ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಪಿಡಿಒ ಕೊರತೆ: ಅಭಿವೃದ್ಧಿಗೆ ಹೊಡೆತ

ಜಿಲ್ಲೆಯಲ್ಲಿ 20 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಖಾಲಿ, ವಡಗೇರಾ ತಾಲ್ಲೂಕಿನಲ್ಲಿ ಹೆಚ್ಚು
Last Updated 2 ಜೂನ್ 2022, 4:55 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಆರು ತಾಲ್ಲೂಕುಗಳು ಸೇರಿ 122 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ 20 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಖಾಲಿ ಇದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹೊಡೆತ ಬಿದ್ದಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಟಾನಗೊಂಡರೆ ಮಾತ್ರ ಅದು ಸಾರ್ವಜನಿಕರಿಗೆ ಮುಟ್ಟುತ್ತದೆ. ಆದರೆ, ಅದನ್ನು ಮುಟ್ಟಿಸುವ ಅಧಿಕಾರಿಗಳ ಹುದ್ದೆಯೇ ಖಾಲಿಯಾಗಿದ್ದರೆ ಅದನ್ನು ತಲುಪಿಸುವವರು ಯಾರು ಎನ್ನುವ ಪ್ರಶ್ನೆ ಎದ್ದಿದೆ.

ಜಿಲ್ಲೆಯಲ್ಲಿ ಗುರುಮಠಕಲ್‌, ವಡಗೇರಾ, ಹುಣಸಗಿ ಹೊಸ 3 ತಾಲ್ಲೂಕು, ಯಾದಗಿರಿ, ಶಹಾಪುರ, ಸುರಪುರ ಹಳೆ ಮೂರು ತಾಲ್ಲೂಕು ಸೇರಿ 6 ತಾಲ್ಲೂಕು ಕೇಂದ್ರಗಳಿವೆ. ಇವುಗಳ ವ್ಯಾಪ್ತಿಯಲ್ಲಿ 122 ಗ್ರಾಮ ಪಂಚಾಯಿತಿಗಳಿದ್ದು, ಪಿಡಿಒಗಳು ಇಲ್ಲದಿದ್ದರಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯದೇ ಹೊಸದಾಗಿ ಆಯ್ಕೆಯಾದ ಪಂಚಾಯಿತಿ ಸದಸ್ಯರು ಪರಿತತಪಿಸುತ್ತಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ 22 ಗ್ರಾಮ ಪಂಚಾಯಿತಿಗಳು, ಗುರುಮಠಕಲ್‌ ತಾಲ್ಲೂಕಿನಲ್ಲಿ 18 ಗ್ರಾಮ ಪಂಚಾಯಿತಿಗಳು, ಶಹಾಪುರ ತಾಲ್ಲೂಕಿನಲ್ಲಿ 24 ಗ್ರಾಮ ಪಂಚಾಯಿತಿಗಳು, ವಡಗೇರಾ ತಾಲ್ಲೂಕಿನಲ್ಲಿ 17 ಗ್ರಾಮ ಪಂಚಾಯಿತಿಗಳು, ಸುರಪುರ ತಾಲ್ಲೂಕಿನಲ್ಲಿ 23 ಗ್ರಾಮ ಪಂಚಾಯಿತಿಗಳು, ಹುಣಸಗಿ ತಾಲ್ಲೂಕಿನಲ್ಲಿ 18 ಗ್ರಾಮ ಪಂಚಾಯಿತಿಗಳು ಸೇರಿದಂತೆ 122 ಗ್ರಾಮ ಪಂಚಾಯಿತಿಗಳಿವೆ.

ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ: ಅಭಿವೃದ್ಧಿ ಕಾರ್ಯಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿ ಅಧ್ಯಕ್ಷರ ಸಹಿ ಮುಖ್ಯವಾಗಿ ಬೇಕಾಗುತ್ತದೆ. ಆದರೆ, ಅಧ್ಯಕ್ಷರು ಇದ್ದು, ಪಿಡಿಒ ಇಲ್ಲದ್ದರಿಂದ ಯಾವುದೇ ಕಾಮಗಾರಿಗಳಿಗೆ ಅನುಮೋದನೆ ನೀಡಲು ಹಿನ್ನಡೆಯಾಗುತ್ತಿದೆ. ಇದರಿಂದ ಪಿಡಿಒ ಇಲ್ಲದ ಗ್ರಾಮ ಪಂಚಾಯಿತಿಗಳು ಇದ್ದೂ ಇಲ್ಲದಂತೆ ಆಗಿ ಬೀಗ ಹಾಕುವ ಪರಿಸ್ಥಿತಿ ಬಂದಿವೆ.

ವಡಗೇರಾ ತಾಲ್ಲೂಕಿನ ಗುರುಸಣಗಿ ಗ್ರಾಮ ಪಂಚಾಯಿತಿಗೆ ಕಳೆದ ಮೂರು ತಿಂಗಳಿನಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಇಲ್ಲದೇ ಅವ್ಯವಸ್ಥೆ ಸೃಷ್ಟಿಯಾಗಿದ್ದು, ಕೂಡಲೇ ಪಿಡಿಒ ಒದಗಿಸುವಂತೆ ಗ್ರಾ.ಪಂ ಸದಸ್ಯರು ಜಿಲ್ಲಾ ಪಂಚಾಯಿತಿ ಸಿಇಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ್ದರು. ಆದರೂ ಇನ್ನೂ ನೇಮಕವಾಗದಿರುವುದು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಲ್ಲದೇ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಕಾರ್ಯಗಳು ನಡೆಯದೆ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ನೇರವಾಗಿ ಪಂಚಾಯಿತಿ ಸದಸ್ಯರಿಗೆ ಕೇಳುತ್ತಿದ್ದು, ಉತ್ತರಿಸುವುದು ಸಮಸ್ಯೆಯಾಗಿದೆ ಎಂದು ಆವಲತ್ತುಕೊಂಡಿದ್ದರು.

‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿಗೆ ಬಾರದಿರುವುದರಿಂದ ಸಾರ್ವಜನಿಕರಿಗೆ ಉತ್ತರಿಸಲು ಆಗುತ್ತಿಲ್ಲ. ಇದರಿಂದ ನಮಗೆ ಗ್ರಾಮಸ್ಥರಿಗೆ ಉತ್ತರಿಸಲು ಸಾಧ್ಯವಾಗದಂತೆ ಪರಿಸ್ಥಿತಿ ಇದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಕೈಕೈ ಹಿಸಿಕೊಳ್ಳುತ್ತಿದ್ದಾರೆ.

ವಡಗೇರಾ ತಾಲ್ಲೂಕಿನಲ್ಲಿ ವಿಶೇಷವಾಗಿ ಪಿಡಿಒ ಹುದ್ದೆಗಳು ಖಾಲಿಯಾಗಿವೆ. ಅಧಿಕಾರಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿರುವುದರಿಂದ ಗ್ರಾಮದ ಅಭಿವೃದ್ಧಿ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ. ಬಹುತೇಕ ಕಂಪ್ಯೂಟರ್‌ ಆಪರೇಟ್‌ಗಳ ಮೂಲಕ ನಡೆಯುತ್ತಿವೆ. ಇದರಿಂದ ಜನರಿಗೆ ಸರಿಯಾದ ಕೆಲಸ ಕಾರ್ಯಗಳು ಆಗುತ್ತಿಲ್ಲ.

ಅಧಿಕಾರಿಗಳ ವಿಳಂಬ ಧೋರಣೆಗೆ ಆಕ್ರೋಶ ವ್ಯಕ್ತಪಡಿಸುವ ವಡಗೇರಾ ತಾಲ್ಲೂಕು ಗ್ರಾಮ ಪಂಚಾಯಿತಿ ಸದಸ್ಯರು ಕೂಡಲೇ ನೇಮಿಸಲು ಆಗ್ರಹಿಸುತ್ತಾರೆ.

‘ಮುಂದಿನ ದಿನಗಳಲ್ಲಿ ಗ್ರೇಡ್‌– 1 ಅಧಿಕಾರಿಗಳಿಗೆ ಪಿಡಿಒಗಳಾಗಿ ಬಡ್ತಿ ನೀಡಲಾಗುವುದು. ಆಗ ಖಾಲಿ ಹುದ್ದೆಗಳು ಕಡಿಮೆಯಾಗಲಿವೆ. ಇದರಿಂದ ಕಾಮಗಾರಿಗಳು ಶೀಘ್ರ ನಡೆಯಲಿವೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ನಾಯ್ಕ ಅವರು.

* ಜಿಲ್ಲೆಯ ವಡಗೇರಾ, ಶಹಾ‍ಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಖಾಲಿ ಇದ್ದು, ಕೆಲವರು ಆರೋಗ್ಯ ಸಂಬಂಧಿಸಿದಂತೆ ರಜೆ ಮೇಲೆ ತೆರಳಿದ್ದಾರೆ.

-ಅಮರೇಶ ನಾಯ್ಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ

* ಕಳೆದ ಎರಡು ತಿಂಗಳಿಂದ ಗುರುಸಣಗಿ ಗ್ರಾಮ ಪಂಚಾಯಿತಿಗೆ ಪಿಡಿಒ ಇಲ್ಲದಂತೆ ಆಗಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಿದೆ. ಪಿಡಿಒ ನೇಮಿಸಲು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

-ಗೌತಮ ಕ್ರಾಂತಿ, ಬಬಲಾದ ಗ್ರಾ.ಪಂ ಸದಸ್ಯ

* ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಎರಡ್ಮೂರು ಪಂಚಾಯಿತಿಗೆ ಒಬ್ಬರೇ ಪಿಡಿಒ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಗಳ ಅಭಿವೃದ್ಧಿ ಕುಂಠಿತಗೊಂಡಿದೆ. ಶೀಘ್ರ ಎಲ್ಲ ಹುದ್ದೆ ಭರ್ತಿ ಮಾಡಿ.

-ನಾಗೇಶ ಗದ್ದಿಗಿ, ಗುರುಮಠಕಲ್‌ ಯುವ ಮುಖಂಡ

ತಯಾರಾಗದ ಕ್ರಿಯಾ ಯೋಜನೆ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಆಯಾ ಗ್ರಾಮ, ವಾರ್ಡ್‌ಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳೇ ಇಲ್ಲದಿದ್ದರೆ ಅವುಗಳನ್ನು ಮಾಡುವವರು ಯಾರು ಎನ್ನುವ ಪ್ರಶ್ನೆ ಬರುತ್ತಿದೆ.

ಪ್ರಭಾರಿ ಅಧಿಕಾರ ವಹಿಸಿಕೊಂಡವರೂ ದೊಡ್ಡ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡುತ್ತಿಲ್ಲ. ಇದರಿಂದ ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಸದಸ್ಯರ ಆರೋಪವಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ
ತಾಲ್ಲೂಕು; ಮಂಜೂರು;ಭರ್ತಿ;ಖಾಲಿ
ಯಾದಗಿರಿ;22;18;4
ಗುರುಮಠಕಲ್‌;18;17;1
ಶಹಾಪುರ;24;22;2
ವಡಗೇರಾ;17;11;6
ಸುರಪುರ;23;19;4
ಹುಣಸಗಿ;18;15;3
ಒಟ್ಟು;122;102;20


ಆಧಾರ: ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT