ಶುಕ್ರವಾರ, ಜನವರಿ 27, 2023
18 °C

Jobs: ಸಿಆರ್‌ಪಿಎಫ್‌ನಲ್ಲಿ 1,315 ಹೆಡ್ ಕಾನ್‌ಸ್ಟೇಬಲ್, 143 ಎಎಸ್‌ಐ ಹುದ್ದೆಗಳು

ಮಂಜುನಾಥ್ ಭದ್ರಶೆಟ್ಟಿ Updated:

ಅಕ್ಷರ ಗಾತ್ರ : | |

ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ‘ಕೇಂದ್ರ ಮೀಸಲು ಪೊಲೀಸ್ ಪಡೆ’ (CRPF) ದೇಶದ ಆಂತರಿಕ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಡೈನಾಮಿಕ್ ಪಡೆಯಲ್ಲಿ ಕೆಲಸ ಮಾಡಲು ಅನೇಕ ಯುವಕ– ಯುವತಿಯರು ಕನಸು ಕಾಣುತ್ತಿರುತ್ತಾರೆ. ಹಾಗಾದರೆ ಇನ್ನೇಕೆ ತಡ ಸಿಆರ್‌ಪಿಎಫ್‌ನಲ್ಲಿ ಹೊಸ ಉದ್ಯೋಗವಕಾಶಗಳು ಇದೀಗ ಮತ್ತೆ ಒದಗಿ ಬಂದಿವೆ.

ಸಿಆರ್‌ಪಿಎಫ್‌ನಲ್ಲಿ ‘143 ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಎಎಸ್‌ಐ ಸ್ಟೆನೋ’ ಹುದ್ದೆಗಳಿಗೆ ಹಾಗೂ ಸಚಿವಾಲಯದ 1,315 ಹೆಡ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ (ಪುರುಷ ಮತ್ತು ಮಹಿಳಾ) ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 4 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಆಸಕ್ತರು ಜನವರಿ 21 ರೊಳಗಾಗಿ crpf.nic.in ವೆಬ್‌ಸೈಟ್‌ಗೆ ಹೋಗಿ ಸೂಕ್ತ ದಾಖಲಾತಿಗಳೊಂದಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ ಏನಿದೆ?

10+2 (ಪಿಯುಸಿ) ಅಥವಾ ತತ್ಸಮಾನವಾದ ಶೈಕ್ಷಣಿಕ ವಿದ್ಯಾರ್ಹತೆ ತೇರ್ಗಡೆ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. 18 ರಿಂದ 25 ವರ್ಷ ವಯೋಮಿತಿಯಿದೆ. ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಈ ಹುದ್ದೆಗಳಿಗೆ ನೇಮಕಾತಿ ನಾಲ್ಕು ಹಂತಗಳಲ್ಲಿ ನಡೆಯುತ್ತದೆ

ಹಂತ 1: ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ)

ಈ ಹುದ್ದೆಗಳಿಗೆ ಮೊದಲ ಹಂತದಲ್ಲಿ 100 ಅಂಕಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಬಹು ಆಯ್ಕೆ) ಇರುತ್ತದೆ. ಇದರ ಅವಧಿ 90 ನಿಮಿಷ ಆಗಿರುತ್ತದೆ. ಅರ್ಜಿ ಸಲ್ಲಿಸುವವರು ಮೊದಲು ಈ ಪರೀಕ್ಷೆ ಬರೆಯಬೇಕು. ಭಾಷಾ ಪರೀಕ್ಷೆ (ಹಿಂದಿ ಅಥವಾ ಇಂಗ್ಲಿಷ್), ಸಾಮನ್ಯ ಗ್ರಹಿಕೆ ಸಾಮರ್ಥ್ಯ, ಸಾಮಾನ್ಯ ಜ್ಞಾನ, ಕ್ವಾಂಟಿಟೆಟಿವ್ ಎಂಬ ನಾಲ್ಕು ವಿಭಾಗಗಳಿಗೆ ತಲಾ 25 ಅಂಕಗಳು ಇರುತ್ತವೆ. ಒಂದೂವರೆ ಗಂಟೆಯಲ್ಲಿ ಅಭ್ಯರ್ಥಿಗಳು ಉತ್ತರಿಸಬೇಕು. ಪ್ರತಿ 4 ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ.

ಇದರಲ್ಲಿ ಪಾಸಾಗುವ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ASI (ಸ್ಟೆನೋ) ಆಕಾಂಕ್ಷಿ ಅಭ್ಯರ್ಥಿಗಳಿಗೆ ಕೌಶಲ್ಯ ಪರೀಕ್ಷೆ ಇರುತ್ತದೆ. ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕು. ಹೇಳಿದ 80 ಪದಗಳನ್ನು 10 ನಿಮಿಷದಲ್ಲಿ ಕಂಪ್ಯೂಟರ್‌ನಲ್ಲಿ ತಪ್ಪಿಲ್ಲದೇ ಟೈಪ್ ಮಾಡಬೇಕು. ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ 50 ನಿಮಿಷದಲ್ಲಿ ಒಂದು ಸೂಚಿತ ಲೇಖನ ನೋಡಿಕೊಂಡು ಪೂರ್ಣ ಬರೆಯಬೇಕು. ಒಂದು ನಿಮಿಷಕ್ಕೆ 35 ಪದಗಳನ್ನು ಟೈಪ್ (ಹಿಂದಿ ಅಥವಾ ಇಂಗ್ಲಿಷ್) ಮಾಡಬೇಕು.

ಹಂತ 2: ದೈಹಿಕ ಪರೀಕ್ಷೆ

ಎರಡೂ ಹುದ್ದೆಗಳಿಗೆ ಮೊದಲ ಹಂತದಲ್ಲಿ ಪಾಸಾದವರಿಗೆ ಎರಡನೇ ಹಂತದಲ್ಲಿ ದೇಹ ದಾರ್ಢ್ಯತೆ ಹಾಗೂ ದೈಹಿಕ ಸಹಿಷ್ಣುತೆ ಪರೀಕ್ಷೆ ಇರುತ್ತದೆ. ಇದರ ಅರ್ಹತೆಗಳಿಗೆ ಅಭ್ಯರ್ಥಿಗಳು ನೇಮಕಾತಿಯ ನೋಟಿಫಿಕೇಶನ್‌ನ್ನು ವಿವರವಾಗಿ ಪರಿಶೀಲಿಸಬೇಕು.

ಹಂತ 3 ಮತ್ತು 4: ವೈದ್ಯಕೀಯ ಪರೀಕ್ಷೆ, ದಾಖಲಾತಿ ಪರಿಶೀಲನೆ

ದೇಹ ದಾರ್ಢ್ಯತೆ ಹಾಗೂ ದೈಹಿಕ ಸಹಿಷ್ಣುತೆ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಅಭ್ಯರ್ಥಿಗಳಿಗೆ ಡಾಕ್ಯುಮೆಂಟ್ ಪರಿಶೀಲನೆ ಹಾಗೂ ವಿವರವಾದ ವೈದ್ಯಕೀಯ ಪರೀಕ್ಷೆ ಇರುತ್ತದೆ. ಇವೆರಡನ್ನೂ ಯಶಸ್ವಿಯಾಗಿ ಪೂರೈಸಿದವರು ನಿಗದಿತ ಹುದ್ದೆಗಳಿಗೆ ಪಡೆಯಲು ಅರ್ಹರಾಗುತ್ತಾರೆ.

ವೇತನ ಶ್ರೇಣಿ

ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ASI (ಸ್ಟೆನೊ) ವೇತನ ಶ್ರೇಣಿಯು ₹29,200–₹92,300ವರೆಗೆ ಇರುತ್ತದೆ. ಹೆಡ್ ಕಾನ್‌ಸ್ಟೇಬಲ್ (ಸಚಿವಾಲಯ) ಹುದ್ದೆಗಳಿಗೆ ₹25,500–₹81,100ವರೆಗೆ ಇರುತ್ತದೆ.

–––

ಪರೀಕ್ಷಾ ಕೇಂದ್ರಗಳು

ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆಯಲು ಸಿಆರ್‌ಪಿಎಫ್ ಸೂಚಿಸಿದ ಪರೀಕ್ಷಾ ಕೇಂದ್ರಗಳನ್ನೇ ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು. ಅನೇಕ ರಾಜ್ಯಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸೂಚಿಸಲಾಗಿದೆ.

ಕನ್ನಡದಲ್ಲಿ ಇಲ್ಲ

ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಕನ್ನಡ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಇಲ್ಲ. ಇದರಿಂದ ಈ ಭಾಷೆಯ ಅಭ್ಯರ್ಥಿಗಳು ಪ್ರಾದೇಶಿಕ ಭಾಷೆಯಲ್ಲೂ ಪರೀಕ್ಷೆ ನಡೆಸಿ ಎಂಬ ಒತ್ತಾಯವನ್ನು ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು