ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಹಂತದ ಚುನಾವಣೆ: ಬಂಡಾಯ, ಪಕ್ಷಾಂತರ ಪರ್ವ

Last Updated 17 ಡಿಸೆಂಬರ್ 2010, 13:10 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 26ರಂದು ನಡೆಯುವ ಮೊದಲ ಹಂತದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಂಡ ಬೆನ್ನಲ್ಲೇ ಪ್ರಚಾರ ಕಾರ್ಯ ಚುರುಕುಗೊಂಡಿದೆ. ಕೆಲವು ಕಡೆ ಟಿಕೆಟ್ ಸಿಗದವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿರುವುದು ರಾಜಕೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಹಾಗೂ ಗುಲ್ಬರ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿಗಳಿಗೆ ಡಿ.26 ರಂದು ಚುನಾವಣೆ ನಡೆಯಲಿದೆ.

ಗುರುವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಶನಿವಾರ ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಅಂದು ದೊರೆಯಲಿದೆ. ಆ ನಂತರವೇ ಚುನಾವಣಾ ಪ್ರಚಾರ ರಂಗೇರಲಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ.

ಅಲ್ಲಲ್ಲಿ ಬಂಡಾಯ: ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳು ಕಣಕ್ಕೆ ಇಳಿಯುವುದನ್ನು ತಪ್ಪಿಸುವ ದೃಷ್ಟಿಯಿಂದ ಕೊನೆಗಳಿಗೆಯಲ್ಲಿ ‘ಬಿ’ ಫಾರಂ ನೀಡಲಾಯಿತು. ಇಷ್ಟಾದರೂ ಕೆಲವು ಕಡೆ ಬಂಡಾಯ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, ಬಹಳಷ್ಟು ಗೊಂದಲಗಳು ಉಂಟಾಗಿವೆ. ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಟಿಕೆಟ್ ಸಿಗದವರು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.

ಪಾವಗಡದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ ಬೆಂಬಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ನಿಷ್ಠಾವಂತ ಕಾರ್ಯಕರ್ತರನ್ನು ಕೆರಳಿಸಿದೆ. ಅದೇ ರೀತಿ ಚಿಂತಾಮಣಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಒತ್ತಡಕ್ಕೆ ಮಣಿದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡದೆ ಕಡೆಗಣಿಸಲಾಗಿದೆ ಎಂದು ಶಾಸಕ ಎಂ.ಸಿ.ಸುಧಾಕರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಧಾಕರ್ ಗುಂಪಿನವರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು, ಅವರೆಲ್ಲ ಕಣದಲ್ಲಿ ಉಳಿಯುವ ಸಾಧ್ಯತೆಗಳಿವೆ. ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆಯಿಂದಾಗಿ ಬೇಸತ್ತು ನಿಷ್ಠಾವಂತ ಕಾರ್ಯಕರ್ತರು ಕೆಲವೆಡೆ ಚುನಾವಣೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ಪ್ರಣಾಳಿಕೆ: ಕಾಂಗ್ರೆಸ್ ಗುರುವಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ಪ್ರಣಾಳಿಕೆ ಶುಕ್ರವಾರ ಬಿಡುಗಡೆಯಾಗಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರದಿಂದ ಒಂದು ವಾರ ಕಾಲ ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲಿದ್ದಾರೆ.

ಸೇರ್ಪಡೆ: ಮಂಡ್ಯ ಜಿಲ್ಲೆಯ ಮಾಜಿ ಶಾಸಕ ಎಚ್.ಬಿ.ರಾಮು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಅವರು ಬುಧವಾರ ಇಲ್ಲಿ ತಮ್ಮ ಬೆಂಬಲಿಗರೊಂದಿಗೆ ಅಂಬರೀಷ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಚುನಾವಣೆ ಹತ್ತಿರವಾಗುತ್ತಿದಂತೆಯೇ ಪಕ್ಷಾಂತರ ಪರ್ವ ಜೋರಾಗಿ ನಡೆದಿದ್ದು, ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಅವರು ಕೋಲಾರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಗುರುವಾರ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.

ಚುನಾವಣೆಗೆ ಮೊದಲೇ ಮತ್ತಷ್ಟು ಮಂದಿ ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT