ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟಕ್ಕೆ ಸಿಲುಕಿದ ಕುಂಚಿ ಕೊರವ ಜನಾಂಗ, ಹಕ್ಕುಪತ್ರ ಇದ್ದರೂ ಸಿಗದ ನಿವೇಶನ

ಸಂಕಷ್ಟಕ್ಕೆ ಸಿಲುಕಿದ ಕುಂಚಿ ಕೊರವ ಜನಾಂಗದ ಕುಟುಂಬಗಳು
Last Updated 22 ಅಕ್ಟೋಬರ್ 2020, 2:35 IST
ಅಕ್ಷರ ಗಾತ್ರ

ಕೆಂಭಾವಿ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಪಟ್ಟಣದ ಕೆಂಗೇರಿಯಲ್ಲಿ ಸುಮಾರು 25 ಗುಡಿಸಲುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಅಕ್ಷರಶಃಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಎರಡು ವರ್ಷಗಳ ಹಿಂದೆಯೇ ಹಕ್ಕುಪತ್ರ ದೊರೆತರೂ ನಿವೇಶನ ನೀಡಿಲ್ಲ.

ತಮ್ಮ ಗುಡಿಸಲುಗಳಿಗೆ ಹೋಗಲು ಸುಗಮವಾದ ದಾರಿಯಿಲ್ಲದೆ ಸುಮಾರು ಅರ್ಧ ಕಿ.ಮೀ.ಗಿಂತಲೂ ಹೆಚ್ಚು ಸುತ್ತು ಬಳಸಿ ತಲುಪಬೇಕಾದ ಸ್ಥಿತಿ ಇದೆ. ಮನೆಗಳಲ್ಲಿ ಸಂಪೂರ್ಣವಾಗಿ ನೀರು ನಿಂತು ಅಡುಗೆ ಮಾಡಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಇದರಿಂದ ಉಪವಾಸದಲ್ಲಿ ಜೀವನ ಕಳೆಯುವಂತಾಗಿದೆ.

‘ಗುಡುಗು ಸಹಿತ ಮಳೆ ಸುರಿದರೆ ಮಕ್ಕಳು ಅಳುತ್ತವೆ. ಬಿರುಗಾಳಿಗೆ ಗುಡಿಸಲುಗಳು ಕಿತ್ತುಕೊಂಡು ಹೋಗಬಹುದು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಸತತ ಮಳೆಯಿಂದಾಗಿ ಗುಡಿಸಲಿನ ಆವರಣ ಕೆಸರು ಗದ್ದೆಯಾಗಿದೆ. ಇಷ್ಟೊಂದು ಕಷ್ಟದಲ್ಲಿದ್ದರೂ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಗುಡಿಸಲಿನ ಮಹಿಳೆಯೊಬ್ಬರು ಅಲವತ್ತುಕೊಂಡರು.

ಸುಮಾರು ವರ್ಷಗಳಿಂದ ಅನೇಕ ಕುಟುಂಬಗಳು ಇಲ್ಲಿ ಗುಡಿಸಲು ಹಾಕಿಕೊಂಡ ಜೀವನ ಸಾಗಿಸುತ್ತಿದ್ದಾರೆ. ಬಹುತೇಕ ಕುಂಚಿ, ಕೊರವ ಜನಾಂಗಕ್ಕೆ ಸೇರಿದವರಾಗಿದ್ದು, ಇವರೆಲ್ಲರ ಮೂಲ ಕಸಬು ಕೂದಲು ಸಂಗ್ರಹಿಸಿ ಮಾರಾಟ ಮಾಡುವುದು, ಪ್ಲಾಸ್ಟಿಕ್ ಸಾಮಾನು ಹಾಗೂ ಇನ್ನಿತರ ಸಣ್ಣಪುಟ್ಟ ವಸ್ತುಗಳನ್ನು ಮಾರುವುದಾಗಿದೆ. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಸಮಯವೇ. ಕೆಲಸವಿಲ್ಲದಿದ್ದರೆ ಉಪವಾಸವೇ ಗತಿ.

ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ, ವಾಜಪೇಯಿ ನಗರ ನಿವೇಶನ ಯೋಜನೆಯಡಿ ಸುಮಾರು 25 ಕುಟುಂಬಗಳಿಗೆ ಎರಡು ವರ್ಷಗಳ ಹಿಂದೆಯೇ ನಿವೇಶನ ಹಕ್ಕು ಪತ್ರ ನೀಡಲಾಗಿದ್ದರೂ ತಾಂತ್ರಿಕ ತೊಂದರೆಯಿಂದ ಇನ್ನೂವರೆಗೂ ನಿವೇಶನಗಳನ್ನು ತೋರಿಸಿಲ್ಲ.

‘ಸತತವಾಗಿ ಸುರಿಯುತ್ತಿರುವ ಮಳೆಯಿಂದ ರೈತರಲ್ಲದೆ ಅನೇಕ ಬಡಪಾಯಿಗಳು ಸಹ ಕಷ್ಟದಲ್ಲಿ ಸಿಲುಕಿದ್ದಾರೆ. ಜನಪ್ರತಿನಿಧಿಗಳು ಕಷ್ಟದಲ್ಲಿರುವಂತಹ ಬಡ ಕುಟುಂಬಗಳಿಗೆ ಸರ್ಕಾರದಿಂದ ಬಂದಂತಹ ಸೌಲಭ್ಯವನ್ನು ಅನುಷ್ಠಾನ ಮಾಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಅಧಿಕಾರಿಗಳು ಕೂಡ ಮುತುವರ್ಜಿ ವಹಿಸಿಲ್ಲ’ ಎಂದು ಸಗರನಾಡು ಜಿಲ್ಲಾ ರೈತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಭೀಮನಗೌಡ ಕಾಚಾಪುರ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT