ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಡಗೇರಾ | ಮರಳು, ಮಟ್ಕಾ ದಂಧೆ ಅವ್ಯಾಹತ

ಅಕ್ರಮ ತಡೆಗೆ ನಾಗರಿಕರ ಒತ್ತಾಯ
ವಾಟ್ಕರ್ ನಾಮದೇವ
Published 3 ಜುಲೈ 2024, 6:10 IST
Last Updated 3 ಜುಲೈ 2024, 6:10 IST
ಅಕ್ಷರ ಗಾತ್ರ

ವಡಗೇರಾ: ತಾಲ್ಲೂಕಿನಲ್ಲಿ ಮರಳು ಅಕ್ರಮ ಸಾಗಣೆ, ಮಟ್ಕಾ ಹಾಗೂ ಇಸ್ಪಿಟ್‌ ಜೂಜಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ದಂಧೆಕೋರರು ಕಾನೂನು ಸುವ್ಯವಸ್ಥೆಗೆ ಸವಾಲೊಡ್ಡುತ್ತಿದ್ದಾರೆ.

ವಡಗೇರಾ ತಾಲ್ಲೂಕಿನಲ್ಲಿ ಕೃಷ್ಣಾ ಹಾಗೂ ಭೀಮಾ ನದಿಗಳು ಹರಿಯುತ್ತಿವೆ. ಈ ನದಿಗಳಲ್ಲಿ ರಸ್ತೆ ನಿರ್ಮಿಸಿಕೊಂಡು ಜೆಸಿಬಿ ಯಂತ್ರಗಳ ಮೂಲಕ ಮರಳು ಬಗೆಯಲಾಗುತ್ತಿದೆ. ಕುಮನೂರು, ಗೊಂದೆನೂರ, ಚನ್ನೂರ, ಜೋಳದಡಗಿ ಹಾಗೂ ಇನ್ನಿತರ ಕಡೆಗಳಿಂದ ದಂಧೆಕೋರರು ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ.

ಹಗಲು–ರಾತ್ರಿಯೆನ್ನದೆ ಮರಳನ್ನು ಟಿಪ್ಪರ್‌ಗಳಲ್ಲಿ ಮಿತಿಮೀರಿ ಸಾಗಿಸುತ್ತಿರುವುದರಿಂದ ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಮರಳುಗಾರಿಕೆಯಿಂದ ನದಿಗಳಲ್ಲಿ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ನದಿಯ ಒಡಲು ಬರಿದಾಗುತ್ತಿರುವುದರಿಂದ ಬೇಸಿಗೆಯಲ್ಲಿ ಜನಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯ ನಾಗರಿಕರು ದೂರುತ್ತಾರೆ.

ಮಟ್ಕಾ ದಂಧೆ: ತಾಲ್ಲೂಕಿನಲ್ಲಿ ಪ್ರತಿದಿನ ಲಕ್ಷಾಂತರ ರೂಪಾಯಿಗಳ ಮಟ್ಕಾ ದಂಧೆ ನಡೆಯುತ್ತಿದೆ. ಕೂಲಿ ಮಾಡಿಕೊಂಡು ಬದುಕುವ ಹಲವು ಕುಟುಂಬಗಳ ಯಜಮಾನರು ಮಟ್ಕಾ ಆಟದ ದಾಸರಾಗಿದ್ದಾರೆ. ದುಡಿದ ಹಣವನ್ನು ಮಟ್ಕಾ ಆಡಿ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೀಡಾಗುತ್ತಿವೆ.

ಈ ಹಿಂದೆ ಮಟ್ಕಾ ಬುಕ್ಕಿಗಳು ನಂಬರ್‌ಗಳನ್ನು ಚೀಟಿಗಳಲ್ಲಿ ಬರೆದುಕೊಳ್ಳುತ್ತಿದ್ದರು. ಆಟ ಆಡುವವರಿಗೆ ಬರೆದುಕೊಡುತ್ತಿದ್ದರು. ಆದರೆ, ಈಗ ಮೊಬೈಲ್‌ಗಳಲ್ಲಿ ಹಾಗೂ ಅಂತರ್ಜಾಲದ ಮುಖಾಂತರ ಬುಕ್ಕಿಗಳು ಮಟ್ಕಾ ಸಂಖ್ಯೆ ಬರೆದುಕೊಳ್ಳುತ್ತಿದ್ದಾರೆ. ಈ ಆಟ ಆಡುವವರಿಗೆ ಯಾವುದೇ ರೀತಿಯ ಚೀಟಿಯನ್ನು ಬರೆದುಕೊಡುವುದಿಲ್ಲ. ಬುಕ್ಕಿಗಳ ಹಾಗೂ ಮಟ್ಕಾ ಆಡುವವರ ನಡುವೆ ವಿಶ್ವಾಸ ಹಾಗೂ ನಂಬಿಕೆ ಮುಖಾಂತರ ಈ ವ್ಯವಹಾರ ನಡೆಯುತ್ತಿದೆ. ಇದರಿಂದಾಗಿ ಪೊಲೀಸರಿಗೂ ಸೂಕ್ತ ಸಾಕ್ಷ್ಯಾಧಾರ ಸಿಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಇಸ್ಪಿಟ್ ಆಟ: ತಾಲ್ಲೂಕಿನ ಗ್ರಾಮ ಹಾಗೂ ತಾಂಡಾಗಳಲ್ಲಿನ ಗುಡಿಗಳ ಆವರಣಗಳಲ್ಲಿ, ಜಮೀನುಗಳಲ್ಲಿ, ಜಾಲಿಗಿಡದ ಆಶ್ರಯದಲ್ಲಿ ರಾಜಾರೋಷವಾಗಿ ಇಸ್ಪಿಟ್ ಆಡಲಾಗುತ್ತಿದೆ. ಗುಡಿಗಳಿಗೆ ಬರುವ ಭಕ್ತರಿಗೆ ಮುಜುಗರವಾಗುತ್ತಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮವನ್ನೂ ಬೀರುತ್ತಿದೆ. ಜೂಜಾಟಕ್ಕೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಡಗೇರಾ ತಾಲ್ಲೂಕಿನ ಗ್ರಾಮವೊಂದರ ಗುಡಿಯ ಆವರಣದಲ್ಲಿ ಇಸ್ಪಿಟ್ ಆಡುತ್ತಿರುವುದು
ವಡಗೇರಾ ತಾಲ್ಲೂಕಿನ ಗ್ರಾಮವೊಂದರ ಗುಡಿಯ ಆವರಣದಲ್ಲಿ ಇಸ್ಪಿಟ್ ಆಡುತ್ತಿರುವುದು

ತಾಂಡಾಗಳಲ್ಲಿ ಎಗ್ಗಿಲ್ಲದೆ ಮಟ್ಕಾ ಹಾಗೂ ಇಸ್ಪಿಟ್ ಆಟ ನಡೆಯುತ್ತಿದೆ. ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕೂಡಲೇ ಇದನ್ನು ತಡೆಗಟ್ಟಲು ಮುಂದಾಗಬೇಕು.

-ಚನ್ನಪ್ಪ ಬೀರನಕಲ್ ಗ್ರಾಮ ಪಂಚಾಯಿತಿ ಸದಸ್ಯ

‘ಚೆಕ್‌ಪೋಸ್ಟ್‌ ತೆರೆಯಲು ಕ್ರಮ’ ‘ಗಮನಕ್ಕೆ ಬಂದ ತಕ್ಷಣವೇ ಕುಮನೂರ ಗೊಂದೆನೂರ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ವಡಗೇರಾ ಕ್ರಾಸ್ ಹಾಗೂ ಹಯ್ಯಾಳ(ಬಿ)ದಲ್ಲಿ ಚೆಕ್‌ಪೋಸ್ಟ್‌ ತೆರೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರ ಗಮನಕ್ಕೆ ತರಲಾಗಿದೆ. ಚೆಕ್ ಪೋಸ್ಟ್‌ಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟರೆ ಅಲ್ಲಿ ನಮ್ಮ ಸಿಬ್ಬಂದಿಯನ್ನು ನಿಯೋಜನೆ ಮಾಡುತ್ತೇವೆ’ ಎಂದು ತಹಶೀಲ್ದಾರ್‌ ಶ್ರೀನಿವಾಸ ಚಾಪೆಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT