ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ: ಗಬ್ಬೆದ್ದು ನಾರುತ್ತಿರುವ ಹಿಂದಿನ ಬಜಾರ್‌ ರಸ್ತೆ

Published 29 ಆಗಸ್ಟ್ 2023, 6:39 IST
Last Updated 29 ಆಗಸ್ಟ್ 2023, 6:39 IST
ಅಕ್ಷರ ಗಾತ್ರ

ಕೆಂಭಾವಿ: ಪಟ್ಟಣದ ವಾರ್ಡ್ ನಂ.12ರ ಹಿಂದಿನ ಬಜಾರ್‌ನಲ್ಲಿ ರಸ್ತೆ ಮೇಲೆ ಹರಿಯುವ ಚರಂಡಿ ನೀರು ಹಲವು ರೋಗ, ರುಜಿನುಗಳಿಗೆ ರಹದಾರಿಯಾಗಿದೆ. ಕೊಳಚೆ ನೀರಿನ ಮೇಲೆಯೇ ಮಕ್ಕಳು, ಮಹಿಳೆಯರು, ವಯೋವೃದ್ಧರು ನಿತ್ಯ ಓಡಾಟ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುತ್ತಿವೆ. ಆದರೆ, ಕೆಲಸವೆಲ್ಲವು ಕಡತಗಳಲ್ಲಿ ಆಗುತ್ತಿದೆ. ಗ್ರಾಮದ ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

ರಸ್ತೆ ಯಾವುದು, ಚರಂಡಿ ಯಾವುದು ಎಂದು ತಿಳಿಯದ ಪರಿಸ್ಥಿತಿ ಎದುರಾಗಿದ್ದು, ಚರಂಡಿ ನೀರು ರಸ್ತೆ ಮೇಲೆ ಸಂಪೂರ್ಣ ಅವೃತ್ತಗೊಂಡಿದ್ದು, ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಮಕ್ಕಳು, ವೃದ್ಧರನ್ನು ಎತ್ತಿಕೊಂಡು ದಾಟಿಸದಿದ್ದರೇ ಕೊಳಚೆಯಲ್ಲಿ ಬೀಳುವುದು ಸಾಮಾನ್ಯವಾಗಿದೆ. ಈ ರಸ್ತೆಯ ಹಾಗೂ ಚರಂಡಿಯನ್ನು ಸರಿಯಾಗಿ ನಿರ್ವಹಿಸಲು ಸ್ಥಳಿಯಆಡಳಿತ ಸಂಪೂರ್ಣ ವಿಫಲವಾಗಿದೆ.

ಮಳೆ ಬಂತೆಂದರೆ ಮುಖ್ಯ ರಸ್ತೆಯಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ಸದಾ ಹರಿಯುತ್ತದೆ. ಚರಂಡಿ ತುಂಬಿದ ನೀರು ಸುಲಭವಾಗಿ ಹೋಗುವಂತೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಸಾರ್ವಜನಿಕರು ಬಳಸಿದ ನೀರು, ಬಚ್ಚಲು ನೀರು, ಕೊಚ್ಚೆ ನೀರಿನ ರೂಪತಾಳಿ ಮುಖ್ಯ ರಸ್ತೆ ಮೇಲೆ ನಿಂತು ಗಬ್ಬೆದ್ದು ನಾರುತ್ತಿದೆ. ರಸ್ತೆಯಲ್ಲಿ ನೀರು ಸದಾ ಹರಿಯುತ್ತಿದೆ. ಚರಂಡಿ ಸ್ವಚ್ಛಗೊಳಿಸದೇ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆ ಉಂಟಾಗಿದೆಯಲ್ಲದೇ ಈ ರಸ್ತೆ ದಾಟಲು ಜನರು ಪರದಾಡುವ ಸ್ಥಿತಿ ಉಂಟಾಗಿದೆ.

ಪಟ್ಟಣದ ಬಹುತೇಕ ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು ಇದೇ ರಸ್ತೆ ಮೂಲಕವೇ ಹೆಚ್ಚು ಸಂಚರಿಸುತ್ತಿದ್ದು, ಅವರ ಗೋಳಂತೂ ಹೇಳತೀರದ್ದಾಗಿದೆ. ಚರಂಡಿ ನೀರಿನಲ್ಲಿಯೇ ನಡೆದು ಪಾಲಕರು ತಮ್ಮ ಮಕ್ಕಳನ್ನು ಎತ್ತಿಕೊಂಡು ಹೋಗಿ ರಸ್ತೆ ದಾಟಿಸುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆ ನೀರನ್ನು ನಿಲ್ಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚರಂಡಿ ಅವ್ಯವಸ್ಥೆಯನ್ನು ಸರಿಪಡಿಸುಂತೆ ಬಡಾವಣೆಯ ಜನರು ಅನೇಕ ಬಾರಿ ಸ್ಥಳಿಯ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲಧಿಕಾರಿಗಳು ಇತ್ತ ಗಮನಹರಿಸಬೇಕು.
ವಿಜಯ ಬಂಡೋಳಿ ನಿವಾಸಿ
ಹಿಂದಿನ ಬಜಾರ್‌ ಚರಂಡಿ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಸರಿಪಡಿಸಲಾಗುವುದು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು.
ಮಲ್ಲಿಕಾರ್ಜುನ ಮುಖ್ಯಾಧಿಕಾರಿ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT