ಗುರುವಾರ , ಆಗಸ್ಟ್ 5, 2021
22 °C
ಕೇಂದ್ರ ಕಾರ್ಮಿಕ ಸಂಘಟನೆಗಳ ದೇಶವ್ಯಾಪಿ ಪ್ರತಿಭಟನೆ

ಯಾದಗಿರಿ | ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ದುಡಿಯುವ ಜನರ ಹಕ್ಕುಗಳ ಸಂರಕ್ಷಣೆ, ಜನತೆಯ ಪರಿಹಾರಕ್ಕಾಗಿ’ ದೇಶವ್ಯಾಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ರಾಮಲಿಂಗಪ್ಪ ಮಾತನಾಡಿ, ‘ಕೋವಿಡ್-19 ಸಾಂಕ್ರಾಮಿಕ ರೋಗವು ದೇಶದ ಜನತೆಯನ್ನು ಬಾಧಿಸುತ್ತಿದೆ. ಇದರಿಂದ ದುಡಿಯುವ ಜನರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಕೋವಿಡ್ ನಿಯಂತ್ರಿಸಿ ಜನರನ್ನು ಸಂರಕ್ಷಿಸಬೇಕಾದ ಕೇಂದ್ರ -ರಾಜ್ಯ ಸರ್ಕಾರಗಳು ಕೈಚೆಲ್ಲಿ ಕೂತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಪ್ರಕಟಿಸಿದ ₹20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಹಿಂದಿನ ಬಜೆಟ್‍ನ ಘೋಷಣೆಗಳೇ ಹೊರತು ಬೇರೇನೂ ಅಲ್ಲ. ಅದು ನೀಡಿದ್ದು ಜಿಡಿಪಿಯ ಶೇ.1 ರಷ್ಟು ಮಾತ್ರ. ಜಗತ್ತಿನ ಅನೇಕ ದೇಶಗಳ ಸರ್ಕಾರಗಳು ಪ್ರಕಟಿಸಿದ ಪರಿಹಾರ ಪ್ಯಾಕೇಜ್‍ನಲ್ಲಿ ಕಾರ್ಮಿಕರಿಗೆ ವೇತನ ಪ್ಯಾಕೇಜ್‌ ನೀಡಿವೆ. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಕ್ಕೂ ಆರು ತಿಂಗಳವರೆಗೆ ಮಾಸಿಕ ₹ 7,500 ನೇರ ನಗದು ವರ್ಗಾವಣೆ ಮತ್ತು ಸಾರ್ವತ್ರಿಕವಾಗಿ ಮಾಸಿಕ ತಲಾ 10 ಕೆ.ಜಿ ಪಡಿತರ ನೀಡಬೇಕು’ ಎಂದು ಆಗ್ರಹಿಸಿದರು.

ನಂತರ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಐಯುಟಿಯುಸಿ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ ನೇತೃತ್ವ ವಹಿಸಿದ್ದರು. ಶರಣಪ್ಪ, ತಾಜುದ್ದೀನ್, ಸಿದ್ದಪ್ಪ, ಭೀಮಾಶಂಕರ್, ಶ್ರೀಕಾಂತ, ಸಂಗಮ್ಮ, ರೇಣುಕಾ, ಲಕ್ಷ್ಮಿಬಾಯಿ, ಮಹಾದೇವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.