ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಕೋರ್ಟ್‌ ಕಟ್ಟಡ ಉದ್ಘಾಟನೆ; ಚರ್ಚೆಗೆ ಗ್ರಾಸ

ಫೆ.17ರಂದು ನಿಗದಿಯಾಗಿದ್ದ ಕಾರ್ಯಕ್ರಮ, ರದ್ದಾಗಿದ್ದರಿಂದ ವಕೀಲರ ಬೇಸರ
Published 20 ಫೆಬ್ರುವರಿ 2024, 5:34 IST
Last Updated 20 ಫೆಬ್ರುವರಿ 2024, 5:34 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಮಿನಿ ವಿಧಾನಸೌಧ ಹಿಂಭಾಗದಲ್ಲಿ ನಿರ್ಮಿಸಿರುವ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಮತ್ತು ಜಿಲ್ಲಾ ವಕೀಲರ ಸಂಘದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಫೆ.17ರಂದು ಕರ್ನಾಟಕ ಕೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ ಅವರಿಂದ ಉದ್ಘಾಟನೆಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿತ್ತು. ಅಲ್ಲದೇ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಹಲವರಿಗೆ ಹಂಚಿಕೆ ಮಾಡಲಾಗಿತ್ತು. ಆದರೆ, ಫೆ.16ರಂದು ಸಂಜೆ ಕೋರ್ಟ್‌ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ.

ಮುಂದೂಡಿಕೆ ನಂತರವೂ ಮತ್ತೆ ವಕೀಲರು ಮುಖ್ಯನ್ಯಾಯಮೂರ್ತಿಯವರನ್ನು ಭೇಟಿಯಾಗಿ ದಿನಾಂಕ ನಿಗದಿಗೆ ಪ್ರಯತ್ನಿಸಿದ್ದರೂ ಮುಖ್ಯನ್ಯಾಯಮೂರ್ತಿಯವರು ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಂದೂಡಿಕೆಗೆ ಕಾರಣವೇನು?:

ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡದ ಕಾಮಗಾರಿ ಅಪೂರ್ಣವಿದ್ದು, ಪ್ರಗತಿಯಲ್ಲಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜನ ಖರ್ಗೆ ಅವರಿಗೆ ಆಹ್ವಾನ ನೀಡಿಲ್ಲ ಎಂದು ದಲಿತ ಸಂಘಟನೆಗಳ ಒಕ್ಕೂಟ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಾಮೂರ್ತಿಗಳಿಗೆ ದೂರು ನೀಡಿದ್ದರು. ಇದರಿಂದ ಉದ್ಘಾಟನೆ ಮುಂದೂಡಲಾಗಿದೆ. ಆದರೆ, ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವಕೀಲರು ಹೇಳುವ ಮಾತಾಗಿದೆ.

‘ಆಹ್ವಾನ ಪತ್ರಿಕೆಯಲ್ಲಿ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಮುದ್ರಿಸಲಾಗಿದೆ. ಶಿಷ್ಟಾಚಾರ ಪಾಲನೆ ಮಾಡಲಾಗಿದೆ. ಆದರೆ, ವಿನಾಕಾರಣ ದೂರು ನೀಡಲಾಗಿದೆ. ಕ್ರಿಮಿನಲ್‌ ಮೊಕದ್ದಮೆ ಇರುವವರನ್ನು ವೇದಿಕೆ ಮೇಲೆ ಕೂಡಿಸಬಾರದು ಎಂದು ದೂರು ನೀಡಲಾಗಿತ್ತು. ಆದರೆ, ಅಂಥವರನ್ನು ಆಹ್ವಾನಿಸಿಲ್ಲ. ಜಿಲ್ಲಾ ನ್ಯಾಯಾಲಯ 13 ವರ್ಷದ ಕನಸು ಸಾಕಾರಗೊಳ್ಳುವ ಸಮಯ ಬಂದಿತ್ತು.‌ ಆದರೆ, ಕೆಲವರ ಪಿತೂರಿಯಿಂದಾಗಿ ಉದ್ಘಾಟನಾ ದಿನ ಮುಂದಕ್ಕೆ ಹೋಗಿರುವುದು ಬೇಸರ ಮೂಡಿಸಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್‌.ಮಾಲಿಪಾಟೀಲ ಅವರ ಆರೋಪವಾಗಿದೆ.

ರಾಜಕೀಯದಿಂದ ಕೂಡಿದ ಕಾರ್ಯಕ್ರಮ:

ಕರ್ನಾಟಕ ಹೈಕೋರ್ಟ್ ಮುಖ್ಯ ಪಿ.ಎಸ್‌.ದಿನೇಶ್ ಕುಮಾರ ಅವರು ಫೆಬ್ರುವರಿ 24ರಂದು ನಿವೃತ್ತಿಯಾಗಲಿದ್ದು, ಅಷ್ಟರೊಳಗೆ ಉದ್ಘಾಟನೆ ಮಾಡಿಸಬೇಕೆಂಬ ಉದ್ದೇಶದಿಂದ ತರಾತುರಿಯಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಇದು ಕೂಡಿಲ್ಲ. ಹೀಗಾಗಿ ಇದನ್ನು ರದ್ದು ಮಾಡಬೇಕು ಪ್ರಗತಿಪರ ಸಂಘಟನೆಗಳ ವೇದಿಕೆ ವತಿಯಿಂದ ದೂರು ನೀಡಲಾಗಿತ್ತು.

13 ವರ್ಷಗಳ ನಂತರ ಜಿಲ್ಲೆಗೆ ಹೊಸ ನ್ಯಾಯಾಲಯ ನಿರ್ಮಾಣವಾಗಿದೆ. ಆದರೆ ಫೆ.17ರಂದು ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಇದರಿಂದ ವಕೀಲರಿಗೆ ನಿರಾಸೆಯಾಗಿದೆ. ಶೀಘ್ರ ಉದ್ಘಾಟನೆ ದಿನಾಂಕ ನಿಗದಿ ಮಾಡಬೇಕು
. ಸಿ.ಎಸ್‌.ಮಾಲಿಪಾಟೀಲ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ
9 ಕೋರ್ಟ್‌ ಹಾಲ್‌ ಸಿದ್ದ
ಮಿನಿವಿಧಾನಸೌಧ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯಾಲಯ ಸಂಕೀರ್ಣದಲ್ಲಿ 9 ಕೋರ್ಟ್‌ಗಳಿವೆ. ಎಲ್ಲ ವಿಭಾಗಕ್ಕೂ ಪ್ರತ್ಯೇಕ ಇರುವುದರಿಂದ ವಕೀಲರಿಗೆ ಕಕ್ಷಿದಾರರಿಗೆ ಅನುಕೂಲವಾಗಿತ್ತು. ಇನ್ನೇನು ಫೆಬ್ರುವರಿ 17ರಂದು ಉದ್ಘಾಟನೆಯಾಗಬೇಕು ಎನ್ನುವಾಗ ಕಾರ್ಯಕ್ರಮ ರದ್ದುಗೊಂಡಿದೆ. ಇದರಿಂದ ನಿರಾಸೆಯಾಗಿದೆ ಎಂದು ವಕೀಲರು ಹೇಳುವ ಮಾತಾಗಿದೆ. ‘ಯಾರದೋ ಮಾತು ಕೇಳಿ ನೂತನ ನ್ಯಾಯಾಲಯ ಉದ್ಘಾಟನೆ ರದ್ದು ಮಾಡಲಾಗಿದೆ. ಹಳೆ ಕೋರ್ಟ್‌ ಸಣ್ಣದಿದ್ದೂ ಹೊಸದಾಗಿ ನಿರ್ಮಿಸಿರುವ ನ್ಯಾಯಾಲಯ ವಿಶಾಲವಾಗಿದೆ. ಜಿಲ್ಲೆಯ ಜನರಿಗೆ ಅನುಕೂಲವಾಗುತ್ತಿತ್ತು. ಈಗ ಉದ್ಘಾಟನೆ ಮುಂದೂಡಿದ್ದರಿಂದ ಮತ್ತೆ ಯಾವಾಗ ಉದ್ಘಾಟನೆಗೊಳ್ಳಲಿದೆ ಎನ್ನುವುದು ತಿಳಿಯದಾಗಿದೆ’ ಎಂದು ವಕೀಲರೊಬ್ಬರು ಬೇಸರ ವ್ಯಕ್ತಪಡಿಸಿದರು.
ಹಳೆ ಕೋರ್ಟ್‌ನಲ್ಲಿ ಶೌಚಾಲಯಕ್ಕೆ ಪರದಾಟ ‘ಪ್ರಸ್ತುತ ನಗರದಲ್ಲಿರುವ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ವಿಶೇಷವಾಗಿ ಮಹಿಳಾ ಕಕ್ಷಿದಾರರು ಮಹಿಳಾ ವಕೀಲರು ಶೌಚಾಲಕ್ಕಾಗಿ ಪರದಾಡುವ ಸ್ಥಿತಿ ಇದೆ. ಹೊಸ ಕೋರ್ಟ್‌ನಲ್ಲಿ ಎಲ್ಲ ಸೌಲಭ್ಯಗಳಿದ್ದು ಅಲ್ಲಿಗೆ ಸ್ಥಳಾಂತರ ಆಗುವವರೆಗೆ ಪರದಾಟ ಮುಂದುವರೆಯಲಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್‌.ಮಾಲಿಪಾಟೀಲ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT