ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಿ’

‘ಶಕ್ತಿ ಸಂಭ್ರಮ’ ಮಹಿಳಾ ಯುವಜನೋತ್ಸವಕ್ಕೆ ಚಾಲನೆ
Last Updated 10 ಅಕ್ಟೋಬರ್ 2019, 13:16 IST
ಅಕ್ಷರ ಗಾತ್ರ

ವಿಜಯಪುರ: ‘ವಿದ್ಯಾರ್ಥಿನಿಯರು ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಇನ್ನೊಬ್ಬರನ್ನು ಪ್ರೋತ್ಸಾಹಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು’ ಎಂದು ರಂಗಕರ್ಮಿ ಮಂಡ್ಯ ರಮೇಶ್ ಹೇಳಿದರು.

ನಗರ ಹೊರವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿ ಗುರುವಾರ ಆರಂಭವಾದ ‘ಶಕ್ತಿ ಸಂಭ್ರಮ’ ಅಂತರ ಮಹಾವಿದ್ಯಾಲಯಗಳ ಮಹಿಳಾ ಯುವಜನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹೋರಾಟ ಇಲ್ಲದಿದ್ದರೆ ಏನನ್ನೂ ಸಾಧಿಸಲು ಆಗುವುದಿಲ್ಲ. ಹೆಣ್ಣಿಗೆ ಸಹನೆ, ಪ್ರೀತಿ, ಮೃದುತ್ವ ಜಾಸ್ತಿ. ಇವುಗಳನ್ನೇ ಬಂಡವಾಳ ಮಾಡಿಕೊಳ್ಳುವ ಗಂಡು ಹೆಣ್ಣಿನ ಮೇಲೆ ನಿರಂತರ ಆಕ್ರಮಣ ಮಾಡುತ್ತಾನೆ. ಹೆಣ್ಣು ಇದನ್ನು ಮೆಟ್ಟಿ ನಿಲ್ಲಬೇಕು. ನೋವು, ಅಸಹಾಯಕತೆ, ತಲ್ಲಣಗಳನ್ನು ಮೆಟ್ಟಿ ನಿಲ್ಲಲು ರಂಗಭೂಮಿ ನೆರವಾಗುತ್ತದೆ. ರಂಗಭೂಮಿಗಿಂತ ಪ್ರತಿಭಟನೆಯ ಅಸ್ತ್ರ ಇನ್ನೊಂದಿಲ್ಲ ಎಂಬುದನ್ನು ಮರೆಯಬಾರದು’ ಎಂದು ತಿಳಿಸಿದರು.

‘ನಮ್ಮ ಬದುಕು ರೂಪಕ, ಕಾವ್ಯಮಯವಾಗದಿದ್ದರೆ ಬದುಕಿಗೆ ಅರ್ಥ ಇರುವುದಿಲ್ಲ. ಜೀವನದಲ್ಲಿ ಬೇಕಾದಷ್ಟು ಅವಕಾಶಗಳು ದೊರೆಯುತ್ತವೆ. ಅವುಗಳನ್ನು ಸಕಾಲಿಕವಾಗಿ ಮತ್ತು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ಒಗ್ಗಟ್ಟು ಮತ್ತು ಇಚ್ಛಾಶಕ್ತಿ ಇದ್ದಲ್ಲಿ ಧೈರ್ಯದಿಂದ ಬದುಕನ್ನು ಎದುರಿಸಬಹುದು’ ಎಂದರು.

ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಬಳಿಕ ನಾನು ಜೋಗತಿ ದೀಕ್ಷೆ ಪಡೆದುಕೊಂಡೆ. ಆ ಬಳಿಕ ಬಹಳಷ್ಟು ತೊಂದರೆ ಅನುಭವಿಸಿದೆ. ಜೋಗತಿ ನೃತ್ಯವನ್ನು ಕಲಿತು, ಅನೇಕ ಕಡೆ ಪ್ರದರ್ಶನ ನೀಡಿ ಅದರಿಂದ ಬದುಕು ಕಟ್ಟಿಕೊಂಡೆ. ದೇವರು ದೇವಸ್ಥಾನದಲ್ಲಿ ಇಲ್ಲ, ನಾವು ಮಾಡುವ ಕೆಲಸ, ಶ್ರದ್ಧೆ, ಭಯ, ಭಕ್ತಿಯಲ್ಲೇ ದೇವರು ಇದ್ದಾನೆ’ ಎಂದರು.

‘ನಮ್ಮ ಮಾತೃ ಭಾಷೆಯನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು. ಅನ್ಯ ಭಾಷೆಗಳನ್ನು ಗೌರವಿಸಬೇಕು. ಸರ್ಕಾರಿ ಶಾಲೆಯಲ್ಲೇ ಮಕ್ಕಳನ್ನು ಓದಿಸಬೇಕು. ಇದರಿಂದ ಶಾಲೆ, ಭಾಷೆ ಎರಡೂ ಉಳಿಯುತ್ತವೆ’ ಎಂದು ಸಲಹೆ ನೀಡಿದರು.

ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ.ಯು.ಕೆ.ಕುಲಕರ್ಣಿ ಇದ್ದರು.
ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣು ಎಂ.ಶಿಂಧೆ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕಿ ಡಾ.ಭಾರತಿ ಗಾಣಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT