ಸೋಮವಾರ, ಅಕ್ಟೋಬರ್ 21, 2019
22 °C

ಬಜೆಟ್‌ನಲ್ಲಿ ಯಾದಗಿರಿಗೆ ವೈದ್ಯಕೀಯ ಕಾಲೇಜು: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

Published:
Updated:
Prajavani

ಯಾದಗಿರಿ: ‘ಜಿಲ್ಲೆಯ ಬಹು ಬೇಡಿಕೆಯಾದ ವೈದ್ಯಕೀಯ ಕಾಲೇಜನ್ನು ಮುಂದಿನ ಬಜೆಟ್‌ನಲ್ಲಿ ಘೋಷಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ‍್ಪ ಭರವಸೆ ನೀಡಿದರು.

‘ವೈದ್ಯಕೀಯ ಕಾಲೇಜು ಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಒಪ್ಪಲಿ ಅಥವಾ ಬಿಡಲಿ ನಮ್ಮ ಸರ್ಕಾರದಿಂದ ಘೋಷಿಸಲಾಗುವುದು’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಜಿಲ್ಲೆಯ ಜನಪ್ರನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಬ್ದಾರಿಯಿಂದ ಜಿಲ್ಲೆಯು ಅಭಿವೃದ್ಧಿಯಲ್ಲಿ ಹಿಂದುಳಿದೆ. ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ 15 ದಿನಕ್ಕೊಮ್ಮೆ ಚರ್ಚಿಸಬೇಕು’ ಎಂದರು.

‘ಶುದ್ಧ ಕುಡಿವ ನೀರಿನ ಘಟಕಗಳು ಸುಸ್ಥಿತಿಯಲ್ಲಿ ಇಲ್ಲದ ಕಾರಣ ಇದನ್ನು ಅಳವಡಿಸಿದ ವ್ಯಕ್ತಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಶುದ್ಧ ನೀರು ಇಲ್ಲದಿದ್ದರಿಂದ ಜನ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸುರಪುರದಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. ವಾರದಲ್ಲಿ ನೀರಿನ ಸರಬರಾಬು ಮಾಡಬೇಕು‌’ ಎಂದು ತಿಳಿಸಿದರು.

‘ಯಾದಗಿರಿ ಹೊಸ ಜಿಲ್ಲೆಯಾಗಿದ್ದು ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸರ್ಕಾರ ಈ ಹಿಂದೆ ನೀಡಿದ್ದ ₹300 ಕೋಟಿ ಹಣ ಸದ್ಬಳಕೆಯಾಗಬೇಕು. ಅಕ್ರಮವಾಗಿ ಬಳಕೆಯಾಗಿದ್ದರೆ ತನಿಖೆ ಮಾಡಲಾಗುವುದು’ ಎಂದರು.

‘ಜೋಳದಡಗಿ ಬ್ರಿಜ್ ಕಂ ಬ್ಯಾರೇಜ್‌ ಗೇಟ್‌ ಎತ್ತದಿದ್ದರಿಂದ ಬೆಳೆ ಹಾನಿಯಾಗಿರುವ ಮಾಹಿತಿ ಇದೆ.ಇದನ್ನು ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು. ನೆರೆ ಪೀಡಿತ ಗ್ರಾಮಗಳಲ್ಲಿ ನರೇಗಾದ ವತಿಯಿಂದ ಜಿಲ್ಲಾಧಿಕಾರಿ ಗ್ರಾಮಸ್ಥರಿಗೆ ಉದ್ಯೋಗ ನೀಡಬೇಕು. ಇಷ್ಟು ದಿನ ಯಾರೂ ಜಿಲ್ಲೆ ಬಗ್ಗೆ ಗಮನ ಹರಿಸಿಲ್ಲ. ಈಗ ನಾನು ಗಮನಹರಿಸಿ ಬೇರೆ ಜಿಲ್ಲೆಗಳಂತೆ ಅಭಿವೃದ್ಧಿ ಮಾಡುತ್ತೇನೆ’ ಎಂದು ತಿಳಿಸಿದರು. 

‘ಪೊಲೀಸ್‌ ಇಲಾಖೆಗೆ ಸಂಬಂಧಿಸಿದಂತೆ ಔರಾದ್ಕರ್ ವರದಿಯನ್ನು ಶೀಘ್ರ ಜಾರಿ ಮಾಡಲಾಗುವುದು. ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸುತ್ತೇನೆ ಎಂದರು. ಸುಪ್ರೀಂ ಕೋರ್ಟ್‌ ಮುಂದಿದೆ. ಹೀಗಾಗಿ ಯಾವುದೇ ವಿಷಯವನ್ನು ಪ್ರಸ್ತಾಪಿಸುವುದಿಲ್ಲ’ ಎಂದು ಬಂಡಿಪುರದ ಬಗ್ಗೆ ಪ್ರತಿಕ್ರಿಯಿಸಿದರು. 

Post Comments (+)