ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳಲ್ಲಿ ಗರಿಗೆದರಿದ ರಾಜಕೀಯ!

ಆಕಾಂಕ್ಷಿಗಳಿಂದ ಆಯಾ ಪಕ್ಷದ ಮುಖಂಡರ ಭೇಟಿ, ತಮ್ಮನ್ನು ಬೆಂಬಲಿಸಲು ಕೋರಿಕೆ
Last Updated 20 ನವೆಂಬರ್ 2020, 4:29 IST
ಅಕ್ಷರ ಗಾತ್ರ

ಯಾದಗಿರಿ: ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಮೂರು ವಾರಗಳಲ್ಲಿ ವೇಳಾಪಟ್ಟಿ ಪ್ರಕಟಿಸುವಂತೆ ಸರ್ಕಾರಕ್ಕೆಹೈಕೋರ್ಟ್‌ ಸೂಚಿಸಿದ್ದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಗರಿಗೆದರಿದೆ.

ಕೋವಿಡ್‌ ಕಾರಣದಿಂದ 6 ತಿಂಗಳು ಕಾಲ ಮುಂದೂಡಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಮತ್ತೆ ಮುನ್ನೆಲೆಗೆ ಬಂದಿದೆ.ಈಗಾಗಲೇ ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾಗಿದ್ದು, ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ. ಇದು ಆಕಾಂಕ್ಷಿಗಳಲ್ಲಿ ಹುರುಪು ತಂದಿದ್ದು, ಹಳ್ಳಿಯ ಹರಟೆಕಟ್ಟೆಗಳಲ್ಲಿ ಇದೇ ಮಾತು ನಡೆಯುತ್ತಿದೆ.

ಈ ಬಾರಿ ತಾವೇ ಅಭ್ಯರ್ಥಿ ಎಂದು ಯುವ ಸಮೂಹ ಬಿಂಬಿಸಿಕೊಳ್ಳುತ್ತಿರುವುದು ಕಾಣಬಹುದು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಇರುವುದಿಲ್ಲ. ಆದರೂ ಅಭ್ಯರ್ಥಿಗಳು ಯಾವುದಾದರೂ ಪಕ್ಷದೊಂದಿಗೆ ಗುರುತಿಸಿಕೊಂಡಿರುತ್ತಾರೆ. ಹೀಗಾಗಿ ಆಯಾ ಪಕ್ಷದ ಮುಖಂಡರು ಭೇಟಿಯಾಗುವ ಮೂಲಕ ತಮ್ಮ ಸ್ಪರ್ಧೆಯನ್ನು ಪರೋಕ್ಷವಾಗಿ ನಾಯಕರಿಗೆ ಮನದಟ್ಟು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಹಳ್ಳಿಗಳಲ್ಲಿ ಕಂಡು ಬರುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ: ಈಗಾಗಲೇ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸುವವರು ತಮ್ಮ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ‌

‘ನಾನು ಗ್ರಾಮ ಪಂಚಾಯಿತಿ ಚುನಾವಣೆ ಆಕಾಂಕ್ಷಿ’ ಎಂದು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಬರೆದುಕೊಂಡು ಗ್ರೂಪ್‌ಗಳಿಗೆ ಹಂಚಿಕೊಳ್ಳುತ್ತಿದ್ದಾರೆ.

ವಿವಿಧ ಭಂಗಿಗಳ ಫೋಟೊಗಳು ಜಾಲತಾಣಗಳಲ್ಲಿ ಕಾಣಸಿಗುತ್ತಿವೆ. ವಿಶೇಷ ಮುತುವರ್ಜಿ ವಹಿಸಿ ಫೋಟೋ ಅಪ್ಲೋಡ್‌ ಮಾಡುತ್ತಿದ್ದಾರೆ.

ಎಂದೂ ಮಾತನಾಡಿಸದವರನ್ನು ಆಕಾಂಕ್ಷಿಗಳು ಮಾತಿಗೆ ಎಳೆಯುತ್ತಾರೆ. ಅದು ಇದು ಅಂತ ಮಾತನಾಡಿ ಕೊನೆಗೆ ನಾನು ಚುನಾವಣೆಗೆ ನಿಲ್ಲಬೇಕು. ನಿಮ್ಮ ಸಹಕಾರ ಇರಲಿ ಎಂದು ವಿನಂತಿ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ನಗರ ಪ್ರದೇಶದಲ್ಲಿದ್ದವರು ಗ್ರಾಮಗಳಿಗೆ ತೆರಳಿದಾಗ ಇದು ಹೆಚ್ಚು ಸದ್ದು ಮಾಡಿದೆ.
ಮತದಾರರನ್ನು ಸೆಳೆಯಲು ತಂತ್ರ: ಈಗಾಗಲೇ ಅಧಿಕಾರದ ರುಚಿಕಂಡವರು ಮುಂದೆಯೂ ತಮ್ಮನ್ನೆ ಆಯ್ಕೆ ಮಾಡಲು ಮತದಾರರನ್ನು ಸೆಳೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಪ್ರಮುಖವಾಗಿ ಹೇಳಿದ ಕೆಲಸಗಳನ್ನು ಆದ್ಯತೆ ಮೇಲೆ ಈ ಬಾರಿ ಮಾಡಿಕೊಡುವುದಾಗಿ ಭರವಸೆ ನೀಡುತ್ತಿದ್ದಾರೆ.

ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಭರದಲ್ಲಿ ಜನರನ್ನು ಸೇರಿಸಿ ಅಲ್ಲಲ್ಲಿ ಸಭೆಗಳನ್ನು ಆಕಾಂಕ್ಷಿಗಳು ಮಾಡುತ್ತಿದ್ದಾರೆ. ಕಳೆದ ಬಾರಿ ಎಷ್ಟು ಕೆಲಸಗಳನ್ನು ಮಾಡಿಸಿದ್ದೇನೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡುತ್ತಿದ್ದಾರೆ.

‘ನಮ್ಮ ಗ್ರಾಮದಲ್ಲಿ ಈ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಗೆದ್ದ ಮೇಲೆ ಇಂಥ ಕೆಲಸ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಐದು ವರ್ಷವಾದರೂ ಚಕಾರ ಎತ್ತಿರಲಿಲ್ಲ. ಈಗ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಂತೆ ಆ ಏರಿಯಾ ಜನರನ್ನು ಸೇರಿಸಿ ‘ಆ ಕೆಲಸ’ ಮಾಡಿಕೊಡಲು ಮುಂದೆ ಬಂದಿದ್ದಾರೆ. ಇದೆಲ್ಲ ರಾಜಕೀಯ ಎಂದು ಗೊತ್ತಿದೆ. ಆದರೂ ನಮ್ಮ ಏರಿಯಾಗೆ ಒಳ್ಳೆಯದು ಮಾಡುವಾಗ ನಾವು ಯಾಕೆ ಬೇಡ ಎನ್ನಬೇಕು’ ಎಂದು ಪ್ರಶ್ನಿಸುತ್ತಾರೆ ಯುವ ಮುಖಂಡ ತಾಯಪ್ಪ ಗುಂಜನೋರ.
‌‌ ‘ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಮೇಲೆ ಎರಡ್ಮೂರು ಬಾರಿ ನಮಗೆ ನೀಡಿದ ಭರವಸೆ ಬಗ್ಗೆ ಅವರಿಗೆ ನೆನಪು ಮಾಡಿಕೊಡಲಾಯಿತು. ಆದರೂ ಆಗ ಯಾವುದೇ ಭರವಸೆ ನೀಡಲಿಲ್ಲ. ಈಗ ಏಕಾಏಕಿ ಜನರನ್ನು ಕರೆದು ಆ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದಾರೆ’ ಎನ್ನುತ್ತಾರೆ ಅವರು.

ಮೂರು ವಾರಗಳಲ್ಲಿ ರಾಜ್ಯ ಸರ್ಕಾರ ವೇಳಾಪಟ್ಟಿ ಪ್ರಕಟಿಸಿದರೆ ಹಳ್ಳಿ ರಾಜಕೀಯ ಮತ್ತಷ್ಟು
ರಂಗೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT