ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ‌ಅಸ್ಪೃಶ್ಯತೆ ಆಚರಿಸುವವರ ವಿರುದ್ಧ ಕಠಿಣ ಕ್ರಮ

ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಎಚ್ಚರಿಕೆ
Last Updated 10 ಆಗಸ್ಟ್ 2021, 4:16 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಿಸುವ ಹೋಟೆಲ್‍ಗಳು ಕಂಡು ಬಂದರೆ ಅಂಥ ಹೋಟೆಲ್‌ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿ ಸಭೆಯಲ್ಲಿ ಸದಸ್ಯರ ಕೋರಿಕೆಗೆ ಸ್ಪಂದಿಸಿ ಅವರು ಮಾತನಾಡಿದರು.

ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ ನಾಗಣ್ಣ ಬಡಿಗೇರ ಮಾತನಾಡಿ, ‘ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪರಿಶಿಷ್ಟರಿಗೆ ಹೋಟೆಲ್‌ ಪ್ರವೇಶವಿಲ್ಲ. ಪ್ರತ್ಯೇಕ ಲೋಟ ಮತ್ತು ಜಾಗ ಇಂದಿಗೂ ಇದೆ. ಪರಿಶಿಷ್ಟರಿಗೆ ಮೃತಪಟ್ಟರೆ ಅವರ ಸಂಸ್ಕಾರಕ್ಕೆ ಬರುವವರು ತಮ್ಮ ಹೋಟೆಲ್‍ಗೆ ಬರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಹೋಟೆಲ್‍ಗಳನ್ನು ಬಂದ್ ಮಾಡುವುದು ಕೆಲ ಗ್ರಾಮಗಳಲ್ಲಿ ರೂಢಿಯಿದೆ’ ಎಂದು ಸಮಸ್ಯೆ ತೆರೆದಿಟ್ಟರು.

‘ಊರಿಗೆ ನೆಂಟರು ಬಂದಾಗ ಹೋಟೆಲ್‍ಗೆ ಹೋಗಬೇಕಾಗುತ್ತದೆ. ಅಲ್ಲಿ ನಮಗೆ ಪ್ರತ್ಯೇಕ ವ್ಯವಸ್ಥೆ ಇರುವುದು ಮುಜುಗರ ಉಂಟುಮಾಡುತ್ತದೆ. ಅಲ್ಲದೇ ಜಿಲ್ಲೆಯ ಹಲವು ಹಳ್ಳಿಯಲ್ಲಿ ಪರಿಶಿಷ್ಟರು ಕುಡಿಯಲು ನೀರು ತರಲು ಕೊಳವೆಬಾವಿಗೆ ಹೋದರೆ ಮೇಲ್ವರ್ಗದವರೂ ನೀರು ಮುಟ್ಟಿಸದೇ ಬಿಂದಿಗೆಗೆ ಮೇಲಿಂದ ಎತ್ತಿಹಾಕುತ್ತಾರೆ’ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸುವ ಕುರಿತು ಪೊಲೀಸರಿಗೆ ಸೂಚಿಸಿದರು.

ನಂತರ ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಿಸಲು ಸರ್ಕಾರದಿಂದ ಜಾಗೃತಿ ಮೂಡಿಸಲು ಕ್ರಮ ಕೈಗೊಂಡು ದೌರ್ಜನ್ಯ ತಡೆಯುವಂತೆ ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗೆ ಕೋರಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಿಲ್ಲಾಡಳಿತ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರ ಇಲಾಖೆಗಳ ಮೂಲಕ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಗ್ರಾಮಗಳಲ್ಲಿ ಎನ್‌ಜಿಒ ಮೂಲಕ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲಾಗುವುದುಎಂದು ತಿಳಿಸಿದರು.

ಇನ್ನೋರ್ವ ದೌರ್ಜನ್ಯ ಸಮಿತಿಯ ಸದಸ್ಯ ಖಂಡಪ್ಪ ದಾಸನ್ ಮಾತನಾಡಿ, ‘ದೌರ್ಜನ್ಯ ಪ್ರಕರಣಗಳು ನಡೆದರೂ ತಪ್ಪಿತಸ್ಥರಿಗೆ ಬಂಧಿಸದೇ ಕೌಂಟರ್ ಕೇಸ್‌ಗಳನ್ನು ಹಾಕಿ ಪರಿಶಿಷ್ಟ ಜನಾಂಗದವರ ಮೇಲೆ ಮತ್ತಷ್ಟು ದೌರ್ಜನ್ಯ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಬೇಕು’ ಎಂದುಸಭೆಗೆ ಕೋರಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ‘ಯಾವುದೇ ದೌರ್ಜನ್ಯ ಪ್ರಕರಣಗಳು ನಡೆದರೆ ಅದನ್ನು ಅರಕ್ಷಕ ಉಪ ಅಧೀಕ್ಷರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ರಕ್ಷಣೆ ಮಾಡಲಾಗುವುದಿಲ್ಲ. ಕೌಂಟರ್ ಕೇಸ್‌ಗಳನ್ನು ತನಿಖೆಮಾಡಿ ಸುಳ್ಳೆಂದು ಕಂಡು ಬಂದರೆ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುವುದು’ ಎಂದು ಸಭೆಗೆ ವಿವರಿಸಿದರು.

ಸ್ಮಶಾನ ಭೂಮಿಯ ಸಮಸ್ಯೆಯನ್ನು ದೌರ್ಜನ್ಯ ಸಮಿತಿಯ ಸದಸ್ಯರು ಪ್ರಸ್ತಾಪಿಸಿದರು. ಜಿಲ್ಲಾಡಳಿತ ಮೂಲಕ ಈಗಾಗಲೇ 139 ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸವ, ಶಹಾಪುರ ಪಿಎಸ್‌ಐ ಹಣಮಂತಪ್ಪ, ದೌರ್ಜನ್ಯ ಸಮಿತಿಯ ಸದಸ್ಯೆ ರಮಾದೇವಿ ಕಾವಲಿ, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT