ಸೋಮವಾರ, ಮೇ 23, 2022
30 °C
ಸೂಗೂರ ಗ್ರಾಮದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬ

ಶಹಾಪುರ | ಎಸ್‌ಟಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ/ವಡಗೇರಾ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಸೂಗೂರ ಗ್ರಾಮದ ಪರಿಶಿಷ್ಟ ಪಂಗಡದ (ವಾಲ್ಮೀಕಿ ಸಮುದಾಯ) ಭೀಮಣ್ಣಗೌಡ ಹನುಮಗೌಡ ದೊರೆ ಅವರ ಏಕೈಕ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಇದರಿಂದ ಕುಟುಂಬದ ಸದಸ್ಯರು ಆತಂಕಗೊಂಡಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿಪತ್ರ ಸಲ್ಲಿಸಿರುವ ಕುಟುಂಬ ಸದಸ್ಯರು, ‘ನಮಗೆ ಸೂಕ್ತ ರಕ್ಷಣೆ ನೀಡಬೇಕು. ಬಹಿಷ್ಕಾರ ಹಾಕಿದ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಕೋರಿದ್ದಾರೆ.

‘ಗ್ರಾಮದಲ್ಲಿ ನನ್ನ ಕುಟುಂಬವಿದ್ದು, ಐವರು ಮಕ್ಕಳಿದ್ದಾರೆ. ಹಲವು ತಿಂಗಳ ಹಿಂದೆಯೇ ಗ್ರಾಮಸ್ಥರು ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಅಂಗಡಿಗೆ ತೆರಳಿದರೆ, ಕುಟುಂಬದ ಸದಸ್ಯರಿಗೆ ಯಾವ ವಸ್ತುಗಳನ್ನು ನೀಡದೇ ಅವಮಾನಿಸಲಾಗುತ್ತದೆ. ನನ್ನ ಜಮೀನುಗಳಿಗೆ ಯಾರೂ ಕೆಲಸಕ್ಕೆ ಬರುವುದಿಲ್ಲ. ದ್ವಿಚಕ್ರ ವಾಹನದಲ್ಲಿ ಹೊರಟರೆ, ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ತುಂಬಾ ನೋವು ಆಗಿದೆ’ ಎಂದು ಭೀಮಣ್ಣಗೌಡ ತಿಳಿಸಿದ್ದಾರೆ.

‘ಗ್ರಾಮದ ದಳಪತಿಯಾದ ನಾನು ಸಾಕಷ್ಟು ಅವಮಾನ ಸಹಿಸಿಕೊಂಡು ಕುಟುಂಬ ಸದಸ್ಯರೊಂದಿಗೆ ಜೀವನ ಸಾಗಿಸುತ್ತಿರುವೆ. ಯಾವ ಸಮಯದಲ್ಲಿ ನನ್ನ ಕುಟುಂಬದ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸುವುರೋ ಗೊತ್ತಿಲ್ಲ. ಅದರಲ್ಲಿ ಶಿವಪುರ ಗ್ರಾಮದ ಮರೆಪ್ಪ ತೋಟದಮನೆ ಎಂಬುವರು ನಮ್ಮ ಕುಟುಂಬವನ್ನು ಹೀಯಾಳಿಸಿ ನೋವುಂಟು ಮಾಡುತ್ತಿದ್ದಾರೆ. ಇದರ ಬಗ್ಗೆ ವಡಗೇರಾ ಠಾಣೆಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದರೂ ಪೊಲೀಸರು ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಭೀಮಣ್ಣಗೌಡ ದೊರೆಯವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ಗಮನಕ್ಕೆ ಬಂದಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡು ಪರಿಶೀಲಿಸಲಾಗುವುದು’ ಎಂದು ವಡಗೇರಾ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸಿದ್ದರಾಯ ಬಳೂರ್ಗಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು