ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 3.90 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ- ವಾಡಿಕೆಗಿಂತ ಹೆಚ್ಚು ಮಳೆ

ಭೂಮಿ ಹಸನು ಮಾಡುತ್ತಿರುವ ರೈತ, ಎಪ್ರಿಲ್‌, ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ
Last Updated 17 ಮೇ 2022, 15:39 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.90 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಾಗಿದ್ದು, ಕೃಷಿ ಇಲಾಖೆ ವತಿಯಿಂದ 2022-23ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆಪೂರ್ವ ಚಟುವಟಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ವಾಡಿಕೆ ಮಳೆ 17 ಮಿಲಿಮೀಟರ್‌ (ಎಂಎಂ) ಇದ್ದು, 24 ಎಂಎಂ ಮಳೆಯಾಗಿದೆ. ಮೇ 17ರ ವರೆಗೆ 16 ಎಂಎಂ ಮಳೆಯಾಗಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ರೈತರು ಬಿತ್ತನೆಗೆ ಭೂಮಿ ಹದಗೊಳಿಸುತ್ತಿದ್ದಾರೆ.

ಜನವರಿ 1ರಿಂದ ಮೇ 17ರ ವರೆಗೆ 42 ಎಂಎಂ ಮಳೆಯಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಆಗಾಗ ಮಳೆ ಸುರಿಯುತ್ತಿದೆ. ಏಪ್ರಿಲ್‌ ಕೊನೆವಾರದಿಂದಲೇ ಮಳೆ ಆರಂಭವಾಗಿದ್ದು, ರೈತರು ಹರ್ಷಗೊಂಡಿದ್ದಾರೆ. ಹೀಗಾಗಿ ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮೇ ತಿಂಗಳಲ್ಲಿ ಉತ್ತಮ ಮಳೆಯಾದರೆ ಯಾದಗಿರಿ, ಗುರುಮಠಕ್‌ ತಾಲ್ಲೂಕು ಮತ್ತು ದೋರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹೆಸರು ಬಿತ್ತನೆ ಮಾಡುತ್ತಾರೆ. ಮಳೆ ತಡವಾದರೆ ಹೆಸರು ಬಿಟ್ಟು ಹತ್ತಿ ಬಿತ್ತನೆ ಮಾಡುತ್ತಾರೆ.

ಜಿಲ್ಲೆಯಲ್ಲಿ 836 ಮಿ.ಮೀ. ವಾಡಿಕೆ ಮಳೆಯ ಪ್ರಮಾಣ ಇದೆ. ಭತ್ತ, ಹೆಸರು, ತೊಗರಿ, ಹತ್ತಿ, ಸಜ್ಜೆ ಹಾಗೂ ಸೂರ್ಯಕಾಂತಿ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಜಿಲ್ಲೆಯ ಪ್ರಮುಖ ಬೆಳೆಗಳು.

ಜಿಲ್ಲೆಯು ಭೌಗೋಳಿಕವಾಗಿ 5,16,088 ಹೆಕ್ಟೇರ್ ಪ್ರದೇಶ ಹೊಂದಿದೆ. ಒಟ್ಟು 4,42,272 ಹೆಕ್ಟೇರ್ ಸಾಗುವಳಿ ವಿಸ್ತೀರ್ಣ ಹೊಂದಿದೆ.

ಮುಂಗಾರು ಹಂಗಾಮು (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ) 1,17,360 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರದ ಅವಶ್ಯಕತೆಯಿದ್ದು, ಜಿಲ್ಲೆಯಲ್ಲಿ ಪ್ರಸ್ತುತ 25,712 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.

ತಾಲ್ಲೂಕುವಾರು ಬಿತ್ತನೆ ವಿವರ: ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ಆಯಾ ತಾಲ್ಲೂಕುಗಳಿಗೆ ಬಿತ್ತನೆ ಗುರಿಯನ್ನು ಹೊಂದಲಾಗಿದೆ.
ಶಹಾಪುರ ತಾಲ್ಲೂಕಿನಲ್ಲಿ 73,855 ಹೆಕ್ಟೇರ್‌ ಪ್ರದೇಶ, ವಡಗೇರಾ ತಾಲ್ಲೂಕಿನಲ್ಲಿ 46,967 ಹೆಕ್ಟೇರ್‌, ಸುರಪುರ ತಾಲ್ಲೂಕಿನಲ್ಲಿ 87,782 ಹೆಕ್ಟೇರ್‌, ಹುಣಸಗಿ ತಾಲ್ಲೂಕಿನಲ್ಲಿ 57,136 ಹೆಕ್ಟೇರ್‌, ಯಾದಗಿರಿ ತಾಲ್ಲೂಕಿನಲ್ಲಿ 71,476 ಹೆಕ್ಟೇರ್‌, ಗುರುಮಠಕಲ್‌ ತಾಲ್ಲೂಕಿನಲ್ಲಿ 52,996 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಬೀಜ ದಾಸ್ತಾನು: ಭತ್ತ 5,002ಕ್ವಿಂಟಲ್‌, ತೊಗರಿ 3,744 ಕ್ವಿಂಟಲ್‌, ಹೆಸರು 1,470, ಸಜ್ಜೆ 1,250, ಸೂರ್ಯಕಾಂತಿ 30 ಕ್ವಿಂಟಲ್‌, ಉದ್ದು 25 ಕ್ವಿಂಟಲ್‌, ಎಳ್ಳು 15 ಕ್ವಿಂಟಲ್‌ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ.

ಏಪ್ರಿಲ್‌ ಕೊನೆ ವಾರದಲ್ಲಿ ಸುರಿದ ಮಳೆಗೆ 3,481 ಹೆಕ್ಟೇರ್‌ ಭತ್ತ ಬೆಳೆ ಹಾನಿಯಾಗಿದೆ. ಈಗಾಗಲೇ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

***

ಭತ್ತ ನಿಷೇಧಿತ ಬೆಳೆ

ಜಿಲ್ಲೆಯಲ್ಲಿ ಯಾದಗಿರಿ, ಗುರುಮಠಕಲ್‌ ತಾಲ್ಲೂಕು ಹೊರತು ಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಭತ್ತ ಬೆಳೆಯುವುದನ್ನು ನಿಷೇಧಿಸಲಾಗಿದೆ.

ಹೀಗಾಗಿ ಯಾದಗಿರಿ ಗುರುಮಠಕಲ್‌ ತಾಲ್ಲೂಕುಗಳಲ್ಲಿ ಮಾತ್ರ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಉಳಿದ ಕಡೆ ವಿತರಿಸುವುದಿಲ್ಲ. ಅದರಂತೆ ಬಿಟಿ ಹತ್ತಿ ಖಾಸಗಿ ಕಂಪನಿಯಿಂದ ಪೂರೈಸಲಾಗುತ್ತಿದೆ. ಆದರೆ, ಕೃಷಿ ಇಲಾಖೆಯಿಂದ ಮಾರಾಟ ಮಾಡಲಾಗುವುದಿಲ್ಲ. ಇದರಿಂದ ರೈತರು ಖಾಸಗಿಯಾಗಿ ಖರೀದಿ ಮಾಡುತ್ತಾರೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
**
ಬಿತ್ತನೆ ವಿವರ

ಬೆಳೆ;ಹೆಕ್ಟೇರ್‌
ಭತ್ತ;87,000
ತೊಗರಿ;96,000
ಹೆಸರು;26,010
ಹತ್ತಿ;1,66,000
ಆಧಾರ: ಕೃಷಿ ಇಲಾಖೆ
***
ರಸಗೊಬ್ಬರ ದಾಸ್ತಾನು (ಮೆಟ್ರಿಕ್‌ ಟನ್‌ಗಳಲ್ಲಿ)

ಯೂರಿಯಾ;15,752
ಡಿಎಪಿ;1,825
ಕಾಂಪ್ಲೆಕ್ಸ್‌;7,357
ಎಂಒಪಿ;324

***

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವ ಬೀಜ ಮತ್ತು ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಕೃಷಿ ಇಲಾಖೆಯಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ
ಅಬಿದ್‌ ಎಸ್‌ ಎಸ್‌. ಜಂಟಿ ಕೃಷಿ ನಿರ್ದೇಶಕ

***

ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಿರುವುದರಿಂದ ಬಿತ್ತನೆಗಾಗಿ ಭೂಮಿಯನ್ನು ಹಸನು ಮಾಡಿಕೊಳ್ಳಲಾಗುತ್ತಿದೆ. ಉತ್ತಮ ಮಳೆ ಬರುವ ಸೂಚನೆ ಇದ್ದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ
ಶಿವಶಂಕರೆಡ್ಡಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT