ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ (ಕೆಪಿಟಿಸಿಎಲ್) ಖಾಲಿ ಇರುವ ಕಿರಿಯ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಇದೇ 23 ಮತ್ತು 24ರಂದು ನಡೆಯಲಿರುವ ನೇಮಕಾತಿ ಪರೀಕ್ಷೆಗೂ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಟ್ಟುನಿಟ್ಟಿನ ‘ವಸ್ತ್ರಸಂಹಿತೆ’ ಜಾರಿಗೊಳಿಸಿದೆ.
ಪುರುಷರು ಪೂರ್ಣ ತೋಳಿನ ಶರ್ಟ್ ಧರಿಸಬಾರದು, ಬಟ್ಟೆಗಳು ಹಗುರವಾಗಿರಬೇಕು. ಅಂದರೆ, ಜಿಪ್ ಪಾಕೆಟ್‌ಗಳು, ಪಾಕೆಟ್‌ಗಳು, ದೊಡ್ಡ ಬಟನ್‌ಗಳೂ ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆ ಧರಿಸಬಾರದು ಎಂದು ಸೂಚಿಸಲಾಗಿದೆ. ಸರಳವಾದ ಪ್ಯಾಂಟ್ ಧರಿಸಬಹುದು. ಆದರೆ, ಕುರ್ತಾ, ಪೈಜಾಮ ಧರಿಸಲು ಅವಕಾಶ ಇಲ್ಲ. ಪರೀಕ್ಷಾ ಕೇಂದ್ರದ ಒಳಗೆ ಶೂ ಧರಿಸುವಂತೆ ಇಲ್ಲ. ತೆಳುವಾದ ಅಡಿಭಾಗ ಇರುವ ಸ್ಯಾಂಡಲ್ ಮತ್ತು ಚಪ್ಪಲಿ ಧರಿಸುವುದು ಸೂಕ್ತ. ಕುತ್ತಿಗೆ ಸುತ್ತ ಯಾವುದೇ ಲೋಹದ ಅಭರಣ ಧರಿಸಬಾರದು. ಜೊತೆಗೆ, ಕಿವಿಯೋಲೆ, ಉಂಗುರ, ಕಡಗ ಕೂಡಾ ಧರಿಸುವಂತೆ ಇಲ್ಲ.
ಇನ್ನು ಮಹಿಳಾ ಅಭ್ಯರ್ಥಿಗಳಿಗೆ ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್ ಅಥವಾ ಬಟನ್ ಇರುವ ಉಡುಗೆ ನಿಷೇಧಿಸಲಾಗಿದೆ. ಅರ್ಧ ತೋಳಿನ ಬಟ್ಟೆ ಧರಿಸಬೇಕು. ಎತ್ತರದ ಹಿಮ್ಮಡಿಯ ಬೂಟುಗಳು ಮತ್ತು ಅಡಿಭಾಗ ಹೊಂದಿರುವ ಬೂಟು ಹಾಕಬಾರದು. ಅದರ ಬದಲು ಸ್ಯಾಂಡಲ್ ಅಥವಾ ಚಪ್ಪಲಿ ಬಳಸಬೇಕು. ಕಡಿಮೆ ಹಿಮ್ಮಡಿಯ ಪಾದರಕ್ಷೆಗೆ ಅನುಮತಿ ನೀಡಲಾಗಿದೆ. ಕಿವಿಯೋಲೆ, ಉಂಗುರ, ಪೆಂಡೆಂಟ್, ನೆಕ್ಲೇಸ್, ಬಳೆ ಇಂಥ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನೂ ನಿಷೇಧಿಸಲಾಗಿದೆ.
ಅಭ್ಯರ್ಥಿಗಳು ಕೋವಿಡ್ ಸುರಕ್ಷತಾ ಮಾರ್ಗಸೂಚಿಗಳ ಪ್ರಕಾರ, ಅರೆ ಪಾರದರ್ಶಕವಾದ ಸರ್ಜಿಕಲ್ ಮಾಸ್ಕ್ ಮಾತ್ರ ಧರಿಸಬೇಕು. ಎನ್–95, ಕಾಟನ್ ಮಾಸ್ಕ್‌ಗಳನ್ನು ಪರೀಕ್ಷಾ ಕೇಂದ್ರಗಳ ಒಳಗೆ ಅನುಮತಿ ಇಲ್ಲ ಎಂದೂ ಕೆಇಎ ತಿಳಿಸಿದೆ.
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಡೆದ ನೇಮಕಾತಿ ಪರೀಕ್ಷೆಗೂ ಅಭ್ಯರ್ಥಿಗಳಿಗೆ ಇದೇ ರೀತಿಯ ವಸ್ತ್ರ ಸಂಹಿತೆಯನ್ನು ಕೆಇಎ ಸೂಚಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.