ಮಂಗಳವಾರ, ಸೆಪ್ಟೆಂಬರ್ 28, 2021
21 °C

ಯಾದಗಿರಿ: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ:

ದೋರನಹಳ್ಳಿ (ಶಹಾಪುರ): ನಾಲ್ಕು ವರ್ಷದ ಮಗು ಸೇರಿದಂತೆ ನಾಲ್ವರು ಮಕ್ಕಳೊಂದಿಗೆ ದಂಪತಿಯ ಶವಗಳು ತಾಲ್ಲೂಕಿನ ದೋರನಹಳ್ಳಿಯ ಕೃಷಿ ಹೊಂಡದಲ್ಲಿ ಸೋಮವಾರ ಕಂಡು ಬಂದಿದ್ದು, ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಭೀಮರಾಯ ಸುರಪುರ (45), ಶಾಂತಮ್ಮ ಸುರಪುರ (35), ಶ್ರೀದೇವಿ(13), ಸುಮಿತ್ರಾ(12), ಶಿವರಾಜ(9), ಲಕ್ಷ್ಮಿ(4) ಮೃತಪಟ್ಟವರು.

‘ಕೃಷಿ ಹೊಂಡದಲ್ಲಿ ಶವ ಕಾಣಿಸುತ್ತಿರುವುದನ್ನು ಕಂಡು ಅಕ್ಕಪಕ್ಕದ ಜಮೀನಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಪಾದರಕ್ಷೆಗಳು ಇದ್ದವು. ನಂತರ ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ಈಜುಗಾರರನ್ನು ಕರೆಸಿಕೊಂಡು ಆರು ಶವಗಳನ್ನು ಹೊರ ತೆಗೆದು ನಗರದ ಸರ್ಕಾರಿ ಆಸ್ಪತ್ರೆಗೆ ಶವ ಪಂಚನಾಮೆಗೆ ಕಳುಹಿಸಲಾಗಿದೆ’ ಎಂದು ಶಹಾಪುರ ಠಾಣೆಯ ಪೊಲೀಸ್‌ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು.

ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಕೂಗಳತೆಯ ದೂರದಲ್ಲಿ ಘಟನೆ ನಡೆದಿದ್ದು, ಸಾವಿನ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಜನರು ತಂಡೋಪ ತಂಡವಾಗಿ ಆಗಮಿಸಿ ಕೃಷಿ ಹೊಂಡದ ಸುತ್ತ ಸೇರಿದರು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

‘ಭೀಮರಾಯ ಸೇರಿ ಒಟ್ಟು ಐವರು ಅಣ್ಣ ತಮ್ಮಂದಿರು ಇದ್ದಾರೆ. ತಾಯಿ ಶರಣಮ್ಮನ ಹೆಸರಿನಲ್ಲಿ ನಾಲ್ಕು ಎಕರೆ ಜಮೀನು ಇದೆ. ತಾಯಿ ಮೃತಪಟ್ಟ ನಂತರ ಜಮೀನು ಹಂಚಿಕೆ ಮಾಡಿಕೊಳ್ಳುವುದಾಗಿ ಅಲಿಖಿತ ಒಪ್ಪಂದವಾಗಿತ್ತು. ಅದರಲ್ಲಿ ಎರಡು ಎಕರೆ ಜಮೀನನ್ನು ಭೀಮರಾಯ ಉಳುಮೆ ಮಾಡುತ್ತಿದ್ದರು. ತಾಯಿ ಶರಣಮ್ಮ ಭೀಮರಾಯನ ಮನೆಯಲ್ಲಿ ವಾಸವಾಗಿದ್ದರು. ತೋಟಗಾರಿಕೆ ಬೆಳೆ ಬೆಳೆಯುವ ಉದ್ದೇಶದಿಂದ ಕೃಷಿ ಹೊಂಡ ತೊಡಿಸಿದ್ದರು. ತಿಂಗಳ ಹಿಂದೆ ಭೀಮರಾಯ ತನ್ನ ಮಗಳು ಚಂದ್ರಕಲಾ ಅವರನ್ನು ಸಗರ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದರು’ ಎಂದು ಗ್ರಾಮಸ್ಥರು ತಿಳಿಸಿದರು.

‘ಒಂದೇ ಕುಟುಂಬದವರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಇದಕ್ಕೆ ಬಲವಾದ ಕಾರಣವಿರುತ್ತದೆ. ಹಲವು ದಿನದಿಂದ ದಂಪತಿ ಚಿಂತನೆ ನಡೆಸಿರುತ್ತಾರೆ. ಮಕ್ಕಳು ನೇರವಾಗಿ ಬಾವಿಗೆ ಹಾರುವುದಿಲ್ಲ. ಮೊದಲು ವಿಷ ಸೇವಿಸಿ ನಂತರ ತಾವು ಸೇವನೆ ಮಾಡಿ ಬಾವಿಗೆ ಹಾರುವ ಸಾಧ್ಯತೆ ಹೆಚ್ಚು. ಇಲ್ಲವೆ ಕೊಲೆ ಮಾಡಿ ಬಾವಿಗೆ ಎಸೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತೆ ಇಲ್ಲ’ ಎಂದು ನಿವೃತ್ತ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಅಲ್ಲದೆ ಸಾಲ ನೀಡಿದ ವ್ಯಕ್ತಿಗಳು ಕಿರುಕುಳ ನೀಡಿರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆಸ್ತಿ ವಿವಾದವೂ ಆತ್ಮಹತ್ಯೆಗೆ ಕಾರಣವಾಗಿರುತ್ತದೆ. ಅಲ್ಲದೆ ಎಲ್ಲದ್ದಕ್ಕೂ ಮುಖ್ಯವಾಗಿ ಶವ ಪಂಚನಾಮೆಯ ಮರಣೋತ್ತರ ಪರೀಕ್ಷೆಯಿಂದ ತನಿಖೆಯ ಜಾಡು ಹಿಡಿದು ಪೊಲೀಸರು ಮುಂದೆ ಸಾಗುತ್ತಾರೆ’ ಎಂದು ಅವರು ಹೇಳಿದರು.

ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ, ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ, ತಹಶೀಲ್ದಾರ್‌ ಜಗನ್ನಾಥರಡ್ಡಿ, ಕ್ರೈಂ ಪಿಎಸ್‌ಐ ಆರ್.ಶಾಮಸುಂದರ ನಾಯಕ, ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ಹನುಮನಗೌಡ ಪೊಲೀಸ್‌ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.

****

ಯಜಮಾನನಿಗೆ ಜಮೀನು ಇಲ್ಲ

‘ಕೃಷಿ ಹೊಂಡಕ್ಕೆ ಹಾರಿ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿರುವ ಭೀಮರಾಯನಿಗೆ ಸ್ವಂತ ಜಮೀನು ಇಲ್ಲ. ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿಲ್ಲ. ಕೈ ಸಾಲ ಮಾಡಿಕೊಂಡಿದ್ದರು. ಭೀಮರಾಯನ ತಾಯಿ ಶರಣಮ್ಮ ಹೆಸರನಲ್ಲಿ ಇರುವ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು ಎಂದು ಸ್ಥಳಕ್ಕೆ ಭೇಟಿ ನೀಡಿದಾಗ ಗೊತ್ತಾಯಿತು’ ಎಂದು ತಹಶೀಲ್ದಾರ್ ಜಗನ್ನಾಥರಡ್ಡಿ ತಿಳಿಸಿದ್ದಾರೆ.
––
ಪ್ರಕರಣದ ಕುರಿತು ತನಿಖೆ

‘ಭೀಮರಾಯ ದಂಪತಿ ಸೇರಿಕೊಂಡು ತನ್ನ ನಾಲ್ಕು ಜನ ಮಕ್ಕಳು ಸಮೇತ ಬೆಳಿಗ್ಗೆ 6 ಗಂಟೆಗೆ ಕೃಷಿ ಹೊಂಡದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದರು. ಅದರಿಂದ ನಷ್ಟ ಅನುಭವಿಸಿರಬಹುದು. ಸುಮಾರು ₹20 ಲಕ್ಷ ಕೈ ಸಾಲ ಮಾಡಿಕೊಂಡಿದ್ದರು ಎಂದು ಗ್ರಾಮಸ್ಥರನ್ನು ವಿಚಾರಿಸಿದಾಗ ಗೊತ್ತಾಗಿದೆ. ಸದ್ಯಕ್ಕೆ ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಾಣಿಸುತ್ತಿದೆ. ತನಿಖೆ ನಡೆಸಲಾಗುವುದು. ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

.


ಕೃಷಿ ಹೊಂಡದಲ್ಲಿ ಮುಳುಗಿದ್ದವರ ಶವ ಹೊರತೆಗೆಯುವ ಕಾರ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು