ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಯಾರಿಗೆ ಸಿಗಲಿದೆ ನಿಗಮ ಮಂಡಳಿ ಸ್ಥಾನ?

Published 21 ಫೆಬ್ರುವರಿ 2024, 4:54 IST
Last Updated 21 ಫೆಬ್ರುವರಿ 2024, 4:54 IST
ಅಕ್ಷರ ಗಾತ್ರ

ಯಾದಗಿರಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳಾಗುತ್ತಿದ್ದು, ವಿವಿಧ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯಲ್ಲಿ ಹಲವಾರು ಆಕಾಂಕ್ಷಿಗಳು ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ನಿಗಮ ಮಂಡಳಿ ಸ್ಥಾನ ಸಿಗುವುದೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಪಕ್ಷಕ್ಕಾಗಿ ತನು, ಮನ, ಧನದಿಂದ ದುಡಿದವರನ್ನು ಗುರುತಿಸಬೇಕು ಎನ್ನುವುದು ಆಕಾಂಕ್ಷಿಗಳ ಒತ್ತಾಯವಾಗಿದೆ.

ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದು, ಗುರುಮಠಕಲ್‌ ಮತಕ್ಷೇತ್ರದಲ್ಲಿ ಮಾತ್ರ ಜೆಡಿಎಸ್‌ ಶಾಸಕರಿದ್ದಾರೆ. ಹೀಗಾಗಿ ಶಾಸಕರು ಇಲ್ಲದ ಕಡೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನಮಾನ ಕಲ್ಪಿಸಬೇಕು ಎಂದು ಆಕಾಂಕ್ಷಿಗಳು ಕಸರತ್ತು ನಡೆಸಿದ್ದಾರೆ.

ಈಗಾಗಲೇ ನಿಗಮ ಮಂಡಳಿಗಳಿಗೆ 34 ಶಾಸಕರನ್ನು ನೇಮಕ ಮಾಡಲಾಗಿದ್ದು, ಉಳಿದ ಮಂಡಳಿಗಳಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನೇಮಕ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಟ್ಟಾ ಬೆಂಬಲಿಗರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಲಿದೆ ಎಂದು ಪಕ್ಷದ ಮೂಲಗಳು ಪ್ರತಿಪಾದಿಸುತ್ತಿವೆ.

ಜಿಲ್ಲೆಯ ಆಕಾಂಕ್ಷಿಗಳು ದೆಹಲಿ ಸೇರಿದಂತೆ ಕಲಬುರಗಿಗೆ ಖರ್ಗೆಯವರು ಬಂದಾಗ ಭೇಟಿ ಮಾಡುವ ನೆಪದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಟವೆಲ್‌ ಹಾಕಿ ಬಂದಿದ್ದಾರೆ. ಅಲ್ಲದೇ ಸನ್ಮಾನ ಮಾಡಿ ತಮ್ಮನ್ನು ಗುರುತಿಸುವಂತೆ, ನಿಗಮ ಮಂಡಳಿಗಳಿಗೆ ನೇಮಿಸುವಂತೆ ಬೇಡಿಕೆ ಸಲ್ಲಿಸಿ ಬಂದಿದ್ದಾರೆ.

ಖರ್ಗೆ ಅವರ ಬೆಂಬಲಿಗರು ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ ಸಾಕಷ್ಟು ಜನ ಇದ್ದಾರೆ. ಅಲ್ಲದೇ ಇದರಲ್ಲಿ ಆಪ್ತರು ಹಾಗೂ ಕಾರ್ಯಕರ್ತರು ಸೇರಿದ್ದಾರೆ. ಇದರಿಂದ ನಿಗಮ ಮಂಡಳಿ ಅಧ್ಯಕ್ಷ ಆಕಾಂಕ್ಷಿಗಳ ನಡೆ ಕೂತೂಹಲ ಮೂಡಿಸಿದೆ.

ಕಾಯುತ್ತಿರುವ ಮುಖಂಡರು: ನಿಗಮ ಮಂಡಳಿ ಸ್ಥಾನ ಯಾರಿಗೆ ಸಿಗಲಿದೆ ಎಂದು ಜಿಲ್ಲೆಯ ಹಲವಾರು ಮುಖಂಡರು ಕಾಯುತ್ತಾ ಕುಳಿತ್ತಿದ್ದಾರೆ. ಆದರೆ, ನೇಮಕ ವಿಳಂಬವಾಗುತ್ತಲೇ ಇದೆ. ಇದರಿಂದ ಕುತೂಹಲ ಹೆಚ್ಚಾಗಿದೆ.

ಖರ್ಗೆಯವರು ಮನಸು ಮಾಡಿದರೆ ಯಾದಗಿರಿ ಜಿಲ್ಲೆಗೆ ಹೆಚ್ಚು ನಿಗಮ–ಮಂಡಳಿ ಸ್ಥಾನ ಸಿಗಬಹುದು ಎಂದು ಪಕ್ಷದಲ್ಲಿ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಯಾದಗಿರಿ, ಗುರುಮಠಕಲ್‌ ಮತಕ್ಷೇತ್ರದಲ್ಲಿ ಹಿರಿಯರಾದ ಮಲ್ಲಣ್ಣ ದಾಸನಕೇರಿ, ಮಲ್ಲಣ್ಣಗೌಡ ಕೌಳೂರು, ಲಾಯಕ ಬಾದಲ್ ಹುಸೇನ್, ಚಿದಾನಂದಪ್ಪ ಕಾಳಬೆಳಗುಂದಿ, ಸಿದ್ದಿಲಿಂಗರಡ್ಡಿ ಉಳ್ಳೆಸೂಗೂರ... ಹೀಗೆ ಅನೇಕ ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿವೆ.

ಅಧ್ಯಕ್ಷರಿಗೆ ಪ್ರತಿಷ್ಠೆ

ಚುನಾವಣೆ ಲೋಕಸಭಾ ಚುನಾವಣೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ಚುನಾವಣೆ ಪ್ರತಿಷ್ಠೆಯ ವಿಚಾರವಾಗಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಸಂಸದರನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಇದೆ. ಹೀಗಾಗಿ ಪಕ್ಷದ ನಿಷ್ಠಾವಂತರಿಗೆ ಸರ್ಕಾರದಲ್ಲಿ ಭಾಗಿಯಾದರೆ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಾರೆ ಎನ್ನುವುದನ್ನು ಅರಿತಿರುವ ಮುಖಂಡರು ಯಾರಿಗೆ ಮಣೆ ಹಾಕಲಿದ್ದಾರೆ ಎನ್ನುವುದು ನಿಗೂಢವಾಗಿ ಉಳಿದಿದೆ. ರಾಜ್ಯದವರೇ ಕಾಂಗ್ರೆಸ್‌ ವರಿಷ್ಠರಾಗಿದ್ದರಿಂದ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಭಾರಿ ಕೂತೂಹಲ ಕೆರಳಿಸಿದೆ.

ಎರಡು ಕ್ಷೇತ್ರಗಳಿಗೆ ಆದ್ಯತೆ

ಈಗಾಗಲೇ ಶಹಾಪುರ ಸುರಪುರ ಮತಕ್ಷೇತ್ರಗಳಿಗೆ ಸರ್ಕಾರದಲ್ಲಿ ಆದ್ಯತೆ ನೀಡಲಾಗಿದೆ. ಶಹಾಪುರ ಮತಕ್ಷೇತ್ರದಿಂದ ಶರಣಬಸಪ್ಪ ದರ್ಶನಾಪುರ ಅವರಿಗೆ ಸಚಿವ ಸ್ಥಾನ ಸುರಪುರ ಮತಕ್ಷೇತ್ರದಿಂದ ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷರಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ನೇಮಕ ಮಾಡಲಾಗಿದೆ. ಯಾದಗಿರಿ ಗುರುಮಠಕಲ್‌ ಮತಕ್ಷೇತ್ರದಿಂದ ಮಾತ್ರ ಬಾಕಿ ಇದ್ದು ಇದಕ್ಕಾಗಿ ಜಿಲ್ಲಾಕೇಂದ್ರದಿಂದ ಹೆಚ್ಚಿನ ಆಕಾಂಕ್ಷಿಗಳು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT