ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಕರ್ಮಿಗಳ ತವರು ಸುರಪುರ

Published 14 ಜನವರಿ 2024, 6:31 IST
Last Updated 14 ಜನವರಿ 2024, 6:31 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನಲ್ಲಿ ಹವ್ಯಾಸಿ ಕಲಾವಿದರು ಪ್ರದರ್ಶಿಸಿಸುವ ಗ್ರಾಮೀಣ ನಾಟಕಗಳು ಜೀವಂತವಾಗಿವೆ. ವರ್ಷಕ್ಕೆ ಕನಿಷ್ಠ  30–40 ನಾಟಕಗಳು ಇಲ್ಲಿ ಪ್ರದರ್ಶನ ಕಾಣುತ್ತವೆ.

ಸುರಪುರ ಸೇರಿದಂತೆ ತಾಲ್ಲೂಕಿನ ಭೈರಿಮರಡಿ, ಹೊಸಸಿದ್ದಾಪುರ, ವಾಗಣಗೇರಿ, ಕಲ್ಲದೇವನಹಳ್ಳಿ, ಬೇವಿನಾಳ, ದೇವಪುರ, ಚಿಕ್ಕನಳ್ಳಿ, ಅರಳಹಳ್ಳಿ, ಬೊಮ್ಮನಳ್ಳಿ, ದೇವರಗೋನಾಲ, ಶೆಳ್ಳಗಿ, ತಳವಾರಗೇರಿ ಇತರ ಗ್ರಾಮಗಳಲ್ಲಿ ವರ್ಷಕ್ಕೆ ಒಮ್ಮೆ ಅಥವಾ ಮೂರು ವರ್ಷಕ್ಕೆ ಒಮ್ಮೆ ನಾಟಕಗಳ ಪ್ರದರ್ಶನ ಇರುತ್ತದೆ.

ಗ್ರಾಮದ ಜಾತ್ರೆ, ಕಾರ್ತಿಕ ಇತರ ಉತ್ಸವಗಳಲ್ಲಿ ಗ್ರಾಮಸ್ಥರೇ ಸೇರಿಕೊಂಡು ನಾಟಕ ಅಭಿನಯಿಸುತ್ತಾರೆ. ಮಹಿಳಾ ಕಲಾವಿದರನ್ನು ಕರೆಸಿ ವೃತ್ತಿ ರಂಗಭೂಮಿ ಕಲಾವಿದರನ್ನು ಮೀರಿಸುವ ಹಾಗೇ ನಟಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ.

ಎಲ್‍ಬಿಕೆ ಆಲ್ದಾಳ ಎಂಬ ಮೇರು ಪ್ರತಿಭೆ ನಾಟಕ ರಂಗದ ಮೂಲ. 100 ಕ್ಕೂ ಹೆಚ್ಚು ನಾಟಕಗಳನ್ನು ಬರೆದಿರುವ ಅವರು ನಿರ್ದೇಶಕರಾಗಿಯೂ ಕೆಲಸ ಮಾಡಿದವರು. ಅವರಂತೆ ಯಲ್ಲೇಶ ಯಾಳಗಿ ಅವರು ರಚಿಸಿದ 15 ನಾಟಕಗಳು ದಾಖಲೆ ಪ್ರದರ್ಶನ ಕಂಡಿವೆ. ಬಸವರಾಜ ಪಂಚಗಲ್ ಅವರ 30 ನಾಟಕಗಳು, ಶರಣಪ್ಪ ಹಾಲಭಾವಿ ಅವರ 5 ಕೃತಿಗಳು, ಮಲ್ಲೇಶ ಕೋನ್ಹಾಳ ಅವರ 11 ನಾಟಕಗಳು, ಯಲ್ಲಪ್ಪ ಕಾಡ್ಲೂರು ಅವರ 5 ನಾಟಕಗಳು, ಭೀಮಣ್ಣ ಮಸರಕಲ್ ಅವರ 3, ಸಕ್ರೆಪ್ಪ ಯಕ್ಷಿಂತಿ ಬರೆದ 2 ನಾಟಕಗಳು ಒಂದಕ್ಕೊಂದು ಪೈಪೋಟಿ ನೀಡುವಂತೆ ಇವೆ.

ಮೇಲಿನ ಎಲ್ಲ ನಾಟಕ ಸಾಹಿತಿಗಳು, ಶ್ರೇಷ್ಠ ನಿರ್ದೇಶಕರು ಮತ್ತು ನಟರು ಆಗಿರುವುದು ವಿಶೇಷ. ಖಳನಾಯಕರಾಗಿ ಸುಭಾಷ ದೇಸಾಯಿ, ನಾಗಪ್ಪ ಕನ್ನೆಳ್ಳಿ, ಪರಶುರಾಮ ಹುಲಕಲ್, ರವಿನಾಯಕ ಭೈರಿಮರಡಿ, ಹಣಮಂತ ತಳವಾರ, ಪರಶುರಾಮ ಹುಲಕಲ್, ಈರಣ್ಣ ದೇವಪುರ, ರಾಜಾಸಾಬ ಕಲ್ಲದೇವನಹಳ್ಳಿ, ಮಹಾಂತೇಶ ವಾಗಣಗೇರಿ, ದೇವು ಹೆಬ್ಬಾಳ ಇತರರು ಖ್ಯಾತಿ ಪಡೆದಿದ್ದಾರೆ.

ನಾಯಕ ನಟರಾಗಿ ಮೂರ್ತಿ ಬೊಮ್ಮನಳ್ಳಿ, ವೆಂಕಟೇಶ ಬೇಟೆಗಾರ, ಸಣ್ಣದೇಸಾಯಿ ದೇವರಗೋನಾಲ, ಶಿವರಾಜನಾಯಕ ವಾಗಣಗೇರಿ, ಕೃಷ್ಣ ದೇವಿಕೇರಿ, ನಿಂಗಪ್ಪನಾಯಕ ಬಿಜಾಸಪುರ, ಮೋಹನ ಪ್ರತಿಹಸ್ತ, ಬಸವರಾಜ ಪಾಟೀಲ ವಾಗಣಗೇರಿ ಇತರ ಕಲಾವಿದರು ಪರಕಾಯ ಪ್ರವೇಶ ಮಾಡಿದವರಂತೆ ಅಭಿನಯಿಸುವುದು ವಿಶೇಷ.

ದೊಡ್ಡದೇಸಾಯಿ ದೇವರಗೋನಾಲ, ಮೌನೇಶ ದಳಪತಿ, ಶ್ರೀನಿವಾಸನಾಯಕ ಭೈರಿಮರಡಿ, ಬಲಭೀಮ ಬೊಮ್ಮನಳ್ಳಿ, ದೇವಿಂದ್ರಪ್ಪ ಬಾದ್ಯಾಪುರ, ಶಿವಮಾನಯ್ಯ ವಾಗಣಗೇರಿ, ನಬಿಲಾಲ ದೇವರಗೋನಾಲ, ವೀರೇಶ ಬಾಗಲಿ, ಲಾಲು ಇತರರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಸಾಮರ್ಥ್ಯ ಹೊಂದಿದ್ದಾರೆ.

ನಿರ್ದೇಶಕರಾಗಿ ಸೂಗಪ್ಪ ಮಾಸ್ಟರ್ ಮುಷ್ಟಳ್ಳಿ, ಹೊನ್ನಪ್ಪ ನಗನೂರ, ಜಗನ್ನಾಥಗೌಡ ದೇವಪುರ, ಬಂದೇನವಾಜ ಇತರರು ಅನನ್ಯ ಸೇವೆ ನೀಡುತ್ತಿದ್ದಾರೆ. ಬಸವರಾಜ ಸುಗೂರ ಅವರ ಹಿನ್ನೆಲೆ ಗಾಯನ ಗುನುಗುನಿಸುವಂತೆ ಮಾಡುತ್ತದೆ. ಎರಡು ನಾಟಕ ಪ್ರಯೋಗಗಳಿಗೆ ಕನಿಷ್ಠ ₹2 ಲಕ್ಷ ಖರ್ಚು ತಗಲುತ್ತದೆ. ಪಾತ್ರಧಾರಿಗಳು ತಾವೇ ಹಣ ಹಾಕುತ್ತಾರೆ. ಟಿಕೆಟ್‍ನಿಂದ ಹಣ ಬರುತ್ತದೆ. ಮುಖಂಡರು ನಗದು ಹಣವನ್ನು ಆಯೇರಿ ರೂಪದಲ್ಲಿ ನೀಡುತ್ತಾರೆ. ಇವೆಲ್ಲವೂ ನಾಟಕ ಖರ್ಚನ್ನು ಸರಿದೂಗಿಸುತ್ತದೆ. ತಾಲ್ಲೂಕಿನ ಪ್ರೇಕ್ಷಕರು ಆಸಕ್ತಿಯಿಂದ ಗ್ರಾಮೀಣ ನಾಟಕಗಳನ್ನು ನೋಡುತ್ತಾರೆ. ಹೀಗಾಗಿ ಇಲ್ಲಿ ನಾಟಕಗಳಿಗೆ ಉತ್ತೇಜನ ಸಿಗುತ್ತಿದೆ.

ಸುರಪುರದಲ್ಲಿ ಹವ್ಯಾಸಿ ನಾಟಕಗಳ ಸಂಖ್ಯೆ ಅಧಿಕ. ಸರ್ಕಾರ ಪ್ರೋತ್ಸಾಹ ನೀಡಬೇಕು. ಪ್ರದರ್ಶನಕ್ಕೆ ರಂಗ ಮಂದಿರ ನಿರ್ಮಿಸಬೇಕು
ಯಲ್ಲಪ್ಪ ಕಾಡ್ಲೂರು ನಾಟಕ ಸಾಹಿತಿ
ತಾಲ್ಲೂಕಿನಲ್ಲಿ ಸಿನಿಮಾ ಧಾರವಾಹಿಗಳಲ್ಲಿ ನಟಿಸುವ ಸಾಮರ್ಥ್ಯ ಹೊಂದಿರುವ ಹಲವಾರು ನಟರಿದ್ದಾರೆ. ಅವರು ಬಯಿಸಿದರೆ ನಿನಾಸಂ ನಂತಹ ತರಬೇತಿ ಸಂಸ್ಥೆಗಳಿಗೆ ಕಳಿಹಿಸಲು ಸಿದ್ಧ
ಬಲಭೀಮನಾಯಕ ಭೈರಿಮರಡಿ ರಂಗ ಸಂಘಟಕ
ಭೈರಿಮರಡಿ ಸಹೋದರರು
ಈ ಭಾಗದಲ್ಲಿ ರಂಗಭೂಮಿಗೆ ಬಲಭೀಮನಾಯಕ ಶರಣುನಾಯಕ ವೆಂಕಟೇಶನಾಯಕ ರವಿನಾಯಕ ಮಂಜುನಾಥನಾಯಕ ಎಂಬ ಭೈರಿಮರಡಿ ಗ್ರಾಮದ ಸಹೋದರರು ಅಪೂರ್ವ ಕೊಡುಗೆ ನೀಡುತ್ತಿದ್ದಾರೆ. ಎಲ್ಲೆಡೆ ತಾವೇ ಮುಂದೆ ನಿಂತು ನಾಟಕಗಳ ವ್ಯವಸ್ಥೆ ಮಾಡುತ್ತಾರೆ. ಸಹಾಯ ಸಹಕಾರ ನೀಡುತ್ತಾರೆ. ರಂಗಭೂಮಿಯ ಎಲ್ಲ ವೃತ್ತಿ ಮಹಿಳಾ ಕಲಾವಿದರು ನಾಟಕದ ವೇದಿಕೆ ಸಂಗೀತಗಾರರು ಮೆಕಪ್ ಕಲಾವಿದರು ಧಾರಾವಾಹಿ ನಟರು ಸಿನಿಮಾ ನಟರು ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಅವರನ್ನು ಕರೆಸಿ ನಾಟಕಗಳಿಗೆ ಹೊಸ ರೂಪ ನೀಡುತ್ತಾರೆ. ಹೀಗಾಗಿ ಈ ಸಹೋದರರನ್ನು ರಂಗಭೂಮಿಯ ಸಂಘಟಕರು ಎಂದೇ ಗುರುತಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT