ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

ಬಹುತೇಕ ಶಾಂತಿಯುತ ಮತದಾನ, ಯುವ ಮತದಾರರಲ್ಲಿ ಉತ್ಸಾಹ
Last Updated 24 ಏಪ್ರಿಲ್ 2019, 11:36 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮಂಗಳವಾರ ಲೋಕಸಭಾ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯಿತು.

ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಸಂಜೆ 6 ಗಂಟೆವರೆಗೆ ನಡೆಯಿತು. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಹೊರತುಪಡಿಸಿದರೆ ಉಳಿದಂತೆ ಮತದಾನ ಸುಗಮವಾಗಿ ಜರುಗಿತು.

ನಗರದ ವಾರ್ಡ್ ಸಂಖ್ಯೆ 5ರ ಶಾಂತಿನಗರದ ಮತಗಟ್ಟೆ ಸಂಖ್ಯೆ 28ರಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕೆಲ ಸಮಯ ಮತದಾನ ಸ್ಥಗಿತವಾಗಿತ್ತು. ಕೂಡಲೇ ಅಧಿಕಾರಿಗಳು ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.

ಅದೇ ರೀತಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 55ರಲ್ಲಿಯೂ ಮತಯಂತ್ರಗಳಲ್ಲಿ ದೋಷ ಉಂಟಾಗಿದ್ದರಿಂದ ಮತದಾನ ಕೆಲಹೊತ್ತು ವಿಳಂಬವಾಯಿತು.

ದೂರದ ಊರುಗಳಿಗೆ ಹೋಗಿದ್ದ ಜನರು ಬೆಳಿಗ್ಗೆ ನಗರಕ್ಕೆ ಬಂದು ನೇರವಾಗಿ ಮತದಾನ ಕೇಂದ್ರಗಳಿಗೆ ಹೋಗಿ ಮತ ಚಲಾಯಿಸುತ್ತಿದ್ದುದು ಕಂಡು ಬಂತು.

ನಗರ ಸೇರಿದಂತೆ ತಾಲ್ಲೂಕಿನ ರಾಮಸಮುದ್ರ, ಬಳಿಚಕ್ರದ, ಯಲ್ಹೇರಿಯ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಬಂದು ಮತ ಹಾಕಿದರು. ಒಂದೆಡೆ ಬಿಸಿಲು ಏರುತ್ತಿದ್ದರೂ ಮತದಾರರ ಉತ್ಸಾಹ ಮಾತ್ರ ಕಡಿಮೆ ಆಗಲಿಲ್ಲ. ಆದರೆ, ಮಧ್ಯಾಹ್ನದ ನಂತರ ಮತದಾನ ನೀರಸವಾಗಿತ್ತು.

ಸಂಜೆ 4 ಗಂಟೆ ನಂತರ ಬಹುತೇಕ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು.

ನಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೋಲಿವಾಡದ ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸ್ಥಾಪಿಸಲಾಗಿದ್ದ ಸಖಿ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಈ ಮತಗಟ್ಟೆಗಳನ್ನು ಮಹಿಳಾ ಸಿಬ್ಬಂದಿಯೇ ಸಂಪೂರ್ಣವಾಗಿ ನಿರ್ವಹಿಸಿದರು. ಚಿರಂಜೀವಿ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಪಿಡಬ್ಲ್ಯುಡಿ ಮತಗಟ್ಟೆಯನ್ನು (ಸಂಖ್ಯೆ 79) ಅಂಗವಿಕಲ ಸಿಬ್ಬಂದಿ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಮೊದಲ ಬಾರಿಗೆ ಮತದಾನ ಮಾಡಲು ಬಂದಿದ್ದ ಯುವ ಮತದಾರರು ಸರತಿಯಲ್ಲಿ ನಿಂತು, ಮತ ಹಾಕಲು ಕಾತರದಿಂದ ಕಾಯುತ್ತಿದ್ದರು. ಮತ ಹಾಕಿ ಹೊರ ಬಂದ ನಂತರ ಸಂಭ್ರಮದ ನಗೆ ಬೀರಿದರು.

ಹಿರಿಯ ನಾಗರಿಕರು, ಅಂಗವಿಕಲರು ತಾವೇನು ಕಡಿಮೆ ಎಂಬಂತೆ ತಮ್ಮ ಕುಟುಂಬ ಸದಸ್ಯರೊಂದಿಗೆ ಬಂದು ಮತ ಚಲಾಯಿಸಿದರು. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಅಂಗವಿಕಲರನ್ನು ಕರೆತರಲು ವಾಹನ ಮತ್ತು ಗಾಲಿ ಕುರ್ಚಿಯ ವ್ಯವಸ್ಥೆ ಮಾಡಿತ್ತು.

ಗಣ್ಯರ ಮತದಾನ: ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ನಗರದ ವಾರ್ಡ್ ಸಂಖ್ಯೆ 77ರಲ್ಲಿ ತಮ್ಮ ಮತ ಹಕ್ಕು ಚಲಾಯಿಸಿದರು.

ಅದೇ ರೀತಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ, ಮಾಜಿ ಶಾಸಕ ವೀರಬಸಂತರೆಡ್ಡಿ ಮುದ್ನಾಳ, ಅವರು ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT