ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಜನ್‍ಧನ್ ಖಾತೆಗೆ ಸಹಾಯಧನ: ₹ 500 ಪಡೆಯಲು ಸಾಲುಗಟ್ಟಿ ನಿಂತ ಮಹಿಳೆಯರು

ಜಿಲ್ಲೆಯಲ್ಲಿವೆ 1.50 ಲಕ್ಷಕ್ಕೂ ಹೆಚ್ಚು ಜನಧನ್‌ ಮಹಿಳಾ ಖಾತೆಗಳು
Last Updated 18 ಏಪ್ರಿಲ್ 2020, 2:37 IST
ಅಕ್ಷರ ಗಾತ್ರ

ಯಾದಗಿರಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಜನ್‍ಧನ್ ಖಾತೆ ಹೊಂದಿರುವ ಮಹಿಳಾ ಖಾತೆದಾರರಿಗೆ ಮುಂದಿನ 3 ತಿಂಗಳವರೆಗೆ ₹500 ಸಹಾಯ ಧನ ಜಮಾ ಮಾಡಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ 1.50 ಲಕ್ಷಕ್ಕೂ ಹೆಚ್ಚು ಮಹಿಳಾ ಜನಧನ್‌ ಖಾತೆಗಳು ಇವೆ.

ಕೋವಿಡ್-19 ದೇಶವ್ಯಾಪಿ ಹರಡುತ್ತಿರುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಮಾಡಿದ ಕಾರಣ ಮಾರ್ಚ್ 26ರಂದು ಕೇಂದ್ರ ಸರ್ಕಾರವು ಘೋಷಿಸಿರುವಂತೆ ಜನ್‌ಧನ್‌ ಮಹಿಳಾ ಖಾತೆದಾರರರಿಗೆ ಮೂರು ತಿಂಗಳವರೆಗೆ ₹500 ಜಮೆ ಮಾಡಲಾಗುತ್ತಿದೆ.

0 ಅಥವಾ 1 ಕೊನೆಯ ಸಂಖ್ಯೆಯನ್ನು ಹೊಂದಿರುವ ಖಾತೆದಾರರು ಏಪ್ರಿಲ್ 3ರಂದು, 2 ಅಥವಾ 3 ಕೊನೆಯ ಸಂಖ್ಯೆಯ ಖಾತೆದಾರರು ಏಪ್ರಿಲ್ 4ರಂದು, 4 ಅಥವಾ 5 ಕೊನೆಯ ಸಂಖ್ಯೆಯ ಖಾತೆದಾರರು ಏಪ್ರಿಲ್ 7ರಂದು, 6 ಅಥವಾ 7 ಕೊನೆಯ ಸಂಖ್ಯೆಯ ಖಾತೆದಾರರು ಏಪ್ರಿಲ್ 8ರಂದು, 8 ಅಥವಾ 9 ಕೊನೆಯ ಸಂಖ್ಯೆಯನ್ನು ಹೊಂದಿರುವ ಖಾತೆದಾರರು ಏಪ್ರಿಲ್ 9ರಂದು ಹಣ ಪಡೆದಿದ್ದಾರೆ. ಇದಾದ ನಂತರವೂ ನಿಗದಿತ ದಿನಗಳಲ್ಲಿ ಅರ್ಹ ಖಾತೆದಾರರು ಹಣ ಪಡೆಯಬಹುದು.

ಕೆಲ ಬ್ಯಾಂಕುಗಳಲ್ಲಿ ಮಹಿಳೆಯರು ಅಂತರ ಕಾಯ್ದುಕೊಳ್ಳದೇ ಸಾಲಿನಲ್ಲಿ ನಿಂತಿದ್ದರೆ, ಇನ್ನು ಕೆಲ ಕಡೆ ಮಹಿಳೆಯರು ಅಂತರ ಕಾಯ್ದುಕೊಂಡು ಹಣ ಪಡೆಯುತ್ತಿದ್ದಾರೆ. 2011ರ ಜನಗಣತಿ ಪ್ರಕಾರ, ಜಿಲ್ಲೆಯಲ್ಲಿ 11.7ಲಕ್ಷ ಜನರಿದ್ದಾರೆ. ಈಗ ಜನಸಂಖ್ಯೆ ಹೆಚ್ಚಳವಾಗಿದೆ. 2014ರಲ್ಲಿ ಪ್ರಧಾನಿಯವರು ಜನ್‌ಧನ್‌ ಉಚಿತ ಖಾತೆ ಘೋಷಣೆ ಮಾಡಿದ್ದರಿಂದ ಶೇ 90ರಷ್ಟು ಮಂದಿ ಖಾತೆ ಹೊಂದಿರುವುದು ಕಂಡು ಬರುತ್ತಿದೆ.

ಜಿಲ್ಲೆಯಲ್ಲಿರುವ ಬ್ಯಾಂಕ್‌ಗಳ ವಿವರ:ಭಾರತೀಯ ಸ್ಟೇಟ್‌ ಬ್ಯಾಂಕ್‌–22, ಕೆನರಾಬ್ಯಾಂಕ್‌–7, ಸಿಂಡಿಕೇಟ್‌ ಬ್ಯಾಂಕ್–10, ವಿಜಯಾ ಬ್ಯಾಂಕ್‌–3, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ–2, ಇಂಡಿಯನ್‌ ಬ್ಯಾಂಕ್‌–2, ಬ್ಯಾಂಕ್‌ ಆಫ್‌ ಬರೋಡಾ–1, ಕಾರ್ಪೋರೇಶನ್‌ ಬ್ಯಾಂಕ್‌–2, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ–1, ಯುನಿಯನ್‌ ಬ್ಯಾಂಕ್‌–4, ಆಂಧ್ರ ಬ್ಯಾಂಕ್‌–1, ಬ್ಯಾಂಕ್‌ ಆಫ್‌ ಇಂಡಿಯಾ–1, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌–1, ಕರ್ನಾಟಕ ಬ್ಯಾಂಕ್‌–7, ಐಡಿಬಿಐ–1, ಏಕ್ಸಿಸ್‌–2, ಐಸಿಐಸಿಐ–2, ಎಚ್‌ಡಿಎಫ್‌ಸಿ–2, ಯೆಸ್‌ ಬ್ಯಾಂಕ್‌–3, ಲಕ್ಷ್ಮಿ ವಿಲಾಸ ಬ್ಯಾಂಕ್–1, ತಮಿಳುನಾಡ ಎಂ ಬ್ಯಾಂಕ್‌ –1, ಕೆಬಿಎಸ್‌ ಬ್ಯಾಂಕ್‌–2, ಜಿಡಿಸಿಸಿ–3, ಪಿಕಾರ್ಡ್‌–3, ಸುಕೋ ಬ್ಯಾಂಕ್‌–2 ಸೇರಿ ಜಿಲ್ಲೆಯಲ್ಲಿ 123 ಬ್ಯಾಂಕುಗಳಿವೆ.

‘ಬ್ಯಾಂಕ್‌ ಕಾರ್ಯ ನಿರ್ವಹಣೆಯನ್ನು ತುರ್ತು ಸೇವೆ ಎಂದು ಸರ್ಕಾರ ಪರಿಗಣಿಸಿದೆ. ಹೀಗಾಗಿ ರಜೆ ದಿನ ಹೊರತುಪಡಿಸಿ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಹಣ ಜಮೆ ಮಾಡುವುದು, ಹಣ ಹಿಂಪಡೆಯುವುದು, ಚೆಕ್‌ ಕ್ಲಿಯರೆನ್ಸ್‌, ಆರ್‌ಟಿಜಿಎಸ್‌, ನೆಫ್ಟ್‌ ಮಾಡುವುದನ್ನು ಬ್ಯಾಂಕ್‌ಗಳು ಮಾಡುತ್ತಿವೆ’ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಬಿ.ಎ.ಕೃಷ್ಣಾ ಹೇಳುತ್ತಾರೆ.

‘ಒಂದು ಶಾಖೆಯಲ್ಲಿ ದಿನಕ್ಕೆ 300 ಜನ್‌ಧನ್‌ ಖಾತೆಗಳಲ್ಲಿ ಹಣ ಪಡೆದುಕೊಳ್ಳಲು (ವಿತ್‌ಡ್ರಾವೆಲ್‌) ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಶೇ 90ರಷ್ಟು ಮಂದಿ ಬ್ಯಾಂಕ್‌ ಖಾತೆ ಹೊಂದಿದ್ದಾರೆ. ಜನ್‌ಧನ್‌ ಖಾತೆಯೂ ಮಹಿಳೆಯರಲ್ಲದೆ ಪುರುಷರು, ವಿದ್ಯಾರ್ಥಿಗಳು ಹೊಂದಿದ್ದಾರೆ. ಅಲ್ಲದೆ ಎಟಿಎಂಗಳು ನೀಡಿರುವುದರಿಂದ ಸಮಸ್ಯೆ ಹೆಚ್ಚು ಕಂಡು ಬರುವುದಿಲ್ಲ’ ಎನ್ನುತ್ತಾರೆ ಅವರು.

ಎಸ್‌ಬಿಐಗೆ ₹ 83 ಸಾವಿರ, ಗ್ರಾಮೀಣ ಬ್ಯಾಂಕ್‌ಗೆ ₹ 35 ಸಾವಿರ, ಇನ್ನುಳಿದ ಬ್ಯಾಂಕ್‌ಗಳು ₹ 30 ಸಾವಿರ ಸೇರಿದಂತೆ 1.50 ಲಕ್ಷ ಜನ್‌ಧನ್‌ ಖಾತೆಗಳಿಗೆ ಹಣ ಜಮೆಯಾಗಿದೆ. ಜಮೆ ಆಗದೆ ಇದ್ದವರು ನೇರವಾಗಿ ಬ್ಯಾಂಕ್‌ಗೆ ಬಂದು ವಿಚಾರಿಸಬಹುದುಬಿ.ಎ.ಕೃಷ್ಣಾ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT