ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಅಕ್ರಮ ಖಾತಾ ನಕಲು, ಸರ್ಕಾರಿ ಆಸ್ತಿ ಪರಭಾರೆ ಕಳಂಕ ಹೊತ್ತಿರುವ ನಗರಸಭೆ

Published 13 ಫೆಬ್ರುವರಿ 2024, 6:27 IST
Last Updated 13 ಫೆಬ್ರುವರಿ 2024, 6:27 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ 6 ತಿಂಗಳಿಂದ ಯಾದಗಿರಿ ನಗರಸಭೆ ಪೌರಾಯುಕ್ತರ ಸ್ಥಾನ ಖಾಲಿಯಾಗಿದ್ದು, ಇಲ್ಲಿಯವರೆಗೆ ಕಾಯಂ ಪೌರಾಯುಕ್ತರ ನೇಮಕವಾಗಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳು ಸ್ಥಗಿತಗೊಂಡಿವೆ.

ಯಾದಗಿರಿ ನಗರಸಭೆಯಲ್ಲಿ ನಿಯೋಜನೆ ಮೇಲೆ ಪೌರಾಯುಕ್ತರಾಗಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಸಂಗಪ್ಪ ಉಪಾಸೆ, ನಗರಸಭೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ, ನಗರದ ಸ್ವಚ್ಛತೆ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲದ ದೃಷ್ಟಿಯಿಂದ ಮತ್ತು ಅಧಿಕಾರಿ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಕಾರಣ ನೀಡಿ ಜಿಲ್ಲಾಧಿಕಾರಿ ಡಾ.ಸುಶೀಲಾ ಆರ್‌., ಅವರು ಸಂಗಪ್ಪ ಉಪಾಸೆ ಅವರನ್ನು ಯಾದಗಿರಿ ನಗರಸಭೆಯ ಪೌರಾಯುಕ್ತರ ಹುದ್ದೆಯಿಂದ ಬಿಡುಗಡೆ ಮಾಡಿದ್ದರು.

ನಂತರ ಅವರ ಸ್ಥಾನಕ್ಕೆ ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ ಅವರನ್ನು ನೇಮಿಸಲಾಗಿತ್ತು. ತದನಂತರ ಆಡಳಿತಾತ್ಮಕ ಹಿತದೃಷ್ಟಿಯಿಂದ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಲಕ್ಷ್ಮೀಕಾಂತ ಅವರು ಪ್ರಭಾರಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ಹುದ್ದೆ ನಿರ್ವಹಿಸಬೇಕಿದ್ದರಿಂದ ಲಕ್ಷ್ಮೀಕಾಂತ ಅವರು ನಗರಸಭೆಗೆ ಯಾವಾಗ ಬರುತ್ತಾರೆ ಎನ್ನುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ತಿಳಿಯುತ್ತಿಲ್ಲ. ನಗರಸಭೆಯಲ್ಲಿ ಇಲ್ಲ ‘ಯೂಡಾ’ದಲ್ಲಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದರೆ, ಪ್ರಭಾರಿ ಪೌರಾಯುಕ್ತರು ಯಾವಾಗ ಕಚೇರಿಗೆ ಬರುತ್ತಾರೆ ಎಂದು ಸಾರ್ವಜನಿಕರು ಕಾಯ್ದು ಕುಳಿತುಕೊಳ್ಳಬೇಕಿದೆ.

12 ಜನರ ತಲೆದಂಡ ಪಡೆದ ಹಗರಣ: ಈ ಹಿಂದೆ ನಗರಸಭೆಯಲ್ಲಿ ಅಕ್ರಮ ಖಾತಾ ನಕಲು, ಸರ್ಕಾರಿ ಆಸ್ತಿ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಪೌರಾಯುಕ್ತರು ಸೇರಿ 12 ಜನ ಸಿಬ್ಬಂದಿಯ ಅಮಾನತಾಗಿದೆ. ಹೀಗಾಗಿ ಪೌರಾಯುಕ್ತರಾಗಿ ಬರಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಗ್ರೇಡ್‌–2 ಶ್ರೇಣಿಯ ಅಧಿಕಾರಿಗಳು ಇಲ್ಲಿಗೆ ಬರಲು ತಯಾರಿಲ್ಲ. ಹೀಗಾಗಿ 6 ತಿಂಗಳಾದರೂ ಪೌರಾಯುಕ್ತ ಹುದ್ದೆ ಖಾಲಿ ಉಳಿದಿದೆ.

ಆಗಸ್ಟ್‌ 22ರಿಂದ ಕಾಯಂ ಪೌರಾಯುಕ್ತರ ಹುದ್ದೆ ಖಾಲಿಯಾಗಿದ್ದು, ಇಲ್ಲಿಯವರೆಗೆ ಕಾಯಂ ಪೌರಾಯುಕ್ತರು ನೇಮಕವಾಗದೇ ಪ್ರಭಾರಿ ಆಡಳಿತದಲ್ಲಿ ನಡೆಯುತ್ತಿದೆ.

ಜಿಲ್ಲಾ ಕೇಂದ್ರ ಸ್ಥಾನವಾಗಿರುವ ಯಾದಗಿರಿ ನಗರಸಭೆಗೆ ಕಾಯಂ ಪೌರಾಯುಕ್ತರು ಇಲ್ಲದಿರುವುದು ಸರ್ಕಾರಕ್ಕೆ ನಾಚಿಕಗೇಡಿನ ಸಂಗತಿಯಾಗಿದೆ. ಕೂಡಲೇ ಕಾಯಂ ಪೌರಾಯುಕ್ತರನ್ನು ನೇಮಿಸಿ ಸುಗಮ ಆಡಳಿತಕ್ಕೆ ಅನುಕೂಲ ಮಾಡಿಕೊಡಬೇಕು
ಮಾಣಿಕರೆಡ್ಡಿ ಕುರಕುಂದಿ ಯುವ ಮುಖಂಡ
ಯಾದಗಿರಿ ನಗರಸಭೆಯಲ್ಲಿ ಸಣ್ಣಪುಟ್ಟ ಕೆಲಸಕ್ಕೂ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಯಂ ಪೌರಾಯುಕ್ತರಿಲ್ಲದ ಕಾರಣ ಅನೇಕ ಕೆಲಸಗಳು ಬಾಕಿ ಉಳಿದುಕೊಂಡಿವೆ
ಶಿವರಾಜ ದಾಸನಕೇರಿ ನಗರ ನಿವಾಸಿ
‘ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಲಿ’
ಜಿಲ್ಲಾ ಕೇಂದ್ರದ ನಗರಸಭೆಯಲ್ಲಿ ಕಳೆದ 6ತಿಂಗಳಿಂದಲೂ ಕಾಯಂ ಪೌರಾಯುಕ್ತರು ಇಲ್ಲದಿರುವುದು ಸರ್ಕಾರಕ್ಕೆ ಗೊತ್ತಿದ್ದರೂ ಮೌನವಹಿಸಿರುವುದು ಯಾಕೆ ಎನ್ನುವುದು ಜನತೆಯ ಪ್ರಶ್ನೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಶಹಾಪುರ ತಾಲ್ಲೂಕಿನವರಿದ್ದು ಜಿಲ್ಲಾ ಕೇಂದ್ರವಾದ ಯಾದಗಿರಿಯನ್ನು ನಿರ್ಲಕ್ಷ್ಯಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆಯ ನಾಲ್ಕು ಮತಕ್ಷೇತ್ರಗಳ ಪೈಕಿ ಗುರುಮಠಕಲ್ ಹೊರತುಪಡಿಸಿ ಉಳಿದ ಮೂರು ಮತಕ್ಷೇತ್ರಗಳಾದ ಯಾದಗಿರಿ ಶಹಾಪುರ ಸುರಪುರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ನ ಶಾಸಕರೇ ಇದ್ದಾರೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಸಮಪರ್ಕವಾಗಿ ಕೆಲಸಗಳಾಗಬೇಕಾದರೆ ಕಾಯಂ ಪೌರಾಯುಕ್ತರ ನೇಮಕ ಮಾಡುವುದು ಅಗತ್ಯವಿದೆ. ತುರ್ತಾಗಿ ನೇಮಕ ಮಾಡಬೇಕು ಎನ್ನುವುದು ನಗರ ನಿವಾಸಿಗಳ ಆಗ್ರಹವಾಗಿದೆ.
ಇನ್ನೂ ಈಡೇರದ ಭರವಸೆ
ಯಾದಗಿರಿ ಮತಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ನಿಯಮ-73 ರಡಿ ಪೌರಾಯುಕ್ತರ ನೇಮಕ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಆದರೂ ಇಲ್ಲಿಯತನಕ ಕಾಯಂ ಪೌರಾಯುಕ್ತರು ಬಂದಿಲ್ಲ. ಶೀಘ್ರದಲ್ಲಿ ನಗರಸಭೆಯ ಆಯುಕ್ತರ ಹುದ್ದೆ ಭರ್ತಿ ಮಾಡುವ ಬಗ್ಗೆ ಪೌರಾಡಳಿತ ಸಚಿವರ ಗಮನ ಸೆಳೆದಿದ್ದರು. ಆದರೆ ಭರವಸೆ ಇನ್ನೂ ಈಡೇರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT