ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಜಾತಾ ಜೇವರ್ಗಿ ಅಧ್ಯಕ್ಷೆ, ಮಹೇಶ ಪಾಟೀಲ ಉಪಾಧ್ಯಕ್ಷ

ಬಿಜೆಪಿಗೆ ಸುರಪುರ ನಗರಸಭೆ ಗದ್ದುಗೆ; ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷೆ, ಉಪಾಧ್ಯಕ್ಷ
Last Updated 30 ಅಕ್ಟೋಬರ್ 2020, 10:54 IST
ಅಕ್ಷರ ಗಾತ್ರ

ಸುರಪುರ: ಇಲ್ಲಿಯ ನಗರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಚುನಾವಣೆ ಜರುಗಿ ನೂತನ ಅಧ್ಯಕ್ಷರಾಗಿ ಸುಜಾತಾ ವೇಣುಗೋಪಾಲನಾಯಕ ಜೇವರ್ಗಿ, ಉಪಾಧ್ಯಕ್ಷರಾಗಿ ಮಹೇಶ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 31 ಸ್ಥಾನ ಬಲದ ನಗರಸಭೆಯಲ್ಲಿ ಬಿಜೆಪಿ 16 ಸದಸ್ಯರನ್ನು ಹೊಂದಿದ್ದು ಸ್ಪಷ್ಟ ಬಹುಮತ ಹೊಂದಿದೆ.

ನಗರಸಭೆ ಸಭಾಂಗಣದಲ್ಲಿ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಜಾತಾ ವೇಣುಗೋಪಾಲನಾಯಕ ಜೇವರ್ಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಹೇಶ ಪಾಟೀಲ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಅವರು ಅವಿರೋಧ ಆಯ್ಕೆ ಘೋಷಿಸಿದರು.

ನಂತರ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜೂಗೌಡ ಮಾತನಾಡಿ, ‘ಅಧ್ಯಕ್ಷ- ಉಪಾಧ್ಯಕ್ಷರನ್ನು ನಗರಸಭೆ ಸದಸ್ಯರೆಲ್ಲರು ಸೇರಿ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತೋಷದ ಸಂಗತಿ’ ಎಂದರು.

‘ಎರಡೂವರೆ ವರ್ಷಗಳ ಹಿಂದೆ ಆಯ್ಕೆಯಾದರೂ ಅಧಿಕಾರ ಇಲ್ಲದೆ ಸದಸ್ಯರು ಬಹಳ ಕಷ್ಟ ಅನುಭವಿಸಬೇಕಾಗಿತ್ತು. ಯಾವೊಬ್ಬ ಅಧಿಕಾರಿಯು ಮಾತು ಕೇಳುತ್ತಿರಲಿಲ್ಲ. ಜನರಿಂದ ನಿಂದನೆಗೊಳಗಾಗಿದ್ದೀರಿ. ಈಗ ಅವರ ಕಷ್ಟದ ದಿನಗಳು ದೂರವಾಗಿವೆ. ನೂತನ ಅಧ್ಯಕ್ಷ-ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ತಿಳಿಸಿದರು.

ನೂತನ ಅಧ್ಯಕ್ಷೆ ಸುಜಾತಾ ಮಾತನಾಡಿ, ‘ಶಾಸಕ ರಾಜೂಗೌಡ ನಮ್ಮ ಮೇಲೆ ವಿಶ್ವಾಸವಿಟ್ಟು ಗುರುತರ ಜವಾಬ್ದಾರಿ ನೀಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರವನ್ನು ಅಭಿವೃದ್ಧಿ ಪಥದತ್ತ ಒಯ್ಯುವುದಾಗಿ’ ಹೇಳಿದರು.

ಸಂಸದ ರಾಜಾ ಅಮರೇಶನಾಯಕ, ತಹಶೀಲ್ದಾರ್ ನಿಂಗಣ್ಣ ಬಿರಾದಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ (ತಾತಾ), ನಗರಸಭೆ ಪ್ರಭಾರಿ ಪೌರಾಯುಕ್ತ ಶಾಂತಪ್ಪ ಹೊಸರು, ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣಿಗೇರಾ, ಓಂಕಾರ ಪೂಜಾರಿ ಸೇರಿದಂತೆ ನಗರಸಭೆಯ ಸದಸ್ಯರು ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT