ಮಂಗಳವಾರ, ಅಕ್ಟೋಬರ್ 19, 2021
22 °C

ಭಾರತೀಯ ಸೇನೆಯಲ್ಲಿರುವ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಿಯುಸಿ ಅಥವಾ 12ನೇ ತರಗತಿಯ ನಂತರ ಸರ್ಕಾರಿ ಹುದ್ದೆಗಳನ್ನು ಸೇರಬಯಸುವವರಿಗೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿರುತ್ತವೆ. ಕಳೆದ ವಾರ ಕೆಲವು ಪರೀಕ್ಷೆಗಳ ವಿವರ ನೀಡಲಾಗಿದ್ದು, ಇನ್ನಷ್ಟು ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇಂಡಿಯನ್‌ ಆರ್ಮಿ

ಭಾರತೀಯ ಸೇನೆಗೆ ಸೇರುವುದೆಂದರೆ ಬಹುತೇಕ ಜನರಿಗೆ ಅದು ಕೇವಲ ಉದ್ಯೋಗ ಮಾತ್ರವಲ್ಲ, ದೇಶಕ್ಕೆ ಸೇವೆ ಮಾಡಿ, ಆ ಮೂಲಕ ಗೌರವ ಸಲ್ಲಿಸುವುದನ್ನೂ ಒಳಗೊಂಡಿದೆ. ಹಾಗೆಯೇ ಅಂಥವರಿಗೆ ಗೌರವ, ಮೆಚ್ಚುಗೆ ಎಲ್ಲ ಕಡೆಯಿಂದ ಹರಿದು ಬರುತ್ತದೆ.

ಹೈಸ್ಕೂಲ್‌ ಪಾಸಾದವರನ್ನು ಕೂಡ ಭಾರತೀಯ ಸೇನೆಗೆ ಸೇರಿಸಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ 12ನೇ ತರಗತಿಯ ನಂತರ ಟೆಕ್ನಿಕಲ್‌ ಎಂಟ್ರಿ ಸ್ಕೀಮ್‌ (ಟಿಇಎಸ್‌), ಸೈನಿಕರು (ಪುರುಷರಿಗೆ ಮಾತ್ರ), ಮಹಿಳಾ ಕಾನ್‌ಸ್ಟೇಬಲ್‌ (ಜನರಲ್‌ ಕರ್ತವ್ಯ), ಜೂನಿಯರ್‌ ಕಮೀಷನ್ಡ್‌ ಅಧಿಕಾರಿಗಳು ಮೊದಲಾದ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುವುದು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ತೆಗೆದುಕೊಂಡು ಉತ್ತೀರ್ಣರಾಗಿರಬೇಕು.

ಇಂಡಿಯನ್‌ ನೇವಿ (ಭಾರತೀಯ ನೌಕಾ ಪಡೆ)

12ನೇ ತರಗತಿ ನಂತರ ಸೇಲರ್‌, ಸೀನಿಯರ್‌ ಸೆಕೆಂಡರಿ ರಿಕ್ರೂಟ್ಸ್‌ (ಎಸ್‌ಎಸ್‌ಆರ್‌) ಮೊದಲಾದ ಹುದ್ದೆಗಳಿಗೆ ಬಿಟೆಕ್‌ ಕೇಡೆಟ್‌ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಇದರ ಅಡಿಯಲ್ಲಿ ನಾಲ್ಕು ವರ್ಷಗಳ ಪದವಿಗಾಗಿ ಪರೀಕ್ಷೆ ನಡೆಸಿ ಸೇರಿಸಿಕೊಳ್ಳಲಾಗುವುದು. ಮಾನ್ಯತೆ ಪಡೆದ ಕಾಲೇಜಿನಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯ ತೆಗೆದುಕೊಂಡು 12ನೇ ತರಗತಿ ಅಥವಾ ಪಿಯುಸಿಯಲ್ಲಿ ಶೇ 70ರಷ್ಟು ಅಂಕ ಗಳಿಸಿರಬೇಕು.

ಭದ್ರತಾ ಪಡೆಗಳು

ಗಡಿ ಭದ್ರತಾ ಪಡೆ (ಬಿಎಸ್‌ಎಫ್‌), ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌), ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ), ಇಂಡೋ– ಟೆಬೇಟನ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ (ಐಟಿಬಿಪಿ), ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ (ಸಿಐಎಸ್‌ಎಫ್‌) ಮೊದಲಾದ ಭದ್ರತಾ ಪಡೆಗಳಲ್ಲಿರುವ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳಿಗೆ ಕೂಡ ಅರ್ಜಿ ಸಲ್ಲಿಸಬಹುದು.

ಇದು ರಕ್ಷಣಾ ಪಡೆಗಳಲ್ಲಿರುವ ಉದ್ಯೋಗಗಳಿಗಿಂತ ಭಿನ್ನವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 12ನೇ ತರಗತಿ ಪಾಸಾದ ನಂತರ ಅರ್ಜಿ ಸಲ್ಲಿಸಬಹುದು.

ಇಂಡಿಯನ್‌ ಕೋಸ್ಟ್‌ ಗಾರ್ಡ್‌

ಸೇಲರ್‌, ತಂತ್ರಜ್ಞರು, ಅಸಿಸ್ಟೆಂಟ್‌ ಕಮಾಂಡೆಂಟ್‌ ಮೊದಲಾದ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ 12ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು