ಶುಕ್ರವಾರ, ಆಗಸ್ಟ್ 12, 2022
22 °C
ದುರಸ್ತಿ ಕಾಣದ ಕಾಲುವೆಗಳು; ಜಾಗೃತಿಯ ಕೊರತೆ,ಕರ ಸಂಗ್ರಹ ಪ್ರಕ್ರಿಯೆಯೂ ಸ್ಥಗಿತ

ಯಾದಗಿರಿ ಜಿಲ್ಲೆಯಲ್ಲಿ ನೀರು ಬಳಕೆದಾರರ ಸಂಘಗಳು ನಿಷ್ಕ್ರಿಯ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಪ್ರತಿ ವರ್ಷ ನಾರಾಯಣಪುರ ಜಲಾಶಯದಿಂದ ಎಡದಂಡೆ ನಾಲೆ ಮೂಲಕ ಉಪಕಾಲುವೆಗಳಿಗೆ, ಲ್ಯಾಟ್ರಲ್‌ಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಕಾಲುವೆಗಳು ಹೂಳು ತುಂಬಿದ್ದು, ಮೇಲ್ಭಾಗಕ್ಕೆ ಮಾತ್ರ ನೀರು ಸಿಗುತ್ತಿವೆ. ಕೆಳ ಭಾಗದ ರೈತರು ಮಳೆಯನ್ನು ಆಶ್ರಯಿಸಿ ಬೆಳೆ ಬೆಳೆಯುತ್ತಾರೆ.

ವಡಗೇರಾ ತಾಲ್ಲೂಕಿನ ಕೊನೆ ಭಾಗದ ಭಾಗದ ಕಾಲುವೆಗಳಿಗೆ ನೀರು ಬಾರದ ಕಾರಣ ರೈತರು, ಮಳೆ ಆಶ್ರಯದಲ್ಲಿ ಶೇಂಗಾ ಬೆಳೆಯುತ್ತಿದ್ದಾರೆ. ಬೇರೆ ಬೆಳೆಯಲು ನೀರಿನ ಸಮಸ್ಯೆ ಎದುರಾಗುತ್ತಿದೆ.ಕೆಲ ಕಡೆ ಕಾಲುವೆ ಒಡೆದು ಅಲ್ಲಿಂದಲೇ ಹೊಲಗಳಿಗೆ ಹೋಗಲು ರಸ್ತೆ ಮಾಡಿಕೊಳ್ಳಲಾಗಿದೆ.

ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸಲು ಪ್ರಾರಂಭಿಸುತ್ತಿದ್ದಂತೆ ನೀರಾವರಿ ಪ್ರದೇಶದ ರೈತರು ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ಹರಸಾಹಸ ಪಡಬೇಕಾಗುತ್ತದೆ. ಕೊನೆ ಹಂತದ ಜಮೀನಿಗೆ ನೀರಿಗಾಗಿ ಕಾದು ಕುಳಿತ ರೈತರು ಮುಚ್ಚಿಹೋದ ಕಿರುಗಾಲುವೆಗಳಲ್ಲಿ ಹೂಳು ತೆಗೆದು ನೀರು ಪಡೆಯಲು ಪ್ರಯತ್ನಿಸುತ್ತಾರೆ. ಉಪಕಾಲುವೆಗಳ ಮತ್ತು ಲ್ಯಾಟ್ರಲ್ ಸುಧಾರಣೆಯತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಿಷ್ಕ್ರಿಯಗೊಂಡ ನೀರು ಬಳಕೆದಾರರ ಸಂಘ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಸಹಭಾಗಿತ್ವದಲ್ಲಿ ಪರಿಣಾಮಕಾರಿಯಾಗಿ ನೀರು ಸದ್ಭಳಕೆ ಮಾಡಲು ಹಾಗೂ ನಿರ್ವಹಿಸಲು ಅಂದಿನ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ ಹಾಗೂ ಕೃಷ್ಣಾ ಕಾಡಾದ ಅಧ್ಯಕ್ಷ ನಂಜಯ್ಯಮಠ ಅವರ ಪರಿಶ್ರಮದ ಫಲವಾಗಿ 524ಕ್ಕೂ ಹೆಚ್ಚು ನೀರು ಬಳಕೆದಾರರ ಸಹಕಾರ ಸಂಘ ರಚನೆಗೊಂಡವು. ಅದರಲ್ಲಿ ಹುಣಸಗಿ ಹಾಗೂ ಇನ್ನಿತರ ಕಡೆ 10ಕ್ಕೂ ಹೆಚ್ಚು ಸಂಘಗಳು ರೈತಸ್ನೇಯಿಯಾಗಿ ಕೆಲಸ ನಿರ್ವಹಿಸುತ್ತಿವೆ. ಆದರೆ, ಜಿಲ್ಲೆಯ ಉಳಿದಂತೆ ನಿಷ್ಕೃಯಗೊಂಡಿವೆ.

ಒಂದು ಹೆಕ್ಟೇರ್‌ಗೆ ₹ 40ರಂತೆ ಕರ ವಸೂಲಿ ಮಾಡಿ, ಅದರಲ್ಲಿ ₹20 ಕಾಲುವೆ ನಿರ್ವಹಣೆಗೆ ಬಳಸಬೇಕು ಎಂಬ ನಿಯಮವಿದೆ. ಕರ ಸಮರ್ಪಕವಾಗಿ ವಸೂಲಿ ಆಗದಿರುವುದರಿಂದ ನಿರ್ವಹಣೆ ಮಾಡಲು ಅಗುತ್ತಿಲ್ಲ. ಇದು ಕೂಡ ಕಾಲುವೆಗಳು ಹೂಳು ಬೀಳಲು ಕಾರಣವಾಗಿವೆ.

‘ನೀರು ಬಳಕೆದಾರರ ಸಂಘಗಳು ಕರ ಸಂಗ್ರಹಿಸುತ್ತಿಲ್ಲ. ರೈತರಿಗೂ ಅವರ ಮೇಲೆ ನಂಬಿಕೆ ಇಲ್ಲ. ಇದರಿಂದ ಅತ್ತ ಕರ ಇಲ್ಲದೆ, ಇತ್ತ ಕಾಲುವೆ ದುರಸ್ತಿಯಾಗದೆ ಉಳಿದುಕೊಂಡಿವೆ. ನೀರು ಬಳಕೆದಾರರ ಸಂಘಗಳನ್ನು ಸರ್ಕಾರ ಮಟ್ಟದಲ್ಲೇ ರದ್ದು ಮಾಡಿ, ಅಧಿಕಾರಿಗಳ ವ್ಯಾಪ್ತಿಗೆ ತಂದರೆ ಬದಲಾವಣೆ ನಿರೀಕ್ಷಿಸಬಹುದು’ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಕಾಲುವೆ ಮೇಲ್ಭಾಗದಲ್ಲಿ ನಿಷೇಧಿತ ಬೆಳೆ ಬೆಳೆಯುವುದರಿಂದ ಕೊನೆ ಭಾಗದ ರೈತರಿಗೆ ನೀರು ಸಿಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಐಸಿಸಿ ಸಭೆಯಲ್ಲಿ ಲಘು ಬೆಳೆಗಳಿಗೆ ಮಾತ್ರ ನೀರು ಬಳಸಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಗುತ್ತಿದೆ. ಆದರೆ, ಅದು ಜಾರಿಗೆ ತರಲು ಆಗುವುದಿಲ್ಲ. ವಾರಬಂದಿ ಶುರುವಾದ ಮೇಲೆ ಕಾಲುವೆ ಮುಂಭಾಗದಲ್ಲಿ ಇದ್ದವರಿಗೆ ಮಾತ್ರ ನೀರು ಸಿಗುತ್ತದೆ. ಕೊನೆ ಭಾಗದಲ್ಲಿ ಇದ್ದವರಿಗೆ ನೀರೇ ಸಿಗುವುದಿಲ್ಲ. ಇದರಿಂದ ಕೆಲ ಕಡೆ ಒಂದೇ ಬೆಳೆ ಬೆಳೆದು ಮತ್ತೊಂದು ಹಿಂಗಾರು ಹಂಗಾಮಿನ ಬೆಳೆ ಬೆಳೆಯಲು ಮನಸ್ಸು ಮಾಡುವುದಿಲ್ಲ. ಹೀಗಾಗಿ ಕೊನೆ ಭಾಗದ ರೈತರಿಗೆ ಸಮಸ್ಯೆ ತಂದೊಡ್ಡಿದೆ’ ಎನ್ನುತ್ತಾರೆ ಅವರು.

****

ಉಪಕಾಲುವೆಗಳ ನಿರ್ವಹಣೆಯೇ ಇಲ್ಲ!
ಕೆಂಭಾವಿ:
ಸರ್ಕಾರದಿಂದ ಪ್ರತಿ ವರ್ಷ ಉಪ ಕಾಲುವೆ, ಲ್ಯಾಟ್ರಲ್‍ಗಳ ನಿರ್ವಹಣೆಗಾಗಿ ಹಣ ಬಿಡುಗಡೆಯಾಗುತ್ತಿದ್ದರೂ ನಿರ್ವಹಣೆ ಕೊರತೆ ಕಾಡುತ್ತಿದೆ.

ಕೆಂಭಾವಿ ಹಾಗೂ ಮಾಲಗತ್ತಿ ಕೆಬಿಜೆಎನ್‍ಎಲ್ ಕಚೇರಿ ವ್ಯಾಪ್ತಿಯಲ್ಲಿ ಮಾತ್ರ ಸೂಕ್ತ ನಿರ್ವಹಣೆಯಿಲ್ಲದೆ ಉಪಕಾಲುವೆಗಳು ಮುಳ್ಳು ಕಂಟಿಗಳಿಂದ ಆವರಿಸಿಕೊಂಡಿವೆ. ಲ್ಯಾಟ್ರಲ್‍ಗಳಲ್ಲಿ ಕಸ ಕಡ್ಡಿ ತುಂಬಿದ್ದರೂ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ರೈತರು ಆರೋಪಿಸುತ್ತಾರೆ.

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆಗಳು ಹೂಳು ತುಂಬಿ ಕಾಣದ ಸ್ಥಿತಿಯಾಗಿವೆ. ಕೆಲ ಚಿಕ್ಕ ಕಾಲುವೆಗಳು ಮೂಲಕ ರೈತರಿಗೆ ನೀರು ತಲುಪದಂಥ ಸ್ಥಿತಿ ನಿರ್ಮಾಣಗೊಂಡಿದೆ. ಈ ಬಗ್ಗೆ ಪ್ರತಿ ವರ್ಷ ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ’ ಎನ್ನುತ್ತಾರೆ ರೈತ ರಾಮನಗೌಡ ಪಾಟೀಲ.

ನೀರಾವರಿ ಇಲಾಖೆಯ ನಿಗಮದ ಅಧಿಕಾರಿಗಳು ರೈತರನ್ನು ಒಳಗೊಂಡ ಸಂಘಗಳನ್ನು ಕಾಲುವೆಯ ನಿರ್ವಹಣೆ ಸಂಘಗಳ ವ್ಯಾಪ್ತಿಗೆ ನೀಡುತ್ತಾರೆ. ಆದರೆ, ಸಂಘಗಳು ಪ್ರತಿವರ್ಷ ರೈತರಿಂದ ನಿರ್ವಹಣೆಗೆ ದೇಣಿಗೆ ಪಡೆದರೂ ಹೂಳೆತ್ತುವ ಕಾರ್ಯ ನಡೆಯುವುದಿಲ್ಲ.

ಕಾಲುವೆಗಳಿಗೆ ನೀರು ಹರಿಬಿಡುವ ಮುನ್ನ ಅಧಿಕಾರಿಗಳು ಉಪಕಾಲುವೆ ಮತ್ತು ಲ್ಯಾಟ್ರಲ್‌ಗಳಲ್ಲಿನ ಹೂಳು ತೆಗೆಯಬೇಕು. ಕೊನೆಯ ಭಾಗದ ರೈತರಿಗೂ ನೀರು ತಲುಪುವಂತಾಗಬೇಕು ಎಂದು ರೈತರು ಒತ್ತಾಯಿಸುತ್ತಾರೆ.

ಕೊನೆಗಾಣದ ರೈತರ ಗೋಳು
ಸುರಪುರ:
ನಾರಾಯಣಪುರ ಜಲಾಶಯದಿಂದ ನೀರು ಬಿಡಲು ಆರಂಭಿಸಿದಾಗಿನಿಂದ ಇದುವರೆಗೂ ಕಾಲುವೆಯ ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪಿಲ್ಲ. ವಿತರಣಾ ಕಾಲುವೆ ಸಂಖ್ಯೆ 6ರ ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ ಪೇಠಅಮ್ಮಾಪುರ, ತಳವಾರಗೇರಾ, ಕುಂಬಾರಪೇಟ, ಕವಡಿಮಟ್ಟಿ, ಮುಷ್ಠಳ್ಳಿ, ಶೆಳ್ಳಗಿ, ರುಕ್ಮಾಪುರ, ಕುಪಗಲ್, ಕರ್ನಾಳ, ಚೌಡೇಶ್ವರಿಹಾಳ, ಅಡ್ಡೊಡಗಿ, ಹೆಮ್ಮಡಗಿ, ಸುಗೂರ, ಚಂದಲಾಪುರ, ಬೇವಿನಾಳ ಗ್ರಾಮಗಳ ರೈತರು ನೀರಿನಿಂದ ವಂಚಿತರಾಗಿದ್ದಾರೆ.

ಶಹಾಪುರ ತಾಲ್ಲೂಕಿನ ವನದುರ್ಗದಿಂದ ಸುರಪುರ ತಾಲ್ಲೂಕಿನ ಸುಗೂರವರೆಗೆ ವಿತರಣಾ ಕಾಲುವೆ ಸಂಖ್ಯೆ 6, 35 ಕಿ.ಮೀ ಉದ್ದವಿದೆ. ಇದರ ನಿರ್ವಹಣೆಗೆ 3 ಉಪವಿಭಾಗಗಳು ಬರುತ್ತವೆ. ಶೆಳ್ಳಗಿಯಿಂದ ಸೂಗೂರವರೆಗಿನ ನಿರ್ವಹಣೆಯ ಜವಾಬ್ದಾರಿ ಹಸನಾಪುರದಲ್ಲಿರುವ ಉಪವಿಭಾಗ ಸಂಖ್ಯೆ 6ಕ್ಕೆ ಬರುತ್ತದೆ.

ಇನ್ನೇನು ಮುಂಗಾರು ಹಂಗಾಮಿಗೆ ನೀರು ಹರಿಸುವ ಚಿಂತನೆ ನಡೆದಿದೆ. ಇದಕ್ಕೆ ಮುಂಚಿತವಾಗಿ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ನಿರ್ವಹಣೆ ಮಾಡುವುದು ಆಯಾ ಕಚೇರಿಗಳ ಜವಾಬ್ದಾರಿ. ಆದರೆ, ಮೇಲ್ಕಂಡ ಗ್ರಾಮಗಳಲ್ಲಿ ಹಾದುಹೋಗುವ ಕಾಲುವೆಯಲ್ಲಿ ಹೂಳನ್ನು ಸಮರ್ಪಕವಾಗಿ ತೆಗೆದಿಲ್ಲ. ಈಗ ವಿದ್ಯುತ್ ಚಾಲಿತ ಗೇಟ್‍ಗಳ ಅಳವಡಿಕೆ ಕಾರ್ಯ ನಡೆದಿದೆ. ಈ ಕಾಲುವೆಗೆ 30 ಗೇಟ್‍ಗಳು ಬೇಕು. ಆದರೆ, ಅಲ್ಲೊಂದು ಇಲ್ಲೊಂದು ಗೇಟ್ ಅಳವಡಿಸಲಾಗಿದೆ ಎಂದು ಆರೋಪಿಸುತ್ತಾರೆ ರೈತರು.

ವಾರ್ಷಿಕ ದುರಸ್ತಿ ಕಾಮಗಾರಿಗಳಿಗೆ ಭಾರಿ ಸ್ಪರ್ಧೆ
ಹುಣಸಗಿ:
ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಳಹರಿವು ಆರಂಭವಾಗಿದ್ದು, ರೈತರಲ್ಲಿ ನೆಮ್ಮದಿಯ ಛಾಯೆ ಮೂಡಿದೆ. ಆದರೆ, ಕಾಲುವೆ ಕೊನೆ ಭಾಗದ ರೈತರಿಗೆ ಈ ಬಾರಿಯಾದ ನೀರು ಸಿಗುವುದು ಎಂಬ ಆಶಾಭಾವ ಹೊಂದಿದ್ದಾರೆ.

ವಾರ್ಷಿಕ ದುರಸ್ತಿ ಕಾಮಗಾಗಿಗಳಿಗೆ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಆದರೆ, ನಿರೀಕ್ಷಿತ ಕೆಲಸವಾಗುತ್ತಿಲ್ಲ ಎಂಬ ಆರೋಪಗಳು ಸಹ ಇವೆ. ಕಳೆದ ಕೆಲ ವರ್ಷಗಳ ಹಿಂದೆ ನೀರಿನ ತೊಂದರೆ ಅಧಿಕವಾಗಿತ್ತು. ಆದರೆ, ಮುಖ್ಯ ಕಾಲುವೆ ಸೇರಿದಂತೆ ವಿತರಣಾ ಕಾಲುವೆಗಳ ನವೀಕರಣದಿಂದ ನೀರು ಸಾಧ್ಯವಾದಷ್ಟು ಸಾರಾಗವಾಗಿ ಹೊಲಗಳಿಗೆ ತಲುಪುತ್ತಿದೆ.

ಕಾಲುವೆಯಲ್ಲಿನ ಹೂಳು ತೆರವು ಮತ್ತು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಕ್ಲೋಜರ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಆದರೆ, ಪ್ರತಿ ವರ್ಷ ನಿರೀಕ್ಷಿತ ಮಟ್ಟದಲ್ಲಿ ಕೆಲಸವಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಳೆದ ವರ್ಷ ಕ್ಲೋಜರ್ ಹೆಸರಿನಲ್ಲಿ ಹಮ್ಮಿಕೊಂಡಿದ್ದ ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದ ಕಾರಣ ಮಾದಿಗ ಯುವ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಗರಟಗಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಈಗಾಗಲೇ ಸುಮಾರು ₹ 2.5 ಕೋಟಿ ವೆಚ್ಚದಲ್ಲಿ 100ಕ್ಕೂ ಕಾಮಗಾರಿಗೆ 26 ಪ್ಯಾಕೇಜ್‌ನಲ್ಲಿ ಟೆಂಡರ್ ಕರೆಯಲಾಗಿದ್ದು, ಬಹುತೇಕ ಶೇ 30 ರಿಂದ 50 ರಷ್ಟು ಬಿಲ್ಲ್‌ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

‘ರಸ್ತೆ, ಕಾಲುವೆ ದುರಸ್ತಿ ಮತ್ತು ನಿರ್ವಹಣೆ ಹೇಗೆ ಮಾಡುತ್ತಾರೆ ಎನ್ನುವ ಪ್ರಶ್ನೆ ಎದ್ದಿದೆ’ ಎಂದು ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಲದ ಅಧ್ಯಕ್ಷ ರಂಗಪ್ಪ ಡಂಗಿ ಹೇಳುತ್ತಾರೆ.

ಕಾಲುವೆಗಳಿಗೆ ಸಾರಾಗವಾಗಿ ನೀರು ಹರಿಯುವ ಮೂಲಕ ರೈತರಿಗೆ ನೀರು ತಲುಪಿಸುವ ಕಾರ್ಯಕ್ಕೆ ಅಧಿಕಾರಿಗಳು ಸದಾ ಮುಂದಾಗಲಿ ಎಂದು ಕಲ್ಲದೇವನಹಳ್ಳಿ ಗ್ರಾಮದ ರೈತ ಸಿದ್ದಲಿಂಗಯ್ಯ ಹಿರೇಮಠ ಮತ್ತು ವಿಶ್ವನಾಥ ಮಾರನಾಳ ಹೇಳುತ್ತಾರೆ.

ನಿರ್ವಹಣೆ ಇಲ್ಲದ ಕಾಲುವೆಗಳು
ವಡಗೇರಾ:
ನಾರಾಯಣಪುರ ಜಲಾಶಯದಿಂದ ಕಾಲುವೆ ನಿರ್ಮಿಸಿದರೂ ನಮ್ಮ ಭಾಗಕ್ಕೆ ನೀರು ಪೂರೈಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ.

ವಡಗೇರಾ ತಾಲ್ಲೂಕಿನ 30‌ಕ್ಕೂ ಹೆಚ್ಚು ಗ್ರಾಮದ ರೈತರಿಗೆ ಕಾಲುವೆ ನಿರ್ವಹಣೆ ಇಲ್ಲದೆ ನೀರು ಸಿಗುತ್ತಿಲ್ಲ. ಕಾಲುವೆಗಳಲ್ಲಿ ಹೂಳು, ಗಿಡಗಂಟಿ, ಹುಲ್ಲು ಬೆಳೆದಿವೆ. ಇದರಿಂದ ಈ ಭಾಗದ ರೈತರಿಗೆ ನೀರೇ ಮುಟ್ಟುವುದಿಲ್ಲ. ಕಾಲುವೆಗಳು ಒಡೆದು ಹೋಗಿವೆ. ಅವುಗಳನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪವಿದೆ.

ಭೀಮಾ ಫ್ಲ್ಯಾಂಕ್ ಯೋಜನೆಯು ನೆನಗುದಿಗೆ ಬಿದ್ದು, ಎರಡು ವರ್ಷಗಳಾದರೂ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ರೈತರು ಹೇಳುತ್ತಾರೆ.

ತರಾತುರಿಯಲ್ಲಿ ಕೆಲಸ ನಿರ್ವಹಣೆ
ಶಹಾಪುರ:
ಮಾರ್ಚ್ ಮೊದಲ ಕೊನೆ ವಾರದಲ್ಲಿ ನೀರು ಪೂರೈಕೆ ಸ್ಥಗಿತಗೊಂಡ ಬಳಿಕ ಕ್ಲೋಜರ್ ಅವಧಿಯಲ್ಲಿ 3 ತಿಂಗಳಲ್ಲಿ ಕಾಲುವೆ ದುರಸ್ತಿಗೊಳಿಸಿ ನೀರು ಬಿಡುಗಡೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಇಲ್ಲಿ ಎಲ್ಲವೂ ಉಲ್ಟಾಪಲ್ಟಾ. ಜೂನ್ ತಿಂಗಳಲ್ಲಿ ತರಾತುರಿಯಲ್ಲಿ ಕೆಲಸ ನಿರ್ವಹಿಸಿ ಹಣ ದುರ್ಬಳಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದ ಕಾಲುವೆ ಜಾಲದ ಕೆಳಭಾಗದ ರೈತರಿಗೆ ನೀರು ಹರಿಸುವುದು ಮರೀಚಿಕೆಯಾಗಿದೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ವಿಚಿತ್ರ ಧೋರಣೆ ಇದೆ. ಮುಂಗಾರು ಹಾಗೂ ಬೇಸಿಗೆ ಎರಡು ಬೆಳೆಯನ್ನು ಬೆಳೆದರೂ ನಯಾ ಪೈಸೆ ನೀರಿನ ಕರ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕೋಟ್ಯಂತರ ರೂಪಾಯಿ ನೀರಾವರಿ ಕರ ಬಾಕಿ ಉಳಿದಿದೆ. ರೈತರು ಸರ್ಕಾರದ ಕಡೆ ಮುಖ ಮಾಡುವುದನ್ನು ನಿಲ್ಲಿಸಿ ತಮ್ಮ ಜಮೀನುಗಳ ಕಾಲುವೆ ವ್ಯಾಪ್ತಿಯ ರೈತರು ಜತೆಗೂಡಿ ಶ್ರಮದಾನದ ಮೂಲಕ ದುರಸ್ತಿ ಮಾಡಿಕೊಂಡರೆ ಸಮಸ್ಯೆ ಉದ್ಭವಿಸದು.

‘ರೈತರನ್ನು ಒಳಗೊಂಡ ನೀರು ಬಳಕೆದಾರರ ಸಹಕಾರ ಸಂಘ ಜಾಗೃತಗೊಳ್ಳಬೇಕಾಗಿದೆ’ ಎನ್ನುತ್ತಾರೆ ನೀರಾವರಿ ಸಲಹಾ ಸಮಿತಿಯ ಮಾಜಿ ಸದಸ್ಯ ಭಾಸ್ಕರರಾವ ಮುಡಬೂಳ.

‘ನೀರು ಬಳಕೆದಾರರ ಸಂಘಗಳು ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರಿಂದ ನೀರಾವರಿ ತೆರಿಗೆ ಸಂಗ್ರಹಿಸಿ ಆದರಿಂದ ಬಂದ ಹಣವನ್ನು ಕಾಲುವೆ ದುರಸ್ತಿ ಹಾಗೂ ಸಣ್ಣಪುಟ್ಟ ಕೆಲಸ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಈ ನಿಟ್ಟಿನಲ್ಲೂ ಸಂಘಗಳು ಆಲೋಚಿಸಬೇಕು’ ಎಂದು ಅವರು ಹೇಳುತ್ತಾರೆ.

***

ನಾಯ್ಕಲ್‌–ಕುರಕುಂದಿ ಸೀಮೆಯಲ್ಲಿ ಒಂದು ಕಡೆ ಕಾಲುವೆ ಆಗಲ, ಮತ್ತೊಂದು ಕಡೆ ಸಣ್ಣದಿದೆ. ಮಳೆ ಬಂದರೆ ಬೆಳೆ, ಇಲ್ಲದಿದ್ದರೆ ಇಲ್ಲ. ಕಾಲುವೆ ನಂಬಿಕೊಂಡು ಬೆಳೆ ಬೆಳೆಯಲು ಆಗುತ್ತಿಲ್ಲ.
-ಶೌಕತ್ ಮೌಲ ಸಾಬ್, ಕುರಕುಂದಿ ರೈತ

***

ನಾಯ್ಕಲ್‌– ಮಳ್ಳಿಳ್ಳಿ ಸೀಮೆಯಲ್ಲಿರುವ ಕಾಲುವೆ ಅಲ್ಲಲ್ಲಿ ಮಾತ್ರ ಹೂಳೆತ್ತಲಾಗಿದೆ. ಉಳಿದ ಕಡೆ ಕಸ ಕಡ್ಡಿ, ಗಿಡ ಮರಗಳು ಬೆಳೆದಿವೆ. ಅಧಿಕಾರಿಗಳು ಇತ್ತ ಗಮನಹರಿಸಿ ನಮ್ಮ ಭಾಗಕ್ಕೆ ನೀರು ಹರಿಸಬೇಕು.
-ನಿಂಗಪ್ಪ ಹೊಸಮನಿ, ಕುರಕುಂದಿ ರೈತ

***

ಮೇಲಿನವರ ಹೊಟ್ಟೆ ತುಂಬಿದರೆ ನಮಗೆ ನೀರು ಸಿಗುತ್ತವೆ. ಇಲ್ಲದಿದ್ದರೆ‌ ಇಲ್ಲ. ಮಳೆಗಾಲದಲ್ಲಿ ನೀರು ಜಾಸ್ತಿ ಬಿಟ್ಟರೆ ಮಾತ್ರ ನಮಗೆ ನೀರು ಬರುತ್ತದೆ. ಕಾಲುವೆ ಹೂಳು ಸ್ವಲ್ಪ ತೆಗೆಯಲಾಗಿದೆ. ಉಳಿದ ಕಡೆ ಹಾಗೆಯೇ ಬಿಡಲಾಗಿದೆ.
-ಬಸಪ್ಪ ಮಡ್ಡಿ, ಕುರಕುಂದಿ ರೈತ

***

ಈ ಭಾಗದ ಕಾಲುವೆಗಳು ನಿರ್ವಹಣೆ ಇಲ್ಲದೆ ನೀರು ಪೂರೈಕೆ ಆಗುತ್ತಿಲ್ಲ. ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಕಾಲುವೆಗಳನ್ನು ವೀಕ್ಷಣೆ ಮಾಡಿ ಅವುಗಳನ್ನು ಸರಿಪಡಿಬೇಕು. ಆಗ ಮಾತ್ರ ನಮಗೆ ನೀರು ಬರುತ್ತವೆ.
-ಬಸವರಾಜಪ್ಪಗೌಡ ಮಾಚನೂರು, ವಡಗೇರಾ ರೈತ ಮುಖಂಡ

***

ವಿತರಣಾ ಕಾಲುವೆ ಸಂಖ್ಯೆ 6ನ್ನು ನಿರ್ವಹಣೆ ಮಾಡುವ ಹಸನಾಪುರದ ಉಪವಿಭಾಗ ಸಂಖ್ಯೆ 6ನ್ನು ಹುಣಸಗಿ ಸ್ಥಳಾಂತರಿಸುವ ಬಗ್ಗೆ ಸುದ್ದಿ ಇದೆ. ಇದನ್ನು ಕೈ ಬಿಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು.
-ಅಯ್ಯಣ್ಣ ಜಂಬಲದಿನ್ನಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರಪುರ

***

ಕಾಲುವೆ ಕೊನೆ ಭಾಗದ ಗ್ರಾಮಗಳಲ್ಲಿರುವ ನೀರು ಬಳಕೆದಾರರ ಸಹಕಾರ ಸಂಘಗಳಿಂದ ಕರ ವಸೂಲಿಯಾಗದಿರುವುದರಿಂದ ಸಮಸ್ಯೆಯಾಗುತ್ತಿದೆ.
-ಹಣಮಂತ ದೊಡ್ಡಮನಿ, ಕಾರ್ಯದರ್ಶಿ ನೀರು ಬಳಕೆದಾರರ ಸಹಕಾರ ಸಂಘ, ಕವಡಿಮಟ್ಟಿ

______________________
ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಪವನ ಕುಲಕರ್ಣಿ, ದೇವಿಂದ್ರಪ್ಪ ಬಿ ಕ್ಯಾತನಾಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು