ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲಾ ಕೇಂದ್ರಕ್ಕೆ ಬೇಕಿದೆ ಅಭಿವೃದ್ಧಿಯ ಅಭಯ

ಮೊದಲ ಬಾರಿ ಶಾಸಕರಾದ ತುನ್ನೂರು ಮೇಲಿದೆ ಶಾಶ್ವತ ಪರಿಹಾರ ಒದಗಿಸುವ ಸವಾಲು
Published 27 ಮೇ 2023, 23:43 IST
Last Updated 27 ಮೇ 2023, 23:43 IST
ಅಕ್ಷರ ಗಾತ್ರ

ಬಿ.ಜಿ.ಪ್ರವೀಣಕುಮಾರ

ಯಾದಗಿರಿ: ಜಿಲ್ಲಾ ಕೇಂದ್ರವಾಗಿರುವ ಯಾದಗಿರಿ ಮತಕ್ಷೇತ್ರ ಯಾದಗಿರಿ, ಶಹಾಪುರ ತಾಲ್ಲೂಕಿನ ಕೆಲ ಗ್ರಾಮಗಳು, ವಡಗೇರಾ ತಾಲ್ಲೂಕಿನ ಎಲ್ಲ ಗ್ರಾಮಗಳನ್ನು ಒಳಗೊಂಡಿದೆ. 

ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಚನ್ನಾರೆಡ್ಡಿ ಪಾಟೀಲ ತುನ್ನೂರು ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಈಗಾಗಲೇ ವಿಧಾನ ಪರಿಷತ್‌ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

ಜಿಲ್ಲಾ ಕೇಂದ್ರವಾಗಿದ್ದರೂ ಯಾದಗಿರಿ ಮತಕ್ಷೇತ್ರವೂ ಆರ್ಥಿಕ ವಿಷಯದಲ್ಲಿ ಶಹಾಪುರ, ಸುರಪುರಕ್ಕಿಂತ ಹಿಂದೆ ಇದೆ. ಹಲವಾರು ವರ್ಷಗಳಿಂದ ಕಾಮಗಾರಿಗಳು ನೆನಗುದಿಗೆ ಬಿದ್ದಿದೆ. ಶೈಕ್ಷಣಿಕ ವಿಷಯದಲ್ಲಿ ತೀರಾ ಹಿಂದುಳಿದಿದೆ. ಶಿಕ್ಷಕರ ಕೊರತೆ ಇದೆ.

ಜಿಲ್ಲೆಯಾಗಿ 12 ವರ್ಷ ಕಳೆದರೂ ಎಂಜಿನಿಯರಿಂಗ್‌ ಕಾಲೇಜು ಇಲ್ಲ. ಇತ್ತಿಚೆಗೆ ವೈದ್ಯಕೀಯ ಕಾಲೇಜು ಆರಂಭಗೊಂಡಿದೆ. ಆದರೆ, ಸರ್ಕಾರಿ ಡಿಪ್ಲೋಮಾ ಕಾಲೇಜು ಇಲ್ಲ. ಮೂಲಸೌಲಭ್ಯಗಳನ್ನಂತೂ ಕೇಳುವುದೇ ಬೇಡ. ಇಂದಿಗೂ ಬಡಾವಣೆಯ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ. ಅಲ್ಲದೇ ಮುಖ್ಯ ರಸ್ತೆಗಳಲ್ಲೂ ದೀಪಗಳು ಬೆಳಗುತ್ತಿಲ್ಲ.

ಕೆಲ ಬಡಾವಣೆಗಳಲ್ಲಿ ಇಂದಿಗೂ ಮಣ್ಣಿನ ರಸ್ತೆಗಳೇ ಇವೆ. ರೈಲ್ವೆ ಸ್ಟೇಷನ್‌ ರಸ್ತೆಯೂ ವಿದ್ಯಾಮಂಗಲ ಕಾರ್ಯಾಲಯದಿಂದ ಸಂಪೂರ್ಣ ಹದಗೆಟ್ಟಿದೆ. ಸ್ವಲ್ಪ ಮಳೆ ಬಂದರೂ ಸವಾರರು ಪರದಾಟ ಅಷ್ಟಿಷ್ಟಲ್ಲ. ಶಾಸಕರು ರಸ್ತೆಗಳ ಸುಧಾರಣೆಗೆ ಮೊದಲ ಆದ್ಯತೆ ನೀಡಬೇಕು. 

ಇನ್ನೇನು ಮುಂಗಾರು ಹಂಗಾಮು ಆರಂಭವಾಗುತ್ತದೆ. ಆದರೆ, ರಸಗೊಬ್ಬರ ಜಿಲ್ಲೆಗೆ ರೈಲು ಗೂಡ್ಸ್‌ ಮೂಲಕ ಆಮದಾಗುತ್ತದೆ. ಆದರೆ, ರೇಕ್‌ ಪಾಯಿಂಟ್‌ ಇಲ್ಲದ ಕಾರಣ ಪೂರ್ಣ ಪ್ರಮಾಣದಲ್ಲಿ ರಸಗೊಬ್ಬರ ಜಿಲ್ಲೆಗೆ ಬರುವುದಿಲ್ಲ. ರಾಯಚೂರು ಅಥವಾ ಕಲಬುರಗಿ ಮೂಲಕ ಲಾರಿಗಳಲ್ಲಿ ತರಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲೇ ರೇಕ್‌ ಪಾಯಿಂಟ್‌ ಇಲ್ಲದಂತಾಗಿದೆ.

ಪ್ರತಿನಿತ್ಯವೂ ಮತಕ್ಷೇತ್ರದ ವಿವಿಧ ತಾಲ್ಲೂಕು ಕೇಂದ್ರದಿಂದ ನೂರಾರು ಜನರು ಮಹಾನಗರಗಳಿಗೆ ಗುಳೆ ತೆರಳುವುದು ಸಾಮಾನ್ಯವಾಗಿದೆ. ಗುಳೆ ತಡೆಗಟ್ಟಲು ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಬೇಕು. ಆಶನಾಳ ಗ್ರಾಮ ಸಮೀಪ ಸಣ್ಣ ಕೈಗಾರಿಕೆಗಾಗಿ ಜಾಗ ಮೀಸಲಿಟ್ಟರೂ ಯಾವುದೇ ಪ್ರಯೋಜವಾಗಿಲ್ಲ.

ಜಿಲ್ಲಾ ಕೇಂದ್ರದಲ್ಲಿ ಭೀಮಾ ನದಿ ಹರಿಯುತ್ತಿದ್ದರೂ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಹೊಸ ಜಾಕ್‌ವೆಕ್‌ ಶೀಘ್ರ ಉದ್ಘಾಟಿಸಿ ಜನರಿಗೆ ಪ್ರತಿ ದಿನವೂ ನೀರು ಪೂರೈಸಲು ಕ್ರಮ ವಹಿಸಬೇಕು.

ನಗರದ ಲುಂಬಿನಿ ವನ ಬಿಟ್ಟರೆ ಮತ್ತೊಂದು ಉಳಿದವು ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಒತ್ತುವರಿ ಮಾಡಿಕೊಳ್ಳಲಾಗಿದೆ.

ಮತಕ್ಷೇತ್ರದ ಶಹಾಪುರ ತಾಲ್ಲೂಕಿನ ಕೊಳ್ಳೂರು ಎಂ ಗ್ರಾಮದಲ್ಲಿ ಕೃಷ್ಣಾ ನದಿ ಪ್ರವಾಹ ಬಂದಾಗ ಮುಳುಗಡೆಯಾಗುವುದು ಸಾಮಾನ್ಯವಾಗಿದೆ. ಸೇತುವೆಯನ್ನು ಮೇಲೆತ್ತಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆಯಾಗಿದೆ.

ಕಳೆದ ಬಿಜೆಪಿ ಸರ್ಕಾರದಲ್ಲಿ ಎರಡು ಕಡೆ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗುತ್ತಿ. ಯಾದಗಿರಿ ತಾಲ್ಲೂಕಿನ ಠಾಣಗುಂದಿ, ವಡಗೇರಾ ತಾಲ್ಲೂಕಿನ ಗಡ್ಡೆಸೂಗುರು ಬಳಿ ಭೀಮಾ ನದಿಗೆ ಅಡ್ಡಲಾಗಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣ ಈ ಬಾರಿಯಾದರೂ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎನ್ನುವುದು ಮತಕ್ಷೇತ್ರದ ಜನತೆಯ ಒತ್ತಾಯವಾಗಿದೆ.

ವಡಗೇರಾ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಹರಿದರೂ ಇಂದಿಗೂ ಸಂಪೂರ್ಣ ನೀರಾವರಿಯಾಗಿಲ್ಲ. ಬಸವಸಾಗರ ಜಲಾಶಯದ ಕಾಲುವೆ ನೀರು ಕೊನೆ ಭಾಗಕ್ಕೆ ತಲುಪುವುದಿಲ್ಲ.

ವಡಗೇರಾ ತಾಲ್ಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ. ಇಲ್ಲಿಗೆ ಮಂಜೂರಾಗಿರುವ ಪಿಯು ಕಾಲೇಜುಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಪಿಯು ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಐಟಿಟಿ ಸೇರಿದಂತೆ ತಾಂತ್ರಿಕ ಕಾಲೇಜುಗಳನ್ನು ಇಲ್ಲಿ ಆರಂಭಿಸಬೇಕು.

ಈಗಾಗಲೇ ವಡಗೇರಾ ತಾಲ್ಲೂಕು ಕೇಂದ್ರವಾಗಿ ಕಾರ್ಯಾರಂಭವಾಗಿ ಐದು ವರ್ಷಗಳೆ ಕಳೆಯುತ್ತಾ ಬಂದರೂ ಇನ್ನೂವರೆಗೂ ತಾಲ್ಲೂಕು ಕಚೇರಿಗಳು ಆರಂಭವಾಗಿಲ್ಲ. ವಡಗೇರಾದಲ್ಲಿ ಕೇವಲ ಮೂರರಿಂದ ನಾಲ್ಕೂ ತಾಲ್ಲೂಕು ಕಚೇರಿಗಳು ಆರಂಭವಾಗಿವೆ. ಕಂದಾಯ ಇಲಾಖೆ ಕಚೇರಿಗಳು ಬಿಟ್ಟರೆ, ಅಗತ್ಯ ಬೇಕಾಗಿರುವ ಕಚೇರಿಗಳಿಗೆ ಆರಂಭದ ಕಾರ್ಯ ಇನ್ನೂ ಚುರುಕುಗೊಂಡಿಲ್ಲ.

ಭೀಮಾ ಫ್ಲ್ಯಾಂಕ್‌ ಯೋಜನೆ ಟೆಂಡರ್‌ ಹಂತದಲ್ಲಿದ್ದು, ಅದನ್ನು ಜಾರಿಗೆ ತರಬೇಕು. ಹಗಲು ರಾತ್ರಿಯನ್ನದೆ ಮರುಳು ಮಾಫಿಯಾದವರು ರಾಜಾರೋಷವಾಗಿ ಟಿಪ್ಪರ್‌ಗಳಲ್ಲಿ ಮಿತಿಮೀರಿದ ಮರಳುನ್ನು ಸಾಗಿಸುತ್ತಿರುವುದರಿಂದ ಜಿಲ್ಲಾ ಮುಖ್ಯ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ. ಇದಕ್ಕೆ ಪೊಲೀಸ್‌ ಇಲಾಖೆ ಸಹಕಾರದಿಂದ ತಡೆಗಟ್ಟಲು ಪ್ರಯತ್ನಿಸಬೇಕಿದೆ.

ಜಿಲ್ಲಾ ಕೇಂದ್ರವಾದರೂ ಯಾದಗಿರಿ ಮತಕ್ಷೇತ್ರವೂ ಇನ್ನೂ ಅಭಿವೃದ್ಧಿಯಾಗಿಲ್ಲ. ಹೊಸ ತಾಲ್ಲೂಕಾದ ವಡಗೇರಾವೂ ಎಲ್ಲ ವಿಷಯಗಳಲ್ಲಿ ಹಿಂದುಳಿದಿದೆ. ನೂತನ ಶಾಸಕರು ತಾರತ್ಯಮ ಮಾಡದೇ ನಗರ ಗ್ರಾಮಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿಕೊಡಬೇಕು.

- ಸುಧಾಕರ ಹೊಸಮನಿ ನಗರ ನಿವಾಸಿ

ನೂತನ ತಾಲ್ಲೂಕು ಕೇಂದ್ರ ಹೆಸರಿಗೆ ಮಾತ್ರ ಇದೆ. ಯಾವುದೇ ಸೌಲಭ್ಯಗಳಿಲ್ಲ. ಎರಡು ನದಿಗಳಿದ್ದರೂ ನೀರಾವರಿ ವಂಚಿತವಾಗಿದೆ. ಕೂಡಲೇ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕು.

- ಮಹಾಂತೇಶ ಪಾಟೀಲ ವಡಗೇರಾ ನಿವಾಸಿ

ಮಾಡಬೇಕಾದ ಕೆಲಸಗಳು *ಹೊಸ ತಾಲ್ಲೂಕು ಕೇಂದ್ರದಲ್ಲಿ ಎಲ್ಲ ಕಚೇರಿಗಳನ್ನು ಆರಂಭಿಸಬೇಕು *ಜಿಲ್ಲಾ ಕೇಂದ್ರದಲ್ಲಿ ರೇಕ್‌ ಪಾಯಿಂಟ್‌ ಸ್ಥಾಪಿಸಬೇಕು *ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ಒತ್ತು ನೀಡಬೇಕು *ಗುಳೆ ತಡೆಗೆ ಸ್ಥಳೀಯವಾಗಿ ಕಾರ್ಖಾನೆ ಸ್ಥಾಪಿಸಬೇಕು *ಪ್ರಾಗೈತಿಹಾಸಿಕ ತಾಣಗಳನ್ನು ಅಭಿವೃದ್ಧಿ ಪಡಿಸಬೇಕು*ವಡಗೇರಾದಲ್ಲಿ ಮಿನಿ ವಿಧಾನಸೌಧ ಆರಂಭಿಸಬೇಕು*ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಬೇಕು*ಗ್ರಾಮೀಣರಿಗಾಗಿ ಹಾಗೂ ವಿದ್ಯಾರ್ಥಿಗಳಿಗಾಗಿ ಸಾರಿಗೆ ಸೌಲಭ್ಯ ಕಲ್ಪಿಸಬೇಕು*ಎಪಿಎಂಸಿ ಹಾಗೂ ಉಪ ಮಾರುಕಟ್ಟೆ ಸ್ಥಾಪನೆಗೆ ಕ್ರಮವಹಿಸಬೇಕು*ಕಾಲುವೆ ಕೊನೆ ಭಾಗದ ರೈತರಿಗೆ ನೀರಿನ ಸೌಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT