ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ನಮ್ಮ ಜನ ನಮ್ಮ ಧ್ವನಿ: ಅಗ್ನಿ ಅನಾಹುತಕ್ಕೆ ದೂರವಾದ ‘ಠಾಣೆ’ಗಳು

ಹಳೆ ತಾಲ್ಲೂಕುಗಳಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳು, ಹೊಸ ತಾಲ್ಲೂಕುಗಳಲ್ಲಿ ಜಾಗದ ಕೊರತೆ
Last Updated 15 ಮೇ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮೂರು ಹಳೆ, ಮೂರು ಹೊಸ ತಾಲ್ಲೂಕುಗಳಿವೆ. ಹಳೆ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳಿವೆ. ಉಳಿದ ಹೊಸ ತಾಲ್ಲೂಕುಗಳ ಕೊನೆ ಗ್ರಾಮಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದರೆ ಅಲ್ಲಿಗೆ ವಾಹನ ತಲು‍ಪವಷ್ಟರಲ್ಲೇ ಬೆಂಕಿ ನಂದಿರುತ್ತದೆ.

ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕದಳ ಠಾಣೆಗಳಿವೆ. ಹೊಸ ತಾಲ್ಲೂಕುಗಳಾದ ಗುರುಮಠಕಲ್‌, ಹುಣಸಗಿ, ವಡಗೇರಾ ತಾಲ್ಲೂಕುಗಳು ರಚನೆಯಾಗಿ ಐದಾರು ವರ್ಷ ಕಳೆದರೂ ಇಂದಿಗೂ ಅನೇಕ ಸೌಲಭ್ಯಗಳಿಂದ ವಂಚಿತವಾಗಿವೆ. ಇದರ ಜೊತೆಗೆ ಅಗ್ನಿಶಾಮಕ ದಳ ಕಚೇರಿಯೂ ಇಲ್ಲದಂತೆ ಆಗಿದೆ.

ಒಂದೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ 330 ಅಗ್ನಿ ಅನಾಹುತಗಳಾಗಿವೆ. ಯಾದಗಿರಿ–ಗುರುಮಠಕಲ್‌ ತಾಲ್ಲೂಕುಗಳಲ್ಲೇ ಹೆಚ್ಚು ಸಂಭವಿಸಿವೆ.

ಅಗ್ನಿ ಅವಘಡಗಳಿಗೆ ಕಾರಣ: ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ತಾಪಮಾನ ಇರುತ್ತದೆ. ಇದರಿಂದ ಬೆಂಕಿ ಅವಘಡಗಳು ಹೆಚ್ಚಾಗುತ್ತವೆ ಎಂದು ಅಗ್ನಿಶಾಮಕ ಕಚೇರಿ ಅಧಿಕಾರಿಗಳು ಹೇಳುತ್ತಾರೆ.

ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಸರಿಯಾಗಿ ಬಳಕೆ ಮಾಡುವ ಬಗ್ಗೆ ಮಾಹಿತಿ ಇಲ್ಲದಿರುವ ಕಾರಣದಿಂದಲೂ ಬೆಂಕಿ ಅವಘಡಗಳು ಸಂಭವಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಬೀಡಿ, ಸಿಗರೇಟ್‌ ಸೇದಿ ಎಸೆದಿರುವ ಕಿಡಿಯಿಂದ, ವಿದ್ಯುತ್‌ ಮುಖ್ಯಲೈನ್‌ ಕೆಳಗೆ ಅಥವಾ ಹತ್ತಿರದ ಬಣವೆಗಳು ಸಂಗ್ರಹಿಸುವ ಕಾರಣದಿಂದ ಬೆಂಕಿ ಅನಾಹುತಗಳು ಸಂಭವಿಸುತ್ತವೆ.

ಬೇಸಿಗೆಯಲ್ಲಿ ಹೆಚ್ಚಿನ ತಾಪಾಮಾನ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಬಣವೆಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಅಗ್ನಿ ಅನಾಹುತ ಸಂಭವಿಸುತ್ತವೆ.ಇದರ ಜೊತೆಗೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗೆ ಸಂಬಂಧಿಸಿ ಅಗ್ನಿ ಅವಘಡಗಳು, ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಮನೆ, ಅಂಗಡಿ, ಕಾಟನ್‌ ಇಂಡಸ್ಟ್ರಿಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತವೆ.

ಒಂದು ವರ್ಷದಲ್ಲಿ 188 ಅಗ್ನಿ ಪ್ರಮಾದ: ಜಿಲ್ಲೆಯ ಮೂರು ಅಗ್ನಿಶಾಮಕ ಠಾಣೆಗಳಲ್ಲಿ 188 ಅಗ್ನಿ ಪ್ರಮಾದ ಕರೆಗಳು ಬಂದಿವೆ.ಯಾದಗಿರಿ–ಗುರುಮಠಲ್‌ ತಾಲ್ಲೂಕಿನಲ್ಲಿ 80, ಶಹಾಪುರ–ವಡಗೇರಾ ತಾಲ್ಲೂಕಿನಲ್ಲಿ 51, ಸುರಪುರ–ಹುಣಸಗಿ ತಾಲ್ಲೂಕಿನಲ್ಲಿ 57 ಸೇರಿದಂತೆ 188 ಅಗ್ನಿ ಕರೆಗಳು ಬಂದಿವೆ.

7 ಜಲ ವಾಹನಗಳು: ಜಿಲ್ಲೆಯ ಮೂರು ಠಾಣೆಗಳಲ್ಲಿ 7 ಜಲವಾಹನಗಳಿವೆ. ಯಾದಗಿರಿ ಠಾಣೆಯಲ್ಲಿ 3, 1 ತ್ವರಿತ ಪ್ರತಿಕ್ರಿಯೆ ವಾಹನ (QRV), ಶಹಾಪುರ, ಸುರಪುರ ಅಗ್ನಿಶಾಮಕ ಠಾಣೆಯಲ್ಲಿ 2 ಜಲವಾಹನಗಳಿವೆ.

ಯಾದಗಿರಿ, ಶಹಾಪುರ, ಸುರಪುರ ಅಗ್ನಿಶಾಮಕ ಠಾಣೆಗಳ ಆವರಣಗಳಲ್ಲಿ ಕೊಳವೆಬಾವಿಗಳ ವ್ಯವಸ್ಥೆ ಇದೆ. ಅಗ್ನಿಅನಾಹುತವಾದ ಸ್ಥಳಗಳಿಗೆ ತೆರಳಿ ಬೆಂಕಿಯನ್ನು ನಂದಿಸಿ ಮರಳಿ ಠಾಣೆಗೆ ಬಂದಾಗ ಭರ್ತಿ ಮಾಡಿ ನಿಲ್ಲಿಸಲಾಗುತ್ತಿದೆ. ಬೆಂಕಿ ನಂದಿಸುವ ಸಮಯದಲ್ಲಿ ನೀರು ಖಾಲಿಯಾದರೆ ಜಲವಾಹನಗಳಲ್ಲಿ ಪೋರ್ಟೆಬಲ್‌ ಪಂಪ್‌ಗಳು ಲಭ್ಯವಿವೆ. ಹತ್ತಿರದ ಕೆರೆ, ಬಾವಿಗಳಿಂದ ನೀರನ್ನು ಜಲವಾಹನಕ್ಕೆ ತುಂಬಿ ಬೆಂಕಿ ನಂದಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಯಾದಗಿರಿ ನಗರದಲ್ಲಿ ನಗರಸಭೆಯ ಫಿಲ್ಟರ್ ಬೆಡ್‌ನಿಂದಲೂ ನೀರು ಭರ್ತಿಮಾಡಿಕೊಳ್ಳಲು ಅವಕಾಶ ಇದೆ.ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳಿಂದ ಅಗ್ನಿಶಾಮಕ ಇಲಾಖೆಗೆ ಸಂಬಂಧಿಸಿದಂತೆ ತಕರಾರು ಇಲ್ಲ ಎನ್ನುತ್ತಾರೆ ಠಾಣೆಯ ಸಿಬ್ಬಂದಿ.

****

ಜಿಲ್ಲೆಯಲ್ಲಿ 32 ಹುದ್ದೆಗಳು ಖಾಲಿ

ಜಿಲ್ಲಾ ಅಗ್ನಿಶಾಮಕದಳ ಠಾಣೆಯಲ್ಲಿ 32 ಹುದ್ದೆಗಳು ಖಾಲಿಯಾಗಿವೆ.

ಯಾದಗಿರಿ ಠಾಣೆಯಲ್ಲಿ ಮಂಜೂರಾದ 44 ಪೈಕಿ 31 ಹುದ್ದೆಗಳು ಭರ್ತಿಯಾಗಿವೆ. ಶಹಾಪುರ ಠಾಣೆಯಲ್ಲಿ 40 ಪೈಕಿ 30 ಹುದ್ದೆಗಳು ಭರ್ತಿಯಾಗಿವೆ. ಸುರಪುರ ಠಾಣೆಯಲ್ಲಿ 27 ಪೈಕಿ 18 ಹುದ್ದೆಗಳು ಮಂಜೂರಾಗಿವೆ. ಒಟ್ಟಾರೆ 111 ಪೈಕಿ 79 ಹುದ್ದೆಗಳು ಭರ್ತಿಯಾಗಿವೆ. 32 ಹುದ್ದೆಗಳು ಖಾಲಿ ಇವೆ.
***
ಹೊಸ ತಾಲ್ಲೂಕುಗಳಲ್ಲಿ ಜಾಗದ ಕೊರತೆ

ಯಾದಗಿರಿಯಿಂದ ಗುರುಮಠಕಲ್‌, ಶಹಾಪುರದಿಂದ ವಡಗೇರಾ, ಸುರಪುರದಿಂದ ಹುಣಸಗಿ ತಾಲ್ಲೂಕು ಬೇರ್ಪಟ್ಟು ಹೊಸ ತಾಲ್ಲೂಕು ನಿರ್ಮಾಣ ಮಾಡಲಾಗಿದೆ. ಎಲ್ಲ ತಾಲ್ಲೂಕುಗಳು ಘೋಷಣೆಯಾಗಿ 4ರಿಂದ 5 ವರ್ಷಗಳಾಗಿವೆ.

ಶಹಾಪುರದಿಂದ ವಡಗೇರಾ 33 ಕಿ.ಮೀ ಇದೆ. ಯಾದಗಿರಿಯಿಂದ ಗುರುಮಠಕಲ್‌ 40 ಕಿ.ಮೀ, ಸುರಪುರದಿಂದ ಹುಣಸಗಿ 35 ಕಿ.ಮೀ ಅಂತರದಲ್ಲಿವೆ.

ಪ್ರತಿ 40 ಕಿ.ಮೀ ಅಂತರದಲ್ಲಿ ಅಗ್ನಿಶಾಮಕ ಠಾಣೆ ಇರಬೇಕು ಎನ್ನುವ ನಿಯಮವಿದೆ. ತಾಲ್ಲೂಕು ಕೇಂದ್ರದಿಂದ ತಾಲ್ಲೂಕಿಗೆ ಅಂತರ ಕಡಿಮೆ ಇದ್ದರೂ ಹೊಸ ತಾಲ್ಲೂಕಿನ ಕೊನೆ ಗ್ರಾಮಕ್ಕೆ ಹಳೆ ತಾಲ್ಲೂಕು ಕೇಂದ್ರದಿಂದ ವಾಹನ ತಲುಪುವಷ್ಟರಲ್ಲಿ ಬೆಂಕಿ ನಂದಿರುತ್ತದೆ. ಇಲ್ಲವೇ ಅನಾಹುತ ಹೆಚ್ಚಾಗಿರುತ್ತದೆ. ಹೀಗಾಗಿ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಗುರುಮಠಕಲ್‌ನಲ್ಲಿ ಸರ್ಕಾರಿ ಜಾಗದ ಕೊರತೆ ಇದೆ. ನಾರಾಯಣಪೇಟೆಗೆ ತೆರಳುವ ಮಾರ್ಗದಲ್ಲಿ ಜಾಗ ತೋರಿಸಲಾಗಿದೆ. ಆದರೆ, ಠಾಣೆಗೆ ಅನುಕೂಲ ಇಲ್ಲ ಎಂಬ ಕಾರಣಕ್ಕೆ ಕಚೇರಿ ಸ್ಥಾಪನೆಗೆ ಮುಂದಾಗಿಲ್ಲ. ಅಲ್ಲದೇ ಹುಣಸಗಿಯಲ್ಲೂ ಸರ್ಕಾರಿ ಜಾಗದ ಕೊರತೆ ಇದೆ. ಕೆಬಿಜೆಎನ್‌ಎಲ್‌ ಜಾಗವಿದ್ದರೂ ಗುಡ್ಡದ ಬಳಿ ಜಾಗ ತೋರಿಸಲಾಗಿದೆ. ಇದರಿಂದ ವಿಳಂಬವಾಗಿದೆ. ವಡಗೇರಾ ಪೊಲೀಸ್‌ ಠಾಣೆ ಪಕ್ಕದಲ್ಲಿ ಜಾಗವಿದ್ದರೂ ಕಚೇರಿ ಆರಂಭಕ್ಕೆ ಸರ್ಕಾರದ ಅನುಮತಿ ಇಲ್ಲದ ಕಾರಣ ಅಡ್ಡಿಯಾಗಿದೆ.
***
ಅಂಕಿ ಅಂಶ

ಜನವರಿ 1ರಿಂದ ಮೇ 12 ರವರೆಗೆ ಅಗ್ನಿಕರೆ

ತಾಲ್ಲೂಕು; ಸಂಖ್ಯೆ

ಯಾದಗಿರಿ ಅಗ್ನಿಶಾಮಕಠಾಣೆ; 67

ಶಹಾಪುರ ಅಗ್ನಿಶಾಮಕಠಾಣೆ; 36

ಸುರಪುರ ಅಗ್ನಿಶಾಮಕಠಾಣೆ; 39

ಒಟ್ಟು;142

ಆಧಾರ: ಅಗ್ನಿಶಾಮಕ ಠಾಣೆ ಯಾದಗಿರಿ
***
ಸುರಪುರ, ಹುಣಸಗಿ ತಾಲ್ಲೂಕಿಗೆ ಒಂದೇ ಠಾಣೆ

ಸುರಪುರ: ಸುರಪುರದಲ್ಲಿ ಮಾತ್ರ ಅಗ್ನಿಶಾಮಕ ಠಾಣೆ ಇದೆ. ನಗರದಿಂದ ನಾರಾಯಣಪುರದಂಥ ಕೊನೆಯ ಗ್ರಾಮಗಳಿಗೆ ತೆರಳಲು 70 ಕಿ.ಮೀ ಸಂಚರಿಸಬೇಕು. ಇದರಿಂದ ಅಗ್ನಿ ನಂದಿಸಲು ತೊಂದರೆಯಾಗುತ್ತಿದೆ.

ಈ ವರ್ಷ ಒಟ್ಟು 41 ಅಗ್ನಿ ಅವಘಡಗಳು ಸಂಭವಿಸಿವೆ. ಇದರಲ್ಲಿ ಬಹುತೇಕ ಬಣಿವೆಗೆ ಬೆಂಕಿ ತಗುಲಿರುವ ಪ್ರಕರಣಗಳಿವೆ. ಹೆಚ್ಚಿನ ಅನಾಹುತ ಅಥವಾ ಜೀವ ಹಾನಿ ಸಂಭವಿಸಿಲ್ಲ. ನದಿ, ಕಾಲುವೆಗೆ ಮನುಷ್ಯರು ಬಿದ್ದ 3 ಪ್ರಕರಣಗಳು ಇವೆ. ಇದರಲ್ಲಿ ಇಬ್ಬರು ಮರಣ ಹೊಂದಿದ್ದಾರೆ. ಈಗ ಹೊಲಗಳಲ್ಲಿ ಭತ್ತ ಕಟಾವು ಮಾಡಿದ್ದು, ಉಳಿದ ಹುಲ್ಲಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದು ಬೆಂಕಿ ಅವಘಡಕ್ಕೆ ಕಾರಣವಾಗಿದ್ದು ಬಣಿವೆಗೆಳು, ಹೊಲದಲ್ಲಿರುವ ಗುಡಿಸಲುಗಳಿಗೆ ಬೆಂಕಿ ಚಾಚುತ್ತದೆ. ಊರುಗಳ ತಿಪ್ಪೆಗುಂಡಿಗಳಲ್ಲಿ ಮನೆಯ ಒಲೆಯ ಬೂದಿ ಹಾಕುವ ಕಾರಣವೂ ಅವಘಡಕ್ಕೆ ಕಾರಣ.

ನಗರದ ಠಾಣೆಯಲ್ಲಿ ಎರಡು ಜಲ ವಾಹನಗಳಿವೆ. ನೀರಿನ ಸೌಲಭ್ಯ ಉತ್ತಮವಾಗಿದೆ. ಸ್ಥಳೀಯ ಆಡಳಿತ ಉತ್ತಮವಾಗಿ ಸ್ಪಂದಿಸುತ್ತಿದ್ದು, ಅಗ್ನಿಶಾಮಕ ಠಾಣೆಗೆ ಅಗತ್ಯ ನೆರವು ನೀಡುತ್ತಿವೆ. 27 ಮಂಜೂರಿ ಹುದ್ದೆಗಳ ಪೈಕಿ 15 ಜನ ಕರ್ತವ್ಯದಲ್ಲಿದ್ದಾರೆ. ಘಟಕಾಧಿಕಾರಿಯೂ ಪ್ರಭಾರಿಯಾಗಿದ್ದಾರೆ.
***
‘ಅಗ್ನಿಶಾಮಕದಳ ಶಾಖೆ ಆರಂಭಿಸಿ’

ಗುರುಮಠಕಲ್: ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸುವುದಕ್ಕೂ ಮೊದಲಿಂದಲೂ ಜನತೆ 'ನಮ್ಮ ಪಟ್ಟಣದಲ್ಲೊಂದು ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕೆಂಬ' ನಿರೀಕ್ಷೆಯನ್ನು ಹೊಂದಿದ್ದರು.

ಜಿಲ್ಲಾ ಕೇಂದ್ರ ಯಾದಗಿರಿ ನಗರದಲ್ಲಿ ಅಗ್ನಿಶಾಮಕ ಠಾಣೆ ಇದೆ. ಆದರೆ, ಅದು ತಾಲ್ಲೂಕು ಕೇಂದ್ರದಿಂದ 45 ಕಿ.ಮೀ. ದೂರ. ಮಧ್ಯದಲ್ಲೊಂದು ಬೆಟ್ಟದ ತಿರುವಿನಲ್ಲಿ ವಾಹನ ಓಡಿಸಿಕೊಂಡು ಅವಘಡ ಸಂಭವಿಸಿದಲ್ಲಿಗೆ ತಲುಪುವಷ್ಟಕ್ಕೆ ಬಹುತೇಕ ಹಾನಿಯಾಗಿರುತ್ತದೆ. ಆದ್ದರಿಂದ ನಮ್ಮ ಪಟ್ಟಣದಲ್ಲಿಯೇ ಒಂದು ಶಾಖೆ ಆರಂಭಿಸಬೇಕು ಎಂದು ಸ್ಥಳೀಯರಾದ ಮಹಬೂಬ್, ಅಶೋಕ, ಮಂಜುನಾಥ ಒತ್ತಾಯಿಸುತ್ತಾರೆ.

ಚಂಡರಕಿ ಗ್ರಾಮದಲ್ಲಿ ಮೇವಿನ ಬಣವಿಗೆ ಬೆಂಕಿ, ಕೊಂಕಲ್ ಹೊರವಲಯದ ಕಬ್ಬಿನ ತೋಟ, ಪಟ್ಟಣದ ತೋಟವೊಂದು ಹೀಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಜರುಗುತ್ತಿರುವ ಅಗ್ನಿ ಅವಘಡಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ಹಾನಿಯನ್ನು ತಪ್ಪಿಸಲು ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಬೇಕು ಎಂದು ಕಾರ್ಯಕರ್ತ ಸಂಜೀವ ಅಳೆಗಾರ ಕೋರುತ್ತಾರೆ.
***
ಜೀವ ರಕ್ಷಕರಿಗಿಲ್ಲ ಅಗತ್ಯ ಸೌಲಭ್ಯ

ಶಹಾಪುರ: ತುರ್ತು ಸಂದರ್ಭಗಳಾದ ಪ್ರವಾಹ, ಬೆಂಕಿ ಅನಾಹುತ, ನೀರಿನಲ್ಲಿ ಮುಳುಗಿದಾಗ ಮೃತ ದೇಹ ಹೊರ ತೆಗೆಯುವ ನಮ್ಮ ಪಾಲಿಗೆ ಜೀವ ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಗತ್ಯ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ.

ಶಹಾಪುರ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 40 ಹುದ್ದೆಗಳು ಇವೆ. ಅದರಲ್ಲಿ 10 ಹುದ್ದೆ ಖಾಲಿ ಇವೆ. ಎರಡು ವಾಹನಗಳು ಇವೆ. ಆದರೆ, ಸಿಬ್ಬಂದಿಗೆ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೇವಲ 12 ಸಿಬ್ಬಂದಿಗೆ ವಸತಿಗೃಹದ ಸೌಲಭ್ಯವಿದೆ. ಉಳಿದ ಸಿಬ್ಬಂದಿ ಬೇರೆಡೆ ಖಾಸಗಿ ಮನೆಯಲ್ಲಿ ಬಾಡಿಗೆ ಪಡೆದು ವಾಸವಾಗಿದ್ದಾರೆ.

ವಸತಿಗೃಹ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಮಸ್ಯೆ ಎದುರಿಸುವಂತೆ ಆಗಿದೆ. ನಿಲಯದಲ್ಲಿ ಉಪ್ಪು ಮಿಶ್ರಿತ ನೀರು ಇದ್ದು ಕುಡಿಯಲು ಯೋಗ್ಯವಿಲ್ಲ. ಅನಿವಾರ್ಯವಾಗಿ ಬೇರೆ ಕಡೆಯಿಂದ ಕುಡಿಯಲು ನೀರು ತರುತ್ತವೆ. ವಸತಿಗೃಹದ ಸಮೀಪ ಯಾವುದೇ ಶುದ್ಧ ಕುಡಿಯುವ ನೀರಿನ ಘಟಕವೂ ಇಲ್ಲ. ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಯಾರ ಮುಂದೆ ನಾವು ಸಂಕಷ್ಟವನ್ನು ಹೇಳುವಂತೆ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ಒಬ್ಬರು ತಿಳಿಸಿದರು.
***
ಯಾದಗಿರಿ ಅಗ್ನಿಶಾಮಕ ಠಾಣೆ ದೂರವಾಣಿ: 08473–252101

ಶಹಾಪುರ ಅಗ್ನಿಶಾಮಕ ಠಾಣೆ ದೂರವಾಣಿ: 90087 22443

ಸುರಪುರ ಅಗ್ನಿಶಾಮಕ ಠಾಣೆ ದೂರವಾಣಿ: 86605 49722
***
ಸ್ಥಳಾವಕಾಶದ ಕೊರತೆ: ನೆನಗುದಿಗೆ ಬಿದ್ದ ಠಾಣೆ

ಹುಣಸಗಿ: ನೂತನ ತಾಲ್ಲೂಕು ಕೇಂದ್ರವಾಗಿರುವ ಹುಣಸಗಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಇಲ್ಲದಿರುವುದರಿಂದಾಗಿ ಯಾವುದೇ ಅನಾಹುತ ಸಂಭವಿಸಿದಲ್ಲಿ ಸುರಪುರ ಪಟ್ಟಣವನ್ನು ಆಶ್ರಯಿಸುವಂತಾಗಿದೆ.

ಕಳೆದ ಐದು ವರ್ಷಗಳಿಂದ ಪಟ್ಟಣಕ್ಕೆ ಅಗ್ನಿಶಾಮಕ ಠಾಣೆ ಮಂಜೂರಾಗಿತ್ತು. ಆ ಬಳಿಕ ಸ್ಥಳಾವಕಾಶದ ಕೊರತೆಯಿಂದಾಗಿ ನೆನಗುದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಹುಣಸಗಿ ತಾಲೂಕಿನಲ್ಲಿ ಸುಮಾರು 80 ಸಾವಿರ ಹೆಕ್ಟೇರ್ ಕೃಷಿ ಭೂಮಿ ಹಾಗೂ ಭೂ ಪ್ರದೇಶದಲ್ಲಿ ಬೇಸಿಗೆ ಹಂಗಾಮಿನಲ್ಲಿ ರೈತರು ಭತ್ತದ ಹುಲ್ಲು ಸುಡುತ್ತಾರೆ. ಅಲ್ಲದೇ ಆಕಸ್ಮಿಕ ಬೆಂಕಿಯಿಂದಾಗಿ ಸಾಕಷ್ಟು ಬಾರಿ ಅಲ್ಲಲ್ಲಿ ಗುಡಿಸಲುಗಳು ಸುಟ್ಟ ಉದಾರಣೆಗಳಿವೆ.

‘ಹುಣಸಗಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಿದಲ್ಲಿ ತಾಲ್ಲೂಕಿನ ಜನತೆಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಕರವೇ ಪ್ರಮುಖ ಚನ್ನೂರ, ರೈತ ಮುಖಂಡ ಹೊನ್ನಕೇಶವ ದೇಸಾಯಿ ಹೇಳುತ್ತಾರೆ.

***

ಹೊಸ ತಾಲ್ಲೂಕುಗಳಲ್ಲಿ ಜಾಗದ ಕೊರತೆ ಇದೆ. ಹೀಗಾಗಿ ಅಗ್ನಿಶಾಮಕ ಠಾಣೆ ಆರಂಭಿಸಲು ಆಗಿಲ್ಲ. ಈಗಾಗಲೇ ನೂತನ ತಾಲ್ಲೂಕುಗಳಲ್ಲಿ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ವಡಗೇರಾದಲ್ಲಿ ಜಾಗ ಲಭ್ಯವಿದೆ. ಉಳಿದ ಕಡೆ ಸಮಸ್ಯೆ ಇದೆ
- ಹನುಮನಗೌಡ ಪೊಲೀಸ್‌ ಪಾಟೀಲ, ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ

***

ಈ ಕುರಿತು ಶಾಸಕರ ಮೂಲಕ ಅಗ್ನಿಶಾಮಕ ಇಲಾಖೆ ಅಧಿಕಾರಿಗಳೊಡನೆ ಚರ್ಚಿಸಿ ಪ್ರಸ್ತಾವನ ಸಲ್ಲಿಸಿದ್ದೇವೆ. ಅಗ್ನಿಶಾಮಕ ಠಾಣೆ ಆರಂಭಿಸಲು ಬೇಕಾದ ಎಲ್ಲಾ ವ್ಯವಸ್ಥೆ ಕಲ್ಪಿಸಲು ಶಾಸಕರು ಭರವಸೆ ನೀಡಿದ್ದಾರೆ
- ಪಾಪಣ್ಣ ಮನ್ನೆ, ಪುರಸಭೆ ಅಧ್ಯಕ್ಷ

***

ನಮ್ಮ ತಾಲ್ಲೂಕು ವ್ಯಾಪ್ತಿಯ ಅಗ್ನಿ ದುರಂತಗಳಲ್ಲಿ ಹಾನಿ ಸಂಭವಿಸಿದಾಗ ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ. ದೂರದಿಂದ ಬರುವಲ್ಲಿಗೇ ಬೆಂಕಿಯು ಕೆಲಸ ಮುಗಿಸಿರುತ್ತದೆ. ಇಲ್ಲೊಂದು ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು
- ಮಹಾದೇವ ಎಂಟಿಪಲ್ಲಿ, ಸಾಮಾಜಿಕ ಕಾರ್ಯಕರ್ತ, ಗುರುಮಠಕಲ್‌

***

ನಮ್ಮ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಬೆಂಕಿ ಅವಘಡದಿಂದ ಹೆಚ್ಚಿನ ಅನಾಹುತ ಆಗಿಲ್ಲ. ದಿನದ 24 ಗಂಟೆಯೂ ಜಲವಾಹನ, ಸಿಬ್ಬಂದಿ ಸನ್ನದ್ಧವಾಗಿರುತ್ತಾರೆ
- ಬನ್ನಪ್ಪ, ಪ್ರಭಾರಿ ಘಟಕಾಧಿಕಾರಿ, ಸುರಪುರ

***

ಅವಿಭಜಿತ ತಾಲ್ಲೂಕು ದೊಡ್ಡದಾಗಿರುವುದರಿಂದ 70, 80 ಕಿ.ಮೀ ದೂರ ಹೋಗಿ ಬೆಂಕಿ ನಂದಿಸಲು ತೊಂದರೆಯಾಗುತ್ತಿದೆ. ಹೀಗಾಗಿ ಹೊಸ ತಾಲ್ಲೂಕು ಹುಣಸಗಿಗೆ ಅಗ್ನಿ ಶಾಮಕ ಠಾಣೆ ಮಂಜೂರು ಮಾಡಬೇಕು
- ವೆಂಕಟೇಶ ಬೇಟೆಗಾರ, ಕಾಂಗ್ರೆಸ್ ಮುಖಂಡ ಸುರಪುರ
****

ನಮ್ಮ ಠಾಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಿಬ್ಬಂದಿಯೂ ಇದ್ದಾರೆ. ವಸತಿಗೃಹದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಇವೆ ಅದನ್ನು ಸರಿಪಡಿಸಲು ಮೇಲಾಧಿಕಾರಿಗೆ ಮನವಿ ಮಾಡಿದೆ
- ಮಚ್ಚೆಂದ್ರನಾಥ, ಠಾಣಾ ಅಧಿಕಾರಿ ಅಗ್ನಿಶಾಮಕ ದಳ

****

ಪೂರಕ ವರದಿ:ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT