ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಯಲ್ಲಿ ತೃತೀಯ ಲಿಂಗಿಗಳ ಕಲ್ಯಾಣ ಕಡೆಗಣನೆ

ಜಿಲ್ಲೆಯಲ್ಲಿ ವಾಸವಾಗಿರುವ 850ಕ್ಕೂ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತರು
Last Updated 23 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಯಾದಗಿರಿ: ಲಿಂಗತ್ವ ಅಲ್ಪಸಂಖ್ಯಾತರನ್ನು ಸಬಲೀಕರಣಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವಂತೆ ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ರಾಜ್ಯ ಸರ್ಕಾರ ರೂಪಿಸಿರುವ ‘ಲಿಂಗತ್ವ ಅಲ್ಪಸಂಖ್ಯಾತ ಕಲ್ಯಾಣ ನೀತಿ’ ಜಿಲ್ಲೆಯಲ್ಲಿ ಅನುಷ್ಠಾಗೊಂಡಿಲ್ಲ. ಪರಿಣಾಮವಾಗಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಪುನರ್ವಸತಿ ಕಾಣದೆ ಭಿಕ್ಷಾಟನೆಯಲ್ಲೇ ಬದುಕು ಸಾಗಿಸುಂತಾಗಿದೆ.

2014ರಲ್ಲಿ ರಾಜ್ಯ ಸರ್ಕಾರ ನಡೆಸಿರುವ ಸರ್ವೇ ಪ್ರಕಾರ ಜಿಲ್ಲೆಯಲ್ಲಿ 850 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಆದರೆ, ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ‘ಆಶಾಕಿರಣ’ ಹೆಸರಿನ ಸಾಮಾಜಿಕ ಸಂಸ್ಥೆ ನಡೆಸಿರುವ ಸರ್ವೇ ಪ್ರಕಾರ ತೃತೀಯ ಲಿಂಗಿಗಳ ಸಂಖ್ಯೆ 2,000ಕ್ಕೂ ಹೆಚ್ಚಿದೆ. ಕೌಟುಂಬಿಕ ದೌರ್ಜನ್ಯ ಹಿನ್ನೆಲೆಯಲ್ಲಿ ಅವರು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದಾಗಿ ಸಂಸ್ಥೆಯ ಪದಾಧಿಕಾರಿಗಳು ಹೇಳುತ್ತಾರೆ.

ಲಿಂಗದ ಆಧಾರದ ಮೇಲೆ ಮೂಲಭೂತ ಹಕ್ಕುಗಳಲ್ಲಿ ತಾರತಮ್ಯ ಆಗುವುದನ್ನು ತಡೆಯುವ ಉದ್ದೇಶದಿಂದಲೇ ಸುಪ್ರೀಂ ಕೋರ್ಟ್‌ 2014 ಏಪ್ರಿಲ್‌ 15ರಂದು ನೀಡಿರುವ ತೀರ್ಪಿನಲ್ಲಿ ತೃತೀಯ ಲಿಂಗಿಗಳಿಗೂ ಸಮಾನತೆ ಇದೆ. ಅವರ ಕಲ್ಯಾಣಕ್ಕೆ ಸರ್ಕಾರಗಳು ಯೋಜನೆಗಳನ್ನು ಸಿದ್ಧಪಡಿಸುವಂತೆ ಸೂಚಿಸಿತ್ತು. ಸುಪ್ರೀಂಕೋರ್ಟ್‌ ನಿರ್ದೇಶನದ ಅನ್ವಯ ರಾಜ್ಯ ಸರ್ಕಾರ 2017 ಡಿಸೆಂಬರ್‌ 18ರಂದು ‘ಕರ್ನಾಟಕ ರಾಜ್ಯ ಟ್ರಾನ್ಸ್‌ಜೆಂಡರ್‍್ಸ್‌ ನೀತಿ’ ಜಾರಿಗೊಳಿಸಿದೆ. ಆದರೆ, ಜಿಲ್ಲಾಡಳಿತ ಮಾತ್ರ ಈ ನೀತಿಯನ್ನು ಅನುಷ್ಠಾನಗೊಳಿಸಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿಲ್ಲ. ಆದ್ದರಿಂದ, ಅಲ್ಪಸಂಖ್ಯಾತ ಸಮುದಾಯ ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿರಂತರವಾಗಿ ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ, ಶೋಷಣೆ, ಅವಹೇಳನ, ಅವಮಾನ, ಅಸಮಾನತೆ, ಖಿನ್ನತೆ ಅನುಭವಿತ್ತಿದೆ.

ದಾಖಲಾಗದ ಪ್ರಕರಣಗಳು

ಲಿಂಗತ್ವ ಅಲ್ಪಸಂಖ್ಯಾತರಲ್ಲೂ ವರ್ಗಗಳಿವೆ. ಜೋಗಪ್ಪ, ಹಿಜ್ರಾ, ಕೋಥಿ, ಜೋಗಸ್ತಾಸ್, ಶಿವಶಕ್ತಿ, ಅರ್ವಾನಿ ಹೀಗೆ ಹಲವು ಬಗೆಗಳಿವೆ. ಲಿಂಗ ಪರಿವರ್ತನೆಗೊಂಡಿರುವ ಇವರು ನಾಚಿಕೆ ಸ್ವಭಾವ ಮತ್ತು ಸೂಕ್ಷ್ಮ ಸಂವೇದಿಗಳಾಗಿರುತ್ತಾರೆ. ಜೋಗಪ್ಪಂದಿರು ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದರೆ, ಉಳಿದವರು ರೈಲುಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ ಭಿಕ್ಷಾಟನೆ ನಂಬಿ ಬದುಕುತ್ತಿದ್ದಾರೆ. ಭಿಕ್ಷಾಟನೆ ಸಂದರ್ಭದಲ್ಲಿ ಹಲ್ಲೆ, ದೌರ್ಜನ್ಯ, ಲೈಂಗಿಕ ಶೋಷಣೆ, ಕಿರುಕುಳಕ್ಕೆ ಒಳಗಾದರೂ ಪೊಲೀಸರು ದೂರು ದಾಖಲಿಸುತ್ತಿಲ್ಲ. ನಾವುಗಳು ದೂರು ನೀಡಿದರೆ ಪೊಲೀಸರು ನಮ್ಮನ್ನೇ ಬೆದರಿಸುತ್ತಾರೆ ಎಂಬುದಾಗಿ ಹೆಸರು ಹೇಳಲಿಚ್ಚಸದ ತೃತಲೀಯ ಲಿಂಗಿಯೊಬ್ಬರು ‘ಪ್ರಜಾವಾಣಿ’ಗೆ ಅಸಹಾಯಕತೆ ತೋಡಿಕೊಂಡರು.

ಲಿಂಗತ್ವ ಅಲ್ಪಸಂಖ್ಯಾತ ನೀತಿ ಕರಡು–2ರ 6(3) ನಿರ್ದೇಶನದಂತೆ ತೃತೀಯ ಲಿಂಗಿಗಳಿಗೆ ರಕ್ಷಣೆ ಒದಗಿಸಬೇಕು ಎಂಬುದಾಗಿ ಸೂಚಿಸಲಾಗಿದೆ. ಅದೇ ರೀತಿಯಲ್ಲಿ ಕರುಡು–2ರ (5) ನಿಯಮದ ಪ್ರಕಾರ ಭಿಕ್ಷಾಟನೆ ತೊಡೆದು ಹಾಕಿ, ಪುನರ್ವಸತಿ ಕಲ್ಪಿಸಬೇಕಿದೆ. ಕರುಡು–2ರ (9.3) ನಿಮಯದ ಪ್ರಕಾರ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡುವಂತೆ ನಿರ್ದೇಶಿಸಿದೆ. ಹೀಗೆ ಶಿಕ್ಷಣ, ಉದ್ಯೋಗ ನೇಮಕಾತಿಯಲ್ಲೂ ವಿಶೇಷ ಆದ್ಯತೆ ನೀಡುವಂತೆ ‘ಕರ್ನಾಟಕ ರಾಜ್ಯ ಟ್ರಾನ್ಸ್‌ಜೆಂಡರ್‍್ಸ್‌ ನೀತಿ’ ಸೂಚಿಸುತ್ತದೆ. ಆದರೆ, ಈ ನೀತಿಯಡಿ ಜಿಲ್ಲೆಯಲ್ಲಿ ಒಂದೂ ಕಲ್ಯಾಣ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಮ್ಮಿಕೊಂಡಿಲ್ಲ ಎಂಬುದಾಗಿ ಈ ಸಮುದಾಯ ಬಲವಾಗಿ ಆರೋಪಿಸುತ್ತದೆ.

ಮನವಿಗೂ ಸ್ಪಂದಿಸದ ಜಿಲ್ಲಾಧಿಕಾರಿ

ತೃತೀಯ ಲಿಂಗಗಳು ಒಂದೆಡೆ ಸೇರಿ ಸುಖ–ದುಃಖ ಹಂಚಿಕೊಳ್ಳುವ ಉದ್ದೇಶದಿಂದ ಜಿಲ್ಲೆಯಲ್ಲಿ ‘ಆಶಾಕಿರಣ’ ಸಂಸ್ಥೆಯೊಂದನ್ನು ಹುಟ್ಟುಹಾಕಿಕೊಂಡಿದ್ದಾರೆ. ಆ ಸಂಸ್ಥೆಗೆ ಲಿಂಗತ್ವ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಯಡಿ ಒಂದು ನಿವೇಶನ, ಕಟ್ಟಡ ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಈ ಸಮುದಾಯ ಹಲವು ಬಾರಿ ಮನವಿ ಸಲ್ಲಿಸಿದೆ. ಆದರೆ, ಜಿಲ್ಲಾಧಿಕಾರಿ ಮಾತ್ರ ಜಾಣ ಕಿವುಡು ಮತ್ತು ಕುರುಡು ಪ್ರದರ್ಶಿಸುತ್ತಲೇ ಬಂದಿದ್ದಾರೆ. ಕೌಶಲ ಕಾರ್ಯಕ್ರಮಗಳನ್ನು ಆಯೋಜಿಸುವಂತೆಯೂ ಮನವಿ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಮುಂದಾಗಿಲ್ಲ ಎಂಬುದಾಗಿ ಆಶಾಕಿರಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ತಾಯಪ್ಪ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT