ಶುಕ್ರವಾರ, ಸೆಪ್ಟೆಂಬರ್ 17, 2021
30 °C
2 ದಿನ ಸಚಿವ ಬಿ.ಸಿ. ನಾಗೇಶರ ಭೇಟಿಗೆ ಕಾದ ಜನರು

ವಡಗೇರಾ: ಸಂತ್ರಸ್ತರ ಸಂಕಷ್ಟ ಆಲಿಸದ ಸಚಿವರು

ದೇವಿಂದ್ರಪ್ಪ ಬಿ ಕ್ಯಾತನಾಳ Updated:

ಅಕ್ಷರ ಗಾತ್ರ : | |

Prajavani

ವಡಗೇರಾ: ಜಿಲ್ಲಾ ಪ್ರವಾಸ ಕೈಗೊಂಡ ಸಚಿವರ ಬರುವಿಕೆಗಾಗಿ ತಾಲ್ಲೂಕಿನ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರು ಎರಡು ದಿನಗಳಿಂದ ಕಾಯ್ದರೂ ಅವರ ಭೇಟಿ ಸಾಧ್ಯವಾಗಲಿಲ್ಲ ಎಂದು ಗ್ರಾಮಸ್ಥರು ಅಲವತ್ತುಕೊಂಡರು.

‘ಜಿಲ್ಲಾಉಸ್ತವಾರಿ ಸಚಿವ ಬಿ.ಸಿ. ನಾಗೇಶ ಅವರು ಬಂದು ನಮ್ಮ ಸಮಸ್ಯೆ ಆಲಿಸುತ್ತಾರೆ. ಕಳೆದ 12 ವರ್ಷಗಳಿಂದ ಎದುರಿಸುತ್ತಿರುವ ಪ್ರವಾಹ ಸಂಕಷ್ಟಕ್ಕೆ ಶಾಶ್ವತ ಪರಿಹಾರ ನೀಡುತ್ತಾರೆ. ಅವರ ಬಳಿ ನಮ್ಮೂರಿನ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಬಹುದು ಎಂದು ಕಾದಿದ್ದೇವು. ಆದರೆ ನಮ್ಮ ಗ್ರಾಮಗಳತ್ತ ಬರ ಲಿಲ್ಲ. ಜನಪ್ರತಿನಿಧಿಗಳಿಗೆ ನಮ್ಮ ಗ್ರಾಮ ಗಳೆಂದರೇ ಅಲರ್ಜಿಯಾಗಿದೆ‘ ಎಂದು ಯಕ್ಷಂತಿ ಗ್ರಾಮದ ನಿವಾಸಿಗರು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ ಅವರು ಮೊದಲ ಬಾರಿಗೆ ಯಾದಗಿರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಕಾಟಾಚಾರದ ಭೇಟಿ ಮಾಡಿ ಜನರಿಗೆ ನಿರಾಸೆ ಮಾಡಿದ್ದಾರೆ ಎಂದು ದೂರಿದರು.

2009ರ ನೆರೆ ಪ್ರವಾಹದಿಂದ ಯಕ್ಷಂತಿ, ಕೊಳುರು ಎಂ ಮತ್ತು ಗೌಡುರು ಗ್ರಾಮದ ಬಹುತೇಕ ಮನೆ ಹಾಗೂ ಜಮೀನು ಮುಳುಗಡೆ ಆಗಿದ್ದವು. ಮುಳುಗಡೆ ಮತ್ತು ಬೆಳೆ ಹಾನಿ ಪ್ರತಿ ವರ್ಷ ಸಂಭವಿಸುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಗ್ರಾಮಗಳ ಸ್ಥಳಾಂತರಕ್ಕೆ ದಶಕಗಳಿಂದ ಒತ್ತಾಯಿಸಿಕೊಂಡು ಬರಲಾಗುತ್ತಿದೆ. ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಕೂಡ ಸಲ್ಲಿಸಲಾಗಿದೆ. ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಿ ಎರಡು ದಿನಗಳಿಂದ ಕಾಯ್ದು ಕುಳಿತ ಜನರಿಗೆ ಸಚಿವರು ಸಿಗಲಿಲ್ಲ. ಸ್ಥಳೀಯ ಮುಖಂಡರು ಸಹ ಅವರನ್ನು ಕರೆತರುವ ಪ್ರಯತ್ನ ಮಾಡಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಪ್ರವಾಹದಿಂದ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಬೆಳೆಗಳು ನದಿಯ ಪಾಲಾಗುತ್ತಿವೆ. ಕಳೆದ ಬಾರಿ ಪ್ರವಾಹದ ನಷ್ಟ ಪರಿಹಾರ ಸಹ ಬಂದಿಲ್ಲ. ಹೆಚ್ಚು ನಷ್ಟಕ್ಕೀಡಾದ ಗ್ರಾಮಗಳನ್ನು ಬಿಟ್ಟು ಕಾಟಾಚಾರಕ್ಕೆ ಎಂಬಂತೆ ರಸ್ತೆಗಳ ಪಕ್ಕದ ಹಳ್ಳಿಗಳಿಗೆ ಸಚಿವರು ಭೇಟಿ ನೀಡಿದ್ದಾರೆ ಎಂದು ಯಕ್ಷಂತಿ, ಗೌಡುರು ಮತ್ತು ಕೊಳ್ಳುರು ರೈತರು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಗೆ ಆಗಮಿಸಿದ ಶಿಕ್ಷಣ ಸಚಿವರ ಪ್ರವಾಸದ ವೇಳಾಪಟ್ಟಿ ಸರಿಯಾಗಿ ತಯಾರಿಸಿಲ್ಲ. ಸಚಿವರು ಬಳಿ ಸಮಸ್ಯೆ ಹೇಳಿಕೊಳ್ಳಲು ಕಾದು ಕುಳಿತ ಜನರಿಗೆ ದ್ರೋಹ ಬಗೆಯಲಾಗಿದೆ. ಸ್ಥಳೀಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಸಚಿವರಿಗೆ ಸರಿಯಾದ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದ್ದಾರೆ. ಜಿಲ್ಲಾಡಳಿತ ನಮ್ಮ ಗ್ರಾಮದ ಜನರನ್ನು ಮರೆತು ಬಿಟ್ಟಿದೆ ಎಂದು ರೈತ ಮುಖಂಡರಾದ ನಾಗರತ್ನ ಪಾಟೀಲ ದೂರಿದರು.

ಈ ಕುರಿತ ಮಾಹಿತಿಗೆ ಪ್ರಜಾವಾಣಿ ವರದಿಗಾರ ಕರೆ ಮಾಡಿದರೂ ಸಚಿವರು ಕರೆ ಸ್ವೀಕರಿಸಲಿಲ್ಲ.

***

ಚುನಾವಣೆ ಬಂದಾಗ ಮಾತ್ರವೇ ರಾಜಕೀಯ ಮುಖಂಡರಿಗೆ ನಮ್ಮ ಗ್ರಾಮ ನೆನಪಾಗುತ್ತದೆ. ಆದರೆ ನಮ್ಮ ಸಮಸ್ಯೆ ಕೇಳಿಸಿಕೊಳ್ಳಲು ಅವರಿಗೆ ಸಮಯ ಇರುವುದಿಲ್ಲ.
-ನಾಗಮ್ಮ, ಗ್ರಾಮಸ್ಥೆ

***

ಗ್ರಾಮ ಸ್ಥಳಾಂತರದ ಬೇಡಿಕೆಯ ಮನವಿ ಪತ್ರ ಹಿಡಿದು ಎರಡು ದಿನಗಳಿಂದ ಕಾದು ಕುಳಿತರೂ ಪ್ರಯೋಜನವಾಗಿಲ್ಲ. ಸಚಿವರ ಈ ನಡೆಯಿಂದ ತೀವ್ರ ನಿರಾಶೆಯಾಗಿದೆ.
-ಮಲ್ಲಿಕಾರ್ಜುನ ನಾಯಕ, ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.