ಬುಧವಾರ, ಏಪ್ರಿಲ್ 21, 2021
32 °C
ಬಾಡಿಗೆ ಕಟ್ಟಡ, ಸಮುದಾಯ ಭವನ, ಶಾಲೆ, ಟಿನ್‌ ಶೆಡ್‌ನಲ್ಲಿ ಕಾರ್ಯಕಲಾಪ

ಜಿಲ್ಲೆಯ 15 ಗ್ರಾ.ಪಂ.ಗಳಿಗಿಲ್ಲ ಸ್ವಂತ ಕಟ್ಟಡ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ 122 ಗ್ರಾಮ ಪಂಚಾಯಿತಿಗಳಿವೆ. ಅವುಗಳ ಪೈಕಿ 15 ಪಂಚಾಯಿತಿಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಇದರಿಂದ ಅವು ಬಾಡಿಗೆ, ಸಮುದಾಯ ಭವನ, ಪಶು ಆಸ್ಪತ್ರೆ, ಶಾಲಾ ಕಟ್ಟಡಗಳಲ್ಲಿ ನಡೆಯುತ್ತಿವೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ಕಚೇರಿಗೆ ಹಾಜರಾಗದ ಕಾರಣ ಗ್ರಾಮಸ್ಥರು ಪರದಾಡುತ್ತಿದ್ದಾರೆ. ನಗರ ಪ್ರದೇಶದಲ್ಲಿ ಮನೆ ಮಾಡಿಕೊಂಡು ಗ್ರಾಮಸ್ಥರ ಕೈಗೆ ಸಿಗದೆ, ಫೋನ್‌ ಸ್ವೀಕರಿಸದೇ ಕೆಲಸಕ್ಕಾಗಿ ಸತಾಯಿಸುತ್ತಿದ್ದಾರೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. 

ಹೊರಗೆ ಸುಣ್ಣ ಬಣ್ಣ: ಫೆಬ್ರುವರಿ 5ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಆಡಳಿತ ಮಂಡಳಿ ರಚನೆ ಆಗಿದೆ. ಇದರಿಂದ ಕೆಲ ಕಡೆ ಹಳೆ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯಲಾಗಿದೆ. ಆದರೆ, ಒಳಗಡೆ ಮಾತ್ರ ಅಲ್ಲಲ್ಲಿ ಗೋಡೆ ಸೀಳಿರುವುದು, ಬಿರುಕು ಬಿಟ್ಟಿರುವುದು ಕಾಣ ಸಿಗುತ್ತದೆ.

ರಸ್ತೆಗಿಂತ ಕೆಳಮಟ್ಟದಲ್ಲಿ ಕಟ್ಟಡಗಳು: ತಾಲ್ಲೂಕಿನ ಮುಂಡರಗಿ ಗ್ರಾಮ ಪಂಚಾಯಿತಿ ಕಟ್ಟಡ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಕಟ್ಟಡ ರಸ್ತೆಗಿಂತ ಕೆಳಮಟ್ಟದಲ್ಲಿದೆ. ಇದರಿಂದ ಮಳೆಗಾಲದಲ್ಲಿ ಗ್ರಾಮ ಪಂಚಾಯಿತಿ ಕಚೇರಿಯೊಳಗೆ ನೀರು ನುಗ್ಗುತ್ತದೆ. ಹಿರಿಯ ನಾಗರಿಕರು ಕಚೇರಿಗೆ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಇದೆ.

40 ಹುದ್ದೆಗಳು ಖಾಲಿ: ಜಿಲ್ಲೆಯ 122 ಗ್ರಾಮ ಪಂಚಾಯಿತಿಗಳಲ್ಲಿ 40 ವಿವಿಧ ಹುದ್ದೆಗಳು ಖಾಲಿ ಇವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಸರಾಗವಾಗಿ ಕೆಲಸಗಳಾಗಲು ಅಡ್ಡಿಯಾಗಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರೇಡ್‌–1, ಗ್ರೇಡ್‌–2, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸೇರಿದಂತೆ ‌288 ಮಂಜೂರು ಹುದ್ದೆಗಳಿವೆ. ಇವುಗಳಲ್ಲಿ 248 ಹುದ್ದೆಗಳು ಭರ್ತಿಯಾಗಿವೆ.

122 ಗ್ರಾಮ ಪಂಚಾಯಿತಿಗಳಲ್ಲಿ 113 ಪಿಡಿಒಗಳಿದ್ದು, 9 ಕಡೆ ಹುದ್ದೆಗಳು ಖಾಲಿ ಇವೆ. ಗ್ರೇಡ್‌–2 ರ 17, ದ್ವಿತೀಯ ದರ್ಜೆ ಲೆಕ್ಕ ಸಹಾಯಕ 14 ಸೇರಿದಂತೆ 40 ಹುದ್ದೆಗಳು ಖಾಲಿ ಇವೆ.

ಗ್ರಾಪಂನಲ್ಲೇ ಮೂಲ ಸೌಕರ್ಯಗಳೆ ಇಲ್ಲ: ಜಿಲ್ಲೆಯ ಬಹುತೇಕ ಕಡೆ ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲೇ ಮೂಲ ಸೌಲಭ್ಯಗಳು ಇಲ್ಲದಾಗಿವೆ. ಶೌಚಾಲಯ, ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳ ಕೊರತೆ ಕಾಡುತ್ತಿವೆ.

‘ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಲಭ್ಯಗಳು ಇಲ್ಲದಿರುವುದು ನಾವು ಭೇಟಿ ನೀಡಿದಾಗ ಗಮನಕ್ಕೆ ಬಂದಿದೆ. ಅಂಥ ಕಟ್ಟಡಗಳಲ್ಲಿ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ಜೊತೆಗೆ ಅಂಗವಿಕಲರಿಗೂ ಅನುಕೂಲವಾಗುವ ಶೌಚಾಲಯಗಳನ್ನು ನಿರ್ಮಿಸಲು ಕ್ರಿಯಾ ಯೋಜನೆಯಲ್ಲಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಸೌಲಭ್ಯ ಕಲ್ಪಿಸಲಾಗುವುದು’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ.

‘ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಕಂಪ್ಯೂಟರ್‌ ಆಪರೇಟರ್‌ ಒಬ್ಬರು ಖಾಸಗಿ ವ್ಯಕ್ತಿ ನೇಮಿಸಿಕೊಂಡಿದ್ದಾರೆ. ಆಪರೇಟರ್‌ ಮಾಡುವ ಕೆಲಸವನ್ನು ಇವರೆ ಮಾಡಿಕೊಡುತ್ತಾರೆ. ಇದರಿಂದ ಪಾರದರ್ಶಕತೆ ಹೇಗೆ ಉಳಿಯಲು ಸಾಧ್ಯ. ಕೆಲ ಕಡೆ ಪಿಡಿಒ, ಕಾರ್ಯದರ್ಶಿ, ಕಂಪ್ಯೂಟರ್‌ ಆಪರೇಟರ್‌ಗಳು ಖಾಸಗಿ ವ್ಯಕ್ತಿಗಳನ್ನು ನೆರವಿಗೆ ನೇಮಿಸಿಕೊಂಡಿದ್ದಾರೆ. ಇದರಿಂದ ಇವರನ್ನು ಮೊದಲು ಭೇಟಿಯಾಗಿ ನಂತರ ಅಧಿಕಾರಿಗಳನ್ನು ಭೇಟಿಯಾಗುವ ಪರಿಸ್ಥಿತಿ ಏರ್ಪಟ್ಟಿದೆ’ ಎಂದು ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಾವಲಸಾಬ್‌ ನದಾಫ್‌ ಹೇಳುತ್ತಾರೆ.

ಎರಡು ಗ್ರಾಮ ಪಂಚಾಯಿತಿಗಳಿಗೆ ಒಂದೇ ಕಟ್ಟಡ

ಶಹಾಪುರ: ಆಯಾ ಗ್ರಾಮಗಳ ಪಾಲಿಗೆ ವಿಧಾನಸೌಧವಾಗಿರುವ ಗ್ರಾಮ ಪಂಚಾಯಿತಿಗೆ ಕಟ್ಟಡವಿಲ್ಲದೆ ನಲುಗುತ್ತಿವೆ. ಕಟ್ಟಡ ಇರುವ ಕಡೆ ಕನಿಷ್ಠ ಮೂಲಸೌಲಭ್ಯಗಳು ಇಲ್ಲದೆ ಪರದಾಡುವ ದುಸ್ಥಿತಿ ಎದುರಾಗಿದೆ. ಇನ್ನೂ ಗ್ರಾಮದ ಸಾರ್ವಜನಿಕ ಸಮಸ್ಯೆಗಳು ಪರಿಹರಿಸುವುದು ದುಸ್ತರದ ಮಾತಾಗಿದೆ ಎಂಬ ಆರೋಪವಿದೆ.

ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಗೋಗಿ (ಪಿ) ಮತ್ತು ಗೋಗಿ (ಕೆ) ಎಂದು ಎರಡು ಪ್ರತ್ಯೇಕ ಗ್ರಾಮ ಪಂಚಾಯಿತಿಗಳಿವೆ. ಆದರೆ, ಎರಡು ಪಂಚಾಯಿತಿಗಳ ನಡುವೆ ಒಂದೇ ಕಟ್ಟಡವಿದೆ. ತಾಲ್ಲೂಕಿನ ಹುರಸಗುಂಡಗಿ, ಬಿರನೂರ, ದೋರನಹಳ್ಳಿ ಗ್ರಾಮಗಳಲ್ಲಿ ಸ್ವಂತ ಕಟ್ಟಡವಿಲ್ಲ. ದೋರನಹಳ್ಳಿ ಗ್ರಾ.ಪಂನಲ್ಲಿ 35 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಜನತೆಯ ಎರಡು ಗುಂಪುಗಳ ನಡುವೆ ಜಾಗದ ಗೊಂದಲದಿಂದ ಕಟ್ಟಡ ನಿರ್ಮಾಣವಾಗುತ್ತಿಲ್ಲ. ಬಂದ ಅನುದಾನ ಹಾಗೆ ಉಳಿದುಕೊಂಡಿದೆ.

ಜನತೆಯು ಸ್ವ ಪ್ರತಿಷ್ಠೆ ಬಿಟ್ಟು ಸಾರ್ವಜನಿಕ ಹಿತಾಸಕ್ತಿಗೆ ಅನುಕೂಲವಾಗುವ
ಕೆಲಸವನ್ನು ನಿರ್ವಹಿಸುವುದು ಅನಿವಾರ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಿಳಿಸಿದರು.

ಕಟ್ಟಡ ಇರುವ ಕಡೆ ಕುಡಿಯುವ ನೀರು, ಕೋಣೆಗಳ ಸಮಸ್ಯೆ, ಶೌಚಾಲಯದ ಕೊರತೆ, ಸ್ವಚ್ಛತೆ ಹಾಗೂ ಸುರಕ್ಷತೆ ಇಲ್ಲದೆ ಇರುವುದು. ಸದಸ್ಯರು ಸಭೆ ನಡೆಸಲು ಕೋಣೆಗಳ ಅಭಾವ. ಸಿಬ್ಬಂದಿ ಕೊರತೆ ಕಾಡುತ್ತಲಿದೆ. ಅಲ್ಲದೆ ಕೆಲವು ಕಡೆ ಗ್ರಾಮ ಪಂಚಾಯಿತಿ ಮೈಗಳ್ಳರ ಆಶ್ರಯ ತಾಣವಾಗಿವೆ ಎಂಬ ದೂರು ಕೇಳಿ ಬರುತ್ತಲಿದೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಅಧಿಕಾರಿ ಒಬ್ಬರು.

ಸುರಪುರ: 6 ಗ್ರಾ.ಪಂ.ಗಳಿಗೆ ಸ್ವಂತ ಕಟ್ಟಡವಿಲ್ಲ

ಸುರಪುರ: ತಾಲ್ಲೂಕಿನಲ್ಲಿ 23 ಗ್ರಾಮ ಪಂಚಾಯಿತಿಗಳಿವೆ. ಅವುಗಳಲ್ಲಿ ದೇವಿಕೇರಾ, ಅರಕೇರಾ ಕೆ., ಹೆಮನೂರ, ಸೂಗೂರ, ದೇವತ್ಕಲ್, ಖಾನಾಪುರ ಎಸ್.ಎಚ್., ದೇವಾಪುರ, ತಿಂಥಣಿ, ಪೇಠ ಅಮ್ಮಾಪುರ, ವಾಗಣಗೇರಾ, ಯಕ್ತಾಪುರ, ಯಾಳಗಿ, ದೇವರಗೋನಾಲ, ಮಾಲಗತ್ತಿ, ಕರಡಕಲ್, ಏವೂರು, ನಗನೂರ ಗ್ರಾಮ ಪಂಚಾಯಿತಿಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಬೈಚಬಾಳ ಗ್ರಂಥಾಲಯ, ಮಾಲಗತ್ತಿ ಸಮುದಾಯ ಭವನ, ಹೆಗ್ಗನದೊಡ್ಡಿ ಅಂಗನವಾಡಿ ಕಟ್ಟಡ, ಬಾದ್ಯಾಪುರ ದೇವರ ಉಗ್ರಾಣ ಕೋಣೆ, ಕಚಕನೂರ ಮತ್ತು ಮಲ್ಲಾ ಬಿ ಮತ್ತು ಕಿರದಳ್ಳಿ ಗ್ರಾಮ ಪಂಚಾಯಿತಿಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ನಡೆಯುತ್ತಿವೆ. ಕೆಲವು ಕಟ್ಟಡಗಳು ಹಳೆಯದಾಗಿದ್ದು, ಶಿಥಿಲವಾಗಿವೆ. ಕೆಲ ಕಟ್ಟಡಗಳು ನೆಲ ಸಮವಾಗಿದ್ದು, ಮಳೆ ನೀರು ಕಟ್ಟಡದ ಒಳಗೆ ಹೋಗುತ್ತದೆ.

ಕೆಲವು ಕಡೆ ಸ್ಥಳ ಸಿಗದಿರುವುದು, ಇನ್ನು ಕೆಲ ಕಡೆ ಜಾಗದ ವಿವಾದ ಇರುವುದರಿಂದ ಸ್ವಂತ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ. 

‘ನರೇಗಾ ಯೋಜನೆ ಕಾಮಗಾರಿಗಳನ್ನು ಪ್ರಭಾವಿಗಳಿಗೆ ನೀಡಲಾಗುತ್ತಿದೆ. ವರ್ಗಾವಣೆ, ನೋಂದಣಿ, ಕಟ್ಟಡ ಪರವಾನಗಿ ಇತರ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಸ್ವಚ್ಛತೆ ಕಾಪಾಡುವುದಿಲ್ಲ. ಕೆಲಸಕ್ಕೆ ಅಲೆದಾಡಿಸಲಾಗುತ್ತದೆ. ಕೆಲ ಕಡೆ ಸಮರ್ಪಕ ನೀರು ಸರಬರಾಜು ಇಲ್ಲ. ಕಾಮಗಾರಿಗಳಲ್ಲಿ ಅವ್ಯವಹಾರ ನಡೆಯುತ್ತದೆ’ ಎಂದು ವಿವಿಧ ಗ್ರಾಮಸ್ಥರು ದೂರುತ್ತಾರೆ.

ಚಿನ್ನಾಕಾರ: ಶೆಡ್‌ನಲ್ಲಿ ಪಂಚಾಯಿತಿ ಕಲಾಪ !

ಗುರುಮಠಕಲ್: ತಾಲ್ಲೂಕು ವ್ಯಾಪ್ತಿಯ 18 ಗ್ರಾಮ ಪಂಚಾಯಿತಿಗಳಲ್ಲಿ 17 ಪಂಚಾಯಿತಿಗಳಿಗೆ ಸ್ವಂತ ಕಟ್ಟಡವಿದ್ದು, ಚಿನ್ನಾಕಾರ ಪಂಚಾಯಿತಿ ಮಾತ್ರ ಕೈಗಾರಿಕಾ ಇಲಾಖೆಯ ಹಳೆಯ ಶೆಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಂಚಾಯಿತಿ ಕಟ್ಟಡ ನಿರ್ಮಾಣಕ್ಕಾಗಿ 2015-16ನೇ ಸಾಲಿನಲ್ಲಿ (ರಾಜೀವ್‌ ಗಾಂಧಿ ಭವನ) ₹16 ಲಕ್ಷ ಅನುದಾನವೂ ಬಿಡುಗಡೆಯಾಗಿದೆ. ಆದರೆ, ನಿವೇಶನದ ಕೊರತೆಯಿಂದಾಗಿ ಇನ್ನೂ ಕಟ್ಟಡ ನಿರ್ಮಾಣದ ಕೆಲಸ ಆರಂಭಗೊಂಡಿಲ್ಲ.

‘ಸದ್ಯಕ್ಕೆ ಕೈಗಾರಿಕಾ ಇಲಾಖೆಯ ಒಡೆತನದ ಶೆಡ್‌ ಪ್ರದೇಶದ ನಿವೇಶನ ಪಂಚಾಯಿತಿಗೆ ನೀಡುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಹಾಗೂ ಸದಸ್ಯರೆಲ್ಲ ಸೇರಿ ಮನವಿ ಮಾಡಿದ್ದೇವೆ. ಈ ನಿವೇಶನ ನೀಡಿದರೆ ಈಗಾಗಲೇ ನೀಡಿದ ₹16 ಲಕ್ಷ ಅನುದಾನ ಬಡ್ಡಿಯೊಡನೆ ₹20 ಲಕ್ಷ ಹಣದಲ್ಲಿ ವ್ಯವಸ್ಥಿತ ಕಟ್ಟಡ ನಿರ್ಮಿಸಲು ಸಾಧ್ಯವಾಗಲಿದೆ’ ಎಂದು ಸದಸ್ಯ ಹಜರತ್ ಅಲಿ ಹಾಗೂ ಗ್ರಾಮಸ್ಥ ಕಾಶಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕು ವ್ಯಾಪ್ತಿಯಲ್ಲಿ ಕಂದಕೂರ, ಕೊಂಕಲ್, ಯಂಪಾಡ, ಚಪೆಟ್ಲಾ, ಜೈಗ್ರಾಂ, ಅನಪುರ, ಕಾಳಬೆಳಗುಂದಿ, ಯಂಪಾಡ ಹಾಗೂ ಅಜಲಾಪುರ ಗ್ರಾಮಗಳಲ್ಲಿ ಹೊಸ ಹಾಗೂ ಸುಸ್ಥಿತಿಯ ಕಟ್ಟಡಗಳಿವೆ. ಪಸಪುಲ, ಯಲಸತ್ತಿ, ಪುಟಪಾಕ, ಮಾಧ್ವಾರ, ಗಾಜರಕೋಟ ಪಂಚಾಯಿತಿ ಕಟ್ಟಡಗಳು ಹಳೆಯ ಹಾಗೂ ಚಿಕ್ಕ ಕಟ್ಟಡಗಳಿದ್ದು, ಇರುವ ಕಟ್ಟಡದಲ್ಲೇ ಕೋಣೆಗಳಲ್ಲಿ ದಾಸ್ತಾನು, ಅಧ್ಯಕ್ಷ, ಉಪಾಧ್ಯಕ್ಷ, ಸಿಬ್ಬಂದಿ, ಸದಸ್ಯರು ಹಾಗೂ ಸಭಾಂಗಣಗಳಾಗಿ ಬಳಕೆ ಮಾಡಿಕೊಳ್ಳಬೇಕಿದೆ. 

ಮಿನಾಸಪುರ, ಎಲ್ಹೇರಿ, ಗಾಜರಕೋಟ ಹಾಗೂ ಕಾಕಲವಾರ ಪಂಚಾಯಿತಿ ಕಟ್ಟಡಗಳು ಬಹುತೇಕ ದುರಸ್ತಿಗೆ ಕಾಯುತ್ತಿವೆ. ಮಳೆಗಾಲದಲ್ಲಿ ಗೋಡೆಗಳೆಲ್ಲಾ ತೋಯ್ದು, ನೀರು ಜಿನುಗುತ್ತಿರುತ್ತವೆ. 

'ಬಿಎಸ್‌ಎನ್‌ಎಲ್ ಸಂಸ್ಥೆಯ ಆಪ್ಟಿಕಲ್ ಕೇಬಲ್ ಮೂಲಕ ಸರ್ವರ್ ಒದಗಿಸುವುದಾಗಿ ಹೇಳಲಾಗಿತ್ತು. ಆದರೆ, ಇನ್ನೂ ಆಗಿಲ್ಲ. ಸಾರ್ವಜನಿಕರಿಗೆ ಅನುಕೂಲ ಮಾಡಲು ಸಂಬಂಧಿತ ಅಧಿಕಾರಿಗಳು ಹೈಸ್ಪೀಡ್ ಅಂತರ್ಜಾಲ ಸಂಪರ್ಕ ಒದಗಿಸುವ ಕ್ರಮ ಕೈಗೊಂಡರೆ ಚೆನ್ನ' ಎಂದು ಎಂ.ಟಿ.ಪಲ್ಲಿಯ ಮಹಾದೇವಪ್ಪ ಮನವಿ ಮಾಡಿದರು.

ಸಾಂಸ್ಕೃತಿಕ ಭವನದಲ್ಲಿ ಗ್ರಾಮ ಪಂಚಾಯಿತಿ!

ಸೈದಾಪುರ: ಸೈದಾಪುರ ವ್ಯಾಪ್ತಿಯಲ್ಲಿ ಬೆಳಗುಂದಿ, ಬಾಡಿಯಾಳ, ಸೈದಾಪುರ, ಅಜಲಾಪುರ, ಕಡೇಚೂರು ಸೇರಿದಂತೆ 5 ಗ್ರಾಮ ಪಂಚಾಯಿತಿಗಳು ಬರುತ್ತವೆ.

ಬಾಡಿಯಾಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಸುಮಾರು 3 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲ. ಪ್ರಸುತ್ತ ತನ್ನ ಕಾರ್ಯವನ್ನು ವಾರ್ಡ್‌ ನಂ1 ರಲ್ಲಿ ಬರುವ ಹೂಡಲಮ್ಮ ಗುಡಿ ಹತ್ತಿರ ಇರುವ ಸಾಂಸ್ಕೃತಿಕ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಜಲಾಪುರ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆ ಮತ್ತು ಸ್ವಚ್ಛತೆಗಾರರ ಹುದ್ದೆ ಖಾಲಿಯಿದೆ. ಬೆಳಗುಂದಿ ಪಂಚಾಯಿತಿಯಲ್ಲಿ ಕಾರ್ಯ ದರ್ಶಿ ಹುದ್ದೆ ಖಾಲಿಯಿದೆ. ಉಳಿದಂತೆ ಕಡೇಚೂರು ಮತ್ತು ಸೈದಾಪುರದಲ್ಲಿರುವ ಗ್ರಾಮ ಪಂಚಾಯಿತಿಗಳ ಸ್ಥಿತಿಗತಿ ಉತ್ತಮವಾಗಿದ್ದು, ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳು ಇವೆ.

ಹೆಗ್ಗನದೊಡ್ಡಿ, ಕಿರದಳ್ಳಿಗಿಲ್ಲ ಸ್ವಂತ ಕಟ್ಟಡ

ಕೆಂಭಾವಿ: ಕೆಂಭಾವಿ ವ್ಯಾಪ್ತಿಯಲ್ಲಿ 14 ಗ್ರಾಮ ಪಂಚಾಯಿತಿ ಕಾರ್ಯಾಲಯಗಳು ಇದ್ದು, ಅವುಗಳಲ್ಲಿನ ಕೆಲವು ಗ್ರಾಮ ಪಂಚಾಯಿತಿ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ.

ಕರಡಕಲ್, ಹೆಗ್ಗನದೊಡ್ಡಿ, ಕಿರದಳ್ಳಿ, ಮಲ್ಲಾ, ಯಕ್ತಾಪುರ, ಏವೂರ, ನಗನೂರ ಪಂಚಾಯಿತಿ ಕಾರ್ಯಾಲಯಗಳಿದ್ದು, ಅವುಗಳಲ್ಲಿ ಕೆಲವು ಗ್ರಾಮ ಪಂಚಾಯಿತಿ ಕಟ್ಟಡಗಳನ್ನು ನೂತನವಾಗಿ ನಿರ್ಮಿಸಿದರೆ ಇನ್ನೂ ಕೆಲವು ಪಂಚಾಯಿತಿ ಕಟ್ಟಡಗಳನ್ನು ನಿರ್ಮಿಸಲು ಪೂಜೆ ನೆರವೇರಿಸಲಾಗಿದೆ. ಕೆಲ ಕಡೆ ಕಟ್ಟಡದ ಮೇಲ್ಛಾವಣಿಯೂ ಶಿಥಿಲಗೊಂಡು ನಿರ್ವಹಣೆ ಕೊರತೆಯಿಂದ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿವೆ.

ಕಿರದಳ್ಳಿ ಗ್ರಾಮದಲ್ಲಿ ಪಂಚಾಯಿತಿ ಸ್ವಂತ ಕಟ್ಟಡವಿಲ್ಲದೆ ಶಾಲಾ ಕಟ್ಟಡದಲ್ಲಿ ನಡೆಸುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ.

‘ಹೆಗ್ಗನದೊಡ್ಡಿ ಗ್ರಾಮ ಪಂಚಾಯಿತಿ ಕಟ್ಟಡವಿಲ್ಲದ ಕಾರಣ ಅಂಗನವಾಡಿ ಕಟ್ಟಡದಲ್ಲಿ ಮುಂದುವರೆಸಲಾಗಿದೆ. ಒಂದೇ ಕೋಣೆಯಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪ ವಡಗೇರಿ ಹೇಳುತ್ತಾರೆ.

ಕರಡಕಲ್ ಗ್ರಾಮ ಪಂಚಾಯಿತಿ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದ್ದು, ದುರಸ್ತಿಗೆ ಕಾದು ನಿಂತಿದೆ.

‘ಕರಡಕಲ್ ಗ್ರಾಮ ಪಂಚಾಯಿತಿ ಕಟ್ಟದ ನಿರ್ಮಾಣವಾಗಿ 20 ವರ್ಷ ಕಳೆದಿದ್ದು, ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಶೀಘ್ರದಲ್ಲಿ ನೂತನ ಕಟ್ಟಡಕ್ಕೆ ಅನುದಾನ ಒದಗಿಸಬೇಕು’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮಣ್ಣ ನಾರಾಯಣಪುರ.

ವಡಗೇರಾ: 16 ಗ್ರಾಮ ಪಂಚಾಯಿತಿ ಅಭಿವೃದ್ಧಿ ಯಾವಾಗ?

ವಡಗೇರಾ: ಪಟ್ಟಣದ ಗ್ರಾಮ ಪಂಚಾಯಿತಿ ಸೇರಿದಂತೆ ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳು ಸಮಸ್ಯೆಗಳಿಂದ ಕೂಡಿದ್ದು, ಇನ್ನೂ ಗ್ರಾಮಗಳ ಅಭಿವೃದ್ಧಿ ಯಾವಾಗ ಎನ್ನುವುದು ಜನಸಾಮಾನ್ಯರಲ್ಲಿ ಗೊಂದಲ ಉಂಟುಮಾಡಿದೆ.

ತಾಲ್ಲೂಕಿನ ಐಕೂರು, ತುಮಕೂರು ಮತ್ತು ಬೆಂಡೆಬೆಂಬಳಿ ಗ್ರಾಮದಲ್ಲಿ ತಮ್ಮ ಆಡಳಿತವನ್ನು ನಡೆಸಲು ಸ್ವಂತ ಕಟ್ಟಡ ಇಲ್ಲದೆ ಪಶು ಆಸ್ಪತ್ರೆ, ಅಂಗನವಾಡಿ ಮತ್ತು ಸಿಆರ್‌ಸಿ ಮಟ್ಟದಲ್ಲಿ ಆಡಳಿತ ನಡೆಸುತ್ತಿದ್ದಾರೆ.

‌ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯದರ್ಶಿ, ಎಸ್‌ಡಿಎ, ಕರವಸಲಿಗಾರ, ಡಾಟಾ ಎಂಟ್ರಿ ಆಪರೇಟರ್, ಪಂಪ್ ಆಪರೇಟರ್‌ ಸೇರಿದಂತೆ ಇತರೆ ಸಿಬ್ಬಂದಿ ಇಲ್ಲದೆ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಲು ತಡವಾಗುತ್ತಿದೆ.

ತುಮಕೂರು ಗ್ರಾಮದಲ್ಲಿ 2015ರಲ್ಲಿ ಹೊಸದಾಗಿ ರೂಪುಗೊಂಡ ಗ್ರಾಪಂ ಆಡಳಿತಕ್ಕೆ ಸ್ವಂತ ಕಟ್ಟಡ ಇಲ್ಲದೆ ಐದು ವರ್ಷಗಳಿಂದ ಅಂಗನವಾಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಡೆಬೆಂಬಳಿ ಗ್ರಾಮದಲ್ಲಿ ಶಿಥಿಲಗೊಂಡ ಕಾರ್ಯಾಲಯ ಬಿಟ್ಟು ಏಳು ತಿಂಗಳಿಂದ ಸಿಆರ್‌ಸಿ ಕಟ್ಟಡದಲ್ಲಿ ಆಡಳಿತ ನಡೆಸುತ್ತಿದೆ.

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಪವನ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ಮಲ್ಲಿಕಾರ್ಜುನ ಅರಕೇರಕರ್, ದೇವಿಂದ್ರಪ್ಪ ಬಿ ಕ್ಯಾತನಾಳ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು