ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಗೆ ಸನ್ನದ್ಧರಾಗಿ: ಜಿಲ್ಲಾಧಿಕಾರಿ

ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ, ಹಳ್ಳಿಗಳಲ್ಲಿ ಡಂಗೂರ ಸಾರಿಸಿ
Last Updated 25 ಜೂನ್ 2022, 6:38 IST
ಅಕ್ಷರ ಗಾತ್ರ

ಯಾದಗಿರಿ: ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾದರೆ ನಿಭಾಯಿಸಲು ಅಧಿಕಾರಿಗಳು ಸನ್ನದ್ದರಾಗಿರಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರನಡೆದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಅವರು ಮಾತನಾಡಿದರು.

ಪ್ರವಾಹ ಸಂಬಂಧ ಎಚ್ಚೆತ್ತುಕೊಂಡು ಪ್ರವಾಹ ಸಂದರ್ಭದಲ್ಲಿ ಅಧಿಕಾರಿಗಳು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವರವಾಗಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಇನ್ನಿತರ ಸಂಬಂಧಿಸಿದ ಅಧಿಕಾರಿಗಳು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಿಕೊಂಡು ಎಲ್ಲಾ ಅಧಿಕಾರಿಗಳು ಪ್ರವಾಹ ಮುನ್ನೆಚ್ಚರಿಕೆ ಕುರಿತು ಸಮನ್ವಯ ಸಾಧಿಸಬೇಕು. ಹಳ್ಳಿಗಳಲ್ಲಿ ಡಂಗೂರ ಸಾರುವ ಮುಖಾಂತರ ಪ್ರವಾಹ ಕುರಿತು ಜನರಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹಿಂದೆ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲಿ ಬಾಧಿತವಾಗಿದ್ದ ಗ್ರಾಮಗಳ ಜನ, ಜಾನುವಾರು ಮುಂತಾದವರನ್ನು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ವಸತಿ (ಕಾಳಜಿ) ಕೇಂದ್ರಗಳಂತಹ ವ್ಯವಸ್ಥೆ ಕಲ್ಪಿಸುವ ಕುರಿತು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಕ್ಷಣಾ ಸಾಮಾಗ್ರಿಯೊಂದಿಗೆ ಸನ್ನದ್ಧರಾಗಿರುವುದು. ನೆರೆ ಉಂಟಾದಲ್ಲಿ ಅವಶ್ಯಕ ಬೋಟುಗಳ ಶೇಖರಣೆ ಮಾಡಿಸಿಟ್ಟುಕೊಳ್ಳುವುದು, ನುರಿತ ಈಜುಗಾರರ ಮಾಹಿತಿಯನ್ನು ತಾಲ್ಲೂಕುವಾರು ಇಟ್ಟುಕೊಳ್ಳಬೇಕೆಂದು ಅಗ್ನಿಶಾಮಕ ಅಧಿಕಾರಿಗಳಿಗೆ ತಿಳಿಸಿದರು.

ನದಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಹಲಗೆ, ಗೇಟ್‌ಗಳನ್ನು ತೆರವುಗೊಳಿಸಬೇಕೆಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಾರಾಯಣಪುರ ಜಲಾಶಯದ ನೀರಿನ ಮಟ್ಟ 490.97 ಮೀ ಆಗಿದ್ದು, ಜಲಾಶಯದ ಪ್ರಸ್ತುತ ನೀರಿನ ಶೇಖರಣೆಯು 27.72 ಟಿಎಂಸಿ ಇದ್ದು, ಜಲಾಶಯದ ಪೂರ್ಣ ಮಟ್ಟವು 492.25 ಮೀ ಆಗಿದ್ದು, ಜಲಾಶಯವು ಭರ್ತಿಯಾಗಲು ಕೇವಲ 5.59 ಟಿ.ಎಂ.ಸಿ ನೀರು ಬೇಕಾಗಿದೆ. ಭಾರತೀಯ ಹವಾಮಾನ ಇಲಾಖೆ, ಹವಾಮಾನ ವಿಜ್ಞಾನ ಕೇಂದ್ರ, ಬೆಂಗಳೂರು ಜೂನ್ 24 ರಿಂದ 26ರ ವರೆಗೆ ಕರ್ನಾಟಕದ ಉತ್ತರ ಒಳನಾಡಿನ ಯಾದಗಿರಿ, ವಿಜಯಪುರ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ ಎಂದರು.

ಹವಮಾನ ಇಲಾಖೆ, ಮುನ್ಸೂಚನೆಯಂತೆ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಬಂದಲ್ಲಿ ಕೃಷ್ಣಾ ನದಿಗೆ ನಾರಾಯಣಪುರ ಆಣೆಕಟ್ಟೆಯಿಂದ ಯಾವುದೇ ಕ್ಷಣದಲ್ಲಿ ನೀರನ್ನು ಹರಿಬಿಡಬೇಕಾಗುತ್ತದೆ. ಹೀಗಾಗಿ ಸುರಕ್ಷತೆಯ ಬಗ್ಗೆ ಮುಂಜಾಗೃತೆ ವಹಿಸಲು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ವಿಭಾಗೀಯ ಸಾರಿಗೆ ಅಧಿಕಾರಿ ರಮೇಶ ಪಾಟೀಲ, ಶಿರಸ್ತೇದಾರ ಶಬ್ಬೀರ್ ಪಟೇಲ್ ಇದ್ದರು.

ಸೂಕ್ತ ಮುಂಜಾಗ್ರತಾ ಕ್ರಮ ವಹಿಸಿ
ನದಿಗೆ ಹರಿಸುವ ನೀರಿನ ಪ್ರಮಾಣ ಹೆಚ್ಚಾದಾಗ, ನೀರಿನ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿನ ಗ್ರಾಮಗಳ ಸುರಕ್ಷತೆ ಬಗ್ಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಎಲ್ಲಾ ತಹಶೀಲ್ದಾರರು ಡಿವೈಎಸ್ಪಿ, ಸಿಪಿಐ, ಸಿಇಒ ಮತ್ತು ಇಒ ಅಧಿಕಾರಿಗಳ ಜೊತೆ ಸಭೆ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದರು.

ಅಯಾಯ ತಾಲ್ಲೂಕು ಕಚೇರಿಯಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ ಕಂಟ್ರೋಲ್ ರೂಮ್ ತೆರೆದು 24 ಗಂಟೆಯೂ ಕಾರ್ಯ ನಿರ್ವಹಿಸಿ ಪ್ರತಿದಿನದ ಮಳೆ ಮತ್ತು ಹಾನಿಯ ವರದಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವುದು ಎಂದ ಅವರು, ಕಳೆದ ವರ್ಷ ಹೆಚ್ಚಿನ ಪ್ರವಾಹ ಉಂಟಾದ ಪ್ರದೇಶಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT