ವಡಗೇರಾ: ಕಳೆದ ಒಂದು ವಾರದಿಂದ ಸುರಿದ ಜಿಟಿ ಜಿಟಿ ಮಳೆಯಿಂದ ಈ ಭಾಗದ ಹತ್ತಿ ಬೆಳೆಗೆ ಜೀವಕಳೆ ಪಡೆದಿದ್ದು, ರೈತರ ಮುಖದಲ್ಲಿ ಮಂದಹಾಸ ಉಂಟು ಮಾಡಿದೆ.
ರೈತರ ನಂಬಿಕೆಯಂತೆ ಆರಿದ್ರಾ ಕಾರ್ತಿ ಹಾಗೂ ಪುಷ್ಯ ಕಾರ್ತಿ ಮಳೆಗಳು ಉತ್ತಮವಾಗಿ ಸುರಿದಿವೆ. ಇದರಿಂದ ಭೂಮಾತೆಯು ಹಸಿರು ಸೀರೆಯನ್ನಟ್ಟು ಕಂಗೊಳಿಸುವಂತೆ ಹತ್ತಿ ಬೆಳೆ ನಳನಳಿಸುತ್ತಿದೆ.
ತಾಲ್ಲೂಕಿನಾದ್ಯಂತ ಮುಂಗಾರು ಪೂರ್ವ ರೋಹಿಣಿ ಮಳೆ ಸಕಾಲದಲ್ಲಿ ಅಲ್ಪಸ್ವಲ್ಪ ಸುರಿದಿತ್ತು. ಇದರಿಂದ ರೈತರು ಖುಷಿಯಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಕೆಲ ರೈತರು ಮೃಗಶಿರ ಮಳೆ ಬರುತ್ತದೆ ಎಂಬ ಆಶಾಭಾವನೆಯಿಂದ ಹತ್ತಿಯನ್ನು ಭೂಮಿಯಲ್ಲಿ ಊರಿದ್ದರು. ಆದರೆ, ಮೃಗಶಿರ ಮಳೆ ಕೈ ಕೊಟ್ಟ ಕಾರಣ ರೈತರ ಚಿಂತೆಗೆ ಕಾರಣವಾಗಿತ್ತು. ಮಳೆ ಬಾರದೆ ಇರುವುದರಿಂದ ಹತ್ತಿ ಬೆಳೆ ಒಣಗುವ ಸ್ಥಿತಿ ತಲುಪಿತ್ತು.
ಕಳೆದ ವಾರದಲ್ಲಿ ಸುರಿದ ಮಳೆಯು ಬಾಡುತ್ತಿದ್ದ ಬೆಳೆಗಳಿಗೆ ಜೀವಕಳೆ ತುಂಬಿದ್ದು, ಅನ್ನದಾತರ ಹರ್ಷಕ್ಕೆ ಕಾರಣವಾಗಿದೆ.
ಸತತ ಮಳೆಯಿಂದ ಹತ್ತಿ ಬೆಳೆ ಹಸಿರಾಗಿ ನಳನಳಿಸುತ್ತಿವೆ. ಮುಂಬರುವ ದಿನಗಳಲ್ಲಿ ರಸಗೊಬ್ಬರ ಸಿಂಪಡಿಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತೇವೆ. ಈ ಸಲ ಉತ್ತಮ ಇಳುವರಿಯ ನಿರೀಕ್ಷೆಗಳಿವೆ ಎಂದು ರೈತರು ಹೇಳುತ್ತಾರೆ.
ಪಟ್ಟಣದಲ್ಲಿರುವ ಮಳೆ ಮಾಪನಾ ಕೇಂದ್ರದಲ್ಲಿ ಪುಷ್ಯ ಕಾರ್ತಿಯು ಜುಲೈ 25ರಂದು 30 ಮಿಲಿ ಮೀಟರ್ (ಎಂಎಂ), ಜುಲೈ 26ರಂದು 24 ಎಂಎಂ, ಜುಲೈ 27ರಂದು 36 ಎಂಎಂ, ಜುಲೈ 28ರಂದು 08 ಎಂಎಂ, ಜುಲೈ 29ರಂದು 1 ಎಂಎಂ ಮಳೆಯಾಗಿದ್ದು ದಾಖಲಾಗಿದೆ.
Quote - ಆರಿದ್ರ ಕಾರ್ತಿ ಹಾಗೂ ಪುಷ್ಯ ಕಾರ್ತಿ ಮಳೆ ಸಕಾಲದಲ್ಲಿ ಬಂದ ಕಾರಣ ಹೋದ ಜೀವ ಬಂದಂತಾಗಿದೆ. ಮುಂಬರುವ ದಿನಗಳಲ್ಲಿ ಹತ್ತಿ ಇಳುವರಿ ಹೆಚ್ಚಾಗಲಿದೆ
ಭೀಮರಾಯ ಜಡಿ ರೈತ