ಶಾಸಕರಿಗೆ ಹಳೆಯ ಲೆಕ್ಕ ಒಪ್ಪಿಸಿದ ಅಧಿಕಾರಿಗಳು

7
ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಹೆಚ್ಚಿದ್ದ ಸಹಾಯಕ ಸಿಬ್ಬಂದಿ ಸಂಖ್ಯೆ 

ಶಾಸಕರಿಗೆ ಹಳೆಯ ಲೆಕ್ಕ ಒಪ್ಪಿಸಿದ ಅಧಿಕಾರಿಗಳು

Published:
Updated:
Deccan Herald

ಯಾದಗಿರಿ: ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಮಂಗಳವಾರ ಮೊದಲಬಾರಿಗೆ ನಡೆಸಿದ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಳೆಯ ಮಕ್ಕಿಕಾಮಕ್ಕಿ ಲೆಕ್ಕ ಒಪ್ಪಿಸಿ ಇಲಾಖೆವಾರು ಪ್ರಗತಿ ವರದಿ ಮುಂದಿಟ್ಟರು.

ಸಭೆಯ ಆರಂಭದಲ್ಲಿ ಅಧಿಕಾರಿಗಳನ್ನು ಶಾಸಕರು ಸನಿಹ ಕರೆದು ಮಾಹಿತಿ ಪಡೆಯಲು ಶುರು ಮಾಡಿದರು. ಶಿಕ್ಷಕರಿಗೆ ವಿದ್ಯಾರ್ಥಿಗಳು ಹೋಂವರ್ಕ್ ಒಪ್ಪಿಸುವ ರೀತಿಯಲ್ಲಿ ಅಧಿಕಾರಿಗಳು ತರಾತುರಿಯಲ್ಲಿ ತೆಗೆದುಕೊಂಡು ಬಂದಿದ್ದ ಎರಡು ಪುಟದ ಮಾಹಿತಿಯನ್ನು ಶಾಸಕರ ಮುಂದಿನ ಟೇಬಲ್‌ ಮೇಲೆ ಇಡುತ್ತಿದ್ದ ದೃಶ್ಯ ಸಾಮಾನ್ಯಯಿತು. ಅಧಿಕಾರಿಗಳು ಇಟ್ಟುಹೋದ ಲೆಕ್ಕಪತ್ರ ವರದಿ, ಕಾಮಗಾರಿ ವಿವರ ಅರ್ಥವಾಗದೇ ಶಾಸಕರು ಅಧಿಕಾರಿಗಳಿಗೆ ಮರುಪ್ರಶ್ನಿಸಿದರು. ಅಧಿಕಾರಿಗಳು ವಿವರ ನೀಡಿದ ಮೇಲೆ ನೆಸ್ಟ್‌ ಎಂದು ಶಾಸಕರೇ ಕೂಗಿ ಅಧಿಕಾರಿಗಳನ್ನು ಕರೆದರು.

ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಶಾಸಕರಿಗಷ್ಟೇ ಕೇಳಿಸುವಂತೆ ಪ್ರಗತಿಯ ವಿವರ ನೀಡಲು ಮುಂದಾದರು. ನಂತರ ಸ್ವಲ್ಪ ಜೋರಾಗಿ ಹೇಳಿ ಮಾಧ್ಯಮದವರಿಗೂ ಕೇಳಲಿ ಎಂದು ಶಾಸಕರು ಮೈಕ್‌ ನೀಡಿದರು. ಮೈಕ್ ಹಿಡಿದ ಅಧಿಕಾರಿ, ‘ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ₹15 ಕೋಟಿ ಬಿಡುಗಡೆ ಆಗಿದೆ. ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು’ ಎಂದು ವಿವರ ನೀಡಿದರು.

ಬೆರಳೆಣಿಕೆಯಷ್ಟು ಅಧಿಕಾರಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಇಲಾಖೆ ಅಧಿಕಾರಿಗಳು ತಮ್ಮ ಕಚೇರಿ ಸಿಬ್ಬಂದಿಯನ್ನೇ ಸಭೆಗೆ ಕಳುಹಿಸಿದ್ದರು. ಇದರಿಂದ ಶಾಸಕ ವೆಂಕಟರೆಡ್ಡಿ ಮುದ್ನಾಳ ಬೇಸರ ವ್ಯಕ್ತಪಡಿಸಿ ಇಒ ವೀರಶೆಟ್ಟಿ ಅವರಿಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದರು.

‘ನನಗೆ ಇದು ಮೊದಲ ಸಭೆ. ಮಾಹಿತಿ ಇಲ್ಲದೇ ಸಭೆ ಬರುವವರನ್ನು ಸಹಿಸುವುದಿಲ್ಲ. ಹಿರಿಯ ಅಧಿಕಾರಿಗಳು ಸಬೂಬು ಹೇಳದೇ ಸಹಾಯಕ ಸಿಬ್ಬಂದಿ ಕಳುಹಿಸುವುದನ್ನು ನಿಲ್ಲಿಸಬೇಕು. ಪ್ರಗತಿ ವಿವರ ಕೂಡ ಅಚ್ಚುಕಟ್ಟಾಗಿ ನೀಡಬೇಕು. ನಿರ್ಲಕ್ಷ್ಯ ತೋರಿದರೆ ಕಠಿಣಕ್ರಮ ಎದುರಿಸಬೇಕಾಗುತ್ತದೆ’ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಎಚ್ಚರಿಕೆ ನೀಡಿ ಸಭೆ ಮುಗಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಷು ರಾಥೋಡ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !