ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರವಾಸಿ ತಾಣಗಳ ಸಂರಕ್ಷಣೆ ಅಗತ್ಯ’

ಲುಂಬಿನಿ ವನದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ
Last Updated 27 ಸೆಪ್ಟೆಂಬರ್ 2019, 14:59 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಅವುಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಹೇಳಿದರು.

ನಗರದ ಲುಂಬಿನಿ ವನದಲ್ಲಿ ಪ್ರವಾಸೋದ್ಯಮ ಇಲಾಖೆಯು ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಯಾದಗಿರಿ ಕೋಟೆ, ಗುರುಮಠಕಲ್ ಸಮೀಪದ ಧಬ್‌ ಧಬಿ ಜಲಪಾತ, ಹತ್ತಿಕುಣಿ ಜಲಾಶಯ, ಗವಿಸಿದ್ದಲಿಂಗೇಶ್ವರ, ಬೋನಾಳ ಪಕ್ಷಿಧಾಮ, ರಾಜನಕೊಳೂರು ಬುಡ್ಡರ ಮನೆಗಳು, ವಾಗಣಗೇರಾ ಕೋಟೆ, ಶಿಲ್ಪಕಲೆಯ ತವರೂರಾದ ಏವೂರು, ಬಸವಸಾಗರ ಜಲಾಶಯ, ಸುರಪುರದ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಟೇಲರ್ ಮಂಜಿಲ್, ಮುದನೂರಿನ ದೇವರ ದಾಸಿಮಯ್ಯ, ತಿಂಥಣಿ ಮೌನೇಶ್ವರ, ಶಹಾಪುರ ಬುದ್ಧ ಮಲಗಿದ ಬೆಟ್ಟ, ವನದುರ್ಗ ಕೋಟೆ, ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನ ಸೇರಿದಂತೆ ಮುಂತಾದ ಪ್ರವಾಸಿ ತಾಣಗಳಿವೆ. ಜಿಲ್ಲೆಯಲ್ಲಿ ಸಾಕಷ್ಟು ರಾಜಮನೆತನಗಳು ಆಳ್ವಿಕೆ ನಡೆಸಿವೆ. ವಿದ್ಯಾರ್ಥಿಗಳು, ಯುವಕರು, ಸಾರ್ವಜನಿಕರು ಈ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ’ ಎಂದು ಹೇಳಿದರು.

‘ನಗರದ ಲುಂಬಿನಿ ಕೆರೆಯಲ್ಲಿ ಬೋಟಿಂಗ್ ಶೀಘ್ರ ಆರಂಭವಾಗಲಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಸಾಕಷ್ಟು ಉದ್ಯೋಗ ಕೈಗೊಳ್ಳಲು ಅವಕಾಶ ಇದೆ. ಸಿಂಗಪುರದಂತಹ ದೇಶಗಳು ಪ್ರವಾಸೋದ್ಯಮದಿಂದಲೇ ಹಣ ಸಂಪಾದನೆ ಮಾಡುತ್ತಿವೆ. ಆದರೆ, ಅಲ್ಲಿ ಸಂಸ್ಕೃತಿ ಹಾಳಾಗಿದೆ. ದೇಶದ ಕಲೆ, ಸಂಸ್ಕೃತಿ ಎಲ್ಲಾ ದೇಶಗಳಿಗೂ ಮಾದರಿಯಾಗಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಸಲಹೆ ನೀಡಿದರು.

‌ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಜನಿಕಾಂತ ಮಾತನಾಡಿ, ’ಜಿಲ್ಲೆಯು ಭೌಗೋಳಿಕ, ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಅತ್ಯಂತ ಸಂಪದ್ಭರಿತವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಪ್ರವಾಸೋದ್ಯಮ ಇಲಾಖೆಯು ಇವುಗಳ ಅಭಿವೃದ್ಧಿಯ ಜೊತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ ಇಲ್ಲಿಯವರೆಗೆ ಒಟ್ಟು 370 ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಲುಂಬಿನಿ ಉತ್ಸವ ಆಚರಿಸಲಾಗುವುದು. ಯಾದಗಿರಿ ಉತ್ಸವಕ್ಕಾಗಿ ₹50 ಲಕ್ಷ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

2018-19ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿಯಲ್ಲಿ ಲುಂಬಿನಿವನದಲ್ಲಿರುವ ರಂಗಮಂದಿರದ ನೈಸರ್ಗಿಕ ಕೋಣೆ (ಗ್ರೀನ್ ರೂಮ್) ಮತ್ತು ಲುಂಬಿನಿ ಉದ್ಯಾನವನದ ಕೆರೆಯಲ್ಲಿ ಬೋಟಿಂಗ್ ಆರಂಭಿಸಲು ಬೋಟಿಂಗ್ ಜೆಟ್ಟಿಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಉದ್ಘಾಟಿಸಿದರು. ಪ್ರವಾಸೋದ್ಯಮ ಪ್ರಮೋಟರ್ ಮೇಘನಾಥ ಬೆಳ್ಳಿ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನವಣೆ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ನಿಯಮಿತ ಎಇಇ ಧನಂಜಯ ಇದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT