ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ–ಬೆಳೆ ವಿಮೆ: ಇಳಿಕೆಯಾಗುತ್ತಿರುವ ಸಂಖ್ಯೆ

ವಿಮಾ ಮಾರ್ಗಸೂಚಿಗಳ ಗೊಂದಲ: ರೈತರಿಗೆ ಸಿಗುತ್ತಿಲ್ಲ ಸ್ಪಂದನೆ, ಸಮರ್ಪಕವಾಗಿ ಸಿಗದ ಪರಿಹಾರ
Last Updated 8 ಆಗಸ್ಟ್ 2021, 14:42 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆ ವಿಮೆ ಮಾಡಿಸುವವರ ಸಂಖ್ಯೆ ಇಳಿಕೆಯಾಗುತ್ತಿದ್ದು, ಅಂಕಿ ಅಂಶ ಗಳೇ ಇದನ್ನು ದೃಢೀಕರಿಸುತ್ತಿವೆ.

ಈ ಮೊದಲು ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕಿತ್ತು. ಈಗ ಐಚ್ಛಿಕ ಮಾಡಿದ್ದರಿಂದ ವಿಮೆ ಮಾಡಿಸಲು ರೈತರು ಮುಂದೆ ಬರುತ್ತಿಲ್ಲ. ಅಲ್ಲದೇ ಸಮರ್ಪಕ ಪರಿಹಾರ ಬರುವುದಿಲ್ಲ ಎಂಬ ಕಾರಣವನ್ನೂ ಬಹುಪಾಲು ರೈತರು ನೀಡುತ್ತಿದ್ದಾರೆ.

ಅಧಿಕ ಮಳೆ, ನೆರೆ, ಪ್ರವಾಹದಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ, ತೀವ್ರ ಬರಗಾಲ ಮುಂತಾದ ಸಂದರ್ಭಗಳಲ್ಲಿ ಬೆಳೆಹಾನಿ ಯಾದರೆ ರೈತರಿಗೆ ನೆರವಾಗಲು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ರೂಪಿಸಲಾಗಿದೆ.

ಬೆಳೆ ವಿಮೆಗೆ ಪರಿಹಾರ ನೀಡಲು ಹಿಂದಿನ ಏಳು ವರ್ಷಗಳ ಇಳುವರಿ ಯನ್ನು ಪರಿಗಣಿಸಲಾಗುತ್ತಿದೆ. ಅದರಲ್ಲಿ ಉತ್ತಮ ಐದು ವರ್ಷಗಳ ಸರಾಸರಿ ಇಳುವರಿ ಪರಿಗಣಿಸಿ ಪರಿಹಾರ ವಿತರಿಸ ಲಾಗುತ್ತಿದೆ. ಇದು ರೈತರಿಗೆ ತಲೆ ನೋವಾಗಿದೆ. ಒಂದು ವರ್ಷಕ್ಕಿಂತ ಇನ್ನೊಂದು ವರ್ಷ ಹೆಚ್ಚು ಕಡಿಮೆ ಇಳುವರಿ ಬಂದಿರುತ್ತದೆ. ಇದರಿಂದ ಪರಿಹಾರ ಸಿಗಲು ತೊಡಕಾಗುತ್ತಿದೆ.

ಪ್ರವಾಹದಿಂದ ಬೆಳೆ ಮುಳುಗಡೆ ಯಾದರೆ 72 ಗಂಟೆ ಒಳಗಡೆ ವಿಮಾ ಅಧಿಕಾರಿಗೆ ಮಾಹಿತಿ ನೀಡಬೇಕು. ಅಧಿಕಾರಿ ಜೊತೆಗೆ ಕೃಷಿ ಇಲಾಖೆ ಯವರು ಬಂದು ಪರಿಶೀಲಿಸಿ ದರೆ ಬೆಳೆ ಹಾಳಾಗಿದ್ದರೆ ಶೇ 25ರಷ್ಟನ್ನು ಪರಿಹಾರವಾಗಿ ನೀಡಬೇಕಾಗುತ್ತದೆ. ಆದರೆ, ಬಹುತೇಕ ರೈತರು ಮಾಹಿತಿ ನೀಡುವುದಿಲ್ಲ. ಇದರಿಂದ ಪರಿಹಾರವೂ ಬರುವುದಿಲ್ಲ.

ಅಲ್ಲದೆ ಬೆಳೆ ಕಟಾವು ಆಧಾರದ ಮೇಲೆ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಉಳಿದ ಹಣವನ್ನು ಕೊಡಬೇಕು. ಇದು ಹಿಂದಿನ ವರ್ಷಗಳ ಇಳುವರಿಯನ್ನು ಅವಲಂಬಿಸಿದೆ.

ಎಫ್‌ಐಆರ್‌, ಜಾಮೀನು: ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್‌ ಅವರಿಗೆ ನಿಂದಿಸಿದ ಆರೋಪದ ಮೇಲೆ ರೈತ ಮುಖಂಡ ಬಸಣ್ಣ ಬಂಗಿ ವಿರುದ್ಧ ಈಚೆಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸಣ್ಣ ಬಂಗಿ ಅವರು ಸಮರ್ಪಕವಾಗಿ ಬೆಳೆ ವಿಮೆ ಸಿಕ್ಕಿಲ್ಲ ಎಂದು ಆರೋಪಿಸಿದ್ದರು. ಪ್ರತಿ ವರ್ಷ ಪ್ರವಾಹದಿಂದ ಈ ಭಾಗದ ಬೆಳೆ ಜಲಾವೃತ್ತವಾಗಿದ್ದರಿಂದ ಈ ಸಮಸ್ಯೆ ಎದುರಿಸುತ್ತಿದ್ದರು. ಆಗ 33 ಜನರಿಗೆ ಪರಿಹಾರ ಸಿಕ್ಕಿರಲಿಲ್ಲ. ನಂತರದ ದಿನಗಳಲ್ಲಿ ಪರಿಹಾರ ಸಿಕ್ಕಿದೆ.

‘ಸದ್ಯ ಜಿಲ್ಲೆಯಲ್ಲಿ ಯುನಿವರ್ಸಲ್‌ ಸೊಂಪೊ ಜನರಲ್‌ ಇನ್ಸುರೆನ್ಸ್‌ ವಿಮಾ ಕಂಪನಿ ಕಾರ್ಯನಿರ್ವಹಿಸುತ್ತಿದೆ. ವಿಮಾ ನಿರ್ವಹಣೆಗೆಗಾಗಿ ಸಿಬ್ಬಂದಿಗೆ ಕರೆ ಮಾಡಿದರೆ ನಾವು ಕೆಲಸ ಬಿಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಇತ್ತ ಟೋಲ್‌ ಫ್ರೀ ಸಂಖ್ಯೆಗೆ ಕರೆ ಹೋಗುತ್ತಿಲ್ಲ. ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ’ ಎಂದು ರೈತರುದೂರುತ್ತಿದ್ದಾರೆ.

ಬ್ಯಾಂಕ್‌ಗಳಲ್ಲಿ ಸಮಸ್ಯೆ: ‘ರೈತರು ಬೆಳೆ ವಿಮೆಯ ಕಂತನ್ನು ಬ್ಯಾಂಕ್‌ಗೆ ಭರ್ತಿ ಮಾಡಬೇಕಾಗುತ್ತದೆ. ಆದರೆ, ಕೆಲವೊಂದು ಕಡೆ ಬ್ಯಾಂಕ್‌ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದು ಬೆಳೆ ದಿದ್ದರೆ ಮತ್ತೊಂದು ಬೆಳೆಯನ್ನು ನಮೂದಿಸಿದ್ದಾರೆ. ಇದರಿಂದ ಬೆಳೆ ಸಮಸ್ಯೆಯಾದರೆ ವಿಮೆ ಸಿಗುವುದಿಲ್ಲ. ಇಂಥ ಪ್ರಕರಣಗಳಿಂದಲೂ ರೈತರಿಗೆ ಪರಿಹಾರದ ಹಣ ತಲುಪುವುದಿಲ್ಲ’ ಎನ್ನುತ್ತಾರೆ ಕೆಲ ರೈತರು.

***

ರೈತರಿಗೆ ವರವಾದಫಸಲ್ ಬಿಮಾ

ಶಹಾಪುರ: ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ರೈತರಿಗೆ ವರವಾಗುತ್ತಿಲ್ಲ. ಅದು ವಿಮಾ ಕಂಪನಿಗೆ ಲಾಭ ಮಾಡುವ ಉದ್ದೇಶವನ್ನು ಹೊಂದಿರುವುದು ಆಗಿದೆ. ರೈತರಿಂದ ವಿಮೆ ಮೊತ್ತ ತೆಗೆದುಕೊಳ್ಳುವಾಗ ಷರತ್ತುಗಳು ಬರುವುದಿಲ್ಲ. ಆದರೆ, ಬೆಳೆ ನಷ್ಟ ಆಗಿ ಪರಿಹಾರ ನೀಡಿ ಎನ್ನುವಾಗ ಮಾತ್ರ ಷರತ್ತುಗಳು ಅಡ್ಡಿಯಾಗುತ್ತವೆ. ಬೆಳೆ ವಿಮೆ ಕನ್ನಡಿಯೊಳಗಿನ ಗಂಟು ಆಗಿದೆ.

ಬೆಳೆ ವಿಮೆ ಮುಖ್ಯ ಉದ್ದೇಶವು ಬೆಳೆ ಹಾನಿಯಾದಾಗ ಪರಿಹಾರ ನೀಡಬೇಕು. ಆದರೆ, ವಿಮಾ ಕಂಪನಿಗಳು ಹಾಕಿರುವ ಷರತ್ತು ಹಾಗೂ ನಿಬಂಧನೆಗಳು ಪೂರೈಸಲು ಸಾಧ್ಯವಿಲ್ಲ. ತಾಂತ್ರಿಕ ಕಾರಣಗಳನ್ನು ಹೇಳಿ ರೈತರನ್ನು ಯಾಮಾರಿಸುವುದು ಹಲವು ವರ್ಷದಿಂದ ನಡೆಯುತ್ತಾ ಬಂದಿದೆ. ಬೆಳೆ ಸಮೀಕ್ಷೆ ಎನ್ನುವುದು ಬೊಗಸ್ ಆಗಿದೆ.

ವಿಮಾ ಕಂಪನಿಯ ವಿಚಿತ್ರ ಷರತ್ತು ಇದು. ಬೆಳೆ ಬಿತ್ತನೆಯಾಗಿ ಒಂದು ತಿಂಗಳು ಆಗಿರಬೇಕು. ಬೆಳೆ ಕಟಾವಿಗಿಂತ 15 ದಿನ ಮುಂಚಿತವಾಗಿರಬೇಕು. ಇದು ಸಾಧ್ಯವೇ? ಪ್ರವಾಹ, ಅಧಿಕ ಮಳೆ ಹೇಳಿ ಕೇಳಿ ಬರಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಹಿರಿಯ ವಕೀಲ ಭಾಸ್ಕರರಾವ ಮುಡಬೂಳ.

‘ಮೊದಲು ಸರ್ಕಾರ ವಿಮಾ ಕಂಪನಿಯ ದೋಷಪೂರಿತ ಷರತ್ತುಗಳನ್ನು ಬದಲಾಯಿಸಬೇಕು. ಬೆಳೆ ವಿಮೆ ನೀಡದಿದ್ದರೆ ಪರಿಹಾರಕ್ಕಾಗಿ ಕಾನೂನು ಬಲ ತುಂಬಬೇಕು. ಪ್ರತ್ಯೇಕವಾದ ಬೆಳೆ ವಿಮೆ ಕಾನೂನು ರಚಿಸಬೇಕು. ಸ್ವತಂತ್ರವಾದ ಬೆಳೆ ವಿಮೆ ಕಂಪನಿಯನ್ನು ಸರ್ಕಾರ ರಚಿಸಬೇಕು. ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳೆಯುವ ಬೆಳೆಗಳಿಗೆ ಮೊದಲು ಆದ್ಯತೆ ನೀಡಬೇಕು. ವಿಮೆಯ ಲಾಭ ಹಾಗೂ ಪರಿಹಾರದ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಮತ್ತು ಜಾಗೃತಿ ನೀಡಬೇಕು. ವಿಮಾ ಕಂಪನಿಯು ರೈತರ ಕಂಪನಿಯಾಗಿ ಕೆಲಸ ಮಾಡಬೇಕು. ವಿಮಾ ಕಂಪನಿಯ ಅಧಿಕಾರಿಗಳು ಸದಾ ರೈತರ ಒಡನಾಡಿಯಾಗಿ ಕೆಲಸ ನಿರ್ವಹಿಸಬೇಕು’ ಎಂಬ ಸಲಹೆ ನೀಡುತ್ತಾರೆ ಅವರು.
******
ಬೆಳೆ ವಿಮೆಯಲ್ಲಿ ರೈತರಿಗೆ ನಂಬಿಕೆ ಇಲ್ಲ

ಸುರಪುರ: ಐದು ವರ್ಷಗಳಿಂದ ರೈತರಿಗೆ ಸಮರ್ಪಕ ಬೆಳೆ ಪರಿಹಾರ ದೊರೆತಿಲ್ಲ. ಇದರಿಂದ ಬೆಳೆ ವಿಮೆ ಮಾಡಿಸುವಲ್ಲಿ ರೈತರು ಆಸಕ್ತಿ ತೋರುತ್ತಿಲ್ಲ.

ನಾಲ್ಕು ವರ್ಷಗಳ ಬೆಳೆ ವಿಮೆ ಅಂಕಿ ಅಂಶ ಇದಕ್ಕೆ ಪುಷ್ಟಿ ನೀಡುತ್ತದೆ. 2018ರಲ್ಲಿ ತಾಲ್ಲೂಕಿನಲ್ಲಿ ಒಟ್ಟು 7,709 ರೈತರು ಬೆಳೆ ವಿಮೆ ಮಾಡಿಸಿದ್ದರು. ಅದರಲ್ಲಿ ಕೇವಲ 282 ರೈತರಿಗೆ ಮಾತ್ರ ಪರಿಹಾರ ದೊರಕಿದೆ.

ಬೆಳೆ ವಿಮೆಗೆ ಯುನಿವರ್ಸಲ್ ಸೊಂಪೊ ಇನ್ಸುರೆನ್ಸ್ ಎಂಬ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಒಂದು ಎಕರೆ ಭತ್ತಕ್ಕೆ ₹688, ತೊಗರಿಗೆ ₹336, ಹತ್ತಿಗೆ ₹536 ವಿಮಾ ಕಂತು ಇದೆ. ಮಳೆಯಾಶ್ರಿತ ಭೂಮಿಗೆ ಕಂತಿನ ಹಣ ಕ್ರಮವಾಗಿ ₹440, ₹320, ₹344 ಇದೆ.

ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿ ಇತರ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿ ಸಂಭವಿಸಿದರೆ ಭತ್ತಕ್ಕೆ ಒಂದು ಎಕರೆಗೆ ಪರಿಹಾರ ಧನ ₹86 ಸಾವಿರ ನಿಗದಿ ಇದೆ. ಅದರಲ್ಲಿ ಕಂಪನಿ ಕೇವಲ ಶೇ 30 ರಷ್ಟು ಕೊಡುತ್ತದೆ. ಬೆಳೆ ಹಾನಿ ಸಂಭವಿಸಿದಾಗ ರೈತರು ಟೋಲ್ ಫ್ರಿ ಸಂಖ್ಯೆಗೆ ದೂರು ಸಲ್ಲಿಸಬೇಕು. ಕಂಪನಿ ಮತ್ತು ಕೃಷಿ ಇಲಾಖೆ ಜಂಟಿ ಸರ್ವೆ ನಡೆಸಿ ಬೆಳೆ ನಷ್ಟ ಅಂದಾಜಿಸುತ್ತಾರೆ. ಹೀಗಾಗಿ ಕೃಷಿ ಇಲಾಖೆ ನೇರವಾಗಿ ಬೆಳೆ ನಷ್ಟದ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ.

ಬೆಳೆ ವಿಮೆ ಕಟ್ಟಿದ ಎಲ್ಲ ರೈತರಿಗೆ ಹಾನಿ ಸಂಭವಿಸಿರುವುದಿಲ್ಲ. ಕಾರಣ ಪರಿಹಾರ ಪಡೆಯುವ ರೈತರ ಸಂಖ್ಯೆ ಸಹಜವಾಗಿ ಕಡಿಮೆ ಇರುತ್ತದೆ. ಆದರೂ ದೂರು ನೀಡಿದ ಬಹುತೇಕರಿಗೆ ಪರಿಹಾರ ಸಿಕ್ಕಿಲ್ಲ. ಕೆಲವರಿಗೆ ಪರಿಹಾರ ದೊರಕಿದರೂ ಪ್ರಮಾಣ ಕಡಿಮೆ ಎಂಬ ಆರೋಪಗಳು ಇವೆ.

‘ಈ ಎಲ್ಲ ಕಾರಣಗಳಿಂದ ರೈತರು ಬೆಳೆ ವಿಮೆ ಮಾಡಿಸಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ನೀಡುವ ಪರಿಹಾರ ಧನ ಅವೈಜ್ಞಾನಿಕವಾಗಿದೆ. ಸರ್ಕಾರ ರೈತರಿಗೆ ನೆರವಾಗುವ ದೃಷ್ಟಿಯಲ್ಲಿ ವಿಮೆ ಪದ್ಧತಿಯನ್ನು ಅಮೂಲಾಗ್ರವಾಗಿ ಬದಲಿಸಬೇಕು. ಖಾಸಗಿ ಕಂಪನಿಗಳಿಗೆ ವಹಿಸದೇ ಕೃಷಿ ಇಲಾಖೆಗೆ ಈ ಹೊಣೆಗಾರಿಕೆ ನೀಡಬೇಕು’ ಎಂದು ಆಗ್ರಹಿಸುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಜಂಬಲದಿನ್ನಿ.

***

ಪೂರಕಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT