ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮಹಾತ್ವಕಾಂಕ್ಷಿ ಜಿಲ್ಲೆಗೆ ಸಿಕ್ಕುವುದೇ ವಿಶೇಷ ಪ್ಯಾಕೇಜ್‌?

Last Updated 31 ಜನವರಿ 2023, 19:30 IST
ಅಕ್ಷರ ಗಾತ್ರ

ಯಾದಗಿರಿ: ಫೆಬ್ರುವರಿ 1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದ್ದು, ಜಿಲ್ಲೆಗೇನು ಸಿಗಲಿದೆ ಎನ್ನುವುದು ಕುತೂಹಲ ಮೂಡಿದೆ.

ಬಿಜೆಪಿ ಸರ್ಕಾರದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಜಿಲ್ಲೆಗೆ ಪ್ರತ್ಯೇಕವಾದ ಅನುದಾನ ಅಥವಾ ಯೋಜನೆ ಘೋಷಣೆಯಾಗಿಲ್ಲ. ಈ ಬಾರಿಯಾದರೂ ಜಿಲ್ಲೆಗೆ ಪ್ರತ್ಯೇಕವಾಗಿ ಎನಾದರೂ ಸಿಗಬಹುದು ಎನ್ನುವ ನಿರೀಕ್ಷೆ ಇದೆ.

ಕೈಗಾರಿಕಾ ಪ್ರದೇಶ ಅಭಿವೃದ್ಧಿ: ಜಿಲ್ಲೆಯ ಕಡೇಚೂರು ಬಾಡಿಯಾಳದಲ್ಲಿ ಸಾಕಷ್ಟು ಜಮೀನು ಕೈಗಾರಿಕೆಗಳಿಗೆ ಮೀಸಲಿಟ್ಟಿದ್ದು, ಅಲ್ಲಿ ಕೈಗಾರಿಕಾ ಕಾರ್ಖಾನೆಗಳನ್ನು ಸ್ಥಾಪನೆ ಮಾಡಬೇಕು ಎನ್ನುವುದು ಬಹುದಿನದ ಆಶೆಯಾಗಿದೆ. ಫಾರ್ಮಾ ಸ್ಥಾಪನೆ ಮಾಡುತ್ತೇವೆ ಎಂದು ಭರವಸೆಗಳು ಇನ್ನೂ ಈಡೇರಿಲ್ಲ. ಇದರಿಂದ ಜಿಲ್ಲೆಯ ಜನತೆ ಭ್ರಮನಿರಸಗೊಂಡಿದ್ದಾರೆ.

ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಡುವ ನೀರಾವರಿ ಪ್ರದೇಶಕ್ಕೆ ಒಳಪಟ್ಟಿರುವ ಈ ಜಿಲ್ಲೆಯಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕಾ ಕ್ಷೇತ್ರದಲ್ಲಿ ಬಹಳಷ್ಟು ಹಿಂದುಳಿದ ಜಿಲ್ಲೆಯಾಗಿದೆ. ಇಲ್ಲಿ ನಿರುದ್ಯೋಗ ತಾಂಡಾವವಾಡುತ್ತಿದೆ. ಇಡೀ ರಾಜ್ಯದಲ್ಲಿ ಈ ಜಿಲ್ಲೆಯಿಂದ ಅತಿ ಹೆಚ್ಚು ಕೂಲಿ ಕಾರ್ಮಿಕರು ಬೆಂಗಳೂರು, ಮುಂಬೈ, ಹೈದರಾಬಾದ್‌, ಗೋವಾ ಸೇರಿದಂತೆ ಇನ್ನಿತರ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿಗಳು ಹರಿಯುತ್ತಿದ್ದರೂ ಗುಳೆ ಹೋಗುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಹೊಸ ಮತ್ತು ಹಳೆ ತಾಲ್ಲೂಕುಗಳು 6 ಇದ್ದು, ಇಂದಿಗೂ ಹಳೆ ತಾಲ್ಲೂಕುಗಳಿಗೆ ಅಲೆದಾಟ ತಪ್ಪಿಲ್ಲ. ಹೊಸ ಕಚೇರಿಗಳು ಆರಂಭವಾಗಿಲ್ಲ.

ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆಗಳಾದ ಹತ್ತಿ, ಮೆಣಿಸಿನಕಾಯಿ, ಭತ್ತ ಬೆಳೆದ ರೈತರಿಗೆ ಸರಿಯಾಗಿ ಮಾರುಕಟ್ಟೆ ವ್ಯವಸ್ಥೆ ಇಲ್ಲ. ದೂರದ ಬ್ಯಾಡಗಿಗೆ ಮೆಣಿಸಿನಕಾಯಿ ಮಾರಾಟ ಮಾಡಲು ತೆರಳಬೇಕಿದೆ. ಹತ್ತಿ ಮಾರುಕಟ್ಟೆ ರಾಯಚೂರಿನಲ್ಲಿದೆ. ಭತ್ತದ ಮಾರುಕಟ್ಟೆ ಸರಿಯಾದ ವ್ಯವಸ್ಥೆ ಇಲ್ಲದಿದ್ದಕ್ಕೆ ಎಷ್ಟೊ ವ್ಯಾಪಾರಿಗಳು ಅಮಾಯಕ ರೈತರನ್ನು ಮಾಲು ತೆಗೆದುಕೊಂಡು ಹಣ ಕೊಡಲಾರದೆ ವಂಚನೆಗೆ ಒಳಗಾಗುವುದು ಸಾಮಾನ್ಯವಾಗಿದೆ.

ಶಹಾಪುರದಲ್ಲಿ ಹತ್ತಿ ಟೆಕ್ಸ್‌ಟೈಲ್ ಕಾರ್ಖಾನೆ ಸ್ಥಾಪನೆ ಮಾಡಿ ದೊಡ್ಡ ಪ್ರಮಾಣದಲ್ಲಿ ಸಿದ್ದ ಉಡುಪುಗಳ ಕಾರ್ಖಾನೆ ಸ್ಥಾಪನೆ ಮಾಡಬೇಕು ಎನ್ನುವುದು ಈ ಭಾಗದ ಜನರ ಒತ್ತಾಯವಾಗಿದೆ.

‘ಯಾದಗಿರಿ ರೈಲು ನಿಲ್ದಾಣದಿಂದ ಗುಂತಕಲ್ ಬಿಟ್ಟರೆ ಎರಡನೇ ಸ್ಥಾನದಲ್ಲಿ ಹೆಚ್ಚು ಆದಾಯ ಕೊಡುವ ನಿಲ್ದಾಣವಾಗಿದ್ದರೂ ನಿರ್ಲಕ್ಷ್ಯಿಸಲಾಗಿದೆ. ರೇಕ್ ಪಾಯಿಂಟ್ ನೀಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇಲ್ಲಿಗೆ ರೇಕ್ ಪಾಯಿಂಟ್ ಆಗುವುದರಿಂದ ಸಾಮಗ್ರಿಗಳು ಶೀಘ್ರ ಜಿಲ್ಲೆಗೆ ರವಾನೆಯಾಗುವುದಲ್ಲದೇ ದೂರದ ರಾಯಚೂರು, ವಾಡಿಗಳಿಂದ ಸಾಮಗ್ರಿ ಸರಕು ಸಾಗಣೆ ವೆಚ್ಚವೂ ಉಳಿತಾಯವಾಗುತ್ತದೆ. ಇದಲ್ಲದೇ ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಅವಕಾಶ ಲಭಿಸಿ ಅವರಿಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಉಮೇಶ ಕೆ. ಮುದ್ನಾಳ.

‘ಜಿಲ್ಲೆಯಲ್ಲಿ ಫಾರ್ಮಾ ಪಾರ್ಕ್ ಕೇಂದ್ರ ಘೋಷಣೆ ಮಾಡಿ ಮತ್ತೆ ಅದನ್ನು ಹಿಂಪಡೆದು ಉತ್ತರ ಭಾರತಕ್ಕೆ ನೀಡಿರುವುದು ಸರಿಯಲ್ಲ. ಅದನ್ನು ಕೂಡಲೇ ವಾಪಸ್ ಜಿಲ್ಲೆಗೆ ನೀಡಬೇಕು. ಈಗಾಗಲೇ ಫಾರ್ಮಾ ಪಾರ್ಕ್‌ಗಾಗಿ ಜಮೀನು ಭೂಸ್ವಾಧೀನ ಪ್ರಕ್ರಿಯೆ ಮುಗಿದ ನಂತರ ಅದನ್ನು ವಾಪಸ್ ಪಡೆದಿರುವುದು ಈ ಭಾಗಕ್ಕೆ ಕೇಂದ್ರ ಸರ್ಕಾರ ಮಾಡಿದ ಅನ್ಯಾಯವಾಗಿದೆ’ ಎಂದು ದೂರಿದ್ದಾರೆ.

***

ಯಾದಗಿರಿ ಜಿಲ್ಲೆಯ ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಜಿಲ್ಲೆಯಾಗಿದ್ದರಿಂದ ಈಗಾಗಲೇ ಅನೇಕ ಯೋಜನೆಗಳಡಿ ಅನುದಾನ ಬರುತ್ತಿದೆ. ಮುಂದೆಯು ಸರ್ಕಾರ ಮತ್ತಷ್ಟು ಅನುದಾನ ನೀಡುವ ಭರವಸೆ ಇದೆ
-ಡಾ.ಶರಣಭೂಪಾಲರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

***

ಬಜೆಟ್‌ನಲ್ಲಿ ಅತಿ ಹಿಂದುಳಿದಿರುವು ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ಈ ಮೂಲಕ ಜಿಲ್ಲೆಯ ಪ್ರಗತಿಗೆ ಕಾರಣರಾಗಬೇಕು
-ಅಶೋಕ ಮಲ್ಲಾಬಾದಿ, ಕಿಸಾನ್‌ ಕಾಂಗ್ರೆಸ್‌ ಉಪಾಧ್ಯಕ್ಷ

***

ರೈತರಿಗೆ, ಕಾರ್ಮಿಕರಿಗೆ ಅನುಕೂಲವಾಗುವ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಈ ಮೂಲಕ ರೈತರಿಗೆ ನೆರವಾಗಬೇಕು
-ಚನ್ನಾರೆಡ್ಡಿ ಗುರುಸಣಗಿ, ರೈತ ಮುಖಂಡ

***

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಯಾದಗಿರಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಆ ಮೂಲಕ ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಜಿಲ್ಲೆಯಲ್ಲಿ ಹಾದುಹೋಗುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು
-ಉಮೇಶ ಕೆ. ಮುದ್ನಾಳ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT