ಗುರುವಾರ , ಆಗಸ್ಟ್ 5, 2021
23 °C
ದೋರನಹಳ್ಳಿ: ₹ 4 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ: ಮುದ್ನಾಳ

ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಅಡಿಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿಯಲ್ಲಿ ನಿರಾಶ್ರಿತ ಪರಿಹಾರ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಚಾಲನೆ ನೀಡಿದರು.

ಅಡಿಗಲ್ಲು ಸಮಾರಂಭದ ಭೂಮಿ ಪೂಜೆ ನಡೆಸಿದ ನಂತರ ಮಾತನಾಡಿದ ಶಾಸಕ, ದೋರನಹಳ್ಳಿ ಗ್ರಾಮಕ್ಕೆ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ₹ 4 ಕೋಟಿ ವೆಚ್ಚದಲ್ಲಿ ನಿರಾಶ್ರಿತ ಪರಿಹಾರ ಕೇಂದ್ರ ಮಂಜೂರು ಮಾಡಿದೆ ಎಂದು ಹೇಳಿದರು.

ಈ ಕಟ್ಟಡದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಕೈಗೆತ್ತಿಕೊಂಡಿದೆ. ಮೊದಲ ಹಂತದಲ್ಲಿ ₹ 1.97 ಲಕ್ಷ ಬಿಡುಗಡೆಯಾಗಿದ್ದು, ಇದು ಜಿಲ್ಲೆಯ ಬಹು ದೊಡ್ಡ ಯೋಜನೆಯಾಗಿದೆ. ವೃದ್ಧರು, ಅನಾಥರು, ಆಶಕ್ತರು ಹಾಗೂ ಭಿಕ್ಷುಕರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯೊಂದಿಗೆ ಆಶ್ರಯ ನೀಡುವ ಉದ್ದೇಶದಿಂದ ಕಟ್ಟಡ ನಿರ್ಮಿಸಲಾಗುತ್ತದೆ. ಈಗಾಗಲೇ ದೋರನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ₹ 5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ನೀಡಲಾಗಿದ್ದು, ಪಶುಪಾಲನೆ ಆಸ್ಪತ್ರೆ ಉದ್ಫಾಟಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚು ಅನುದಾನ ತಂದು ತಮ್ಮ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ವಿವಿಧ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.

ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜಪ್ಪ ಚಂಡರಕಿ, ಶರಣಗೌಡ ಬಾಡಿಯಾಳ, ಶಹಾಪುರ ತಹಶೀಲ್ದಾರ್‌ ಜಗನ್ನಾಥರೆಡ್ಡಿ, ಶಹಾಪುರ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಮೂರ್ತಿ, ದೋರನಹಳ್ಳಿ ಕ್ಷೇತ್ರದ ತಾ.ಪಂ. ಸದಸ್ಯೆ ತಾಯಮ್ಮ ಚಂದ್ರಪ್ಪ ಹಾಗೂ ಯಾದಗಿರಿ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಕಿರಣ ಹೂಗಾರ ಇದ್ದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್.ಎಸ್‌. ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾವುತಪ್ಪ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.