ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧಾ ವಾಣಿ | ಕಾಡ್ಗಿಚ್ಚನ್ನು ಪತ್ತೆಗೆ ಕೃತಕ ಬುದ್ಧಿಮತ್ತೆ

ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಪ್ರಚಲಿತ ವಿದ್ಯಮಾನಗಳು
ಕೆ.ಪಿ.ಗುರುಶಂಕರ್‌
Published 11 ಜುಲೈ 2024, 0:13 IST
Last Updated 11 ಜುಲೈ 2024, 0:13 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಪೆಂಚ್ ಹುಲಿ ಅಭಯಾರಣ್ಯದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಕಾಡ್ಗಿಚ್ಚನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಜೂನ್‌ 26ರಂದು ಅಳವಡಿಸಲಾಗಿದೆ. ಯಾವುದೇ ರೀತಿಯ ಕಾಡ್ಗಿಚ್ಚು ಉಂಟಾದರೆ ಪ್ರಾಥಮಿಕ ಹಂತದಲ್ಲಿ ಅದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಉಪಯುಕ್ತವಾಗಿದೆ.

*Pan-tilt-Zoom ತಂತ್ರಜ್ಞಾನ ಆಧಾರಿತ ಕ್ಯಾಮೆರಾವನ್ನು ಸಮುದ್ರ ಮಟ್ಟದಿಂದ 540 ಮೀಟರ್ ಎತ್ತರದ ಪರ್ವತದಲ್ಲಿ, ಕಿರಂಗಿಸಾರ ಎನ್ನುವ ಗ್ರಾಮದ ಬಳಿ ಅಳವಡಿಸಲಾಗಿದೆ. ಈ ಕ್ಯಾಮರಾದ ವೈಶಿಷ್ಟ್ಯತೆ ಏನೆಂದರೆ 15 ಕಿಲೋ ಮೀಟರ್‌. ವ್ಯಾಪ್ತಿಯನ್ನು ಪರಿವೀಕ್ಷಿಸುವ ಸಾಮರ್ಥ್ಯವಿದೆ. 350 ಚದರ ಕಿಲೋಮೀಟರ್ ಅರಣ್ಯ ಪ್ರದೇಶದ ಮೇಲೆ ನಿಗಾ ವಹಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

*ಹುಲಿ ಅಭಯಾರಣ್ಯದ ಕೊಲೆಟ್ಮರ ಎನ್ನುವ ಪ್ರದೇಶದಲ್ಲಿ ಇದರ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು ವಿವಿಧ ಉಪಗ್ರಹಗಳ ಮೂಲಕ ತಕ್ಷಣವೇ ಮಾಹಿತಿ ರವಾನೆಯಾಗುತ್ತದೆ.

*ಕೃತಕ ಬುದ್ಧಿಮತ್ತೆ ವ್ಯವಸ್ಥೆಗೆ (ಪ್ಯಾಂಟೆರಾ) Pantera ಎಂದು ಹೆಸರಿಸಲಾಗಿದ್ದು ಕಾಡ್ಗಿಚ್ಚು ಉಂಟಾದ ಮೂರು ನಿಮಿಷಗಳ ಒಳಗಾಗಿ ಕಾಡ್ಗಿಚ್ಚಿನ ಸ್ಥಳದ ಮಾಹಿತಿಯನ್ನು ರವಾನಿಸುತ್ತದೆ. ನಿಯಂತ್ರಣ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗ ತಕ್ಷಣವೇ ಕಾರ್ಯ ಪ್ರವೃತ್ತರಾಗಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬಹುದು.

*ಪ್ಯಾಂಟೆರಾ ವ್ಯವಸ್ಥೆಯು ಇನ್ಫ್ರಾರೆಡ್ ತಂತ್ರಜ್ಞಾನವನ್ನೂ ಹೊಂದಿದ್ದು ಯಾವುದೇ ಹೊಗೆ ಅಥವಾ ಮೋಡಗಳು ಇದ್ದರೂ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ.


ಈ ನೂತನ ಕೃತಕ ಬುದ್ಧಿಮತ್ತೆಯ ಮತ್ತೊಂದು ವಿಶೇಷತೆ ಏನೆಂದರೆ ತಾಪಮಾನ, ಮಳೆಯ ಪ್ರಮಾಣ ಹಾಗೂ ಗಾಳಿಯ ವೇಗದ ಆಧಾರದ ಮೇಲೆ ಈ ಹಿಂದೆ ಕಾಡ್ಗಿಚ್ಚುಗಳು ಉಂಟಾಗಿದ್ದರೆ ಅದೇ ರೀತಿಯ ತಾಪಮಾನ, ಮಳೆಯ ಪ್ರಮಾಣ ಮತ್ತು ಗಾಳಿಯ ವೇಗದ ಆಧಾರದ ಮೇಲೆ ಎಚ್ಚರಿಕೆಯ ಮಾಹಿತಿಯನ್ನು ಕಾಡ್ಗಿಚ್ಚು ಸಂಭವಿಸುವ ಮುನ್ನವೇ ರವಾನಿಸುತ್ತದೆ.

ಪೆಂಚ್ ಹುಲಿ ಅಭಯಾರಣ್ಯ

*ಈ ಅಭಯಾರಣ್ಯ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಪ್ರಮುಖ ವನ್ಯಜೀವಿಧಾಮ ಆಗಿದ್ದು, ಮಧ್ಯಪ್ರದೇಶದ ಸಿಯೋನಿ ಮತ್ತು ಚಿನ್ದ್ವಾರ ಹಾಗೂ ಮಹಾರಾಷ್ಟ್ರದ ನಾಗಪುರ ಜಿಲ್ಲೆಗಳಿಗೂ ಹರಡಿಕೊಂಡಿದೆ.

*ಅಭಯಾರಣ್ಯದ ಮಧ್ಯಭಾಗದಲ್ಲಿ ಪೆಂಚ್ ನದಿ ಹರಿಯವುದರಿಂದ ಇದಕ್ಕೆ ಆ ಹೆಸರು ಬಂದಿದೆ. →1965ರಲ್ಲಿ ವನ್ಯಜೀವಿ ಧಾಮ ಎನ್ನುವ ಸ್ಥಾನಮಾನ ಸಿಕ್ಕಿದೆ.

*1975ರಲ್ಲಿ ರಾಷ್ಟ್ರೀಯ ಉದ್ಯಾನದ ಸ್ಥಾನಮಾನ ದೊರೆತಿದ್ದು,1992ರಲ್ಲಿ ಪ್ರಾಜೆಕ್ಟ್ ಟೈಗರ್ ಉಪಕ್ರಮದಡಿ ಹುಲಿ ಅಭಯಾರಣ್ಯ ಎನ್ನುವ ಸ್ಥಾನಮಾನವನ್ನು ಕಲ್ಪಿಸಲಾಯಿತು.

*ಮಧ್ಯಪ್ರದೇಶ ದಲ್ಲಿ ಇದರ ಒಟ್ಟು ವಿಸ್ತೀರ್ಣ- 759. 89 ಚದರ ಕಿ.ಮೀ.

*ಮಹಾರಾಷ್ಟ್ರದಲ್ಲಿ ಇದರ ಒಟ್ಟು ವಿಸ್ತೀರ್ಣ- 741.22 ಚದರ ಕಿ.ಮೀ.

2. ಬಾಹ್ಯಾಕಾಶದಲ್ಲಿ ತ್ಯಾಜ್ಯ ತಡೆಗಟ್ಟಲು ಉಪಗ್ರಹ ಅಭಿವೃದ್ಧಿ

*ವಿವಿಧ ರಾಷ್ಟ್ರಗಳು ವಿವಿಧ ಉದ್ದೇಶಗಳಿಗೆ ಉಪಗ್ರಹಗಳನ್ನು ಉಡಾಯಿಸಲು ಪ್ರಾರಂಭಿಸಿದ ನಂತರ, ಬಾಹ್ಯಾಕಾಶ ವಲಯದಲ್ಲಿ ತ್ಯಾಜ್ಯದ ಪ್ರಮಾಣವೂ ಹೆಚ್ಚುತ್ತಿದೆ. ಉಪಗ್ರಹಗಳು ತಮ್ಮ ಕಾರ್ಯನಿರ್ವಹಣಾ ಅವಧಿಯನ್ನು ಪೂರ್ಣಗೊಳಿಸಿದ ನಂತರ ಬಾಹ್ಯಾಕಾಶ ವಲಯದಲ್ಲಿ ತ್ಯಾಜ್ಯವಾಗಿ ಪರಿವರ್ತನೆಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ರಾಷ್ಟ್ರಗಳು ಉಪಗ್ರಹಗಳನ್ನು ಉಡಾಯಿಸಲು ಮುಂದಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ.

*ಈ ಉದ್ದೇಶದಿಂದ ಯುರೋಪಿಯನ್ ಸ್ಪೇಸ್ ಇಂಡಸ್ಟ್ರಿಯ-ಏರ್ ಬಸ್ ಡಿಫೆನ್ಸ್ ಅಂಡ್ ಸ್ಪೇಸ್ ಸಂಸ್ಥೆ, ತೇಲ್ಸ್ ಅಲೇನಿಯ ಸ್ಪೇಸ್ ಸಂಸ್ಥೆ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಮುಂದಿನ ದಿನಗಳಲ್ಲಿ ತ್ಯಾಜ್ಯ ರಹಿತ ಉಪಗ್ರಹಗಳ ಅಭಿವೃದ್ಧಿಗೆ ಒಪ್ಪಂದವನ್ನು ಸಹಿ ಹಾಕಿದೆ.

*2030 ರ ವೇಳೆಗೆ ಭೂಮಿಯ ಮೇಲಿನ ಬಾಹ್ಯಾಕಾಶ ವಲಯದಲ್ಲಿ ಆಗಲಿ ಅಥವಾ ಚಂದ್ರನ ಕಕ್ಷೆಯಲ್ಲಿ ಆಗಲಿ ಉಪಗ್ರಹ ತ್ಯಾಜ್ಯವನ್ನು ಸಂಪೂರ್ಣವಾಗಿ ತಡೆಗಟ್ಟಲಾಗುತ್ತದೆ ಎಂದು ಈ ಸಂಸ್ಥೆಗಳು ಉಲ್ಲೇಖಿಸಿದೆ. ಬಾಹ್ಯಾಕಾಶ ವಲಯದಲ್ಲಿ ದೊರಕುವ ತ್ಯಾಜ್ಯವನ್ನು ಸಂಗ್ರಹಿಸಲು, ಲಿಯೋ ಉಪಗ್ರಹ ಗಳನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತಿದ್ದು ಬಾಹ್ಯಾಕಾಶದಲ್ಲಿ ಕಂಡುಬರುವ ತ್ಯಾಜ್ಯವನ್ನು ಬಿಡದೆ ಸಂಗ್ರಹಿಸಿ ಭೂಮಿಗೆ ತರುವ ಪ್ರಕ್ರಿಯೆಗೆ ಕೂಡ ಮುಂದಾಗಿವೆ.

3. ಪುಷ್ಪಕ್-ಇಸ್ರೊದ ಮರುಬಳಕೆ ಉಡ್ಡಯನ ನೌಕೆ ಪರೀಕ್ಷೆ ಯಶಸ್ವಿ

*ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಘಟನೆಯು ಯಶಸ್ವಿಯಾಗಿ ಮೂರನೇ ಬಾರಿ ಮರುಬಳಕೆಗೆ ಯೋಗ್ಯವಿರುವ ಉಡ್ಡಯನ ನೌಕೆಯ ಯಶಸ್ವಿ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ಮೂರನೇ ಬಾರಿ ಯಶಸ್ವಿ ಪರೀಕ್ಷೆಯನ್ನು ಮಾಡಿದೆ.

*ಮುಂದಿನ ದಿನಗಳಲ್ಲಿ ಭಾರತ ಮನುಷ್ಯನನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲು ಈ ಪ್ರಯೋಗ ಹೆಚ್ಚು ಉಪಯುಕ್ತವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT