ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಕೇಂದ್ರ ಯೋಜನೆ ರದ್ದಾಗಲ್ಲ: ಶಾಸಕ ವೆಂಕಟರೆಡ್ಡಿ ಮುದ್ನಾಳ ಸ್ಪಷ್ಟನೆ

Last Updated 11 ಅಕ್ಟೋಬರ್ 2020, 16:58 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಗೆ ಮಂಜೂರಾಗಿದ್ದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಯೋಜನೆ ರದ್ದಾಗುವುದಿಲ್ಲ. ಅದು ಮುಂದುವರೆಯಲಿದೆ. ಕೆಲ ವರ್ಷಗಳಿಂದ ಕಾಮಗಾರಿ ನೆನಗುದಿಗೆ ಬಿದ್ದಿದ್ದರಿಂದ ಪತ್ರ ಬಂದಿದೆ’ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಸ್ಪಷ್ಟಪಡಿಸಿದರು.

‘ಈ ಮುಂಚೆ ಹೊಸ ಜಿಲ್ಲಾಸ್ಪತ್ರೆ ಬಳಿ ವಿಜ್ಞಾನ ಕೇಂದ್ರ ಆರಂಭಿಸಲು ಸಿದ್ಧತೆನಡೆದಿತ್ತು. ಆದರೆ, ಅಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೆಚ್ಚಿನ ಜಾಗ ಬೇಕಾಗಿದ್ದರಿಂದ ಮುಂಡರಗಿಗೆ ಸ್ಥಳಾಂತರ ಮಾಡಲಾಗಿದೆ’ ಎಂದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಾನು, ಜಿಲ್ಲಾಧಿಕಾರಿ ಸೇರಿ ಈ ಯೋಜನೆ ಜಿಲ್ಲೆಯಲ್ಲಿಯೇ ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದರು.

‘ಕೋವಿಡ್‌ ಕಾರಣದಿಂದ ಅನುದಾನ ವಿಳಂಬವಾಗಿದೆ ಎಂದು ಸರ್ಕಾರದಿಂದ ಪತ್ರ ಬಂದಿದೆ. ಆದರೆ, ಈ ಬಗ್ಗೆ ಸಂಬಂಧಿಸಿದವರೊಂದಿಗೆ ಮಾತನಾಡಿದ್ದೇನೆ. ಜಿಲ್ಲೆಗೆ ಸರ್ಕಾರದಿಂದ ಮಂಜೂರಾದ ಯಾವುದೇ ಯೋಜನೆಗಳನ್ನು ರದ್ದು ಪಡಿಸುವುದಿಲ್ಲ. ಈ ಯೋಜನೆ ರದ್ದಾಗಲ್ಲ. ಮುಂದೆಯೂ ರದ್ದಾಗಲ್ಲ’ ಎಂದು ಹೇಳಿದರು.

‘ಸದ್ಯವಿಧಾನ ಪರಿಷತ್‌ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಮುಂದೆ ಈ ಬಗ್ಗೆ ಘೋಷಣೆ ಮಾಡುತ್ತೇವೆ’ ಎಂದರು.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗಲಿದೆ. ಅದರಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಹೇಳಿದರು.

‘ವಡಗೇರಾ ನೂತನ ತಾಲ್ಲೂಕು ಕೇಂದ್ರವಾಗಿದ್ದು, ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗುವುದು’ ಎಂದರು.

‘ಈಶಾನ್ಯ ಶಿಕ್ಷಕರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ತಿಳಿಸಿದರು.

‘ಯಾದಗಿರಿ ನಗರಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಯಾರೇ ಅಧ್ಯಕ್ಷರಾದರೂ ನಮ್ಮ ಪಕ್ಷದವರೆ ಆಗುತ್ತದೆ. ಹೀಗಾಗಿ ಇಲ್ಲಿ ಮೀಸಲಾತಿ ಬಗ್ಗೆ ಗೊಂದಲದ ಪ್ರಶ್ನೆ ಬರುವುದಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಖಂಡಪ್ಪ ದಾಸನ್‌, ಸಿದ್ದಣಗೌಡ ಕಾಡಂನೋರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT