ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಕಣ್ಣು ಮುಚ್ಚಿದ ಟ್ರಾಫಿಕ್‌ ಸಿಗ್ನಲ್‌!

ನಗರದಲ್ಲಿ ಒಂದು ಕಡೆ ಮಾತ್ರ ಬೆಳಗುತ್ತಿರುವ ಸಿಗ್ನಲ್‌ ದೀಪ
Published 26 ಜೂನ್ 2024, 5:09 IST
Last Updated 26 ಜೂನ್ 2024, 5:09 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದಲ್ಲಿ ಹಲವು ತಿಂಗಳಿಂದ ಟ್ರಾಫಿಕ್‌ ಸಿಗ್ನಲ್‌ ಕಣ್ಣುಮುಚ್ಚಿದ್ದು, ಪೊಲೀಸ್ ಇಲಾಖೆ ಇದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ.

ಹಳೆ ಬಸ್‌ ನಿಲ್ದಾಣ ಸಮೀಪದ ನೇತಾಜಿ ಸುಭಾಷ್‌ ಚಂದ್ರ ಬೋಸ್ ವೃತ್ತದಲ್ಲಿ ಮಾತ್ರ ಟ್ರಾಫಿಕ್‌ ಸಿಗ್ನಲ್‌ ಕಾರ್ಯನಿರ್ವಹಿ ಸುತ್ತಿದೆ.

ಹಳೆ, ಹೊಸ ಬಸ್‌, ರೈಲು ನಿಲ್ದಾಣ, ಹಳೆ ನಗರಕ್ಕೆ ತೆರಳುವ ರಸ್ತೆಗಳು ಶಾಸ್ತ್ರಿ ವೃತ್ತದಲ್ಲಿ ಸೇರುವುದರಿಂದ ಟ್ರಾಫಿಕ್‌ ಸಿಗ್ನಲ್‌ ಇದ್ದರೂ ಬೆಳಗುತ್ತಿಲ್ಲ. ಇದರಿಂದ ಅಡ್ಡಾದಿಡ್ಡಿವಾಹನ ಸಂಚಾರ ಮಾಡುವುದು ಕಂಡುಬರುತ್ತಿದೆ.

ಎಲ್ಲೆಲ್ಲಿ ಬೇಕು ಸಿಗ್ನಲ್‌:

ನಗರವೂ ದಿನೇ ದಿನೇ ವಿಸ್ತರಣೆಗೊಳ್ಳುತ್ತಿರುವ ಕಾರಣ ಅಲ್ಲಲ್ಲಿ ಟ್ರಾಫಿಕ್‌ ಸಿಗ್ನಲ್‌ ಅವಶ್ಯವಿದೆ ಎಂಬುದು ನಗರ ನಿವಾಸಿಗಳ ಆಗ್ರಹವಾಗಿದೆ.

ಎರಡು ಕಡೆ ಮಾತ್ರ ಸಿಗ್ನಲ್‌: ನಗರದ ಸುಭಾಷ್ ವೃತ್ತ, ಶಾಸ್ತ್ರಿ ವೃತ್ತದಲ್ಲಿ ಮಾತ್ರ ಸಿಗ್ನಲ್‌ಗಳಿವೆ. ಇದರಲ್ಲಿ ಸುಭಾಷ್ ವೃತ್ತದಲ್ಲಿ ಮಾತ್ರ ಸಿಗ್ನಲ್‌ ಲೈಟ್‌ ಚಾಲನೆಯಲ್ಲಿದೆ. ಇಲ್ಲಿಯೂ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ. ಇವು ಮುಖ್ಯ ರಸ್ತೆಯಾಗಿದ್ದರಿಂದ ಹಲವು ವಾಹನಗಳು ಸಂಚರಿಸುತ್ತವೆ. ಆದರೆ, ಇಲ್ಲಿ ಸಂಚಾರ ಪೊಲೀಸರು ಇರುವುದಿಲ್ಲ. ಇದರಿಂದ ವಾಹನ ಸವಾರರಿಗೆ ಯಾವುದೇ ಭಯ ಇರುವುದಿಲ್ಲ.

‘ನಗರದ ರಾಷ್ಟ್ರಿಯ ಹೆದ್ದಾರಿಯ ಒಂದೇ ರಸ್ತೆಯಲ್ಲಿ ಎರಡು ಸಿಗ್ನಲ್‌ಗಳಿವೆ. ಅದು ಒಂದು ಕಡೆ ಮಾತ್ರ ಸಿಗ್ನಲ್‌ ದೀಪ ಬೆಳಗುತ್ತಿದೆ. ಉಳಿದೆಡೆ ಬಂದ್‌ ಆಗಿದೆ. ಜನದಟ್ಟಣೆ ಇರುವ ಗಂಜ್‌ ವೃತ್ತ, ಹತ್ತಿಕುಣಿ ಕ್ರಾಸ್‌ ಬಳಿ ಟ್ರಾಫಿಕ್‌ ಸಿಗ್ನಲ್‌ ಅವಶ್ಯವಿದೆ. ಆದರೆ, ಇದ್ದ ಕಡೆಯೇ ಪೊಲೀಸ್‌ ಇಲಾಖೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಜನತೆ ತೊಂದರೆ ಅನುಭವಿಸುತ್ತಾರೆ’ ಎಂದು ನಗರ ನಿವಾಸಿ ಬಸವರಾಜ ಪಾಟೀಲ ಹೇಳುತ್ತಾರೆ.

ಅಡ್ಡಾದಿಡ್ಡಿ ವಾಹನ ಸಂಚಾರ:

ನಗರದಲ್ಲಿ ಟ್ರಾಫಿಕ್‌ ಸಿಗ್ನಲ್‌ ದೀಪ ಬೆಳಗದ ಕಾರಣ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದೆ. ಭಾರಿ ವಾಹನಗಳು ಬೆಳಗಿನ ವೇಳೆಯಲ್ಲಿ ಸಂಚಾರ ಮಾಡುತ್ತಿದೆ. ಅಲ್ಲದೇ ಬೈಕ್, ಆಟೋ, ಟಂಟಂ, ಗೂಡ್ಸ್‌ ಗಾಡಿಗಳು ಸಂಚಾರ ನಿಯಮ ಪಾಲನೆ ಮಾಡುತ್ತಿಲ್ಲ. ಸಿಗ್ನಲ್‌ ಇಲ್ಲದ ಕಾರಣ ಎಲ್ಲೆಂದರಲ್ಲಿ ವಾಹನಗಳು ನುಗ್ಗುವುದರಿಂದ ಬೈಕ್‌ ಸವಾರರು ಮೈಯಲ್ಲಾ ಕಣ್ಣಾಗಿಸಿಕೊಂಡು ವಾಹನ ಚಲಾಯಿಸಬೇಕಿದೆ.

ಬೈಕ್, ಆಟೋ ಇಂಡಿಕೇಟರ್ ಹಾಕುವುದಿಲ್ಲ: ನಗರದ ಬಹುತೇಕ ಕಡೆ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ. ತಮ್ಮ ವಾಹನಗಳ ಇಂಡಿಕೇಟರ್‌ ಹಾಕದೆ ನುಗ್ಗುತ್ತಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಅಲ್ಲದೆ ಇದು ಸಣ್ಣಪುಟ್ಟ ಜಗಳಗಳಿಗೂ ಆಸ್ಪದ ನೀಡುತ್ತಿದೆ.

ಗುಂಡಿ ಬಿದ್ದ ರಸ್ತೆಗಳು:

ಈಚೆಗೆ ಸುರಿದ ಮಳೆಯಿಂದ ನಗರದಲ್ಲಿ ಹಲವು ರಸ್ತೆಗಳಲ್ಲಿ ಗುಂಡಿ ಬಿದ್ದು, ಹಾಳಾಗಿವೆ. ಮುಖ್ಯ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ವಾಹನ ಸವಾರರು ಪರದಾಡುವಂತೆ ಆಗಿದೆ. ಸಂಚಾರ ನಿಯಮದ ಬಗ್ಗೆ ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸುವ ಅವಶ್ಯವಿದೆ. ಹಲವರ ಬಳಿ ಈ ಬಗ್ಗೆ ತಿಳಿವಳಿಕೆ ಇಲ್ಲ. ಇದರಿಂದ ಸಂಚಾರ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ.

ಜಿಲ್ಲೆಗೆ ಬೇಕು ಟ್ರಾಫಿಕ್‌ ಸ್ಟೇಷನ್‌!

ಜಿಲ್ಲೆಯಾಗಿ 14 ವರ್ಷ ಕಳೆದರೂ ಜಿಲ್ಲಾ ಕೇಂದ್ರವಾದ ಯಾದಗಿರಿಯಲ್ಲಿ ಮಾತ್ರ ಟ್ರಾಫಿಕ್‌ ಪೊಲೀಸ್‌ ಸ್ಟೇಷನ್‌ ಇದ್ದು, ಉಳಿದ ತಾಲ್ಲೂಕುಗಳಲ್ಲೂ ಸ್ಟೇಷನ್‌ ನಿರ್ಮಾಣವಾಗಬೇಕು ಎನ್ನುವುದು ಆಯಾ ತಾಲ್ಲೂಕಿನವರ ಒತ್ತಾಯವಾಗಿದೆ.

‘ಶಹಾಪುರ ಸುರಪುರ, ಗುರುಮಠಕಲ್‌, ಹುಣಸಗಿ ಪಟ್ಟಣ ದಿನದಿಂದ ದಿನಲಕ್ಕೆ ವಿಸ್ತರಿಸುತ್ತಾ ಸಾಗುತ್ತಿದ್ದು, ಇಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ತಕ್ಕಂತೆ ಸಂಚಾರ ಪೊಲೀಸ್‌ ಠಾಣೆ ಸ್ಥಾಪಿಸಬೇಕು’ ಎಂದು ಮುಖಂಡ ಯಲ್ಲಯ್ಯ ನಾಯಕ ಆಗ್ರಹಿಸುತ್ತಾರೆ.

‘ನಗರ, ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಸಂಚಾರ ಠಾಣೆಗೆ ಸಂಬಂಧಿಸಿದಂತೆ ಘಟನೆಗಳು ಜರುಗಿದಾಗ ಬಹಳ ಸಮಸ್ಯೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಪ್ರತ್ಯೇಕ ಠಾಣೆ ಆರಂಭಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ಶಾಸ್ತ್ರಿ ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್‌ ದೀಪ ಬೆಳಗದೇ ತಿಂಗಳುಗಳಾಗಿದ್ದು, ಇದನ್ನು ದುರಸ್ತಿ ಮಾಡಿಸುವ ಗೋಜಿಗೆ ಪೊಲೀಸ್‌ ಇಲಾಖೆ ಹೋಗಿಲ್ಲ. ಇದರಿಂದ ಅಡ್ಡಾದಿಡ್ಡಿ ವಾಹನ ಚಾಲನೆಗೆ ಪೊಲೀಸರೇ ಕಾರಣರಾಗಿದ್ದಾರೆ.
ಅವಿನಾಶ ಜಗನ್ನಾಥ, ಕೆಪಿಸಿಸಿ ಯುವ ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT