ಯಾದಗಿರಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಅಕ್ಟೋಬರ್ ತಿಂಗಳಿನಿಂದ ಆರಂಭವಾಗಿದ್ದು, ಈ ಬಾರಿ 43,117 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ವಡಗೇರಾ ಹಾಗೂ ಶಹಾಪುರ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು, ಯಾದಗಿರಿ, ಸುರಪುರ, ಗುರುಮಠಕಲ್, ಹುಣಸಗಿ ತಾಲ್ಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಹೀಗಾಗಿ ಹಿಂಗಾರು ಬೆಳೆಗಳ ಮೇಲೆ ರೈತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮೂರು ಪ್ರಮುಖ ಬೆಳೆಗಳು:
ಜಿಲ್ಲೆಯ ಯಾದಗಿರಿ, ಗುರುಮಠಕಲ್ ತಾಲ್ಲೂಕುಗಳಲ್ಲಿ ಭಾಗಶಃ ಹಿಂಗಾರು ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತಿದೆ. ಉಳಿದಂತೆ ಬೇರೆ ತಾಲ್ಲೂಕುಗಳಲ್ಲಿ ಕೆಲ ಹೋಬಳಿಗಳಲ್ಲಿ ಬಿತ್ತನೆ ನಡೆಯಲಿದೆ.
ಶೇಂಗಾ, ಜೋಳ, ಕಡಲೆ ಪ್ರಮುಖ ಹಿಂಗಾರು ಬೆಳೆಗಳಾಗಿವೆ.
ಉಳಿದಂತೆ ಏಕದಳ ಧಾನ್ಯಗಳಾದ ಭತ್ತ, ಜೋಳ, ರಾಗಿ, ಮುಸುಕಿನ ಜೋಳ, ಸಜ್ಜೆ, ಗೋಧಿ ಹಾಗೂ ಇತರೆ, ಎಣ್ಣೆಕಾಳು ಧಾನ್ಯಗಳಾದ ಶೇಂಗಾ, ಎಳ್ಳು, ಸೂರ್ಯಕಾಂತಿ, ಸಾಸಿವೆ, ಕುಸುಬೆ, ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು ಬೆಳೆಯಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
98 ಸಾವಿರ ಮೆಟ್ರಿಕ್ ಟನ್: ಹಿಂಗಾರು ಹಂಗಾಮಿಗೆ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ 98,107 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದೆ. ಜಿಲ್ಲೆಯಲ್ಲಿ ಈಗ 37,340 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಇದರಲ್ಲಿ ಕಾಂಪ್ಲೆಕ್ಸ್ 17,130 ಚೀಲ, ಯೂರಿಯಾ 14,135 ಹಾಗೂ ಡಿಎಪಿ 5,313 ಚೀಲ ದಾಸ್ತಾನು ಮಾಡಿಕೊಳ್ಳಲಾಗಿದೆ.
ಈಗಾಗಲೇ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾದಗಿರಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಮಸ್ಯೆಯಾಗುತ್ತಿದ್ದರೆ ಈ ಕುರಿತು ಪರಿಶೀಲಿಸಲಾಗುವುದುಮುತ್ತುರಾಜ ಜಂಟಿ ಕೃಷಿ ನಿರ್ದೇಶಕ
ಯಾದಗಿರಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಯಂತ್ರೋಪಕರಣ ವಿತರಣೆಗೆ ಸ್ಥಳಾವಕಾಶದ ಕೊರತೆಯಿಂದ ಟೋಕನ್ ಒಂದು ಕಡೆ ಕೊಡುತ್ತಾರೆ. ಮತ್ತೊಂದು ಕಡೆ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಮುಂದಿನ ಬಾರಿ ಒಂದೇ ಕಡೆ ವಿತರಣೆಗೆ ಸೂಕ್ತ ಕ್ರಮಕೈಗೊಳ್ಳಲಾಗುವುದುಶ್ವೇತಾ ತಾಳೆಮರದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಯಾದಗಿರಿ
ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ಮೊದಲು ಒಂದು ಕ್ವಿಂಟಲ್ ವಿತರಿಸುತ್ತಿದ್ದರು. ಈಗ ಬಂದಷ್ಟೆ ಕೊಡುತ್ತೇವೆ ಎನ್ನುತ್ತಾರೆನಿಲೇಶ ಮುಂಡರಗಿ ರೈತ
ಶೇಂಗಾ ಬಿತ್ತನೆ ಬೀಜ ಖರೀದಿಗಾಗಿ ಬಂದಿದ್ದೇವೆ. ಆದರೆ ರೈತ ಸಂಪರ್ಕ ಕೇಂದ್ರದಲ್ಲಿ ಚೀಟಿ ಕೊಡುತ್ತಾರೆ. ಎಪಿಎಂಸಿಯಲ್ಲಿ ಬೀಜ ಕೊಡುತ್ತಿದ್ದಾರೆ. ಕೆಲವರಿಗೆ ಸಮಸ್ಯೆಯಾಗುತ್ತಿದೆಶರಣಗೌಡ ಬಿರಾದಾರ ಆಶನಾಳ ರೈತ
6 ಹೋಬಳಿಗಳಲ್ಲಿ ಶೇಂಗಾ ಯಾದಗಿರಿ ಗುರುಮಠಕಲ್ ತಾಲ್ಲೂಕಿಗೆ ಸಂಬಂಧಿಸಿದಂತೆ ಆರು ಹೋಬಳಿ ಕೇಂದ್ರಗಳಲ್ಲಿ ಶೇಂಗಾ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗುತ್ತಿದೆ. ಯಾದಗಿರಿ ಬಳಿಚಕ್ರ ಹತ್ತಿಕುಣಿ ಕೊಂಕಲ್ ಗುರುಮಠಕಲ್ ಸೈದಾಪುರ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ಆರಂಭವಾಗಿದೆ. ಸುರಪುರ ತಾಲ್ಲೂಕಿನ ಕಕ್ಕೇರಾ ಹುಣಸಗಿ ತಾಲ್ಲೂಕಿನ ಕೊಡೇಕಲ್ ಹೋಬಳಿ ವ್ಯಾಪ್ತಿಯಲ್ಲಿ ಜೋಳ ಕಡಲೆ ವಿತರಿಸಲಾಗುತ್ತಿದೆ. ಶಹಾಪುರ ತಾಲ್ಲೂಕಿನ ದೋರನಹಳ್ಳಿಯಲ್ಲಿ ವಡಗೇರಾ ತಾಲ್ಲೂಕಿನ ವಡಗೇರಾದಲ್ಲಿ ಶೇಂಗಾ ಬೀಜ ವಿತರಣೆ ಮಾಡಲಾಗುತ್ತಿದೆ. ಶಹಾಪುರ ಗೋಗಿ ಹೋಬಳಿ ವ್ಯಾಪ್ತಿಯಲ್ಲಿ ಇನ್ನೂ ಶೇಂಗಾ ಬಿತ್ತನೆ ಮಾಡಬೇಕಾಗಿದೆ.
ಟೋಕನ್ ಒಂದು ಕಡೆ:ವಿತರಣೆ ಬೇರೆಡೆ ಯಾದಗಿರಿಯ ತಾಲ್ಲೂಕು ಪಂಚಾಯಿತಿ ಕಚೇರಿ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ನೀಡಲು ಟೋಕನ್ ಒಂದು ಕಡೆ ಹಾಗೂ ಬಿತ್ತನೆ ಬೀಜ ಮತ್ತೊಂದು ಕಡೆ ವಿತರಣೆ ಮಾಡಲಾಗುತ್ತಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಬಿತ್ತನೆ ಬೀಜ ದಾಸ್ತಾನಿಗೆ ಜಾಗವಿಲ್ಲದ ಕಾರಣ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಕೆಒಎಫ್ ಸಂಸ್ಥೆಯ ಗೋದಾಮಿನಲ್ಲಿ ಶೇಖರಿಸಲಾಗಿದೆ. ಆದ್ದರಿಂದ ರೈತರು ರೈತ ಸಂಪರ್ಕ ಕೇಂದ್ರದಿಂದ ಟೋಕನ್ ಪಡೆದುಕೊಂಡು ಹೋಗಿ ಹಣವನ್ನು ಕೃಷಿ ಉತ್ಪನ್ನ ಮಾರುಕಟ್ಟೆಯ ಗೋದಾಮು ಸಂಖ್ಯೆ 56 ರಲ್ಲಿ ಪಾವತಿಸಬೇಕು ಎಂದು ಸೂಚಿಸಲಾಗಿದೆ. ಇದರಿಂದ ರೈತರು ಎರಡು ಕಡೆ ಬಿತ್ತನೆ ಬೀಜಕ್ಕಾಗಿ ಅಲೆಯಬೇಕಾಗಿದೆ.
ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳ ಬಿತ್ತನೆ ವಿವರ (ಹೆಕ್ಟೇರ್‌ಗಳಲ್ಲಿ) ಬೆಳೆ; ವಿಸ್ತೀರ್ಣ ಜೋಳ–17165 ಕಡಲೆ–2764 ಶೇಂಗಾ–20329 ಆಧಾರ: ಕೃಷಿ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.