‘ಪತ್ರಕರ್ತರಲ್ಲಿ ಕಣ್ಮರೆಗೊಂಡಿರುವ ಸಾಮಾಜಿಕ ಕಳಕಳಿ’

7
ಕಾರ್ಯಾಗಾರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ಎನ್.ನಾಯಕ್ ಅಭಿಮತ

‘ಪತ್ರಕರ್ತರಲ್ಲಿ ಕಣ್ಮರೆಗೊಂಡಿರುವ ಸಾಮಾಜಿಕ ಕಳಕಳಿ’

Published:
Updated:
ಯಾದಗಿರಿಯ ಬಾಲಭವನದಲ್ಲಿ ಬುಧವಾರ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮ ವರದಿಗಾರರು, ಕ್ಯಾಮರಾಮನ್‌ಗಳಿಗೆ ಮಕ್ಕಳ ಹಕ್ಕುಗಳಿಗಾಗಿ ಇರುವ ಕಾಯ್ದೆಗಳ ಕುರಿತು ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರವನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ಎನ್.ನಾಯಕ್ ಉದ್ಘಾಟಿಸಿದರು

ಯಾದಗಿರಿ:‘ಮಕ್ಕಳ ಹಕ್ಕುಗಳ ರಕ್ಷಣೆಯ ಹೊಣೆ ಕೇವಲ ಸರ್ಕಾರ, ಸಮಾಜದ ಕೆಲಸವಲ್ಲ, ಮಾಧ್ಯಮದ ಪಾತ್ರ ಕೂಡ ಪ್ರಧಾನವಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ಎನ್.ನಾಯಕ್ ಹೇಳಿದರು.

ನಗರದ ಜಿಲ್ಲಾ ಬಾಲ ಭವನದಲ್ಲಿ ಬುಧವಾರ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮ ವರದಿಗಾರರು, ಛಾಯಾಗ್ರಾಹಕರಿಗೆ ಮಕ್ಕಳ ಹಕ್ಕುಗಳಿಗಾಗಿ ಇರುವ ಕಾಯ್ದೆಗಳ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೆ ಪತ್ರಕರ್ತರಲ್ಲಿ ಸಾಮಾಜಿಕ ಕಳಕಳಿ ಹೆಚ್ಚಿತ್ತು. ಹಾಗಾಗಿ, ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಹಾಗೂ ಅತ್ಯಾಚಾರದಂತಹ ಪ್ರಕರಣಗಳನ್ನು ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ನೇರವಾಗಿ ವರದಿ ಮಾಡುವಂತಿಲ್ಲ. ದೌರ್ಜನ್ಯಕ್ಕೊಳಗಾದ ಮಗು, ಪೋಷಕರ ಹೆಸರು ಪ್ರಕಟಿಸಬಾರದು. ಆದರೆ, ದಿನಬೆಳಗಾದರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಟಿಆರ್‌ಪಿಗಾಗಿ ವೈರಲ್ ಸುದ್ದಿಗಳನ್ನು ಹೆಚ್ಚು ತೋರಿಸಲಾಗುತ್ತಿದೆ ಎಂದು ವಿಷಾದಿಸಿದ ಅವರು, ನಕರಾತ್ಮಕ ಸುದ್ದಿಗಳನ್ನು ಬಿತ್ತರಿಸುವುದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದರು.

‘ಮಾಧ್ಯಮಗಳಿಂದ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜಕ್ಕೆ ಸಂಪೂರ್ಣ ಮಾಹಿತಿ ಸಿಗಬೇಕು. ಅವರ ಯೋಜನೆಗಳ ಬಗ್ಗೆ ಪ್ರಚಾರ ಮಾಡಿ, ಅವರು ಅವುಗಳಲ್ಲಿ ಭಾಗಿಯಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೈತಿಕತೆಯ ವಿಚಾರವುಳ್ಳ ಕಾರ್ಯಕ್ರಮಗಳನ್ನು ಪ್ರಸಾರ ಮತ್ತು ಪ್ರಕಟ ಮಾಡಬೇಕು’ ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ,‘ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು’ ಎಂದು ಹೇಳಿದರು.

ಕಲಬುರ್ಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ ಉಪನ್ಯಾಸ ನೀಡಿ, ‘ ಮಕ್ಕಳು ಕಾನೂನು ಬದ್ಧವಾಗಿ ಅನುಭವಿಸಲು ಅವರ ಹಕ್ಕುಗಳನ್ನು ನೀಡಬೇಕು ಎನ್ನುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ 1989ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ರಚಿಸಿದೆ. 1992ರ ಡಿಸೆಂಬರ್ 11ರಂದು ಭಾರತ ದೇಶವೂ ಸಹ 18 ವರ್ಷದ ಎಲ್ಲಾ ಮಕ್ಕಳಿಗೆ ಮೂಲಭೂತ ಹಕ್ಕುಗಳನ್ನು ನೀಡುತ್ತೇವೆ ಎಂಬ ಒಡಂಬಡಿಕೆಗೆ ಒಪ್ಪಿ ಸಹಿ ಮಾಡಿದೆ. ಅದರಂತೆ ವಿವಿಧ ಪರಿಸ್ಥಿತಿಗಳಿಗನುಗುಣವಾಗಿ 18 ವರ್ಷದೊಳಗಿನ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಪಣತೊಟ್ಟಿದೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಚಂದ್ರಶೇಖರ ಅಲ್ಲಿಪುರ ಮಾತನಾಡಿ,‘ದೌರ್ಜನ್ಯಕ್ಕೊಳಗಾಗುವ ಮಗುವಿಗೆ ಮೊದಲು ರಕ್ಷಣೆ ಒದಗಿಸಬೇಕು. ಅವಶ್ಯವಿದ್ದಲ್ಲಿ ಆ ಮಗುವಿಗೆ ಪುನರ್ವಸತಿ ಕಲ್ಪಿಸಬೇಕು. ಮಕ್ಕಳ ಬಗ್ಗೆ ಮಾಧ್ಯಮಗಳಲ್ಲಿ ವರದಿ ಮಾಡುವಾಗ ಕಾನೂನು ಉಲ್ಲಂಘಿಸಬಾರದು’ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಕಾಂತ ಆರ್.ಕುಲಕರ್ಣಿ, ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಜೀವ್‌ರಾವ್ ಕುಲಕರ್ಣಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಭೀಮರಾಯ ಬಿ.ಕಿಲ್ಲನಕೇರಾ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಸಿ.ಎಸ್.ಮಾಲಿ ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಬ್ದುಲ್ ರಹಮಾನ್, ಪತ್ರಕರ್ತರು ಹಾಗೂ ಪತ್ರಿಕಾ ಛಾಯಾಗ್ರಾಹಕರು ಇದ್ದರು.

ಸುದ್ದಿ ನೀಡುವುದರ ಜತೆಗೆ ಪತ್ರಕರ್ತರಿಗೆ ಸಾಮಾಜಿಕ ಕಳಕಳಿಯೂ ಇರಬೇಕು. ಆದರೆ, ಈಚಿನ ಪತ್ರಕರ್ತರಲ್ಲಿ ಸಾಮಾಜಿಕ ಕಳಕಳಿ ಕಣ್ಮರೆಯಾಗಿದೆ.
- ಸದಾನಂದ ಎನ್.ನಾಯಕ್ , ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !