ಶನಿವಾರ, ಜೂಲೈ 4, 2020
22 °C

ಗಣಿತ ಪರೀಕ್ಷೆ: ‘ಹಳೆ ಪ್ರಶ್ನೆಪತ್ರಿಕೆ’ ವಿತರಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ (ಯಾದಗಿರಿ ಜಿಲ್ಲೆ): ಪಟ್ಟಣದಲ್ಲಿ ಜೂನ್‌ 27ರಂದು ನಡೆದ ಗಣಿತ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ನಾಲ್ವರು ವಿದ್ಯಾರ್ಥಿನಿಯರು ಹಾಗೂ ಒಬ್ಬ ವಿದ್ಯಾರ್ಥಿಗೆ ಹಳೆ ಪಠ್ಯಕ್ರಮದ ಪ್ರಶ್ನೆಪತ್ರಿಕೆ ನೀಡಲಾಗಿದೆ. 

ಈ ಐವರೂ ಹೊಸದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿದ್ದರು.

‘ನಾವು ಕೆಂಭಾವಿ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು. ನಮಗೆ 2018ನೇ ಸಾಲಿನ ಗಣಿತ ಪಠ್ಯಕ್ರಮದ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು. ಅರ್ಧದಷ್ಟು ಪ್ರಶ್ನೆಗಳಿಗೆ ಉತ್ತರಿಸಿದಾಗ ಅದು ಗಮನಕ್ಕೆ ಬಂತು. ಮೇಲ್ವಿಚಾರಕರ ಗಮನಕ್ಕೆ ತಂದೆವು. ಪ್ರಯೋಜನವಾಗಲಿಲ್ಲ. ಭವಿಷ್ಯದ ಚಿಂತೆ ಕಾಡುತ್ತಿದೆ’ ಎಂದು ವಿದ್ಯಾರ್ಥಿನಿಯರು ಆತಂಕ ವ್ಯಕ್ತಪಡಿಸಿದ್ದಾರೆ.

‘ಹಳೆ ಪ್ರಶ್ನೆಪತ್ರಿಕೆ ಕೊಟ್ಟು ಅಧಿಕಾರಿಗಳು ಗೊಂದಲ ಸೃಷ್ಟಿಸಿದ್ದಾರೆ. ಇದರಿಂದ ನಮ್ಮ ಮಕ್ಕಳಿಗೆ ತೊಂದರೆಯಾಗಿದೆ. ಕೂಡಲೇ ಪರೀಕ್ಷೆ ನಡೆಸಬೇಕು ಮತ್ತು ಹಳೆ ಪಶ್ನೆಪತ್ರಿಕೆ ನೀಡಿ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ.

‘ಕೆಂಭಾವಿ ಪರೀಕ್ಷಾ ಕೇಂದ್ರಗಳಲ್ಲಿ ಅವಾಂತರ ನಡೆದದ್ದು ಗಮನಕ್ಕೆ ಬಂದಿದೆ. ಬದಲಿ ಪ್ರಶ್ನೆಪತ್ರಿಕೆ ನೀಡಿದ ಬಗ್ಗೆ ಸಂಬಂಧಿಸಿದ ಮೇಲ್ವಿಚಾರಕರಿಗೆ ನೋಟಿಸ್‌ ಜಾರಿ ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ ಪ್ರತಿಕ್ರಿಯಿಸಿದರು.

‘ಕೆಂಭಾವಿಯಲ್ಲಿ ಹಳೆ ಪ್ರಶ್ನೆಪ‍ತ್ರಿಕೆ ನೀಡಿರುವ ಬಗ್ಗೆ ದೂರುಗಳು ಬಂದಿದ್ದು, ಪರಿಶೀಲಿಸುತ್ತಿದ್ದೇವೆ. ಮೇಲ್ವಿಚಾರಕರಿಂದ ತಪ್ಪಾಗಿದ್ದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರ್ಗಿ ವಲಯದ ಹೆಚ್ಚುವರಿ ಆಯುಕ್ತ ನಲಿನ್ ಅತುಲ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು