‘ಉಳ್ಳವರ’ ಪಾಲಾದ ಸ್ಲಂ ಬೋರ್ಡ್ ಮನೆ

7
ಮಾರ್ಗಸೂಚಿ ಉಲ್ಲಂಘಿಸಿ ಮನೆ ಹಂಚಿಕೆ: ಆರೋಪ

‘ಉಳ್ಳವರ’ ಪಾಲಾದ ಸ್ಲಂ ಬೋರ್ಡ್ ಮನೆ

Published:
Updated:
Prajavani

ಶಹಾಪುರ: ನಗರದ ಬಸ್ ಡಿಪೊದ ಹಿಂಭಾಗ ನನೆಗುದಿಗೆ ಬಿದ್ದಿದ್ದ ಮನೆಗಳನ್ನು ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿಯು 8 ವರ್ಷದ ಬಳಿಕ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರತಿ ಮನೆ ನಿರ್ಮಾಣಕ್ಕೆ ₹ 1.35 ಲಕ್ಷ ವೆಚ್ಚದಲ್ಲಿ ಒಟ್ಟು ₹2.75 ಕೋಟಿ ಅನುದಾನದಲ್ಲಿ ಕಟ್ಟಿದ ಮನೆಗಳು ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಗೆ ಬಂದಿರುವಾಗ ಮನೆ ಹಂಚಿಕೆಯ ಹಕ್ಕು ಪತ್ರ ವಿತರಿಸಲು ಮುಂದಾಗಿರುವುದು ಹಾಗೂ ಉಳ್ಳವರಿಗೆ ಮಾತ್ರ ಮನೆಗಳನ್ನು ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಎಂಟು ವರ್ಷದ ಹಿಂದೆ ಒಳ ಒಪ್ಪಂದದಂತೆ ಕಾಂಗ್ರೆಸ್‌ನ 142 ಹಾಗೂ ಬಿಜೆಪಿಯ 65 ಕಾರ್ಯಕರ್ತರಿಗೆ ಮನೆ ಹಂಚಿಕೆ ಮಾಡಿ ಸಿದ್ದಪಡಿಸಿದ ಫಲಾನುಭವಿಗಳ ಪಟ್ಟಿಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಈಚೆಗೆ ಅನುಮೋದನೆ ಪಡೆದುಕೊಳ್ಳಲಾಗಿದೆ.

‘ಕೊಳಚೆ ನಿರ್ಮೂಲನಾ ಮಂಡಳಿಯ ಮಾರ್ಗಸೂಚಿಯಂತೆ ಮನೆ ಪಡೆದುಕೊಳ್ಳುವ ಫಲಾನುಭವಿ ಕೊಳಚೆ ನಿರ್ಮೂಲನಾ ಪ್ರದೇಶದಲ್ಲಿ ವಾಸವಾಗಿರಬೇಕು. ಅಂತಹ ಫಲಾನುಭವಿಗೆ ಯಾವುದೇ ನಿವೇಶನ ಇರಬಾರದು ಎಂದು ಷರತ್ತು ಇದೆ. ಆದರೆ ಈ ಹಕ್ಕು ಪತ್ರ ಪಡೆದ ಹೆಚ್ಚಿನ ಫಲಾನುಭವಿಗಳು ಕೊಳಚೆ ನಿರ್ಮೂಲನಾ ಪ್ರದೇಶದ ನಿವಾಸಿಗಳಲ್ಲ. ಗ್ರಾಮೀಣ ಪ್ರದೇಶ ನಿವಾಸಿಗಳೇ ಹೆಚ್ಚಾಗಿದ್ದಾರೆ. ಅಲ್ಲದೇ ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಖೊಟ್ಟಿ ಫಲಾನುಭವಿಗಳ ಜೊತೆ ಶಾಮೀಲಾಗಿ ಅಕ್ರಮ ಎಸಗಿದ್ದಾರೆ. ಎಂಟು ವರ್ಷದ ಹಿಂದೆ ಸಿದ್ದಪಡಿಸಿದ ಫಲಾನುಭವಿಗಳ ಪಟ್ಟಿಗೂ ಈಗ ಹಕ್ಕು ಪತ್ರ ವಿತರಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ವ್ಯತ್ಯಾಸವಿದೆ. ಈ ಸಂಬಂಧ ಲೋಕಾಯುಕ್ತರಿಗೂ ದೂರು ಸಲ್ಲಿಸಲಾಗಿದೆ. ಸ್ಥಳೀಯ ಸಂಸ್ಥೆಯ ಚುನಾವಣೆ ಸಮೀಪಿಸುತ್ತಿರುವ  ವೇಳೆ ಮನೆ ಹಂಚಿಕೆ ಮಾಡಿದ್ದಾರೆ. ಹಕ್ಕು ಪತ್ರವನ್ನು ವಾಪಸ್‌ ಪಡೆಯಬೇಕು ಎಂದು ಜೆಡಿಎಸ್‌ ಪಕ್ಷದ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ಹಾಗೂ ಬಸವರಾಜ ಅರುಣಿ ಕೊಳಚೆ ನಿರ್ಮೂಲನಾ ಮಂಡಳಿಯ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ನಗರದಲ್ಲಿ ನಿರ್ಗತಿಕ ಗಿಸಾಡಿ ಸಮುದಾಯದ 30 ಕುಟುಂಬ 25 ವರ್ಷದಿಂದ ಸೂರು ಇಲ್ಲದೆ ಪರಿತಪ್ಪಿಸುತ್ತಿವೆ. ನಿವೇಶನ ಮಾತ್ರ ದೊರೆತಿಲ್ಲ. ಮನೆ ಹಂಚಿಕೆ ಮಾಡುವಾಗ ಕಡ್ಡಾಯವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಶೇ 50 ನಿವೇಶನವನ್ನು ಮೀಸಲಿಡಬೇಕು. ವಂಚನೆ ಮಾಡಿ ಹಕ್ಕು ಪತ್ರ ಪಡೆದ ಫಲಾನುಭಗಳನ್ನು ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಬೇಕು. ನೈಜ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬೇಕು ಎಂದು ಬಿಜೆಪಿಯ ರೈತ ಮೋರ್ಚಾದ ಜಿಲ್ಲಾ ಘಟಕದ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !