ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ । ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ ಬೇಡಿಕೆ

15 ಕ್ವಿಂಟಲ್‌ನಿಂದ 52 ಕ್ವಿಂಟಲ್‌ಗೆ ಹೆಚ್ಚಳ, ಬಯಲು ಸೀಮಾಂತರ ಪ್ರದೇಶದಲ್ಲಿ ಬಿತ್ತನೆ
Last Updated 23 ಜೂನ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಸೂರ್ಯಕಾಂತಿ ಬಿತ್ತನೆಗೆ 15 ಕ್ವಿಂಟಲ್‌ ನಿಗದಿ ಪಡಿಸಲಾಗಿತ್ತು. ಆದರೆ, ಈಗ ಬಯಲು ಪ್ರದೇಶದಲ್ಲಿ ಸೂರ್ಯಕಾಂತಿ ಬೀಜಕ್ಕೆ ಬೇಡಿಕೆ ಬಂದಿದ್ದು, ಹೆಚ್ಚುವರಿ ಬೀಜಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ರಷ್ಯಾ–ಉಕ್ರೇನ್‌ ಮಧ್ಯೆ ನಡೆದ ಯುದ್ದದ ಪರಿಣಾಮ ಸೂರ್ಯಕಾಂತಿ ಎಣ್ಣೆಗೆ ಹಾಹಾಕಾರ ಎದುರಾಗಿ ಬೆಲೆ ಹೆಚ್ಚಳವಾಗಿತ್ತು. ಹೀಗಾಗಿ ಈ ಬಾರಿ ರೈತರು ಸೂರ್ಯಕಾಂತಿ ಬೆಳೆ ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ.

ಯಾವ ತಾಲ್ಲೂಕಿನಲ್ಲಿ ಹೆಚ್ಚು ಬೇಡಿಕೆ: ಜಿಲ್ಲೆಯ ನೀರಾವರಿ ವಂಚಿತ ಪ್ರದೇಶಗಳಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗುತ್ತಿದೆ. ಅತಿಹೆಚ್ಚು ಯಾದಗಿರಿ–ಗುರುಮಠಕಲ್‌ ತಾಲ್ಲೂಕಿನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗುತ್ತಿದೆ. ಪ್ರಮುಖವಾಗಿ ಯಾದಗಿರಿ ಹೋಬಳಿ, ಗುರುಮಠಕಲ್‌ ತಾಲ್ಲೂಕಿನ ಗುರುಮಠಕಲ್‌, ಕೊಂಕಲ್ ಹೋಬಳಿ, ಸುರಪುರ ತಾಲ್ಲೂಕಿನ ಕಕ್ಕೇರಾ, ಹುಣಸಗಿ ತಾಲ್ಲೂಕಿನ ಕೊಡೇಕಲ್ ಮತ್ತು ಶಹಾಪುರ ತಾಲ್ಲೂಕಿನ ಗೋಗಿ ಹೋಬಳಿಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

ಜಿಲ್ಲೆಯಲ್ಲಿ 16 ಹೋಬಳಿಗಳಿದ್ದು, ಇದುವರೆಗೆ 23 ಕ್ವಿಂಟಲ್ ಬೀಜ ಸರಬರಾಜು ಮಾಡಲಾಗಿದೆ. ಒಟ್ಟಾರೆ 55 ಕ್ವಿಂಟಲ್ ಬೀಜಕ್ಕಾಗಿ ಬೀಜ ನಿಗಮಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸೂರ್ಯಕಾಂತಿ ಜಿಕೆ–2008 ತಳಿಯ ಬೀಜಗಳನ್ನು ಪೂರೈಕೆ ಮಾಡಲಾಗಿದೆ.

ಸೂರ್ಯಕಾಂತಿ ಅಲ್ಪಾವಧಿ ಬೆಳೆಯಾಗಿದ್ದು, ಈ ಹಿಂದೆ ಹೆಚ್ಚು ಬೆಳೆಯುತ್ತಿದ್ದರು. ಬಿಟಿ ಹತ್ತಿ ಬಂದ ನಂತರ ಸೂರ್ಯಕಾಂತಿ ಬಿತ್ತನೆ ಪ್ರಮಾಣ ಕಡಿಮೆಯಾಗಿತ್ತು. ಈ ವರ್ಷ ಬೇಡಿಕೆ ಇರುವುದು ಕಂಡು ಬಂದಿದ್ದರಿಂದ ಕೃಷಿ ಇಲಾಖೆ ಅಧಿಕಾರಿಗಳು ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಸೂರ್ಯಕಾಂತಿ ಬೆಳೆ ಸಮೀಕ್ಷೆ: 2018–19ರಿಂದ 2021–22ರ ಅವಧಿಯಲ್ಲಿ ಸೂರ್ಯಕಾಂತಿ ಬಿತ್ತನೆ ಪ್ರಮಾಣ ಹೆಚ್ಚುತ್ತಾ ಸಾಗುತ್ತಿದೆ. ಈ ವರ್ಷವೂ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಗುರುಮಠಕಲ್‌ ತಾಲ್ಲೂಕಿನಲ್ಲಿ 2018–19ನೇ ಸಾಲಿನಲ್ಲಿ 13 ಹೆಕ್ಟೇರ್‌, 2019–20ರಲ್ಲಿ 103.60, 2020–21ರಲ್ಲಿ 38.48, 2021–22ರಲ್ಲಿ 404 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಹುಣಸಗಿ ತಾಲ್ಲೂಕಿನಲ್ಲಿ 2018–19ನೇ ಸಾಲಿನಲ್ಲಿ 214 ಹೆಕ್ಟೇರ್‌, 2019–20ರಲ್ಲಿ 258.36, 2020–21ರಲ್ಲಿ 47.28, 2021–22ರಲ್ಲಿ 810.76 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಶಹಾಪುರ ತಾಲ್ಲೂಕಿನಲ್ಲಿ 2018–19ನೇ ಸಾಲಿನಲ್ಲಿ 64 ಹೆಕ್ಟೇರ್‌, 2019–20ರಲ್ಲಿ 24.57, 2020–21ರಲ್ಲಿ 85.50, 2021–22ರಲ್ಲಿ 50.88 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಸುರಪುರ ತಾಲ್ಲೂಕಿನಲ್ಲಿ 2020–21ರಲ್ಲಿ 63.07, 2021–22ರಲ್ಲಿ 45.90 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ, ವಡಗೇರಾ ತಾಲ್ಲೂಕಿನಲ್ಲಿ 2020–21ರಲ್ಲಿ 6.54, 2021–22ರಲ್ಲಿ 5.50 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 2020–21ರಲ್ಲಿ 11.01, 2021–22ರಲ್ಲಿ 1.88 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

‘ಸುರಪುರ ತಾಲ್ಲೂಕಿನ ಕಕ್ಕೇರಾ ಪಟ್ಟಣದ ರೈತ ಸಂಪರ್ಕ ಕೇಂದ್ರ, ಹುಣಸಗಿ ತಾಲ್ಲೂಕಿನ ಕೋಡಕಲ್‌ರೈತ ಸಂಪರ್ಕ ಕೇಂದ್ರದಲ್ಲಿ ಸೂರ್ಯಕಾಂತಿ ಬೀಜಗಳು ಬೇಡಿಕೆ ಇದೆ. ಕಕ್ಕೇರಾ ಆರ್‌ಎಸ್‌ಕೆಗೆ 90 ಕೆಜಿ ಬಂದಿದ್ದವು. ಸ್ಥಳೀಯ ರೈತರು ಬಂದು ತೆಗೆದುಕೊಂಡು ಹೋಗಿದ್ದಾರೆ’ ಎಂದು ಸಿಬ್ಬಂದಿ ತಿಳಿಸುತ್ತಾರೆ.

‘ಸೂರ್ಯಕಾಂತಿ ಬೆಳೆ 90 ರಿಂದ 100 ದಿನಗಳ ಬೆಳೆಯಾಗಿದೆ. ಮಳೆ ಕೊರತೆ ನಡುವೆಯೂ ರೈತರು ಧೈರ್ಯ ಮಾಡಿ ಬಿತ್ತನೆ ಮಾಡುತ್ತಿದ್ದಾರೆ. ಈ ಬಾರಿ ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಹೆಚ್ಚಿನ ಬೇಡಿಕೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರಾಜಕುಮಾರ.

ಸೂರ್ಯಕಾಂತಿ ಬೆಳೆ ಸಮೀಕ್ಷೆ ವಿವರ (ಹೆಕ್ಟೇರ್‌)
(2018–19ರಿಂದ 2021–22 ರವರೆಗೆ)

ಗುರುಮಠಕಲ್‌;559.08
ಹುಣಸಗಿ:1,330.40
ಶಹಾಪುರ;224.95
ಸುರಪುರ;108.97
ವಡಗೇರಾ;12.04
ಯಾದಗಿರಿ;12.89
ಒಟ್ಟು;2,248.33
ಆಧಾರ: ಕೃಷಿ ಇಲಾಖೆ

***

* ಜಿಲ್ಲೆಯಲ್ಲಿ ಈ ಬಾರಿ ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಮಳೆಯಾಶ್ರಿತ ಪ್ರದೇಶಗಳ ಹೋಬಳಿಯ ರೈತರು ಬೇಡಿಕೆ ಈಡುತ್ತಿದ್ದಾರೆ. ಬೇಡಿಕೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ
- ಅಬಿದ್‌ ಎಸ್‌ಎಸ್‌., ಜಂಟಿ ಕೃಷಿ ನಿರ್ದೇಶಕ

* ಬಾರಿ ನಮ್ಮ ಜಮೀನಿನಲ್ಲಿ 2 ಎಕರೆಯಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದೇವೆ. ಆಗಾಗ ಮಳೆಯಾದರೆ ಬೆಳೆಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಸಮಸ್ಯೆ ಆಗಬಹುದು
-ಮಲ್ಲಯ್ಯ ಹೊಸಮನಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT