ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ‘ಜೂಜಾಟ’ಕ್ಕೆ ಬಿತ್ತು ತಾತ್ಕಾಲಿಕ ಕಡಿವಾಣ

‘ಪ್ರಜಾವಾಣಿ’ ವರದಿ ನಂತರ ಎಚ್ಚೆತ್ತುಕೊಂಡ ದಂಧೆಕೋರರು
ಬಿ.ಜಿ.ಪ್ರವೀಣಕುಮಾರ
Published 10 ಡಿಸೆಂಬರ್ 2023, 6:32 IST
Last Updated 10 ಡಿಸೆಂಬರ್ 2023, 6:32 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಅನಧಿಕೃತ ದಂಧೆಗಳಿಗೆ ಸ್ವಲ್ಪಮಟ್ಟಿಗೆ ಕಡಿವಾಣ ಬಿದ್ದಿದ್ದು, ಇಸ್ಪೀಟ್‌ ಕ್ಲಬ್‌ಗಳು ಅಲ್ಲಲ್ಲಿ ಬಂದ್‌ ಆಗಿವೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರಮುಖ ಸ್ಥಳಗಳಲ್ಲಿ ಅನಧಿಕೃತ ಇಸ್ಲೀಟ್‌ ಅಡ್ಡೆಗಳು ತಲೆ ಎತ್ತಿದ್ದವು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ನಿರಂತರ ವರದಿಗಳು ಬಂದ ನಂತರ ಕೆಲವು ಕಡೆ ಬಂದ್‌ ಆಗಿದ್ದು, ಇನ್ನೂ ಕೆಲವು ಕಡೆ ರಾಜರೋಷವಾಗಿ ನಡೆಯುತ್ತಿದೆ.

ಸರ್ಕಾರಿ ಜಾಗಗಳಲ್ಲಿ ಆಡಿ!: ಬಲ್ಲ ಮೂಲಗಳ ಪ್ರಕಾರ ಖಾಸಗಿ ಜಾಗಗಳಲ್ಲಿ ನಡೆಯುತ್ತಿದ್ದ ಅನಧಿಕೃತ ದಂಧೆಗಳು ಈಗ ಸರ್ಕಾರಿ ಖಾಲಿ ಜಾಗದಲ್ಲಿ ನಡೆಯುತ್ತಿವೆ. ಬೆಳಿಗ್ಗೆ ಆಟವಾಡುವುದು ಬೇಡ. ರಾತ್ರಿ ಸಮಯದಲ್ಲಿ ಆಡಿ ಎಂದು ಸಲಹೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದರಿಂದ ನಗರ, ಪಟ್ಟಣಗಳಲ್ಲಿ ಕಡಿಮೆಯಾಗಿದ್ದರೆ, ಪ್ರಮುಖ ಗ್ರಾಮಗಳಲ್ಲಿ ದಂಧೆಗೆ ಕಡಿವಾಣ ಬಿದ್ದಿಲ್ಲ.

ಅಂದರ್‌ ಬಾಹರ್‌, ನಂಬರ್‌ ಗೇಮ್‌ಗಳು ಹಳ್ಳಿಗಳಲ್ಲಿ ಜೋರಾಗಿವೆ. ಅನಧಿಕೃತ ದಂಧೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಈಗ ಉದ್ಯೋಗ ಇಲ್ಲದಂತೆ ಆಗಿದೆ.

ಜಿಲ್ಲೆಯಲ್ಲಿ ಅನಧಿಕೃತ ದಂಧೆಗಳಿಂದಲೇ ಕೆಲವರು ಕೋಟ್ಯಧೀಶರಾಗಿದ್ದರೆ, ಇನ್ನೂ ಕೆಲವರು ಮನೆ, ಹೊಲ ಮಾರಾಟ ಮಾಡಿ ದೊಡ್ಡ ನಗರಗಳಿಗೆ ಕೂಲಿ ಕೆಲಸ ಮಾಡಲು ಹೋಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಇಸ್ಪೀಟ್ ಆಟ ಕಾನೂನು ಸಮ್ಮತವೇ?: ‘ಅದೃಷ್ಟವನ್ನು ನಂಬಿ ಬಾಜಿ ಕಟ್ಟಿ ಆಡುವ ಪ್ರತಿಯೊಂದು ಆಟ ಕಾನೂನು ಬಾಹಿರವಾಗಿದೆ. ಕಾನೂನು ಉಲ್ಲಂಘಿಸಿ ಇಂಥ ಆಟವನ್ನು ಆಡುವ ಮತ್ತು ಆಡಿಸುವ ಪ್ರತಿಯೊಬ್ಬರು ತಪ್ಪಿತಸ್ಥರೆಂದು ನಿರ್ಣಯಿಸಲಾಗುತ್ತದೆ’ ಎನ್ನುತ್ತಾರೆ ವಕೀಲ ಸಾಲೋಮನ್ ಆಲಫ್ರೆಡ್ ಯಾದಗಿರಿ.

‘ಮಟ್ಕಾ, ಇಸ್ಪೀಟ್ ಎಲೆಗಳಿಂದ ಆಡುವ ಅಂದರ್–ಬಾಹರ್, ತ್ರಿಕಾರ್ಡ್‌, ಬ್ಲೈಂಡ್ ರಮ್ಮಿ ಮತ್ತು ಅನಧಿಕೃತ ಪಂದ್ಯಗಳಲ್ಲಿ ಸೋಲು ಗೆಲುವಿನ ಮೇಲೆ ಬಾಜಿ ಕಟ್ಟುವುದು ಹಾಗೂ ಪ್ರಾಣಿಗಳ ನಡುವೆ ಕದನವನ್ನು ಒಡ್ಡಿ ಬಾಜಿ ಕಟ್ಟುವುದು ಇತ್ಯಾದಿ ಆಟಗಳು ಸರ್ಕಾರ ನಿಷೇಧಿಸಿದ್ದು, ಕಾನೂನು ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸುವ ಅವಕಾಶ ಇದೆ’ ಎಂದು ಹೇಳಿದ್ದಾರೆ.

‘ಆದರೆ, ಇಸ್ಪೀಟ್ ಎಲೆಗಳಿಂದ ಆಡುವ ರಮ್ಮಿ ಆಟವು ಅಧಿಕೃತ ಆಟವೇ ಎಂಬುದು ಇಲ್ಲಿ ಪ್ರಶ್ನೆ. ರಮ್ಮಿ ಆಟವು ಅದೃಷ್ಟದ ಆಟ ಅಲ್ಲ, ಅದು ಕೌಶಲದಿಂದ ಕೂಡಿದ ಆಟ ಎಂದು ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಕರ್ನಾಟಕ ಹೈಕೋರ್ಟ್‌ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 39529/2012 ರಲ್ಲಿ ರಮ್ಮಿ ಆಟವು ಇತರೆ ಆಟಗಳಾದ ಚೆಸ್, ಸ್ನೂಕರ್, ಕೇರಂ ಆಟಗಳಂತೆ ಕೌಶಲದಿಂದ ಕೂಡಿದ ಆಟವೆಂದು ತೀರ್ಪು ನೀಡಿದೆ. ಹೀಗಾಗಿ ಕೌಶಲದಿಂದ ಕೂಡಿದ ಆಟವನ್ನು ಅಡ್ಡಿಪಡಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಆದರೆ, ಸರ್ಕಾರವು ಸಂವಿಧಾನಕ್ಕೆ ಧಕ್ಕೆ ಆಗದಂತೆ ಯೋಗ್ಯ ಕಾನೂನನ್ನು ಜಾರಿಗೆ ತಂದು ನಿಯಂತ್ರಿಸುವ ಅಧಿಕಾರ ಹೊಂದಿದೆ. ಅದಕ್ಕಾಗಿ ರಮ್ಮಿ ಆಟವನ್ನು ಸಾರ್ವಜನಿಕ ಸ್ಥಳಗಳಲ್ಲಿ, ಈ ಆಟವು ನಿಷೇಧಿಸಲಾಗಿದೆ. ಮುಖ್ಯವಾಗಿ ರಮ್ಮಿ ಆಟವು ಕೌಶಲದಿಂದ ಕೂಡಿದ ಆಟವಾಗಿದ್ದರೂ, ಅನೇಕರು ಈ ಆಟವನ್ನು ಹಣ ಗಳಿಸುವ ಅವಕಾಶವೆಂದು ನಂಬಿ ಇಡೀ ಸಂಪತ್ತನ್ನು ಹಾಳುಮಾಡಿಕೊಂಡಿದ್ದಾರೆ‘ ಎನ್ನುತ್ತಾರೆ ಅವರು.

ಸಾಲೋಮನ್‌ ಆಲಫ್ರೆಡ್‌
ಸಾಲೋಮನ್‌ ಆಲಫ್ರೆಡ್‌
ಪೊಲೀಸರ ಕುಮ್ಮಕ್ಕಿನಿಂದಲೇ ಮಟ್ಕಾ ಇಸ್ಪೀಟ್‌ ದಂಧೆಗಳು ನಡೆಯುತ್ತಿವೆ. ಕಡಿವಾಣ ಹಾಕಬೇಕಾದವರೇ ಸಹಕಾರ ನೀಡುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಜನಪ್ರತಿನಿಧಿಗಳು ಕಡಿವಾಣ ಹಾಕಬೇಕು
ಹಣಮಂತ ಬಂದಳ್ಳಿ ಬಿಜೆಪಿ ಮುಖಂಡ
ಅನಧಿಕೃತ ದಂಧೆಗಳಿಗೆ ಶಾಶ್ವತ ಕಡಿವಾಣ ಹಾಕಬೇಕು. ಇಂಥ ದಂಧೆಗಳಿಂದ ಕೆಲವರು ಕೋಟ್ಯಂತರ ಗಳಿಸಿದ್ದು ಅವರ ಆದಾಯದ ಮೂಲ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು
ಬಸವರಾಜ ಪಾಟೀಲ ಸಾಮಾಜಿಕ ಕಾರ್ಯಕರ್ತ

ಮೊಬೈಲ್‌ಗಳಲ್ಲಿ ಜೋರು ಕಳೆದ 15–20 ದಿನಗಳಿಂದ ‘ಪ್ರಜಾವಾಣಿ’ಯಲ್ಲಿ ಅಕ್ರಮ ದಂಧೆಗಳ ಕುರಿತು ಸರಣಿ ವರದಿಗಳು ಬಂದ ನಂತರ ಕೆಲವು ಕಡೆ ತಾತ್ಕಾಲಿಕವಾಗಿ ಈ ದಂಧೆಗಳಿಗೆ ಕಡಿವಾಣ ಬಿದ್ದಿದೆ. ಆದರೆ ಬಹಿರಂಗವಾಗಿ ಆಟ ಬಂದ್‌ ಆಗಿದ್ದರೆ ಮೊಬೈಲ್‌ಗಳಲ್ಲಿ ಮಾತ್ರ ಜೋರಾಗಿ ನಡೆಯುತ್ತಿದೆ. ಪ್ರಮುಖ ಗ್ರಾಮಗಳಲ್ಲಿ ಒಂದಿಬ್ಬರು ಮಟ್ಕಾ ಬುಕ್ಕಿಗಳು ಗ್ರಾಮಸ್ಥರ ವಾಟ್ಸ್‌ ಆ್ಯಪ್‌ಗಳಲ್ಲಿ ಮಟ್ಕಾ ಸಂಖ್ಯೆಗಳನ್ನು ಕಳುಹಿಸಿ ಪ್ರಚೋದಿಸುತ್ತಿದ್ದಾರೆ. ಕೆಲವರು ಇದಕ್ಕೆ ಮಾರು ಹೋಗಿ ಪ್ರತಿದಿನ ನೂರಾರು ರೂಪಾಯಿ ಆಟದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಚಟಕ್ಕೆ ಬಿದ್ದ ಕೂಲಿ ಕೆಲಸ ಮಾಡುವವರು ಪ್ರತಿದಿನ ಬೆಳಿಗ್ಗೆ ಬುಕ್ಕಿಗಳಿಗೆ ಹಣ ಜಮಾ ಮಾಡಿ ಸಂಸಾರಕ್ಕೆ ನೀಡುತ್ತಿಲ್ಲ ಎನ್ನುವ ಆರೋಪಗಳಿವೆ.

ಗಣ್ಯರು ರಾಜಕೀಯ ಪುಢಾರಿಗಳು ಭಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅನಧಿಕೃತ ಇಸ್ಲೀಟ್‌ ದಂಧೆಯಲ್ಲಿ ಶಿಕ್ಷಕರು ಸರ್ಕಾರಿ ನೌಕರರು ರಾಜಕೀಯ ಪುಢಾರಿಗಳು ಭಾಗಿಯಾಗುವುದು ಗುಟ್ಟಾಗಿ ಉಳಿದಿಲ್ಲ. ಕಳೆದ ಕೆಲ ವರ್ಷಗಳ ಹಿಂದೆ ಹುಣಸಗಿ ತಾಲ್ಲೂಕಿನ ಗಡಿ ಗ್ರಾಮವೊಂದರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಮಕ್ಕಳ ಪ್ರವಾಸಕ್ಕೆ ಸಂಗ್ರಹಿಸಿದ್ದ ಹಣವನ್ನು ಮಟ್ಕಾ ಇಸ್ಪೀಟ್‌ ಆಟದಲ್ಲಿ ತೊಡಗಿಸಿಕೊಂಡು ಶಾಲೆಗೆ ಗೈರಾಗಿದ್ದರು. ಮೂರ್ನಾಲ್ಕು ಬಾರಿ ನೋಟಿಸ್‌ ನೀಡಿದರೂ ಹಣವನ್ನು ವಾಪಸ್‌ ನೀಡಿರಲಿಲ್ಲ. ಹೀಗಾಗಿ ಇದು ಸರ್ಕಾರಿ ನೌಕರರು ಶಿಕ್ಷಕರು ರಾಜಕೀಯ ಪುಢಾರಿಗಳನ್ನು ಆವರಿಸಿಕೊಂಡಿದ್ದು ಲಕ್ಷಾಂತರ ವ್ಯವಹಾರ ನಡೆಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆಯೇ ಆಟದಲ್ಲಿ ತೊಡಗಿಸಿಕೊಳ್ಳುವ ನೌಕರರು ಸಂಜೆ ವೇಳೆಗೆ ಮಟ್ಕಾ ಬುಕ್ಕಿಗಳನ್ನು ಸಂಪರ್ಕಿಸಿ ತಮ್ಮ ‘ಅದೃಷ್ಟ‘ದ ಸಂಖ್ಯೆಯನ್ನು ಪರಿಶೀಲಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT