ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನ ನಮ್ಮ ಧ್ವನಿ। ಯಾದಗಿರಿ ಗ್ರಾಮೀಣ ರಸ್ತೆಗಳ ಸ್ಥಿತಿ ಅಯೋಮಯ...

ಜೀವ ಕೈಯಲ್ಲಿ ಹಿಡಿದು ವಾಹನ ಸವಾರರು ಓಡಾಡುವಂತಹ ಪರಿಸ್ಥಿತಿ, ಜಿಲ್ಲಾ ರಸ್ತೆಗಳು ಹಾಳು
Last Updated 2 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಗೆ ಗ್ರಾಮೀಣ ಪ್ರದೇಶದ ರಸ್ತೆಗಳು ಬಾಯಿ ತೆರೆದುಕೊಂಡಿವೆ.

ಮುಖ್ಯ ರಸ್ತೆಯಿಂದ ಗ್ರಾಮೀಣ ಭಾಗಕ್ಕೆ ತೆರಳುವ ರಸ್ತೆಗಳಲ್ಲಿ ಗುಂಡಿಗಳೇ ತುಂಬಿದ್ದು, ಜನರ ಸಂಚರಿಸಲು ಪರದಾಡುತ್ತಿದ್ದಾರೆ. ಕಿರು ಸೇತುವೆಗಳಿಗೂ ಹಾನಿಯಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ 138 ಕಿ.ಮೀ., 128 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳು ಹಾಳಾಗಿವೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ₹ 17.26 ಕೋಟಿ, ಪಿಆರ್‌ಡಿ ಗ್ರಾಮೀಣ ಭಾಗದ 421 ಕಿ.ಮೀ. ರಸ್ತೆ ಹಾಳಾಗಿದ್ದು, ₹ 24 ಕೋಟಿ ಹಾನಿ ಅಂದಾಜಿಸಲಾಗಿದೆ.

ಸುರಪುರ ತಾಲ್ಲೂಕಿನಲ್ಲಿ ₹ 18 ಕೋಟಿ ಪ್ರಸ್ತಾವ: ಸುರಪುರ ತಾಲ್ಲೂಕಿನ ಮಾವಿನಮಟ್ಟಿ–ಚಿಗರಿಹಾಳ ರಸ್ತೆ, ದೇವಿಕೇರಾ–ದಾವಲಮಲಿಕ್‌ ರಸ್ತೆ, ಹಾಲಬಾವಿ–ಶಾಂತಪುರ ರಸ್ತೆ, ದೋರನಹಳ್ಳಿಕ್ರಾಸ್‌–ಚಿಂಚೋಳಿ ರಸ್ತೆ, ಗೊಗಡಿಹಾಳ–ನಗನೂರ ರಸ್ತೆ, ಬಾದ್ಯಾಪುರ–ಕೆಂಭಾವಿ ಮುಖ್ಯ ರಸ್ತೆ ಜೋಡಣೆ, ಹಂದ್ರಾಳ–ಸುರಪುರ ರಸ್ತೆ, ಮಲ್ಲಿಭಾವಿ–ಸುರಪುರ ರಸ್ತೆ ಹೆಚ್ಚು ಹಾನಿಯಾಗಿವೆ.

ಪಂಚಾಯತ್‌ ರಾಜ್‌ ಎಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳು ಈ ಬಗ್ಗೆ ಸಮೀಕ್ಷೆ ನಡೆಸಿ, ಈ ರಸ್ತೆಗಳ ಸುಧಾರಣೆಗೆ ₹ 18 ಕೋಟಿ ಪ್ರಸ್ತಾವ ಸಲ್ಲಿಸಿದ್ದಾರೆ.

ಗ್ರಾಮೀಣ ಪ್ರದೇಶದ ಸಂಚಾರ ಅಸ್ತವ್ಯಸ್ತಗೊಂಡಿದೆ. ಟಂ ಟಂ, ದ್ವಿಚಕ್ರ ವಾಹನ ಸೇರಿದಂತೆ ಇತರೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತೆ ಆಗಿದೆ. ಹೆದ್ದಾರಿಗೆ ಹೊಂದಿಕೊಂಡ ರಸ್ತೆಗಳಿಗೆ ಮಣ್ಣು ಹಾಕಿದ್ದಲ್ಲದೆ ಡಾಂಬರೀಕರಣ ಮಾಡಿ ತೇಪೆ ಕೆಲಸವಾಗಿದೆ. ದೂರದ ಗ್ರಾಮದ ಹಳ್ಳಿಗಳ ರಸ್ತೆಯು ಅಯೋಮಯವಾಗಿವೆ. ಹೊಲದಿಂದ ಮನೆಗೆ ರಾತ್ರಿ ಸಮಯದಲ್ಲಿ ರೈತರ ಚಕ್ಕಡಿಗಳು ಗುಂಡಿಯಲ್ಲಿ ಸಿಕ್ಕು ತೊಂದರೆ ಅನುಭವಿಸಿವೆ ಎಂಬುದು ಗ್ರಾಮೀಣ ಪ್ರದೇಶದ ಜನರ ಆರೋಪ.

ಗ್ರಾಮೀಣ ಭಾಗದಿಂದ ಜಿಲ್ಲಾ ಕೇಂದ್ರ ಸಂಪರ್ಕಿಸುವ ರಸ್ತೆಗಳು ಹದಗೆಟ್ಟು ವಾಹನ ಸವಾರರು ಪರದಾಡುತ್ತಿದ್ದಾರೆ. ವಿಶೇಷವಾಗಿ ಬೈಕ್‌ ಸವಾರರು ಗುಂಡಿಗಳನ್ನು ತಪ್ಪಿಸಲು ಹರಸಾಹಸ ಮಾಡುವಂತೆ ಆಗಿದೆ. ಈಚೆಗೆ ಮಳೆ ಸುರಿದಿದ್ದು, ಮತ್ತೆ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಯಾವುದು ಎಂಬುವುದೇ ಗೊತ್ತಾಗುವುದಿಲ್ಲ.

ಜಿಲ್ಲಾ ಕೇಂದ್ರದ ಸುತ್ತಲಿನ ಗುರುಸಣಗಿ, ನಾಯ್ಕಲ್, ಗಡ್ಡೆಸೂಗುರು, ವರ್ಕನಳ್ಳಿ, ಹತ್ತಿಕುಣಿ ರಸ್ತೆ, ಅಬ್ಬೆತುಮಕೂರು, ಮುದ್ನಾಳಗೆ ತೆರಳುವ ರಸ್ತೆ ಕೊರಕಲು ಬಿದ್ದಿವೆ. ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗದವರೆಗೆ ಗುಂಡಿಗಳು ಬಿದ್ದಿವೆ.

ಟಿಪ್ಪರ್ ವಾಹನಗಳ ಹಾವಳಿ: ಭೀಮಾ, ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಟಿಪ‍್ಪರ್‌ಗಳ ಓಡಾಟದಿಂದಲೂ ಗ್ರಾಮೀಣ ಭಾಗದ ರಸ್ತೆಗಳು ಗುಂಡಿ ಬೀಳಲು ಕಾರಣವಾಗಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

’ಎರಡು ನದಿಗಳ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಲಾರಿಗಳಲ್ಲಿ ನಿಗದಿಗಿಂತ ಅಧಿಕ ಭಾರ ಮರಳು ಸಾಗಣೆ ಮಾಡಲಾಗುತ್ತಿದೆ. ಇದರಿಂದ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಪೊಲೀಸ್‌, ಪ್ರಾದೇಶಿಕ ರಸ್ತೆ ಸಾರಿಗೆ ಅಧಿಕಾರಿಗಳು ಸುಮ್ಮನೆ ಕುಳಿತ್ತಿದ್ದಾರೆ. ಇದರಿಂದ ರಸ್ತೆಗಳು ಹಾಳಾಗಲು ಮತ್ತಷ್ಟು ಕಾರಣವಾಗಿದೆ’ ಎನ್ನುತ್ತಾರೆ ಹೋರಾಟಗಾರ ಚನ್ನಾರೆಡ್ಡಿಗೌಡ ಗುರುಣಸಗಿ.

ದೊಡ್ಡ ಗುಂಡಿಗಳೇ ಕಂಟಕ: ವಡಗೇರಾ ಕ್ರಾಸ್‌ದಿಂದ ಭೀಮಾ ನದಿಯ ಹಳೆ ಸೇತುವೆಯವರೆಗಿನ ರಾಜ್ಯ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹಾಳಾಗಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ವಾಹನ ಸವಾರರು ಹಾಗೂ ಚಾಲಕರು ದೂರಿದ್ದಾರೆ.

ರಸ್ತೆ ಮೇಲೆ ದೊಡ್ಡ ಗುಂಡಿಗಳು ಬಿದ್ದಿರುವುದರಿಂದ ವಾಹನ ಚಾಲನೆಯಲ್ಲಿ ಅಜಾಗರೂಕತೆ ತೋರಿದರೆ ಅಪಘಾತವಾಗುವುದು ಗ್ಯಾರಂಟಿ ಎನ್ನುವಂತಾಗಿದೆ ಎಂದು ಚಾಲಕರು ಹೇಳುತ್ತಾರೆ.

ಹೊಸದಾಗಿ ಈ ರಸ್ತೆಯ ಮೇಲೆ ಬಿದ್ದರುವ ಗುಂಡಿಗಳು ರಾತ್ರಿ ಸಮಯದಲ್ಲಿ ಗೋಚರಿಸದೆ ಇರುವುದರಿಂದ ಎಷ್ಟೋ ವಾಹನ ಚಾಲಕರು ಗುಂಡಿ ತಪ್ಪಿಸಲು ಹೋಗಿ ಅಪಘಾತ ಮಾಡಿಕೊಂಡಿದ್ದಾರೆ.

ಅಲ್ಲದೆ ನೀರಾವರಿ ಪ್ರದೇಶದ ವ್ಯಾಪ್ತಿಗಳ ಹಳ್ಳಿಗಳಲ್ಲಿ ಮಳೆ ಹಾಗೂ ಸಿಪೇಜ್ ನೀರು ಸಂಗ್ರಹದಿಂದ ತಗ್ಗು ಪ್ರದೇಶದ ರಸ್ತೆಗಳು ನೀರಿನಲ್ಲಿ ನಿಂತಿವೆ. ರಸ್ತೆ ಬದಿಯಲ್ಲಿ ಬೆಳೆದು ನಿಂತ ಜಾಲಿ ಗಿಡಗಳು ಮತ್ತೊಂದು ತೊಡಕು ಹಾಗೂ ಅಪಾಯ ತಂದಿಟ್ಟಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮಹರಿಸಿ, ರಾಜ್ಯ ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದ ರಸ್ತೆ ದುರಸ್ತಿಯ ಜತೆಗೆ ಜಾಲಿಗಿಡಗಳನ್ನು ಕಡಿದು ಸ್ವಚ್ಛಗೊಳಿಸಲು ಹಳ್ಳಿ ಜನರ ಮನವಿಯಾಗಿದೆ.

***

ಜಿಲ್ಲೆಯಲ್ಲಿ ಮಳೆಯಿಂದ ಗ್ರಾಮೀಣ, ಜಿಲ್ಲಾ, ರಾಜ್ಯ ಹೆದ್ದಾರಿ ರಸ್ತೆಗಳು ಹಾಳಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಂದ ನಂತರ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು
ಬವಸರಾಜ, ಎಇಇ, ಲೋಕೋ‍ಪಯೋಗಿ ಇಲಾಖೆ

***

‌ಪ್ರಸ್ತಾವ ಸರ್ಕಾರಕ್ಕೆ ಕಳಿಸಲಾಗಿದೆ. ಅನುದಾನ ಬಂದ ನಂತರ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು
ಸೂಗೂರೆಡ್ಡಿ, ಎಇಇ ಜಿ.ಪಂ. ಸುರಪುರ

***

ನಗರ ಹಾಗೂ ಹೆದ್ದಾರಿಗೆ ಹೊಂದಿಕೊಂಡ ರಸ್ತೆಗಳಿಗೆ ಒಂದಿಷ್ಟು ಮಣ್ಣು ಹಾಕಿ ರಸ್ತೆ ದುರಸ್ತಿಗೊಳಿಸಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದ ರಸ್ತೆಗಳು ಅಧ್ವಾನವಾಗಿವೆ. ಮನವಿ ಅರಣ್ಯರೋದನವಾಗಿದೆ
ನಿಂಗಪ್ಪ, ಅನಕಸೂಗೂರ ಗ್ರಾಮಸ್ಥ

***

ಕಳಪೆ ಕಾಮಗಾರಿಯಿಂದ ರಸ್ತೆಗಳು ಮಳೆಗೆ ಹಾಳಾಗಿವೆ. ಅಧಿಕಾರಿಗಳು ಈ ಬಾರಿಯಾದರೂ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು
ದಾವುದ್ ಇಬ್ರಾಹಿಂ ಪಠಾಣ, ಕಾಂಗ್ರೆಸ್ ಮುಖಂಡ

***

ಜಿಲ್ಲಾ ಕೇಂದ್ರ ಸಂಪರ್ಕಿಸುವ ಮುಖ್ಯ ರಸ್ತೆಗಳು ಹಾಳಾಗಿದ್ದು, ವಾಹನ ಚಾಲನೆ ಹೈರಾಣಾಗಿದೆ. ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದರಿಂದ ಸಮಯಕ್ಕೆ ಸರಿಯಾಗಿ ತಲುಪಲು ಆಗುತ್ತಿಲ್ಲ. ಕೂಡಲೇ ಸಂಬಂಧಿಸಿದವರು ಗಮನ ಹರಿಸಬೇಕು
ಮಹಮ್ಮದ್‌ ಶಬ್ಬೀರ್‌, ಲಾರಿ ಚಾಲಕ

***

ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT