತಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು.

ಶುದ್ಧ ನೀರಿನ ಬಿಲ್ ಬಗ್ಗೆ ಆತಂಕ ಬೇಡ: ಶುದ್ಧ ನೀರು ಪೂರೈಕೆ ಮತ್ತು ಬಿಲ್ ಬಗ್ಗೆ ಜನರಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದು ಜನರು ಯಾವುದೇ ಕಾರಣಕ್ಕೂ ಆತಂಕಪಡಬಾರದು. 1 ರಿಂದ 8 ಸಾವಿರ ಲೀಟರ್‌ಗೆ ₹56 ನಿಗದಿಪಡಿಸಲಾಗಿದೆ. ಬಳಕೆಗೆ ತಕ್ಕಂತೆ ದರ ನಿಗದಿಮಾಡಲಾಗಿದೆ. ಇದು ಸಾರ್ವಜನಿಕರಿಗೆ ಹೊರ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಂಚಕಿ ಬಂಧನ ಶ್ಲಾಘನೀಯ: ನೌಕರಿ ಕೊಡಿಸುವುದಾಗಿ ನಂಬಿಸಿ ನನ್ನ ಹೆಸರು ದುರ್ಬಳಿಕೆ ಮಾಡಿಕೊಂಡು ಹಣ ದೋಚುತ್ತಿದ್ದ ಬೆಂಗಳೂರನ ರೇಖಾ ಎಂ.ಎನ್ ಅವರನ್ನು ಬಂಧಿಸಿರುವ ಪೊಲೀಸ್ ಕ್ರಮ ಶ್ಲಾಘನೀಯವಾಗಿದೆ. ಎಸ್ಪಿ ಸಿ.ಬಿ.ವೇದಮೂರ್ತಿ, ಡಿವೈಎಸ್‍ಪಿ ವಿರೇಶ್ ಕರಿಗುಡ್ಡ, ಪಿಐಗಳಾದ ಸುನೀಲ್ ಮೂಲಿಮನಿ, ಬಾಪುಗೌಡ ಪಾಟೀಲ್ ಮತ್ತು ಇತರೆ ಸಿಬ್ಬಂದಿಗಳನ್ನು ಕೃತಜ್ಞತೆ ಸಲ್ಲಿಸುವೆ ಎಂದರು.

ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT