ಸೋಮವಾರ, ನವೆಂಬರ್ 30, 2020
26 °C
ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತ ಮಹಿಳೆಗೆ ನೀಡಿದ ಕಾಂಗ್ರೆಸ್‌

ಶಹಾಪುರ ನಗರಸಭೆ: ಶಹನಾಜ್ ಬೇಗಂ ಅಧ್ಯಕ್ಷೆ, ಭೀಮಬಾಯಿ ಉಪಾಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ನಗರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ 23ನೇ ವಾರ್ಡ್ ಸದಸ್ಯೆ ಶಹನಾಜ್ ಬೇಗಂ ದರ್ಬಾನ್ ಹಾಗೂ ಉಪಾಧ್ಯಕ್ಷರಾಗಿ 16ನೇ ವಾರ್ಡ್ ಸದಸ್ಯೆ ಭೀಮಬಾಯಿ ದೇವಿಂದ್ರಪ್ಪ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ನಗರಸಭೆಯ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದವು. ಚುನಾವಣಾ ಅಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

ನಗಸಭೆಯು ಒಟ್ಟು 31 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷದ 16 ಸದಸ್ಯರು ಹಾಗೂ 2 ಎಸ್‌ಡಿಪಿಐ, 1 ಪಕ್ಷೇತರ ಸೇರಿ ಒಟ್ಟು 19 ಸದಸ್ಯರ ಬಲವನ್ನು ಹೊಂದಿದೆ. 11 ಬಿಜೆಪಿ ಸದಸ್ಯರಿದ್ದಾರೆ. ಸತತ ನಾಲ್ಕು ಬಾರಿ ಕಾಂಗ್ರೆಸ್‌ ಆಡಳಿತದ ಚುಕ್ಕಾಣಿ ಹಿಡಿದಿದೆ.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಈ ಸಂದರ್ಭದಲ್ಲಿ ಮಾತನಾಡಿ, ‘ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿದ್ದರೂ ಸಹ ಕಾಂಗ್ರೆಸ್ ಪಕ್ಷದ ಸಿದ್ಧಾಂತದಂತೆ ಸಾಮಾಜಿಕ ನ್ಯಾಯ ಕಲ್ಪಿಸಲು ಅಲ್ಪಸಂಖ್ಯಾತ ಮಹಿಳೆಗೆ ನೀಡಿದೆ. ಅಲ್ಲದೇ, ವಾಲ್ಮೀಕಿ ಜಯಂತ್ಯುತ್ಸವ ಸಂಭ್ರಮದಲ್ಲಿ ಪರಿಶಿಷ್ಟ ಪಂಗಡದ ಭೀಮಬಾಯಿ ದೇವೀಂದ್ರ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕು. ನಗರದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ತಹಶೀಲ್ದಾರ್‌ ಜಗನಾಥರಡ್ಡಿ, ಪ್ರಭಾರಿ ಪೌರಾಯುಕ್ತ ದೇವಿಂದ್ರ ಹೆಗ್ಗೆಡೆ, ಕಾಂಗ್ರೆಸ್ ಪಕ್ಷದ ನಗರಸಭೆಯ ಸದಸ್ಯರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.