ಗಡಗಡ ಮೈ ನಡುಗಿಸಿ ಹಲ್ಲು ಗಟ್ಟಿಯೂರುವಂತೆ ಮಾಡುವ ಮಾಗಿಯ ಚಳಿ, ವಸುಂದರೆಯ ಮೈ ಸೋಕಿದಾಗ, ಸ್ವರ್ಗದಂತಹ ಅಂಗಳವೇ ಸೃಷ್ಟಿಯಾಗುತ್ತದೆ. ದೃಷ್ಟಿ ತಾಗುವಂಥ ರಮ್ಯತೆ, ಗಿರಿ ಬೆಟ್ಟ ಮುತ್ತಿಕ್ಕುವ ಮಂಜು ನದಿ ಕಾಲುವೆಗಳಲ್ಲಿ ಜುಳು ಜುಳು ಹರಿಯುವ ತಿಳಿ ನೀರು, ಸುಳಿ ಸುಳಿ ಸುಳಿಯುವ ಕುಳಿರ್ಗಾಳಿ ಸಕಲ ಜೀವ ಸಂಕುಲಕ್ಕೆ ರೋಮಾಂಚನ!

ದಟ್ಟ ಮಂಜು ಕವಿದಿರುವ ಬೆಳಗಿನಲ್ಲಿ ಮನೆಯ ಹೊಸ್ತಿಲು ದಾಟಿ ಹೊರ ಬಂದರೆ ಸಾಕು ಚುಮು ಚುಮು ಚಳಿ ಮೈಮನಗಳಿಗೆ ಕಚಗುಳಿ ಇಡುತ್ತದೆ. ತುಸು ಹೊತ್ತು ಚಳಿಯ ತೀವ್ರತೆ ಅನುಭವಿಸುತ್ತ ಹೆಜ್ಜೆ ಹಾಕಿದರೆ ಸಾಕು ಸೃಷ್ಟಿಯ ಸಿರಿ ನೋಟ ಹಿಗ್ಗಿನ ಬುಗ್ಗೆಯಾಗುತ್ತದೆ ಮುಂಜಾವಿನ ಆ ಗಳಿಗೆಯ ಸುತ್ತಾಟ ಇಡೀ ದಿನ ಸಂತಸಗೊಳಿಸುತ್ತದೆ.

ಚಳಿಗಾಲದ ಬೆಳಗಿನ ಅಂದ ಚಂದ ಸವಿಯಲು ಎರಡು ಕಣ್ಣುಗಳು ಸಾಲವು. ಹಸಿರ ಅಂಚಿನಲಿ ಫಳ ಫಳ ಹೊಳೆಯುವ ಮುತ್ತಿನ ಹನಿಗಳು, ಇಬ್ಬನಿಯಿಂದ ಸ್ವಚ್ಛಗೊಂಡು ನಳನಳಿಸುವ ಮರ ಗಿಡ ಬಳ್ಳಿಗಳು,ಗೂಡು ಬಿಟ್ಟು ಹೊರ ಬಂದು ಚಿಲಿಪಿಲಿಗುಟ್ಟುತ್ತ ರೆಕ್ಕೆ ಬಿಚ್ಚಿ ಹಾರಾಡುವ ಹಕ್ಕಿಗಳು, ಮೊಗ್ಗರಳಿ ನಗುವ ಹೂವುಗಳು, ಚಿಟ್ಟೆಗಳ ಚಿತ್ತಾರ ದುಂಬಿಗಳ ಝೇಂಕಾರ ಅಬ್ಬಾ! ಎಂಥ ಸೊಗಸು ಎಷ್ಟೊಂದು ಸುಂದರ. ಸೂರ್ಯೋದಯದ ಸೊಬಗಂತೂ ವರ್ಣಿಸಲಸದಳ.

ಹೊಲ ತೋಟ ಗದ್ದೆಗಳಲ್ಲಿ, ಹೊಡೆ ಹಿರಿದು ನಿಂತಿರುವ ಜೋಳ, ಗರಿಬಿಟ್ಟ ಕಬ್ಬು, ಎಳೆಗಾಳು ತುಂಬಿದ ಸುಲಗಾಯಿ, ಗೋಧಿಯ ಉಮ್ಮಗಿ, ಸಿಹಿ ಸಿಹಿ ಸೀತನಿ, ಗೆಣಸಿನ ಡಬಗಾಯಿ, ಕುದಿಸಿದ ಅವರೆಕಾಯಿ, ಬಾಯಿಯಲ್ಲಿ ನೀರೂರಿಸುವ ಬಾರಿಕಾಯಿ, ಎಳೆ ಸೌತೆಕಾಯಿ, ಘಮ್ಮೆಂದು ವಾಸನೆ ಬೀರುವ ಪುಟ್ಟಿಕಾಯಿ, ತರತರದ ತರಕಾರಿ, ಬನ ತುಂಬಿ ತುಳುಕಾಡುವ ಹಣ್ಣು ಹಂಪಲು, ಎಳನೀರು, ಎಲಿಬಳ್ಳಿ, ಎಳಿಹುಣಸೆ, ಸಮೃದ್ಧ ಹಾಲು ಹೈನು ಹೀಗೆ ಬಯಸಿದ್ದು ಕೈಗೆಟಗುವಂತೆ ಮಾಡುವ ಕಾಲವಿದು.

ಈ ಚಳಿಗಾಲ, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರವಾಸದ ಖುಷಿ, ಯುವ ಜೋಡಿಗಳಿಗೆ ಬಿಸಿ, ವಯೋವೃದ್ಧರಿಗೆ ಕಸಿವಿಸಿ, ದಂಪತಿಗಳಿಗೆ ಹುರುಪು ಕೊಡುವ ಚಳಿಗಾಲ, ಸಂದೂಕು ಸೇರಿದ ಕೌದಿ, ಅಟ್ಟವೇರಿದ ರಗ್ಗು, ಮಾಡು ತುಂಬಿದ ಚಾದರದಂತಹ ಬೆಚ್ಚನೆಯ ಹೊದಿಕೆಗಳು ಹೊರ ಬರುವಂತೆ ಮಾಡುತ್ತದೆ. ಹೊತ್ತು ಮುಳುಗುತ್ತಿದ್ದಂತೆ ಬೇಗ ಬೇಗ ಮನೆ ಸೇರಿ ಬಿಸಿ ಬಿಸಿ ತಿಂಡಿ ಸೇವಿಸಿ ಮುಸುಗು ಹಾಕಿ ಮಲಗಬೇಕೆನ್ನುವ ಆತುರ ಮೂಡಿಸುತ್ತದೆ. ಸೊಳ್ಳೆಯ ಕಾಟವಿಲ್ಲ, ಧಗೆಯ ಕಿರಿಕಿರಿಯಿಲ್ಲ, ನಿದ್ರೆಗೆ ಬರವಿಲ್ಲ.

ಚಳಿಗಾಲದ ಅತಿಥಿಗಳಾದ ಗೌರಿ ಹುಣ್ಣಿಮೆ, ಛಟ್ಟಿ ಅಮವಾಸ್ಯೆ, ಹೊಸ್ತಲ ಹುಣ್ಣಿಮೆ, ಕ್ರಿಸ್ಮಸ್, ಎಳ್ಳು ಅಮವಾಸ್ಯೆ, ಬನದ ಹುಣ್ಣಿಮೆ, ಸಂಕ್ರಾಂತಿ ಹಬ್ಬಗಳು ಸಂಭ್ರಮಕ್ಕೆ ಸಾಕ್ಷಿಯಾಗುತ್ತವೆ. ಜಾತ್ರೆ ಉತ್ಸವಗಳು ತಿಂಗಳುಗಟ್ಟಲೆ ಜರುಗಿ ನಾಡಿನ ಸೊಗಡನ್ನು ಬಿಂಬಿಸುತ್ತವೆ. ಈ ಸಂದರ್ಭದಲ್ಲಿ ಚಳಿ ತುಸು ಕಿರಿ ಕಿರಿ ಮಾಡದಿರದು, ಮುಖ ತುಟಿ ಕೈಕಾಲುಗಳು ಬಿರುಕು ಬಿಟ್ಟಂತಾಗಿ ಚರಚರ ಉರಿಯುತ್ತವೆ. ಶೀತದ ಬಾಧೆ ಬೆಂಬಿಡದೆ ಕಾಡುವುದು. ಮೂಗಿಗೆ ಕರವಸ್ತ್ರ ಅನಿವಾರ್ಯ. ಮೈ ಬೆಚ್ಚಗಿಡಲು ಉಣ್ಣೆಯ ಬಟ್ಟೆ( ಸ್ವೆಟರ್ )ಗಳಿಗೆ ಮೊರೆ ಹೋಗಬೇಕು. ಓಣಿ, ಗಲ್ಲಿ , ಬೀದಿಗಳಲ್ಲಿ ಬೆಳಗು ಸಂಜೆ ಉರಿ ಕಾಯಿಸಿಕೊಳ್ಳಲು ಪೈಪೋಟಿ ನಡೆಯುವುದು.

ಈ ಕಾಲವೇ ಅಂಥದ್ದು. ಹಗಲು ಸಣ್ಣದು ರಾತ್ರಿ ದೊಡ್ಡದು. ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ.

ಇನ್ನೇನು ಚಳಿಗಾಲ ಮೆಲ್ಲನೆ ಹಿಂದಡಿ ಇಡಲು ಶುರು ಮಾಡಿದೆ. ಎಳ್ಳು ಅಮವಾಸ್ಯೆಗೆ ಎಳ್ಳು ಕಾಳಿನಷ್ಟು, ಅವರಾತ್ರಿ ಅಮವಾಸ್ಯೆಗೆ ಅವರೆ ಕಾಳಿನಷ್ಟು, ಶಿವರಾತ್ರಿಗೆ ಶಿವ ಶಿವ ಅನ್ನುವಷ್ಟು ಬಿಸಿಲು ಹೆಚ್ಚಾಗಲಿದೆ. ಅದಕ್ಕಾಗಿ ಮಾಗಿಯ ಚಳಿಗೆ ಮೈಯೊಡ್ಡೋಣ. ಅದರ ಸ್ಪರ್ಶಕ್ಕೆ ಉಲ್ಲಸಿತಗೊಂಡು ಮನ ತಣಿಯೋಣ. ಮತ್ತೇಕೆ ತಡ ಜಗದ ಜಂಜಡಕ್ಕೆ ಹೇಳಿ ವಿದಾಯ. ಮಾಗಿಯ ಚಳಿಯಲ್ಲಿ ಮಿಂದೇಳಲಿ ಈ ಕಾಯ.

ಸಾಂದರ್ಭಿಕ ಚಿತ್ರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.