ಗಣೇಶ ಮೂರ್ತಿ ತಯಾರಕರಿಗೆ ಕೋವಿಡ್ ‘ವಿಘ್ನ’

ಯಾದಗಿರಿ: ವಿಘ್ನ ನಿವಾರಕ, ಆದಿ ವಂದಿತ ಗಣೇಶ ಮೂರ್ತಿ ತಯಾರಕರಿಗೆ ಕೋವಿಡ್ ‘ವಿಘ್ನ’ವಾಗಿದ್ದು, ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ.
ಗಣೇಶ ಚರ್ತುರ್ಥಿಗೆ ಕೆಲವೇ ದಿನಗಳು ಬಾಕಿ ಇದೆ. ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಬೇಕು ಎಂಬುದು ಮೂರ್ತಿ ತಯಾರಕರ ಆಗ್ರಹ. ಕಳೆದ ವರ್ಷದ ಮೂರ್ತಿಗಳು ಮಾರಾಟವಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಈ ಸಲವೂ ಅದೇ ಪರಿಸ್ಥಿತಿಯಾದರೆ ಸಾಲದಲ್ಲೇ ಜೀವನ ಕಳೆಯಬೇಕಾಗುತ್ತದೆ ಎಂಬ ಆತಂಕ ಅವರದ್ದು.
ವಿಘ್ನ ನಿವಾರಕನಿಗೆ ಕೋವಿಡ್ ಅಡ್ಡಿ: ವಿಘ್ನೇಶ್ವರನಿಗೆ ಈ ಬಾರಿಯೂ ಕೋವಿಡ್ ಅಡ್ಡಿಯಾಗಿದೆ. 2019ರವರೆಗೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಾಂಗವಾಗಿ ನಡೆದಿತ್ತು. 2020 ಮತ್ತು 2021ರಲ್ಲಿ ಕೋವಿಡ್ ಕಾರಣದಿಂದ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದ್ದರಿಂದ ತೊಂದರೆಯಾಗಿದೆ.
‘2020ರಲ್ಲಿ ಮಾರಾಟವಾಗದೇ 200 ಗಣೇಶ ಮೂರ್ತಿಗಳು ಉಳಿದಿವೆ. ಅವುಗಳಿಗೆ ಬಣ್ಣ ಹಚ್ಚಿ ಹೊಸ ರೂಪ ನೀಡಬೇಕಿದೆ. ಈ ವರ್ಷವೂ ಮೂರ್ತಿ ತಯಾರು ಮಾಡಿದ್ದು, ನಮ್ಮ ಭವಿಷ್ಯ ಸರ್ಕಾರದ ಮೇಲೆ ನಿಂತಿದೆ’ ಎನ್ನುತ್ತಾರೆ ಮೂರ್ತಿ ತಯಾರಕ ಮೌನೇಶ ಕುಂಬಾರ.
‘ನಾವು ಕುಂಬಾರರಾಗಿದ್ದು, ನಮ್ಮ ಕುಲ ಕಸುಬು ಮೂರ್ತಿ ತಯಾರಿಸುವುದು. ಅಕ್ಕಲಕೋಟೆಯಲ್ಲಿ ಪಿಒಪಿ ವಿಗ್ರಹ ತಯಾರಿಸಿ ಅಲ್ಲಿಂದ ಯಾದಗಿರಿಗೆ ತಂದಿದ್ದೇನೆ. ನಮ್ಮ ಇಡೀ ಕುಟುಂಬ ಇದರಲ್ಲಿ ತೊಡಗಿಸಿಕೊಂಡಿದೆ. ವ್ಯಾಪಾರವಾಗದಿದ್ದರೆ, ಮತ್ತಷ್ಟು ಸಾಲದಲ್ಲಿ ಮುಳುಗಬೇಕಾಗತ್ತದೆ’ ಎನ್ನುತ್ತಾರೆ ಅವರು.
ಮನೆಯಲ್ಲಿ ಆಚರಿಸಿ: ಗಣೇಶ ಚತುರ್ಥಿಯನ್ನು ಸರಳ, ಭಕ್ತಿ ಪೂರ್ವಕವಾಗಿ ದೇವಸ್ಥಾನ ಮತ್ತು ಮನೆಗಳಲ್ಲಿ ಆಚರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಇದರಿಂದ ದೊಡ್ಡ ಗಾತ್ರದ ಮೂರ್ತಿಗಳು ಮಾರಾಟವಾಗದ ಆತಂಕ ವ್ಯಾಪಾರಿಗಳಲ್ಲಿದೆ.
ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ ಆಚರಿಸಲು ಜಿಲ್ಲಾಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ. ಸುಪ್ರೀಂ ಕೋರ್ಟ್‌ನ 2016ರ ಆದೇಶದಂತೆ ಯಾವುದೇ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳನ್ನು ತಯಾರಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
‘ಈಗಾಗಲೇ ಜಿಲ್ಲೆಯ ಎಲ್ಲ ಪೌರಾಯುಕ್ತರಿಗೆ ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ಕಸ ಸಂಗ್ರಹಿಸುವ ವಾಹನಗಳಲ್ಲಿ ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಘೋಷಣೆಯ ವ್ಯವಸ್ಥೆ ಮಾಡಲು ಮತ್ತು ವಾಟ್ಸ್‌ಆ್ಯಪ್ ಮೂಲಕ ಪ್ರಕಟಣೆಯ ವಿಡಿಯೊ ಕ್ಲಿಪಿಂಗ್ ಕಳುಹಿಸಲು ವಿನಂತಿಸಲಾಗಿದೆ. ಆಕಾಶವಾಣಿ, ಬಸ್ ನಿಲ್ದಾಣಗಳಲ್ಲಿ ಘೋಷಣೆಗೆ ತಯಾರಿ ನಡೆದಿದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸಣ್ಣ ವೆಂಕಟೇಶ.
***
ಕೋವಿಡ್ ಹೊಡೆತದಿಂದ ವ್ಯಾಪಾರಿಗಳು ಕಂಗಾಲು
ಗುರುಮಠಕಲ್: ವಿಘ್ನ ನಿವಾರಕನ ವಿಗ್ರಹಗಳನ್ನು ತಯಾರಿಸಿ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದ ರಾಜಸ್ಥಾನದ ಪಾಲಿ ಜಿಲ್ಲೆಯ ಮೂಲದವರಾದ ಡಾನಿ ಠಾಕೂರ್ ಕುಟುಂಬಕ್ಕೆ ಕಳೆದ ವರ್ಷದಿಂದ ಕೊರೊನಾದ ವಿಘ್ನ ಎದುರಾಗಿದ್ದು, ನಷ್ಟವನ್ನು ಅನುಭವಿಸುವಂತಾಗಿದೆ.
‘ಸರ್ಕಾರ ಈ ಬಾರಿಯೂ ಸಾರ್ವಜನಿಕ ಗಣೇಶ ಉತ್ಸವದ ಆಚರಣೆಗೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು, ನಮ್ಮ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಕಳೆದ ವರ್ಷವೂ ಕೋವಿಡ್ ಕಾರಣದಿಂದ ಸಾಕಷ್ಟು ನಷ್ಟವಾಗಿತ್ತು. ಈಗ ಸಾಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದು, ಮುಂದೆ ಊಟಕ್ಕೂ ಸಾಲ ನೀಡುವವರು ಇರಲಾರರು’ ಎಂದು ವಿಗ್ರಹ ತಯಾರಕರಾದ ರಾಮಲಾಲ್ ಡಾನಿ ಠಾಕೂರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮನೆಯಲ್ಲಿ 11 ಮಂದಿ ಸದಸ್ಯರಿದ್ದೇವೆ. ಗಣೇಶ ವಿಗ್ರಹಗಳ ತಯಾರಿಸುವ ಕೆಲಸ ಮಾಡುತ್ತಿದ್ದು, ಖಾಲಿ ಸಮಯದಲ್ಲಿ ಕೆಲವರು ಊರಿಗೆ ಹೋಗಿ ಜಮೀನುಗಳಲ್ಲಿ ಕೂಲಿ ಮತ್ತು ಹಮಾಲಿಗಳಾಗಿ ಕೆಲಸ ಮಾಡುತ್ತೇವೆ. ಒಮ್ಮೆ ನಷ್ಟವಾದರೆ ಅದನ್ನು ಸರಿದೂಗಿಸಲು ತುಂಬಾ ಸಾಹಸ ಮಾಡಬೇಕಿದೆ’ ಎಂದು ಪಿಸ್ತಾದೇವಿ ಡಾನಿ ಠಾಕೂರ್ ಹೇಳಿದರು.
‘ಮಾರಾಟವಾಗದ ವಿಗ್ರಹಗಳನ್ನು ಮುಂದಿನ ವರ್ಷ ಸ್ವಲ್ಪ ಬಣ್ಣ ಹಚ್ಚಿ ಮಾರಾಟ ಮಾಡಬಹುದು. ಆದರೆ, ನಿರ್ವಹಣೆ ಕಷ್ಟದ ಕೆಲಸ. ಈಗಾಗಲೇ ₹ 5 ಲಕ್ಷ ಸಾಲ ಮಾಡಿದ್ದೇವೆ. ಈ ಬಾರಿಯೂ ವ್ಯಾಪಾರವಾಗದಿದ್ದರೆ ಊಟಕ್ಕೂ ಸಾಲ ಮಾಡುವಂತಾಗಲಿದೆ. ವ್ಯಾಪಾರ ಚೆನ್ನಾಗಿದ್ದರೆ ಒಂದು ಅವಧಿಗೆ ₹50 ಸಾವಿರ ಉಳಿಕೆ ಮಾಡಬಹುದು. ಆದರೆ, ಕಳೆದ ವರ್ಷದ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.
****
ಕಳೆಗುಂದಿದ ವಿಗ್ರಹ ತಯಾರಕರ ಉತ್ಸಾಹ
ಸುರಪುರ: ಕಳೆದ ವರ್ಷದಿಂದ ಕೊರೊನಾ ಕಾರಣ ಗಣೇಶ ವಿಗ್ರಹ ತಯಾರಿಕರು ಕೆಲಸವಿಲ್ಲದೆ ಪರದಾಡುವಂತಾಗಿದೆ. ಕಳೆದ ವರ್ಷ ಲಾಕ್‍ಡೌನ್ ಇದ್ದರೂ ಗಣೇಶ ಮಹೋತ್ಸವ ನಡೆಯುತ್ತದೆ ಎಂಬ ಭರವಸೆಯಿಂದ ತಯಾರಿಸಿದ್ದ ವಿಗ್ರಹಗಳನ್ನು ತಯಾರಕರೇ ಹಳ್ಳಕ್ಕೆ ಎಸೆಯುವಂತಾಯಿತು.
ನಗರದಲ್ಲಿ ಕೃಷ್ಣ ಚವ್ಹಾಣ್ ಗೋವರ್ಧನ್ ಉಭಾಳೆ ಎಂಬುವವರು ಗಣೇಶ ವಿಗ್ರಹಗಳನ್ನು ತಯಾರಿಸುತ್ತಾರೆ. ಇದು ಅವರ ಕುಲ ಕಸಬು. ಇಬ್ಬರೂ ವಿಗ್ರಹ ಮಾರಾಟದ ಮೇಲೆ ಜೀವನ ಅವಲಂಬಿಸಿದ್ದಾರೆ. ಪ್ರತಿ ವರ್ಷ ಇಬ್ಬರೂ ಸೇರಿ ದೊಡ್ಡ ಗಾತ್ರದ 600ಕ್ಕೂ ಹೆಚ್ಚು ಮತ್ತು ಸಣ್ಣ ಗಾತ್ರದ 3 ಸಾವಿರಕ್ಕೂ ಅಧಿಕ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದರು.
ಎರಡು ತಿಂಗಳ ಮುಂಚೆಯಿಂದ ಇಡೀ ಕುಟುಂಬ ವಿಗ್ರಹ ತಯಾರಿಕೆಯಲ್ಲಿ ತೊಡಗುತ್ತಿತ್ತು. ಈಗ ಆ ಉತ್ಸಾಹ ಇಲ್ಲ. ಕೃಷ್ಣ ಚವ್ಹಾಣ್ ವಿಗ್ರಹ ತಯಾರಿಸುವುದು ಬಿಟ್ಟಿದ್ದಾರೆ. ಗ್ರಾಹಕರು ಬಿಟ್ಟು ಹೋಗಬಾರದು ಎಂಬ ದೃಷ್ಟಿಯಿಂದ ಬೇರೆಡೆ ತಂದು ಮಾರಾಟ ಮಾಡುತ್ತಿದ್ದಾರೆ. ಗೋವರ್ಧನ್ ಅವರ ಇಡೀ ಕುಟುಂಬ ಈ ಸಲವೂ ಗಣೇಶನ ಮೇಲೆ ಭಾರ ಹಾಕಿ ಕೆಲವೇ ವಿಗ್ರಹಗಳನ್ನು ತಯಾರಿಸಿದೆ. ಸರ್ಕಾರ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡಿದರೆ ದೊಡ್ಡ ವಿಗ್ರಹಗಳು ಮಾರಾಟವಾಗಿ ಲಾಭ ಬರುತ್ತದೆ. ಮನೆಯಲ್ಲಿ ಕೂಡಿಸುವ ಸಣ್ಣ ವಿಗ್ರಹಗಳಿಂದ ಹೆಚ್ಚಿನ ಲಾಭ ಇಲ್ಲ ಎನ್ನುತ್ತಾರೆ.
***
ಗಣೇಶ ಮೂರ್ತಿ ಸ್ಥಾಪನೆಗೆ ಹಲವು ಕಟ್ಟಳೆ
ಶಹಾಪುರ: ಕೋವಿಡ್ ಸಂಕಷ್ಟದ ಕಾಲದಲ್ಲಿ ಗಣೇಶ ಸ್ಥಾಪನೆಗೆ ಹಲವು ಕಟ್ಟಳೆಗಳನ್ನು ಹಾಕಿರುವುದರಿಂದ ರೋಸಿ ಹೋದ ಭಕ್ತರು ಗಣೇಶನನ್ನು ಕೂಡಿಸುವುದರಿಂದ ದೂರ ಉಳಿಯುತ್ತಿದ್ದಾರೆ.
ಸರ್ಕಾರವು ಮಠ, ದೇವಸ್ಥಾನದಲ್ಲಿ ಸ್ಥಾಪಿಸಲು ಅನುಮತಿ ನೀಡಿದೆ. ಇಲ್ಲಿನ ಭಾಗದಲ್ಲಿ ಮಠ, ಮಂದಿರದಲ್ಲಿ ಸ್ಥಾಪನೆಯಿಂದ ಲಾಭವಿಲ್ಲದ ಕಾರಣ ಅದರ ಮೇಲುಸ್ತುವಾರಿ ನೋಡಿಕೊಳ್ಳುವ ಗಣ್ಯರು ಸ್ಥಾಪನೆಗೆ ಅವಕಾಶ ನೀಡುತ್ತಿಲ್ಲ ಎನ್ನುತ್ತಾರೆ ನಗರದ ನಿವಾಸಿ ಒಬ್ಬರು.
‘ಬೇರೆ ಬೇರೆ ಕಡೆಯಿಂದ ಗಣೇಶನ ಮೂರ್ತಿಯನ್ನು ತಂದು ಮಾರಾಟ ಮಾಡುತ್ತಿದ್ದೇವು. ಎರಡು ವರ್ಷದಿಂದ ಇಲ್ಲವಾಗಿದೆ. ಯುವಕ ಸಂಘ ಹಾಗೂ ಬಡಾವಣೆಯಲ್ಲಿ ಮೂರ್ತಿ ಸ್ಥಾಪನೆ ಮಾಡಿದರೆ ಯುವಕರು ಹುರುಪಿನಿಂದ ತೆಗೆದುಕೊಂಡು ಹೋಗುತ್ತಿದ್ದರು. ಈಗ ಅದೆಲ್ಲ ಮಾಯವಾಗಿದೆ. ಮನೆಯಲ್ಲಿ ಮಾತ್ರ ಸಣ್ಣ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದಾರೆ’ ಎಂದು ಗಣೇಶ ಮೂರ್ತಿ ವ್ಯಾಪಾರಸ್ಥ ಚಂದ್ರಶೇಖರ ಯಾಳಗಿ ತಿಳಿಸಿದರು.
‘ಗಣೇಶ ಮೂರ್ತಿಯ ಮಾರಾಟ ಹಾಗೂ ಉತ್ಸವ ತನ್ನ ವೈಭವ ಕಳೆದುಕೊಂಡಿದೆ. ಮೂರ್ತಿ ಸ್ಥಾಪನೆ ಮಾಡಿದಾಗ ಹಣ್ಣು ಹೂ, ಹೀಗೆ ಹಲವು ಬಗೆಯ ವಸ್ತು ಮಾರಾಟವಾಗುತ್ತಿತ್ತು. ಅದಕ್ಕೂ ಸಂಚಕಾರ ಬಂದಿದೆ. ಬೀದಿ ಬದಿಯ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಅವರು ತಿಳಿಸಿದರು.
***
ಪರಿಸರ ಸ್ನೇಹಿ ಹಬ್ಬಕ್ಕೆ ಆದ್ಯತೆ
ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೊಡೇಕಲ್ಲ, ನಾರಾಯಣಪುರ ಹಾಗೂ ಹಳ್ಳಿಗಳಲ್ಲಿ ಗಣೇಶ ಉತ್ಸವಕ್ಕೆ ತಯಾರಿ ಆರಂಭವಾಗಿದ್ದು, ಈಗಿನಿಂದಲೇ ಮಕ್ಕಳು ಯುವಕರು ತಮ್ಮ ಅಕ್ಕಪಕ್ಕದ ಮನೆಗಳಲ್ಲಿ ಪರಿಚಯಸ್ಥರಿಂದ ಚಂದಾ ವಸೂಲಿಗೆ ಮುಂದಾಗಿದ್ದಾರೆ.
ಪಟ್ಟಣದಲ್ಲಿ ಕೆಲ ಕುಟುಂಬಗಳ ಮಾತ್ರ ಗಣಪತಿಯನ್ನು ತಂದು ಮಾರಾಟ ಮಾಡುತ್ತಿದ್ದು, ತಾಳಿಕೋಟೆ ಮೂಲಕ ಭೂಸಾರೆ ಕುಟುಂಬದಿಂದ ಈಗಾಗಲೇ ವಿವಿಧ ಗಾತ್ರದ ಪಿಒಪಿ ಗಣಪತಿಗಳನ್ನು ತರಲಾಗಿದ್ದು, ಅಮಾವಾಸ್ಯೆ ಬಳಿಕ ವ್ಯಾಪಾರ ಆರಂಭಿಸುವುದಾಗಿ ಮಲ್ಲಿಕಾರ್ಜುನ ಭೂಸಾರೆ ಹೇಳಿದರು.
ಕೊಡೇಕಲ್ಲ ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ಈರಣ್ಣ ಪತ್ತಾರ ಹಾಗೂ ರವಿ ಪತ್ತಾರ ಕುಟುಂಬ ಶಕ್ತಾನುಸಾರ ಮಣ್ಣಿನ ಗಣಪತಿಗಳನ್ನು ತಯಾರಿಸಿ ತಾವೇ ಬಣ್ಣ ಹಚ್ಚಿ ಮಾರಾಟ ಮಾಡುತ್ತಿದ್ದೇವೆ. ಇದರಲ್ಲಿಯೇ ತೃಪ್ತಿ ಪಡುತ್ತಿದ್ದೇವೆ ಎಂದು ಹೇಳಿದರು.
‘ಹಿಂದಿನಿಂದಲೂ ಮಣ್ಣು ತಂದು ಮನೆಯಲ್ಲಿಯೇ ಗಣಪತಿ ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಆದರೆ, ಬದಲಾದ ಕಾಲಮಾನಕ್ಕೆ ತಕ್ಕಂತೆ ಇಂದಿನ ಯುವ ಪೀಳಿಗೆ ದೊಡ್ಡ ಗಾತ್ರದ ಹಾಗೂ ವೈವಿಧ್ಯಮಯ ಬಣ್ಣಗಳಿಂದ ಆಕರ್ಷಿತರಾಗಿ ಪಿಒಪಿ ಗಣಪತಿಗೆ ಮಾರು ಹೋಗುತ್ತಿದ್ದಾರೆ. ಆದ್ದರಿಂದ ನಮ್ಮ ಕಲೆಗೂ ಬೆಲೆ ಇಲ್ಲದಂತಾಗಿದ್ದು, ಸಿದ್ಧ ಗಣಪತಿಯನ್ನೇ ತಂದು ಮಾರಾಟ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.
****
‘ಎರಡು ರೀತಿ ಮಾದರಿ ಸಂಗ್ರಹ’
ಯಾದಗಿರಿ: ಜಿಲ್ಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಇಲಾಖೆ ವತಿಯಿಂದ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಎರಡು ರೀತಿಯ ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಒಂದು ದಿನ ಮುಂಚೆ, ನಂತರ ದಿನಗಳಲ್ಲಿ ಮಾದರಿ ಸಂಗ್ರಹ ಮಾಡಲಾಗುತ್ತಿದೆ. 1, 3, 5, 7, 9, 11 ದಿನ ಹೀಗೇ ಜಲಮೂಲಗಳ ನೀರು, ವಿಸರ್ಜನೆ ನಂತರ ಉಳಿದಿರುವ ರಾಡಿ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದೆ.
‘ಕೆರೆ, ನದಿ, ಬಾವಿಗಳಲ್ಲಿನ ನೀರು ಸಂಗ್ರಹಿಸಿ ರಾಯಚೂರಿಗೆ ಕಳುಹಿಸಲಾಗುತ್ತದೆ. ವಿಗ್ರಹಗಳ ರಾಡಿಯನ್ನು ಬೆಂಗಳೂರಿನ ಕೇಂದ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿ ಹೊಂದಾಣಿಕೆ ಮಾಡಿ ಪರಿಸರ ಮಾಲಿನ್ಯದ ಬಗ್ಗೆ ತುಲನೆ ಮಾಡಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸಣ್ಣ ವೆಂಕಟೇಶ ತಿಳಿಸುತ್ತಾರೆ.
‘ಈ ಬಾರಿ ಯಾವುದೇ ಜಲ ಮೂಲಗಳಲ್ಲಿ ಪಿಒಪಿ ಸೇರಿದಂತೆ ರಾಸಾಯನಿಕ ಬಣ್ಣಗಳಿಂದ ಕೂಡಿದ ವಿಗ್ರಹಗಳನ್ನು ವಿರ್ಸಜನೆ ಮಾಡುವಂತಿಲ್ಲ. ಸಂಬಂಧಿಸಿದ ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ಮೊಬೈಲ್ ಟ್ಯಾಂಕ್, ಕೃತಕ ಗುಂಡಿ ನಿರ್ಮಾಣ ಮಾಡಬೇಕು. ಅದರಲ್ಲೇ ವಿಸರ್ಜನೆ ಮಾಡಬೇಕು’ ಎಂದರು.
***
ಸದ್ಯಕ್ಕೆ ಮನೆಯಲ್ಲಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ತೆಗೆದುಕೊಳ್ಳುವ ತೀರ್ಮಾನದಂತೆ ಜಿಲ್ಲೆಯಲ್ಲಿ ಅನುಮತಿ ನೀಡಲಾಗುವುದು
ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ
****
ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ. ರಾಸಾಯನಿಕ ಬಣ್ಣಿಗಳಿಂದ ತಯಾರಿಸಿದ ಮೂರ್ತಿಗಳಿಂದ ದೂರವಿರಿ. ಹಬ್ಬದಲ್ಲಿ ಕೋವಿಡ್ ನಿಯಮ ಪಾಲಿಸಿ
ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
***
ಪರಿಸರ ಸ್ನೇಹಿ ಹಾಗೂ ಅರಿಶಿಣ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮನೆಯಲ್ಲಿ ವಿಸರ್ಜಿಸಬೇಕು. ರಾಸಾಯನಿಕ ಮುಕ್ತ ಮೂರ್ತಿಗಳಿಗೆ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ
ಸಣ್ಣ ವೆಂಕಟೇಶ ಸನಬಾಳ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ
***
15 ವರ್ಷಗಳಿಂದ ಗಣೇಶ ಮೂರ್ತಿ ತಯಾರು ಮಾಡುತ್ತಿದ್ದೇನೆ. ನಮ್ಮಲ್ಲಿ ₹100 ರಿಂದ ₹7,000ರ ಬೆಲೆಯ ಮೂರ್ತಿಗಳಿವೆ. ₹7 ಲಕ್ಷ ಖರ್ಚು ಮಾಡಲಾಗಿದೆ
ಮೌನೇಶ ಕುಂಬಾರ, ಮೂರ್ತಿ ತಯಾರಕ
****
ಕೋವಿಡ್‌ನಿಂದಾಗ ಕಳೆದ ವರ್ಷದಿಂದಲೂ ವಿಗ್ರಹಗಳ ಮಾರಾಟ ಕುಸಿದಿದೆ. ಆರ್ಥಿಕವಾಗಿ ನಷ್ಟವಾಗಿದ್ದು, ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ
ಬಾಬುಲಾಲ್ ಡಾನಿ ಠಾಕೂರ್, ವಿಗ್ರಹ ತಯಾರಕ
***
ಕುಟುಂಬದಲ್ಲಿ 11 ಸದಸ್ಯರಿದ್ದು, ನಿತ್ಯದ ಊಟಕ್ಕೆ ಸಾವಿರದಿಂದ ಹದಿನೈದು ನೂರು ರೂಪಾಯಿ ಖರ್ಚಾಗುತ್ತಿದೆ. ವ್ಯಾಪಾರವಾಗದಿದ್ದರೆ ಊಟಕ್ಕೆ ಸಾಲವೇ ಗತಿ
ಪೀಸ್ತಾದೇವಿ ಡಾನಿ ಠಾಕೂರ್, ವಿಗ್ರಹ ತಯಾರಕರು
***
2019ರಲ್ಲಿ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ನೀರು ಶುದ್ಧೀಕರಣ ಘಟಕದ ನಿರುಪಯುಕ್ತ ಸಂಗ್ರಹಗಾರದಲ್ಲಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಬಗ್ಗೆ ತಾಲ್ಲೂಕು ಆಡಳಿತ ಇನ್ನೂ ಸಭೆ ನಡೆಸಿಲ್ಲ
ಜೀವನಕುಮಾರ ಕಟ್ಟಿಮನಿ, ಪೌರಾಯುಕ ನಗರಸಭೆ ಸುರಪುರ
***
ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಎಂ.ಪಿ.ಚಪೆಟ್ಲಾ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.